ETV Bharat / sports

ಏಷ್ಯಾಕಪ್​ನಲ್ಲಿ ಹೆಚ್ಚು ವಿಕೆಟ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದ ಜಡೇಜಾ.. ಇನ್ನೊಬ್ಬ ಆಟಗಾರ ಯಾರು?

author img

By ETV Bharat Karnataka Team

Published : Sep 4, 2023, 11:01 PM IST

ನೇಪಾಳದ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಪಿನ್ನರ್​ ರವೀಂದ್ರ ಜಡೇಜಾ ಅತಿ ಹೆಚ್ಚು ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

ಏಷ್ಯಾಕಪ್
ಏಷ್ಯಾಕಪ್

ಕ್ಯಾಂಡಿ (ಶ್ರೀಲಂಕಾ): ನೇಪಾಳದ ವಿರುದ್ಧದ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್​ ಹಾಗೇ ತಂಡದ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ಏಕದಿನ ಏಷ್ಯಾಕಪ್​ನಲ್ಲಿ ಹೆಚ್ಚು ವಿಕೆಟ್ ಉರುಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರೊಂದಿಗೆ ಈ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.

ಕ್ಯಾಂಡಿಯಲ್ಲಿ ನೇಪಾಳ ವಿರುದ್ಧ ನಡೆಯುತ್ತಿರುವ ಏಷ್ಯಾಕಪ್​ ಪಂದ್ಯದಲ್ಲಿ ಮೂರು ವಿಕೆಟ್​ ಪಡೆಯುವ ಮೂಲಕ ಈ ಸಾಧನೆಯನ್ನು ಜಡೇಜಾ ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧ ಆಡಿದ ತಂಡದಲ್ಲಿ ರೋಹಿತ್​​ ಶರ್ಮಾ ಕೇವಲ ಒಂದು ಅನಿವಾರ್ಯ ಬದಲಾವಣೆ ಮಾಡಿ ನೇಪಾಳದ ವಿರುದ್ಧ ಮೈದಾನಕ್ಕಿಳಿದರು. ಮಗುವಿನ ಜನನದ ಹಿನ್ನಲೆಯಲ್ಲಿ ಬುಮ್ರಾ ತವರಿಗೆ ಮರಳಿದ್ದರಿಂದ ಅವರ ಬದಲಾಗಿ ಶಮಿ ತಂಡಕ್ಕೆ ಸೇರ್ಪಡೆಯಾದರು.

ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಭಾರತಕ್ಕೆ ನೇಪಾಳದ ಆರಂಭಿಕ ಆಟಗಾರರು ಒತ್ತಡವನ್ನು ಹೇರಿದರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಗೆ ಜಡೇಜಾ ಸ್ಪಿನ್​​ನಲ್ಲಿ ಕಾಡಿದರು. ಇಂದಿನ ಪಂದ್ಯದಲ್ಲಿ 10 ಓವರ್​ ಮಾಡಿದ ಜಡ್ಡು, 40 ರನ್​ ಕೊಟ್ಟು ನೇಪಾಳದ ಮಧ್ಯಮ ಕ್ರಮಾಂಕ ಆಟಗಾರರಾದ ಭೀಮ್ ಶಾರ್ಕಿ (7), ರೋಹಿತ್ ಪೌಡೆಲ್ (5), ಮತ್ತು ಕುಶಾಲ್ ಮಲ್ಲಾ (2) ಅವರ ವಿಕೆಟ್ ಪಡೆದರು.

16 ಏಕದಿನ ಏಷ್ಯಾಕಪ್ ಪಂದ್ಯಗಳಲ್ಲಿ ಜಡೇಜಾ 24.77 ಸರಾಸರಿಯಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದರಲ್ಲಿ 29 ರನ್​ ಕೊಟ್ಟು 4 ವಿಕೆಟ್​ ಪಡೆದಿರುವುದು ಅವರ ಉತ್ತಮ ಬೌಲಿಂಗ್​ ಸಾಧನೆ ಆಗಿದೆ. ಭಾರತದ ಮಾಜಿ ವೇಗಿ ಪಠಾಣ್ 12 ಏಕದಿನ ಏಷ್ಯಾಕಪ್ ಪಂದ್ಯಗಳಲ್ಲಿ 27.50 ಸರಾಸರಿಯಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದಾರೆ. 32 ರನ್​ ಕೊಟ್ಟು 4 ವಿಕೆಟ್​ ಪಡೆದಿರುವುದು ಪಠಾಣ್​ ಅವರ ಅತ್ಯುತ್ತಮ ಬೌಲಿಂಗ್​ ಅಂಕಿ - ಅಂಶ ಆಗಿದೆ.

ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ 30 ವಿಕೆಟ್​​ ಪಡೆಯುವ ಮೂಲಕ ಏಕದಿನ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್​ ಆಗಿದ್ದಾರೆ. ಅವರ ನಂತರ 29 ವಿಕೆಟ್​ ಪಡೆದಿರುವ ಲಸಿತ್ ಮಾಲಿಂಗ ಮತ್ತು 26 ವಿಕೆಟ್​ ಪಡೆದ ಅಜಂತಾ ಮೆಂಡಿಸ್ ಇದ್ದಾರೆ.

ನೇಪಾಳದ ವಿರುದ್ಧದ ಪಂದ್ಯದಲ್ಲಿ ಭಾರತ ಟಾಸ್ ​ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಬಲಿಷ್ಠ ಭಾರತದ ಎದುರು ನೇಪಾಳ ದಿಟ್ಟ ಹೋರಾಟ ತೋರಿತು. 48.2 ಓವರ್​ ಆಡಿದ ನೇಪಾಳಿ ಆಟಗಾರರು 230 ರನ್​ ಗಳಸಿದರು. ಎರಡನೇ ಇನ್ನಿಂಗ್ಸ್​ ವೇಳೆ ಮಳೆ ಬಂದ ಹಿನ್ನಲೆಯಲ್ಲಿ ಪಂದ್ಯವನ್ನು 23 ಓವರ್​ಗೆ ಕಡಿತಗೊಳಿಸಲಾಗಿದೆ. ಭಾರತ 23 ಓವರ್​ಗೆ 145 ರನ್​ ಗಳಿಸಬೇಕಿದೆ.

ಇದನ್ನೂ ಓದಿ: IND vs NEP: ಸದೃಢ ಬ್ಯಾಟಿಂಗ್​ ಪ್ರದರ್ಶಿಸಿದ ನೇಪಾಳ.. ಭಾರತಕ್ಕೆ 231 ರನ್​ಗಳ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.