ETV Bharat / sports

ಏಷ್ಯಾ ಕಪ್​ ತಂಡದಲ್ಲಿ ವೇಗಿ ಮೊಹಮದ್​ ಶಮಿ ಯಾಕಿಲ್ಲ.. ತಂಡದ ಆಯ್ಕೆ ಬಗ್ಗೆ ರವಿಶಾಸ್ತ್ರಿ ಟೀಕೆ

author img

By

Published : Sep 8, 2022, 5:11 PM IST

ವೇಗಿಗಳ ದೌರ್ಬಲ್ಯದಿಂದ ಭಾರತ ತಂಡ ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದಿದೆ. ತಂಡದಲ್ಲಿ ಅನುಭವಿ ವೇಗಿ ಮೊಹಮದ್​ ಶಮಿ ಸ್ಥಾನ ಪಡೆಯದೇ ಇರುವುದು ಈಗ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಮಾಜಿ ಕೋಚ್​ ರವಿಶಾಸ್ತ್ರಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ravi-shastri-questions
ತಂಡದ ಆಯ್ಕೆ ಬಗ್ಗೆ ರವಿಶಾಸ್ತ್ರಿ ಟೀಕೆ

ನವದೆಹಲಿ: ಏಷ್ಯಾ ಕಪ್​ ಟೂರ್ನಿಯಿಂದ ಭಾರತ ಅಧಿಕೃತವಾಗಿ ಹೊರಬಿದ್ದಿದ್ದಕ್ಕೆ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗಿದೆ. ಹಾಲಿ ಚಾಂಪಿಯನ್​ ಭಾರತ ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬೌಲರ್​ಗಳ ದಯನೀಯ ಪ್ರದರ್ಶನದಿಂದ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲುಂಡು ಟೂರ್ನಿಯಿಂದ ಕಿಕೌಟ್​ ಆಗಿದೆ. ತಂಡದ ಬೌಲಿಂಗ್​ ಪಡೆಗೆ ಅನುಭವಿ ಬೌಲರ್​ ಮೊಹಮದ್​ ಶಮಿಯನ್ನು ಆಯ್ಕೆ ಮಾಡದೇ ಇರುವುದು ಪ್ರಶ್ನೆ ಟೀಕೆಗೆ ಗುರಿಯಾಗಿದೆ.

ಭಾರತ ತಂಡದ ಮಾಜಿ ಕೋಚ್​ ರವಿಶಾಸ್ತ್ರಿ ಅವರು ಕೂಡ ಏಷ್ಯಾಕಪ್ ತಂಡದಿಂದ ವೇಗದ ಬೌಲರ್ ಮೊಹಮದ್ ಶಮಿಯನ್ನು ಹೊರಗಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆ ಸಮಿತಿಯ ಈ ನಿರ್ಧಾರ ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿದೆ. ಮೊಹಮದ್ ಶಮಿ ಮನೆಯಲ್ಲಿ ಕುಳಿತು ಟಿವಿ ವೀಕ್ಷಿಸುವಂತೆ ಮಾಡಿರುವುದು ನನ್ನನ್ನು ಕಂಗೆಡಿಸಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಂಡದಲ್ಲಿ ಕೇವಲ ಮೂವರು ವೇಗಿಗಳಿಂದ ಟೂರ್ನಿ ಆರಂಭಿಸಿದ ಭಾರತದ ನಡೆಯೇ ಅಚ್ಚರಿಯಾಗಿದೆ. ಇದರಲ್ಲಿ ಆವೇಶ್​ ಖಾನ್​ ಅನಾರೋಗ್ಯಕ್ಕೀಡಾದರು. ಭುವನೇಶ್ವರ್​ ಮತ್ತು ಅರ್ಷದೀಪ್​ ಮಾತ್ರ ಬೌಲಿಂಗ್​ ಪಡೆಯಲ್ಲಿದ್ದರು. ಮೂರನೇ ವೇಗಿಯಾಗಿ ಹಾರ್ದಿಕ್​ ಆಯ್ಕೆಯಾಗಿದ್ದರು. ಇದಿಷ್ಟು ತಂಡವನ್ನು ಗೆಲ್ಲಿಸಲು ಸಾಕಾಗಲಿಲ್ಲ. ಮೂರನೇ ಮುಖ್ಯ ವೇಗಿಯ ಇಲ್ಲದಿರುವುದು ತಂಡದ ಬಲವನ್ನು ಕುಂದಿಸಿತು ಎಂದು ಅಭಿಪ್ರಾಯಪಟ್ಟರು.

ದೀಪಕ್​ ಚಹರ್​ ಆಡಿಸಬೇಕಿತ್ತು: ಆವೇಶ್​ ಖಾನ್​ ಅನಾರೋಗ್ಯಕ್ಕೀಡಾದಾಗ ಕಾಯುವ ಬದಲು ಮೀಸಲು ಪಡೆಯಲ್ಲಿದ್ದ ದೀಪಕ್​ ಚಹರ್​ ಅವರನ್ನು ತಕ್ಷಣವೇ ತಂಡಕ್ಕೆ ಸೇರಿಸಿಕೊಳ್ಳಬಹುದಿತ್ತು. ವೇಗದ ಬೌಲಿಂಗ್​ ದೌರ್ಬಲ್ಯದಿಂದಾಗಿ ತಂಡ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದ ಹೊರಬೀಳಬೇಕಾಯಿತು ಎಂದಿದ್ದಾರೆ.

ತಂಡಕ್ಕೆ ಹೆಚ್ಚುವರಿ ವೇಗಿಯ ಅಗತ್ಯವಿತ್ತು. ಐಪಿಎಲ್​ ಟೂರ್ನಿಯಲ್ಲಿ ಮಿಂಚಿದ್ದ ಮೊಹಮದ್​ ಶಮಿ ತಂಡದಲ್ಲಿ ಸ್ಥಾನ ಪಡೆಯದೇ ಇರುವುದು ನನ್ನಲ್ಲಿ ಅಚ್ಚರಿ ಮೂಡಿಸಿತು. ಇದು ನಿಸ್ಸಂಶಯವಾಗಿ ಕೆಟ್ಟ ನಿರ್ಧಾರವಾಗಿದೆ ಎಂದು ಟೀಕಿಸಿದರು. ಇನ್ನಾರು ವಾರಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್​ನಲ್ಲಿ ಮೊದಮದ್​ ಶಮಿಯ ಅಗತ್ಯ ತಂಡಕ್ಕಿದೆ ಎಂಬ ಮಾತನ್ನು ಮಾಜಿ ಕೋಚ್​ ರವಿಶಾಸ್ತ್ರಿ ಇದೇ ವೇಳೆ ಹೇಳಿದ್ದಾರೆ.

ಇಂದು ರಾತ್ರಿ 7.30 ಕ್ಕೆ ಏಷ್ಯಾ ಕಪ್​ ಟೂರ್ನಿಯ ಕೊನೆಯ ಪಂದ್ಯವನ್ನು ಭಾರತ ಆಫ್ಘಾನಿಸ್ತಾನ ವಿರುದ್ಧ ಆಡಲಿದೆ. ಉಭಯ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು ಇದೊಂದು ಔಪಚಾರಿಕ ಪಂದ್ಯವಾಗಿದೆ.

ಓದಿ: 'ಮೈ ಆಲ್ ಟೈಮ್ ಫೇವರಿಟ್..' ಪ್ರೀತಿ ಜಿಂಟಾ ಜೊತೆಗಿನ ಫೋಟೋ ಹಂಚಿಕೊಂಡ ಪಾಕ್ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.