ETV Bharat / sports

ಬಾರ್ಡರ್​ ಗವಾಸ್ಕರ್​ ಟ್ರೋಫಿ: ಅತಿ ಹೆಚ್ಚು ವಿಕೆಟ್​ ಪಡೆದ ಅಶ್ವಿನ್​, ಪಂಚ ವಿಕೆಟ್ ದಾಖಲೆ

author img

By

Published : Mar 10, 2023, 8:15 PM IST

ನಾಲ್ಕನೇ ಪಂದ್ಯದಲ್ಲೂ ಅಶ್ವಿನ್ ಸ್ಪಿನ್​​ ಜಾದೂ - ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಹೆಚ್ಚು ವಿಕೆಟ್​ ಬೌಲರ್​ - ಟೆಸ್ಟ್​ನಲ್ಲಿ ಅತೀ ಹೆಚ್ಚು ಬಾರಿ ಐದು ವಿಕೆಟ್​ ಪಡೆದ ರವಿಚಂದ್ರನ್​

Border Gavaskar Trophy
ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಹೆಚ್ಚು ವಿಕೆಟ್​ ಪಡೆದ ಅಶ್ವಿನ್​

ಅಹಮದಾಬಾದ್ (ಗುಜರಾತ್): ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಅಶ್ವಿನ್ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ, ಸ್ಪಿನ್ನರ್‌ಗಳಿಗೆ ನಿಜವಾಗಿಯೂ ಹೆಚ್ಚಿನ ಸಹಾಯವನ್ನು ನೀಡದ ಪಿಚ್‌ನಲ್ಲಿ ಅಶ್ವಿನ್ ಮತ್ತೊಮ್ಮೆ ತಮ್ಮ ಮ್ಯಾಜಿಕ್ ಮಾಡಿದರು. 47.2 ಓವರ್‌ ಮಾಡಿದ ಅಶ್ವಿನ್​ 91 ರನ್​ ಬಿಟ್ಟುಕೊಟ್ಟು 6 ವಿಕೆಟ್​ ಗಳಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಟ್ರಾವಿಸ್ ಹೆಡ್ (32), ಕ್ಯಾಮೆರಾನ್ ಗ್ರೀನ್ (114), ಅಲೆಕ್ಸ್ ಕ್ಯಾರಿ (0), ಮಿಚೆಲ್ ಸ್ಟಾರ್ಕ್ (6), ನಾಥನ್ ಲಿಯಾನ್ (34) ಮತ್ತು ಟಾಡ್ ಮರ್ಫಿ (41) ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ. 22 ಪಂದ್ಯಗಳಲ್ಲಿ ಅಶ್ವಿನ್ 28.10 ರ ಸರಾಸರಿಯಲ್ಲಿ 2.71 ರ ಎಕಾನಮಿ ರೇಟ್‌ನಲ್ಲಿ 113 ವಿಕೆಟ್‌ಗಳನ್ನು ಪಡೆದಿದ್ದಾರೆ. ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ 103ಕ್ಕೆ 7 ವಿಕೆಟ್​ ಕಿತ್ತದ್ದು ಅವರ ಅತ್ಯುತ್ತಮ ಸಾಧನೆಯಾಗಿದೆ.

ಆಸಿಸ್​ನ ನಾಥನ್​ ಲಿಯಾನ್ ಕೂಡಾ 113 ವಿಕೆಟ್​ ಪಡೆದಿದ್ದಾರೆ. ಅಶ್ವಿನ್ ಅವರು ಲಿಯಾನ್​ ದಾಖಲೆ ಸರಿಗಟ್ಟಿದ್ದಾರೆ. ಆದರೆ, ಲಿಯಾನ್​ 113 ವಿಕೆಟ್​ ಪಡೆಯಲು 26 ಪಂದ್ಯಗಳನ್ನು ತೆಗೆದುಕೊಂಡಿರುವ ಕಾರಣ ಎರಡನೇ ಸ್ಥಾನದಲ್ಲಿದ್ದಾರೆ. ಲಿಯಾನ್​ 31.92 ಸರಾಸರಿಯಲ್ಲಿ 3.09 ಎಕಾನಮಿಯಲ್ಲಿ ಬೌಲಿಂಗ್​ ಮಾಡಿದ್ದಾರೆ. ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ 8/50 ಅವರ ಅತ್ಯುತ್ತಮ ಸಾಧನೆಯಾಗಿದೆ. ಅಶ್ವಿನ್ ಮತ್ತು ಲಿಯಾನ್ ನಂತರದ ಸ್ಥಾನದಲ್ಲಿ ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ (111) ಮತ್ತು ಹರ್ಭಜನ್ ಸಿಂಗ್ (95) ಇದ್ದಾರೆ. ರವೀಂದ್ರ ಜಡೇಜಾ 85 ವಿಕೆಟ್‌ಗಳೊಂದಿಗೆ ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಅತೀ ಹೆಚ್ಚು ವಿಕೆಟ್​ ಪಡೆದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಭಾರತದಲ್ಲಿ 26ನೇ ಬಾರಿ ಪಂಚ ಸಾಧನೆ: ಅಶ್ವಿನ್ ತವರು ನೆಲದಲ್ಲಿ 26 ನೇ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಇದು ಭಾರತದ ಬೌಲರ್‌ಗಳ ಪಟ್ಟಿಯಕಲ್ಲಿ ಅತೀ ಹೆಚ್ಚಿನ ಸಾಧನೆಯಾಗಿದೆ. ಒಟ್ಟಾರೆಯಾಗಿ ಅಶ್ವಿನ್​ 32 ಬಾರಿ ಐದು - ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಐದನೇ ಅತಿ ಹೆಚ್ಚು ಪಂಚ ವಿಕೆಟ್​ ಸಾಧನೆ. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಟೆಸ್ಟ್​ ಕ್ರಿಕೆಟ್​ನಲ್ಲಿ 67 ಬಾರಿ 5 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.

2023ರ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಅಶ್ವಿನ್​ ಅತೀ ಹೆಚ್ಚು ವಿಕೆಟ್​ ಟೇಕರ್​ ಆಗಿದ್ದಾರೆ. ನಾಲ್ಕು ಪಂದ್ಯಗಳಿಂದ ಅಶ್ವಿನ್​ ಒಟ್ಟು 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದರಲ್ಲಿ ಇಂದಿನ 91 ಬಿಟ್ಟುಕೊಟ್ಟು 6 ವಿಕೆಟ್​ ಪಡೆದಿರುವುದು ಅತ್ಯುತ್ತಮ ಬೌಲಿಂಗ್​ ಆಗಿದೆ.

ಆಸಿಸ್​ ಉತ್ತಮ ಬ್ಯಾಟಿಂಗ್​: ಪಂದ್ಯದಲ್ಲಿ ಆಸಿಸ್​ ಆಟಗಾರರು ಉತ್ತಮ ಬ್ಯಾಟಿಂಗ್​ ಮಾಡಿದ್ದು ಎರಡನೇ ದಿನದ ಕೊನೆಯ ಸೆಷನ್​ನಲ್ಲಿ ಆಲ್​ಔಟ್​ ಆಗಿದ್ದಾರೆ. ಭಾರತಕ್ಕೆ ಮೊದಲ ಇನ್ನಿಂಗ್ಸ್​ಗೆ 480 ರನ್​ಗಳ ಗುರಿಯನ್ನು ನೀಡಿದೆ. ಇದರಲ್ಲಿ ಉಸ್ಮಾನ್​ ಖವಾಜಾ ಅವರ 180 ಮತ್ತು ಗ್ರೀನ್​ ಅವರ 114 ರನ್ ಕೊಡುಗೆ ಪ್ರಮುಖವಾಗಿದೆ. ಭಾರತ ಬ್ಯಾಟಿಂಗ್​ ಆರಂಭಿಸಿದ್ದು, ರೋಹಿತ್​ ಶರ್ಮಾ 17 ಮತ್ತು ಶುಭಮನ್​ ಗಿಲ್​ 18 ರನ್​ ಗಳಿಸಿ ಆಡುತ್ತಿದ್ದಾರೆ. ಭಾರತ 444 ರನ್​ನ ಹಿನ್ನಡೆ ಹೊಂದಿದೆ.

ಇದನ್ನೂ ಓದಿ: ಅಹಮದಾಬಾದ್​ ಟೆಸ್ಟ್​: 480ಕ್ಕೆ ಆಸಿಸ್​ ಆಲ್​ ಔಟ್​​, ಅಶ್ವಿನ್​ಗೆ 6 ವಿಕೆಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.