ETV Bharat / sports

ರಣಜಿ ಟ್ರೋಫಿಯಲ್ಲಿ ಪೂಜಾರ 17ನೇ ದ್ವಿಶತಕದ ಸಾಧನೆ: ಅತಿ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆ

author img

By ETV Bharat Karnataka Team

Published : Jan 7, 2024, 6:33 PM IST

Cheteshwar Pujara Double Century: ರಣಜಿ ಟ್ರೋಫಿಯ ಸೌರಾಷ್ಟ್ರ ಮತ್ತು ಜಾರ್ಖಂಡ್‌ ಪಂದ್ಯದಲ್ಲಿ ಹಿರಿಯ ಬ್ಯಾಟರ್​​ ಚೇತೇಶ್ವರ ಪೂಜಾರ 17ನೇ ದ್ವಿಶತಕದ ಸಾಧನೆ ಮಾಡಿದ್ದಾರೆ.

pujara-becomes-4th-highest-indian-run-getter-in-first-class-smashes-record-17th-double-century
ರಣಜಿ ಟ್ರೋಫಿಯಲ್ಲಿ ಪೂಜಾರ 17ನೇ ದ್ವಿಶತಕದ ಸಾಧನೆ

ರಾಜ್‌ಕೋಟ್‌ (ಗುಜರಾತ್‌): ರಣಜಿ ಟ್ರೋಫಿಯಲ್ಲಿ ಹಿರಿಯ ಬ್ಯಾಟರ್​​ ಚೇತೇಶ್ವರ ಪೂಜಾರ ದಾಖಲೆಯ ದ್ವಿಶತಕ ಸಿಡಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 17ನೇ ಡಬಲ್​ ಸೆಂಚುರಿಯ ಸಾಧನೆ ಮಾಡಿದ್ದಾರೆ. ಅಲ್ಲದೇ, ಈ ಸಾಧನೆ ಮಾಡಿದ ಅಂತಾರಾಷ್ಟ್ರೀಯ ಆಟಗಾರರ ಸಾಲಿಗೂ ಸೇರಿದ್ದಾರೆ.

ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ಜಾರ್ಖಂಡ್‌ ವಿರುದ್ಧ ಭರ್ಜರಿ ದ್ವಿಶತಕ (ಅಜೇಯ 246 ರನ್) ಬಾರಿಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಗಳಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೇ, ಈ ದ್ವಿಶತಕದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್​ನ ಹರ್ಬರ್ಟ್ ಸಟ್‌ಕ್ಲಿಫ್ (17 ದ್ವಿಶತಕ) ಮತ್ತು ಮಾರ್ಕ್ (17 ದ್ವಿಶತಕ) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

  • Only five other batters have scored as many double-hundreds as Cheteshwar Pujara in first-class cricket 💯💯 pic.twitter.com/uuTQWZLq5e

    — ESPNcricinfo (@ESPNcricinfo) January 7, 2024 " class="align-text-top noRightClick twitterSection" data=" ">

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 37 ದ್ವಿಶತಕಗಳ ಬಾರಿಸುವ ಮೂಲಕ ದಿಗ್ಗಜ ಆಟಗಾರ ಸರ್ ಡಾನ್ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಾದ ವಾಲಿ ಹ್ಯಾಮಂಡ್ (36) ಮತ್ತು ಪ್ಯಾಟ್ಸಿ ಹೆಂಡ್ರೆನ್ (22) ನಂತರದ ಸ್ಥಾನದಲ್ಲಿದ್ದಾರೆ. ಇದೀಗ 35 ವರ್ಷ ವಯಸ್ಸಿನ ಪೂಜಾರ ಅಂತಾರಾಷ್ಟ್ರೀಯ ಆಟಗಾರರ ಅತಿ ಹೆಚ್ಚು ದ್ವಿಶತಕಗಳ ಗಳಿಸಿದವರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್: ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿರುವ ಪೂಜಾರ ವಿವಿಎಸ್ ಲಕ್ಷ್ಮಣ್ ಅವರನ್ನು ಹಿಂದಿಕ್ಕಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಹೈದರಾಬಾದ್ ಪ್ರತಿನಿಧಿಸಿದ್ದ ಮಾಜಿ ಬ್ಯಾಟರ್ ಲಕ್ಷ್ಮಣ್ 19,730 ರನ್​ಗಳೊಂದಿಗೆ ಅತಿ ಹೆಚ್ಚು ರನ್​ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು.

ಇದೀಗ 161ನೇ ರನ್​ ಗಳಿಸಿದ ಪೂಜಾರ ಈ ಸಾಧನೆಯನ್ನು ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರರ ಪೈಕಿ ಸುನಿಲ್ ಗವಾಸ್ಕರ್ 25,834 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ (25,396) ಮತ್ತು ರಾಹುಲ್ ದ್ರಾವಿಡ್​ (23,794) ನಂತರದ ಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ, ಪೂಜಾರ ಈ ಅದ್ಭುತ ಪ್ರದರ್ಶನದೊಂದಿಗೆ ಜನವರಿ 25ರಿಂದ ಹೈದರಾಬಾದ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿಗಾಗಿ ಟೀಂ ಇಂಡಿಯಾಕ್ಕೆ ಮರಳುವತ್ತ ಗಮನಹರಿಸುತ್ತಿದ್ದಾರೆ. ಕೊನೆಯ ಬಾರಿಗೆ ಲಂಡನ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು.

578 ರನ್​ಗಳಿಗೆ ಡಿಕ್ಲೇರ್: ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ಮತ್ತು ಜಾರ್ಖಂಡ್‌ ಪಂದ್ಯ ನಡೆಯುತ್ತಿದೆ. ಪೂಜಾರ 356 ಎಸೆತಗಳನ್ನು ಎದುರಿಸಿ 30 ಬೌಂಡರಿಗಳೊಂದಿಗೆ ಅಜೇಯ 243 ರನ್ ಗಳಿಸಿದ್ದಾರೆ. ಇದಾದ ಬಳಿಕ ಸೌರಾಷ್ಟ್ರ 4 ವಿಕೆಟ್‌ಗೆ 578 ರನ್​ಗಳಿಗೆ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಜಾರ್ಖಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 115 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಇದನ್ನೂ ಓದಿ: ಪಾಕ್ ವಿರುದ್ಧ ಆಸೀಸ್​ 3-0 ಕ್ಲೀನ್​ಸ್ವೀಪ್: ಗೆಲುವಿನೊಂದಿಗೆ ಟೆಸ್ಟ್​ಗೆ ವಾರ್ನರ್​ ವಿದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.