ETV Bharat / sports

1992 ಜನವರಿ 2.. ಸ್ಪಿನ್​ ಮಾಂತ್ರಿಕ ಶೇನ್​ ವಾರ್ನ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ದಿನ

author img

By

Published : Jan 2, 2023, 2:15 PM IST

ಜನವರಿ 2.. ಸ್ಪಿನ್​ ದಂತಕಥೆ, ಆಸೀಸ್​ ಮಾಜಿ ಆಟಗಾರ ದಿವಂಗತ ಶೇನ್​ ವಾರ್ನ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ದಿನವಾಗಿದೆ. 21 ವರ್ಷಗಳ ಹಿಂದೆ ಸ್ಪಿನ್​ ದಾಖಲೆಗೆ ಮುಹೂರ್ತ ಇಟ್ಟ ದಿನವಿದು .

shane warne
ಸ್ಪಿನ್​ ಮಾಂತ್ರಿಕ ಶೇನ್​ ವಾರ್ನ್

ಸಿಡ್ನಿ (ಆಸ್ಟ್ರೇಲಿಯಾ): ಜನವರಿ 2, 1992.. ಸ್ಪಿನ್​ ಮಾಂತ್ರಿಕ, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್​ ವಾರ್ನ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ದಿನ. ಭಾರತ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ವಾರ್ನ್​ ವೃತ್ತಿ ಬದುಕಿಗೆ ಅಡಿಯಿಟ್ಟರು. ಅಂದು ಶುರುವಾದ ಯಶೋಗಾಥೆ ವಿಶ್ವ ಕ್ರಿಕೆಟ್​ನಲ್ಲಿ ಅಜರಾಮರವಾಗಿದೆ.

1992 ರ ಜನವರಿ 2 ರಂದು ನಡೆದ ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರವಾಗಿ ಪದಾರ್ಪಣೆ ಮಾಡಿದ ವಾರ್ನ್ 45 ಓವರ್​ ಎಸೆದು 150 ರನ್​ ನೀಡಿದ್ದರು. ಮ್ಯಾರಾಥಾನ್​ ಬೌಲಿಂಗ್​ನಲ್ಲಿ ಏಕೈಕ ವಿಕೆಟ್​ ಗಳಿಸಿದ್ದರು. ಅದು 206 ರನ್​ ಗಳಿಸಿ ಭಾರತಕ್ಕೆ ನೆರವಾಗಿದ್ದ ರವಿಶಾಸ್ತ್ರಿ ಅವರ ವಿಕೆಟ್​​ ಆಗಿತ್ತು. ಎರಡು ಇನಿಂಗ್ಸ್​ಗಳಲ್ಲಿ 228 ರನ್​ ಬಿಟ್ಟುಕೊಟ್ಟ ವಾರ್ನ್​ ಒಂದು ವಿಕೆಟ್​ ಮಾತ್ರ ಗಳಿಸಿ ನೀರಸ ಅರಂಭ ಪಡೆದಿದ್ದರು.

ಅದಾದ ಬಳಿಕ ಶೇನ್​ ವಾರ್ನ್​ ಸ್ಪಿನ್​​ ದಾಳಿಗೆ ವಿಶ್ವದ ಎಲ್ಲ ತಂಡಗಳು ಪಥರುಗುಟ್ಟಿದ್ದವು. ಮೈದಾನದಲ್ಲಿ ವಾರ್ನ್​ ದಾಳಿಗೆ ಇಳಿದರೆ ಎದುರಾಳಿ ಬ್ಯಾಟ್ಸ್​ಮನ್​ ಮೈಯೆಲ್ಲಾ ಕಣ್ಣಾಗಿರಬೇಕಿತ್ತು. ಇಂತಹ ಪ್ರಚಂಡ ಸ್ಪಿನ್ನರ್​ಗೆ ಕಾಡಿದ್ದು ಮಾತ್ರ ಭಾರತದ ಮಾಜಿ ಕ್ರಿಕೆಟಿಗ, ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​. ವಾರ್ನ್​ ಸ್ಪಿನ್​ ಮಂತ್ರಕ್ಕೆ ಬ್ಯಾಟ್​ನಿಂದ ತಿರುಮಂತ್ರ ಹಾಕುತ್ತಿದ್ದ ಸಚಿನ್​ ಇನ್ನಿಲ್ಲದಂತೆ ಕಾಡುತ್ತಿದ್ದರು. ಇದನ್ನು ವಾರ್ನ್​ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ ಕೂಡಾ.

1999 ರ ವಿಶ್ವಕಪ್ ವಿಜಯದಲ್ಲಿ ಶೇನ್​ ವಾರ್ನ್ ಆಸ್ಟ್ರೇಲಿಯಾದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದರು. ಟೂರ್ನಿಯಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರನಾದರು. ವಿಶ್ವಕಪ್​ನಲ್ಲಿ 20 ವಿಕೆಟ್​ ಉರುಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅದೀಗ ಇತಿಹಾಸ.

ಆಸೀಸ್​ ದಿಗ್ಗಜನ ಟೆಸ್ಟ್​ ಸಾಧನೆ: ವಾರ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 145 ಟೆಸ್ಟ್​ ಪಂದ್ಯಗಳಲ್ಲಿ 708 ವಿಕೆಟ್‌ಗಳನ್ನು ಪಡೆದಿರುವ ಆಸೀಸ್​​​ನ ದಿವಂಗತ ಆಟಗಾರ, ಶ್ರೀಲಂಕಾದ ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರಿಂದ ಒಂದು ಹೆಜ್ಜೆ ಹಿಂದಿದ್ದಾರೆ. ಮುತ್ತಯ್ಯ ಸಾರ್ವಕಾಲಿಕ ದಾಖಲೆಯಾದ 800 ವಿಕೆಟ್​​ಗಳ ಶಿಖರವನ್ನೇ ಕಟ್ಟಿದ್ದಾರೆ.

2005 ರ ಕ್ಯಾಲೆಂಡರ್ ವರ್ಷದಲ್ಲಿ 96 ಟೆಸ್ಟ್ ವಿಕೆಟ್​​ಗಳನ್ನು ಕಬಳಿಸಿರುವ ವಾರ್ನ್​ ದಾಖಲೆಯನ್ನು ಈವರೆಗೂ ಯಾವುದೇ ಬೌಲರ್​ ಮುಟ್ಟಲಾಗಿಲ್ಲ. ಟೆಸ್ಟ್‌ನಲ್ಲಿ 17 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ವಿಶ್ವದ ಮೂರನೇ ಆಟಗಾರನಾದರೆ, 8 ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ ವಿಶ್ವದ ನಾಲ್ಕನೇ ಆಟಗಾರರ ಈ ಶೇನ್​ ವಾರ್ನ್​​.

ಏಕದಿನದಲ್ಲಿ ವಾರ್ನ್​ ಹೆಜ್ಜೆ ಗುರುತು: 194 ಏಕದಿನ ಪಂದ್ಯಗಳಾಡಿರುವ ವಾರ್ನ್​ 293 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 1,001 ವಿಕೆಟ್‌ ಕಿತ್ತ ಸಾಧನೆ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್​ ಆಗಿದ್ದಾರೆ. ಮುರಳೀಧರನ್ ಅವರು 1,347 ವಿಕೆಟ್​ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಆಗಿದ್ದಾರೆ.

ವಾರ್ನ್ 2007 ರಲ್ಲಿ ಕ್ರಿಕೆಟ್​ನಿಂದ ನಿವೃತ್ತರಾದರು. 2000 ನೇ ಇಸ್ವಿಯಲ್ಲಿ 'ಶತಮಾನದ ವಿಸ್ಡನ್ ಆಟಗಾರ' ಪ್ರಶಸ್ತಿ ಪಡೆದರು. ಇದು ಪಟ್ಟಿಯಲ್ಲಿದ್ದ ಏಕೈಕ ಬೌಲರ್ ಮತ್ತು ಸಕ್ರಿಯ ಆಟಗಾರರಾಗಿದ್ದರು. ಬಳಿಕ ಅವರು 1997 ಮತ್ತು 2004 ರಲ್ಲಿ 'ವಿಶ್ವದ ವಿಸ್ಡನ್ ಲೀಡಿಂಗ್ ಕ್ರಿಕೆಟರ್' ಆಗಿ ಆಯ್ಕೆಯಾಗಿದ್ದರು ಎಂಬುದು ಮತ್ತೊಂದು ವಿಶೇಷ. ಕಳೆದ ವರ್ಷದ ಮಾರ್ಚ್‌ನಲ್ಲಿ 52 ವರ್ಷದ ಶೇನ್​ ವಾರ್ನ್​ ಅವರು ಹೃದಯಾಘಾತದಿಂದ ನಿಧನರಾದರು. ಮೊದಲ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​)ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ನಾಯಕರಾಗಿದ್ದ ಶೇನ್ ವಾರ್ನ್​ ತಂಡಕ್ಕೆ ಪ್ರಶಸ್ತಿ ಧಕ್ಕಿಸಿಕೊಟ್ಟಿದ್ದರು.

ಓದಿ: ಹಾರ್ದಿಕ್ ಪಾಂಡ್ಯ ಟಿ20 ನಾಯಕತ್ವ ಪಟ್ಟಕ್ಕೆ ಮಾಜಿ ಕ್ರಿಕೆಟಿಗನ ಆಕ್ಷೇಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.