ETV Bharat / sports

ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ 40 ವಿಕೆಟ್ ಸಾಧನೆ​​​: ಅಲನ್ ಡೊನಾಲ್ಡ್‌ ದಾಖಲೆ ಮುರಿದ ಮೊಹಮ್ಮದ್ ಶಮಿ

author img

By ETV Bharat Karnataka Team

Published : Oct 30, 2023, 3:49 PM IST

ಇಂಗ್ಲೆಂಡ್​ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿದ ಶಮಿ, ದಕ್ಷಿಣ ಆಫ್ರಿಕಾದ ಲೆಜೆಂಡರಿ ವೇಗಿ ಅಲನ್ ಡೊನಾಲ್ಡ್ ದಾಖಲೆ ಮುರಿದರು.

Mohammed Shami,
Mohammed Shami,

ಲಖನೌ (ಉತ್ತರ ಪ್ರದೇಶ): ಇಲ್ಲಿನ ಎಕಾನಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಅಲನ್ ಡೊನಾಲ್ಡ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಟೀಂ​​ ಇಂಡಿಯಾ ನೀಡಿದ್ದ 230 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ 129 ರನ್‌ಗಳಿಗೆ ಆಲೌಟಾಗಿ ಸೋಲು ಕಂಡಿತು.

ವಿಶ್ವಕಪ್​ನಲ್ಲಿ ಸತತ 6 ಗೆಲುವು ದಾಖಲಿಸಿದ ರೋಹಿತ್​ ನೇತೃತ್ವದ ತಂಡ ಸೆಮೀಸ್​​ನಲ್ಲಿ ಬಹುತೇಕ ಸ್ಥಾನ ಪಡೆದುಕೊಂಡಿದೆ. ಆದರೆ ನಂ.1 ತಂಡವಾಗಿಯೇ ಉಳಿಯುತ್ತದೆಯೇ ಎಂಬುದು ಮುಂದಿನ ಪಂದ್ಯಗಳ ಗೆಲುವಿನಿಂದ ನಿರ್ಧಾರವಾಗಲಿದೆ. ಇನ್ನೊಂದೆಡೆ, 6 ಪಂದ್ಯಗಳ ಪೈಕಿ 5ರಲ್ಲಿ ಸೋಲುಂಡಿರುವ ಇಂಗ್ಲೆಂಡ್​ ಸೆಮೀಸ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಇಂಗ್ಲೆಂಡ್​ ಉಳಿದಿರುವ ಮೂರು ಪಂದ್ಯಗಳನ್ನು ಚಾಂಪಿಯನ್ಸ್​​​ ಟ್ರೋಫಿಯ ಅರ್ಹತೆಗಾಗಿ ಆಡಬೇಕಿದೆ.

ಮೊಹಮ್ಮದ್ ಶಮಿ 22 ರನ್​ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು.​ ಶಮಿ ಅವರ ಕರಾರುವಾಕ್ ದಾಳಿಗೆ ಮಂಡಿಯೂರಿದ ಆಂಗ್ಲರು 100 ರನ್‌ಗಳಿಂದ ಸೋಲು ಅನುಭವಿಸಿದರು. ಮೊದಲು ಬ್ಯಾಟಿಂಗ್​ ಮಾಡಿದ ಭಾರತ, ನಾಯಕ ರೋಹಿತ್ ಶರ್ಮಾ ಅವರ 87 ರನ್‌ಗಳ ಸಹಾಯದಿಂದ 9 ವಿಕೆಟ್​ ನಷ್ಟಕ್ಕೆ 229 ರನ್​ ಕಲೆಹಾಕಿತು. ಇದಾದ ನಂತರ 35 ಓವರ್‌ಗಳಲ್ಲಿ ಕೇವಲ 129 ರನ್‌ಗಳಿಗೆ ಎದುರಾಳಿ ಭಾರತ ಕಟ್ಟಿಹಾಕಿ ಜಯಶಾಲಿಯಾಯಿತು.

  • " class="align-text-top noRightClick twitterSection" data="">

ಪಂದ್ಯದಲ್ಲಿ ಮಿಂಚಿದ ಶಮಿ ವೈಟ್-ಲೈಟ್ನಿಂಗ್ ಎಂದು ಕರೆಯಲ್ಪಡುವ ದಕ್ಷಿಣ ಆಫ್ರಿಕಾದ ದಂತಕಥೆ ಅಲನ್ ಡೊನಾಲ್ಡ್ ಅವರನ್ನು ಹಿಂದಿಕ್ಕಿದರು. ಸದ್ಯ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಆಡಿದ ಎರಡು ಪಂದ್ಯಗಳಿಂದ ಶಮಿ 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ನ್ಯೂಜಿಲೆಂಡ್​ ವಿರುದ್ಧ ಐದು ವಿಕೆಟ್ (5/54) ಮತ್ತು ಭಾನುವಾರ 4 ವಿಕೆಟ್​ ಕಿತ್ತರು.

ಡೊನಾಲ್ಡ್ ಏಕದಿನ ವಿಶ್ವಕಪ್‌ನಲ್ಲಿ 22 ಪಂದ್ಯಗಳಿಂದ 38 ವಿಕೆಟ್‌ಗಳನ್ನು ಪಡೆದಿದ್ದರು. ಮೊಹಮ್ಮದ್​ ಶಮಿ ವಿಶ್ವಕಪ್​ನಲ್ಲಿ ಆಡಿದ 13 ಪಂದ್ಯಗಳಿಂದ 40 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಶಮಿ ಈಗ 40 ವಿಕೆಟ್‌ಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಜೊತೆಗೆ ಪಟ್ಟಿಯಲ್ಲಿ ಜಂಟಿ 11ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮಾಜಿ ಬೌಲರ್​ಗಳಾದ ಜಹೀರ್ ಖಾನ್ (23 ಪಂದ್ಯಗಳಿಂದ 44 ವಿಕೆಟ್) ಮತ್ತು ಜಾವಗಲ್ ಶ್ರೀನಾಥ್ (34 ಪಂದ್ಯಗಳಿಂದ 44 ವಿಕೆಟ್) ಇದ್ದಾರೆ.

2023ರ ವಿಶ್ವಕಪ್​ನಲ್ಲಿ ಭಾರತ ಮುಂದೆ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ವಿರುದ್ಧ ಲೀಗ್ ಹಂತದಲ್ಲಿ ಆಡಲಿದೆ. ಈ ಪಂದ್ಯಗಳಲ್ಲಿ ಶಮಿ ಇದೇ ಫಾರ್ಮ್​ ಮುಂದುವರೆಸಿದಲ್ಲಿ ಮಾಜಿ ಬೌಲರ್​ಗಳ ದಾಖಲೆ ಮುರಿಯುವ ಸಾಧ್ಯತೆ ದಟ್ಟವಾಗಿದೆ. 42 ಪಂದ್ಯಗಳಿಂದ 71 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 68 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಸೋತರೂ ಬಟ್ಲರ್ ತಂಡ ಬಲಿಷ್ಠ: ಮಾರ್ಗನ್ ಹೇಳಿಕೆ ತಳ್ಳಿ ಹಾಕಿದ ಇಂಗ್ಲೆಂಡ್ ಕೋಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.