ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿಗೆ ಪಟಾಕಿ ಸಿಡಿಸಿ ಸಂಭ್ರಮ: ಹೃದಯಾಘಾತದಿಂದ ಪೊಲೀಸ್​ ಕುದುರೆ ಸಾವು

author img

By ETV Bharat Karnataka Team

Published : Nov 6, 2023, 8:30 PM IST

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲುವು ದಾಖಲಿಸಿದ ಹಿನ್ನೆಲೆ ನಡೆದ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ಇದರಿಂದ ಪೊಲೀಸ್​ ಕುದುರೆಯೊಂದು ಹೃದಯಾಘಾತದಿಂದ ಮರಣಹೊಂದಿದೆ.

mounted police horse died
mounted police horse died

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸಂಭ್ರಮಗಳು ಎಂದಾಕ್ಷಣ ಪಟಾಕಿ ಸಿಡಿಸಿ ಆಚರಿಸುವುದು ಎಲ್ಲೆಡೆಯೂ ಸಾಮಾನ್ಯ. ಆದರೆ ಪಟಾಕಿ ಸದ್ದು ಪ್ರಾಣಿಗಳಿಗೆ ಮತ್ತು ಪರಿಸರಕ್ಕೆ ತುಂಬಾ ತೊಂದರೆಯನ್ನು ಉಂಟು ಮಾಡುತ್ತದೆ. ಪ್ರಾಣಿಗಳ ಕಿವಿ ಸೂಕ್ಷ್ಮವಾಗಿರುವ ಕಾರಣ ಹೆಚ್ಚು ಡೆಸಿಬಲ್​ನ ಶಬ್ದಗಳು ಕೇಳಿದಾಗ ಅದನ್ನು ತಡೆದುಕೊಳ್ಳುವುದಕ್ಕೆ ಪ್ರಾಣಿಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ದೀಪಾಳಿಯ ಸಮಯದಲ್ಲಿ ಬೀದಿ, ಸಾಕು ನಾಯಿಗಳು ಸಾವನ್ನಪ್ಪಿರುವ ಉದಾಹರಣೆಗಳು ತುಂಬಾ ಇವೆ. ಕ್ರಿಕೆಟ್​ ಪಂದ್ಯದಲ್ಲಿ ಗೆಲುವು ದಾಖಲಿಸಿದ ನಂತರವೂ ಮೈದಾನದಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ವಾಡಿಕೆ ಬೆಳೆದಿದೆ.

ಈ ಪೀಠಿಕೆಗೆ ಕಾರಣ ನಿನ್ನೆ (ಭಾನುವಾರ) ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ತಂಡದ ಗೆಲುವಿನ ಸಂಭ್ರಮ ಒಂದು ಪ್ರಾಣಿಯ ಸಾವಿಗೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಜೊತೆಗೆ ಟೀಮ್​ ಇಂಡಿಯಾ ಹರಿಣಗಳ ವಿರುದ್ಧ 243 ರನ್​ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಸಂಭ್ರಮದ ಭಾಗವಾಗಿ ಮೈದಾನದಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ, ಈಡನ್ ಗಾರ್ಡನ್ಸ್ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೋಲ್ಕತ್ತಾ ಪೊಲೀಸರ ವಾಯ್ಸ್ ಆಫ್ ರೀಜೆನ್ಸಿ ಕುದುರೆ ಸಾವನ್ನಪ್ಪಿದೆ. ಪಟಾಕಿ ಶಬ್ಧದ ಕಾರಣಕ್ಕೆ ಪೊಲೀಸ್​ ಕುದುರೆ ಹೃದಯಾಘಾತದಿಂದ ಮರಣಹೊಂದಿದೆ ಎಂದು ತಿಳಿದು ಬಂದಿದೆ.

ಈ ಕುದುರೆಯನ್ನು ಕೆಲವು ತಿಂಗಳ ಹಿಂದೆ ರೇಸ್‌ಕೋರ್ಸ್‌ನಿಂದ ಕೋಲ್ಕತ್ತಾ ಮೌಂಟೆಡ್ ಪೊಲೀಸರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ನಿನ್ನೆ ಈಡನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯ ನಡೆಯುತ್ತಿರುವಾಗ ಈಡನ್ ಗಾರ್ಡನ್‌ನಲ್ಲಿ ಮೈದಾನದಲ್ಲಿಈ ಕುದುರೆಯನ್ನು ಪ್ರೇಕ್ಷಕರ ನಿರ್ವಹಣೆಗಾಗಿ ಗಸ್ತು ತಿರುಗಲು ನೇಮಿಸಲಾಗಿತ್ತು. ಪಂದ್ಯದ ನಂತರ ಮೈದಾನದ ಹೊರಗೆ ಅಭಿಮಾನಿಗಳು ಸಿಡಿಮದ್ದುಗಳನ್ನು ಸಿಡಿಸಿದ್ದರಿಂದ ಕುದುರೆ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಮಾಧ್ಯಮದವರ ಕೇಳಿದ ಪ್ರಶ್ನೆಗೆ ಸೂಕ್ತ ಉತ್ತರ ಕೊಡದೇ ವಿಚಾರದಿಂದ ಜಾರಿಕೊಂಡಿದ್ದಾರೆ.

ಶಬ್ದ ಮತ್ತು ಪಾಟಾಕಿಯ ಮಿಂಚಿನ ಬೆಳಕಿಗೆ ಕುದುರೆ ಹೆದರಿ ದಿಕ್ಕು ತಪ್ಪಿ ಓಡಲಾರಂಭಿಸಿತು. ಕುದುರೆಯ ಮೇಲೆ ಕುಳಿತಿದ್ದ ಒಬ್ಬ ಪೋಲೀಸ್ ರಸ್ತೆಗೆ ಬಿದ್ದರು. ಈ ಘಟನೆಯಲ್ಲಿ ಕೋಲ್ಕತ್ತಾ ಪೊಲೀಸರ ನಾಲ್ಕು ಕುದುರೆಗಳು ಮತ್ತು ಇಬ್ಬರು ಮೌಂಟೆಡ್ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ವಾಯ್ಸ್ ಆಫ್ ರೀಜೆನ್ಸಿ ಕುದುರೆಯನ್ನು ಕೋಲ್ಕತ್ತಾದ ಮೌಂಟೆಡ್ ರೇಸ್‌ಕೋರ್ಸ್‌ಗೆ ಕರೆ ತಂದು ಚಿಕಿತ್ಸೆಗೆ ಕೊಡಿಸಲು ಪ್ರಯತ್ನಿಸಲಾಯಿತು. ಆದರೆ ಮೈದ್ಯಕೀಯ ಚಿಕಿತ್ಸೆಯ ನಡುವೆಯೂ ಚೇತರಿಸಿಕೊಳ್ಳದ ಕುದುರೆ ತಡ ರಾತ್ರಿ ಸಾವನ್ನಪ್ಪಿದೆ.

ಇದನ್ನೂಓದಿ: ತಡವಾಗಿ ಮೈದಾನಕ್ಕಿಳಿದ ಏಂಜೆಲೊ ಮ್ಯಾಥ್ಯೂಸ್ ಔಟ್​.. ಏನಿದು ಟೈಮ್​ ಔಟ್​ ನೀತಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.