ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ '500 ವಿಕೆಟ್ ಕ್ಲಬ್'​ ಸೇರಿದ ನಾಥನ್​ ಲಿಯಾನ್​!

author img

By ETV Bharat Karnataka Team

Published : Dec 17, 2023, 10:27 PM IST

ಕ್ರಿಕೆಟ್​ನ ಸೊಬಗು ಸೂಸುವ ಟೆಸ್ಟ್​ ಮಾದರಿಯಲ್ಲಿ 500 ವಿಕೆಟ್​ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅದಕ್ಕಿಂತಲೂ ಹೆಚ್ಚು ವಿಕೆಟ್​ ಪಡೆದು ಸಾರ್ವಕಾಲಿಕ ಸಾಧನೆ ಮಾಡಿದವರ ಪಟ್ಟಿ ಇಲ್ಲಿದೆ.

ಅತ್ಯಧಿಕ ವಿಕೆಟ್​ ಸಾಧಕರ ಪಟ್ಟಿ
ಅತ್ಯಧಿಕ ವಿಕೆಟ್​ ಸಾಧಕರ ಪಟ್ಟಿ

ಪರ್ತ್(ಆಸ್ಟ್ರೇಲಿಯಾ): ಟಿ-10, ಟಿ-20 ಕ್ರಿಕೆಟ್​ನಂತಹ ಹೊಡಿಬಡಿ ಮಾದರಿಗಳು ಲಗ್ಗೆ ಇಟ್ಟ ಮೇಲೆ ಅಸಲಿ ಕ್ರಿಕೆಟ್​ನ ಸೊಬಗಾದ ಟೆಸ್ಟ್​ ಮಾದರಿ ಮಸುಕಾಗಿದೆ. ಟೆಸ್ಟ್​ನಲ್ಲಿ ಸಾಧನೆ ಮಾಡಿದವರು ಮಾತ್ರ ದಿಗ್ಗಜ ಕ್ರಿಕೆಟಿಗರಾಗಿ ಗುರುತಿಸಿಕೊಳ್ಳಲು ಸಾಧ್ಯ. ಅಂಥವರ ಸಾಲಿಗೆ ಈಗ ಆಸ್ಟ್ರೇಲಿಯಾದ ಸ್ಪಿನ್​ ಬೌಲರ್​ ನಾಥನ್​ ಲಿಯಾನ್​ ಸೇರಿದ್ದಾರೆ. ನಾಥನ್​ ಟೆಸ್ಟ್​ ಕ್ರಿಕೆಟ್​​ನಲ್ಲಿ 500 ವಿಕೆಟ್​ ಕೀಳುವ ಮೂಲಕ ಮಹತ್ವದ ಮೈಲಿಗಲ್ಲು ನೆಟ್ಟರು. ಈ ಮೂಲಕ ಅವರು 500ರ ಕ್ಲಬ್​ ಸೇರಿದರು.

ಆಸ್ಟ್ರೇಲಿಯಾ ಪರವಾಗಿ 123 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಲಿಯಾನ್ 30.85 ಸರಾಸರಿಯಲ್ಲಿ 501 ವಿಕೆಟ್‌ಗಳನ್ನು ಪಡೆದಿದ್ದಾರೆ. ಪಂದ್ಯದಲ್ಲಿ 8/50 ಅತ್ಯುತ್ತಮ ಬೌಲಿಂಗ್ ಆಗಿದೆ. 23 ಬಾರಿ ಐದು ವಿಕೆಟ್ ಮತ್ತು ನಾಲ್ಕು ಬಾರಿ ಹತ್ತು ವಿಕೆಟ್​ಗಳ ಗೊಂಚಲು ಪಡೆದಿದ್ದಾರೆ. ಈ ಮೂಲಕ ಟೆಸ್ಟ್​ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದವರ ಸಾಲಿನಲ್ಲಿ ಎಂಟನೇ ಸ್ಥಾನ ಪಡೆದರು. ಜೊತೆಗೆ ವಿಶ್ವ ಕ್ರಿಕೆಟ್​ನ ನಾಲ್ಕನೇ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿಯೂ ಹೊರಹೊಮ್ಮಿದರು.

ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಸಾಧಕರು:

ಮುತ್ತಯ್ಯ ಮುರಳೀಧರನ್: ಶ್ರೀಲಂಕಾ ತಂಡದ ದಿಗ್ಗಜ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್​ ಅತ್ಯಧಿಕ ಟೆಸ್ಟ್ ವಿಕೆಟ್​ ಪಡೆದ ಮೊದಲಿಗರು. ಮುರಳೀಧರನ್​ 133 ಟೆಸ್ಟ್‌ಗಳಲ್ಲಿ 22.72 ಸರಾಸರಿಯಲ್ಲಿ ಭರ್ತಿ 800 ವಿಕೆಟ್‌ಗಳ ಶಿಖರ ಕಟ್ಟಿದ್ದಾರೆ. 67 ಬಾರಿ ಐದು ಮತ್ತು 22 ಬಾರಿ ಹತ್ತು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಮುರಳಿ ಅತ್ಯಂತ ಯಶಸ್ವಿ ಟೆಸ್ಟ್ ಸ್ಪಿನ್​ ಬೌಲರ್ ಕೂಡ ಹೌದು.

ಶೇನ್ ವಾರ್ನ್: ಆಸ್ಟ್ರೇಲಿಯಾದ ಸ್ಪಿನ್​ ದಂತಕಥೆ ಶೇನ್​​ ವಾರ್ನ್​ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್​ ಕಿತ್ತು ಎರಡನೇ ಸ್ಥಾನದಲ್ಲಿದ್ದಾರೆ. ಸ್ಪಿನ್ ಮಾಂತ್ರಿಕ ಶೇನ್ ವಾರ್ನ್, ಆಸೀಸ್​ ತಂಡದ ಯಶಸ್ವಿ ಬೌಲರ್​. ಅವರು ಇನಿಂಗ್ಸ್​ನಲ್ಲಿ 37 ಬಾರಿ ಐದು ವಿಕೆಟ್ ಮತ್ತು 10 ಸಲ ಹತ್ತು ವಿಕೆಟ್ ಪಡೆದಿದ್ದಾರೆ.

ಜೇಮ್ಸ್ ಆ್ಯಂಡರ್ಸನ್: ಇಂಗ್ಲೆಂಡ್​ನ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್​ 183 ಟೆಸ್ಟ್​ ಪಂದ್ಯಗಳಲ್ಲಿ 690 ವಿಕೆಟ್​ಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಅವರು ಟೆಸ್ಟ್‌ನಲ್ಲಿ 32 ಬಾರಿ ಐದು, ಮೂರು ಬಾರಿ 10 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಜೇಮ್ಸ್​ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ. ತಂಡದ ಪರ ಟೆಸ್ಟ್​ ಪಂದ್ಯಗಳಲ್ಲಿ ಆಡುತ್ತಿದ್ದಾರೆ. 41 ವರ್ಷದ ಜೇಮ್ಸ್​ ವಿಶ್ವ ಕ್ರಿಕೆಟ್​ನ ಅತ್ಯಂತ ಯಶಸ್ವಿ ವೇಗದ ಬೌಲರ್​ ಆಗಿದ್ದಾರೆ.

ಅನಿಲ್ ಕುಂಬ್ಳೆ: 'ಜಂಬೋ' ಖ್ಯಾತಿಯ ಭಾರತದ ಅನಿಲ್​ ಕುಂಬ್ಳೆ 132 ಪಂದ್ಯಗಳಲ್ಲಿ 619 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಮೊದಲ ಭಾರತೀಯ. 35 ಬಾರಿ ಐದು ವಿಕೆಟ್‌ಗಳು, ಎಂಟು ಸಲ ಹತ್ತು ವಿಕೆಟ್‌ಗಳನ್ನು ಪಡೆದ ದಾಖಲೆ ಕುಂಬ್ಳೆ ಹೆಸರಲ್ಲಿದೆ.

ಸ್ಟುವರ್ಟ್ ಬ್ರಾಡ್: ಇಂಗ್ಲೆಂಡ್​ನ ಮತ್ತೋರ್ವ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್. ಜೇಮ್ಸ್ ಆ್ಯಂಡರ್ಸನ್ ಬಳಿಕ ಅತ್ಯಧಿಕ ಟೆಸ್ಟ್​ ಆಡಿದ ಕ್ರಿಕೆಟಿಗ. ಅವರು 167 ಪಂದ್ಯಗಳಲ್ಲಿ 604 ವಿಕೆಟ್‌ಗಳನ್ನು ಪಡೆದಿದ್ದಾರೆ. 20 ಬಾರಿ ಐದು, ಮೂರು ಸಲ ಹತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ.

ಗ್ಲೆನ್ ಮೆಕ್‌ಗ್ರಾತ್: ಅಭಿಮಾನಿಗಳಿಗೆ ಪಾಲಿನ 'ಪಿಡ್ಜನ್' ಎಂದೇ ಹೆಸರಾದ ಗ್ಲೆನ್​ ಮೆಕ್‌ಗ್ರಾತ್ ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ವೇಗಿ. ಶೇನ್ ವಾರ್ನ್‌ ಸಮಕಾಲೀನರಾದ ಮೆಕ್​ಗ್ರಾತ್​ 124 ಪಂದ್ಯಗಳಲ್ಲಿ 563 ವಿಕೆಟ್‌ಗಳನ್ನು ಕಿತ್ತಿದ್ದಾರೆ. 29 ಬಾರಿ ಐದು, ಮೂರು ಬಾರಿ ಹತ್ತು ವಿಕೆಟ್​ ಗೊಂಚಲನ್ನು ಪಡೆದಿದ್ದಾರೆ. ಹಲವು ವರ್ಷಗಳ ಕಾಲ ವಿಶ್ವದ ಎಲ್ಲ ಬ್ಯಾಟರ್​ಗಳಿಗೆ ಮೆಕ್​ಗ್ರಾತ್​ ತಮ್ಮ ವೇಗದಿಂದಲೇ ನಿದ್ದೆಗೆಡಿಸಿದ್ದರು.

ಕೋರ್ಟ್ನಿ ವಾಲ್ಷ್​: ವೆಸ್ಟ್ ಇಂಡೀಸ್ ವೇಗಿಯಾದ ಕೋರ್ಟ್ನಿ ವಾಲ್ಷ್​ 500 ಟೆಸ್ಟ್ ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಸಾಧಕ. ಅವರು 132 ಟೆಸ್ಟ್‌ಗಳಲ್ಲಿ 519 ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್​ ಆಗಿದ್ದಾರೆ. 22 ಬಾರಿ ಐದು, ಮೂರು ಬಾರಿ ಹತ್ತು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ: ಕಿಶನ್​ ಬದಲು ಭರತ್​ಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.