ETV Bharat / sports

IPL 2023 RR vs PBKS: ಗೆಲುವಿಗಾಗಿ ಹೋರಾಡಿ ಸೋತ ರಾಜಸ್ಥಾನ್ ರಾಯಲ್ಸ್: ಪಂಜಾಬ್​ ಕಿಂಗ್ಸ್​ಗೆ 2ನೇ ಜಯ​

author img

By

Published : Apr 5, 2023, 7:14 PM IST

Updated : Apr 6, 2023, 12:37 AM IST

ಗುವಾಹಟಿ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್​ ಮತ್ತು ರಾಜಸ್ಥಾನ ನಡುವಿನ ಪಂದ್ಯ ರೋಚಕ ಘಟ್ಟಕ್ಕೆ ತಲುಪಿತ್ತು. ಕೊನೆಯಲ್ಲಿ ಪಂಜಾಬ್​ ಗೆಲುವಿನ ನಗೆ ಬೀರಿತು.

Rajasthan Royals vs Punjab Kings Match Score update
Rajasthan Royals vs Punjab Kings Match Score update

ಗುವಾಹಟಿ (ಅಸ್ಸಾಂ): ಐಪಿಎಲ್​ 16ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್​​ ತನ್ನ ಎರಡನೇ ಗೆಲವು ದಾಖಲಿಸಿದೆ. ರಾಜಸ್ಥಾನ ರಾಯಲ್​ ವಿರುದ್ಧ 5 ರನ್​ಗಳಿಂದ ಜಯ ಸಾಧಿಸಿದೆ. ಗೆಲುವಿಗಾಗಿ ಕೊನೆಯವರೆಗೆ ಹೋರಾಟ ನಡೆಸಿದ ರಾಯಲ್ಸ್​ ತಂಡ ಮೊದಲ ಸೋಲು ಅನುಭವಿಸಿತು.

ಇಲ್ಲಿನ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಪಂಜಾಬ್​ ಕಿಂಗ್ಸ್​ 197 ರನ್​ಗಳನ್ನು ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ನಿರೀಕ್ಷಿತ ಆರಂಭವನ್ನು ಪಡೆಯಲಿಲ್ಲ. ಅರ್ಷದೀಪ್ ಸಿಂಗ್ ಆರಂಭದಲ್ಲೇ ಎರಡು ವಿಕೆಟ್​ಗಳು ಪಡೆದು ಶಾಕ್​ ನೀಡಿದರು. ಯಶಸ್ವಿ ಜೈಸ್ವಾಲ್ (11) ಮತ್ತು ರವಿಚಂದ್ರನ್​ ಅಶ್ವಿನ್ ಶೂನ್ಯಕ್ಕೆ ಕ್ಯಾಚಿತ್ತು ನಿರ್ಗಮಿಸಿದರು.

ಬಳಿಕ ನಾಥನ್​ ಎಲ್ಲಿಸ್ ಕೂಡ​ ಬಿಗಿ ಬೌಲಿಂಗ್​ ಪ್ರದರ್ಶಿಸಿ, ಪ್ರಮುಖ ನಾಲ್ಕು ವಿಕೆಟ್​ಗಳು ಕಬಳಿಸಿ ರಾಜಸ್ಥಾನ ತಂಡವನ್ನು ಕಟ್ಟಿ ಹಾಕಿದರು. ಜೋಸ್ ಬಟ್ಲರ್ (19), ನಾಯಕ ಸಂಜು ಸ್ಯಾಮ್ಸನ್​ (42) ಮತ್ತು ದೇವದತ್ ಪಡಿಕ್ಕಲ್ (21) ಹಾಗೂ ರಿಯಾನ್ ಪರಾಗ್ (21) ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು.

ನಂತರ ಬಂದ ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ ಜುರೆಲ್ ಬಿರುಸಿನ ಬ್ಯಾಟಿಂಗ್​ ಬೀಸಿ ತಂಡವನ್ನು ಗೆಲುವಿನ ಅಂಚಿಗೆ ತಂದರು. ಕೊನೆಯ ಓವರ್​ನಲ್ಲಿ ಗೆಲುವಿಗೆ 18 ರನ್​ಗಳು ಬೇಕಾಗಿತ್ತು. ಆದರೆ,10 ರನ್​ಗಳನ್ನು ಮಾತ್ರ ಕಲೆ ಹಾಕಲು ಸಾಧ್ಯವಾಯಿತು. ಮೂರನೇ ಎಸೆತದಲ್ಲಿ ಹೆಟ್ಮೆಯರ್​ ರನ್​ ಔಟ್​ ಆಗಿದ್ದು, ರಾಯಲ್ಸ್​ ಆಘಾತಕ್ಕೆ ಕಾರಣವಾಯಿತು. 18 ಎಸತೆಗಳಲ್ಲಿ ಮೂರು ಸಿಕ್ಸರ್​ಗಳು, ಒಂದು ಬೌಂಡರಿ ಸಮೇತ 36 ರನ್​ ಬಾರಿಸಿ ಶಿಮ್ರಾನ್​ ತಂಡದ ಗೆಲುವಿಗೆ ಯತ್ನಿಸಿದರು. ಮತ್ತೊಂದೆಡೆ, 15 ಬಾಲ್​ಗಳಲ್ಲಿ ಎರಡು ಸಿಕ್ಸರ್​ ಮತ್ತು ಮೂರು ಬೌಂಡರಿಗಳೊಂದಿಗೆ ಧ್ರುವ 32* ರನ್ ಬಾರಿಸಿದರು. ಕೊನೆಗೆ ರಾಜಸ್ಥಾನ ತಂಡ 7 ವಿಕೆಟ್​ ನಷ್ಟಕ್ಕೆ 192 ರನ್ ಮಾತ್ರ ಕಲೆ ಹಾಕುವಲ್ಲಿ ಸಾಧ್ಯವಾಯಿತು. ಇದರಿಂದ​ 5 ರನ್​ಗಳಿಂದ ಸೋಲಿಗೆ ಶರಣಾಯಿತು. ​

ಇದಕ್ಕೂ ಮುನ್ನ ಶಿಖರ್ ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅವರ ಆಕರ್ಷಕ ಆರ್ಧಶತಕದ ನೆರವಿನಿಂದ ಪಂಜಾಬ್​ ಕಿಂಗ್ಸ್​ ತಂಡವು 4 ವಿಕೆಟ್​ ನಷ್ಟಕ್ಕೆ 197 ರನ್​ ಗಳಿಸಿತ್ತು. ನಾಯಕನ ಆಟ ಪ್ರದರ್ಶಿಸಿದ ಶಿಖರ್​ ಧವನ್ ಅಜೇಯ 86 ರನ್​ ಗಳಿಸಿದರು. ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಪ್ರಥಮ ವಿಕೆಟ್​ಗೆ 90 ರನ್‌ಗಳ ಜೊತೆಯಾಟ ನೀಡಿದರು. ಯುವ ಆಟಗಾರ ಪ್ರಭಾಸಿಮ್ರಾನ್ ತಮ್ಮ ಐಪಿಎಲ್​ ಜೀವನದ ಮೊದಲ ಅರ್ಧಶತಕ ದಾಖಲಿಸಿದರು. 34 ಎಸೆತಗಳನ್ನು​ ಎದುರಿಸಿದ ಅವರು​ 7 ಬೌಂಡರಿ, 3 ಸಿಕ್ಸ್​ ಸಹಿತ 60 ರನ್​ ಗಳಿಸಿ ಔಟಾದರು.

ನಂತರ ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿದ್ದ ಲಂಕಾ ಬ್ಯಾಟರ್​ ಭಾನುಕಾ ರಾಜಪಕ್ಸೆ ಕ್ರೀಸಿಗೆ ಬಂದರು. ಆದರೆ ಕೈಗೆ ಚೆಂಡು​ ತಗುಲಿ ಗಾಯವಾದ ಕಾರಣ ರಿಟೈರ್ಡ್ ಹರ್ಟ್​ ಆಗಿ ಪೆವಿಲಿಯನ್​ಗೆ ಮರಳಿದರು. ಬಳಿಕ ವಿಕೆಟ್ ಕೀಪರ್​ ಜಿತೇಶ್ ಶರ್ಮಾ ಜೊತೆ ಸೇರಿ ಶಿಖರ್​ ರನ್​ ಸೇರಿಸಿದರು. ಆದರೆ 27 ರನ್​ ಗಳಿಸಿ ಬಿರುಸಿನ ಆಟ ಆಡುತ್ತಿದ್ದ ಜಿತೇಶ್ ಅವರು ಚಹಾಲ್​ ಬೌಲಿಂಗ್​ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಶರ್ಮಾ ಬೆನ್ನಲ್ಲೇ ಬಂದ ಸಿಕಂದರ್​ ರಾಜಾ 1 ರನ್‌ ವಿಕೆಟ್‌ ಒಪ್ಪಿಸಿದರು. ಶಾರುಖ್ ಖಾನ್ ನಾಯಕನ ಜೊತೆ ಕೊನೆಗೆ 11 ರನ್​ ಕೊಡುಗೆ ನೀಡಿದರು. ಕೊನೆಯ ಎರಡು ಬಾಲ್​ ಆಡಲು ಸ್ಯಾಮ್ ಕುರ್ರಾನ್ ಕ್ರೀಸ್​ಗೆ ಬಂದು 1* ರನ್​ ಮಾಡಿದರು.

ದುಬಾರಿಯಾದ ಚಹಾಲ್​: ನಾಲ್ಕು ಓವರ್​ಗಳನ್ನು ಮಾಡಿದ ಚಹಾಲ್ 50 ರನ್​ ಕೊಟ್ಟು​ ಈ ಪಂದ್ಯದಲ್ಲಿ ಅತ್ಯಂತ ದುಬಾರಿಯಾದರು. ಕೇವಲ ಒಂದೇ ವಿಕೆಟ್​ ಅವರ ಬತ್ತಳಿಕೆಯ ಬೌಲಿಂಗ್​ಗೆ ಉದುರಿತು. ಜೇಸನ್ ಹೋಲ್ಡರ್ ಎರಡು ಮತ್ತು ರವಿಚಂದ್ರನ್ ಅಶ್ವಿನ್​ ಒಂದು ವಿಕೆಟ್​ ಪಡೆದುಕೊಂಡರು.

ಇದನ್ನೂ ಓದಿ: ಗೆದ್ದವರ ಮಧ್ಯೆ ಗುದ್ದಾಟ: ಇಂದು ಗುವಾಹಟಿಯಲ್ಲಿ ರಾಜಸ್ಥಾನಕ್ಕೆ ಪಂಜಾಬ್​ ಕಿಂಗ್ಸ್​ ಸವಾಲು

Last Updated : Apr 6, 2023, 12:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.