ETV Bharat / sports

ದೀಪಾವಳಿಯಲ್ಲಿ ಮತ್ತೆ ವುಮೆನ್ಸ್​ ಪ್ರೀಮಿಯರ್​ ಲೀಗ್​: ಜಯ್ ಶಾ

author img

By

Published : Apr 15, 2023, 7:11 PM IST

ಇದೇ ವರ್ಷ ಇನ್ನೊಂದು ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.

Next  Womens Premier League around Diwali
ದೀಪಾವಳಿಯಲ್ಲಿ ಮತ್ತೆ ವುಮೆನ್ಸ್​ ಪ್ರೀಮಿಯರ್​ ಲೀಗ್​: ಜಯ್ ಶಾ

ಮುಂಬೈ: ಈ ವರ್ಷದಿಂದ ಆರಂಭವಾದ ವುಮೆನ್ಸ್​ ಪ್ರೀಮಿಯರ್​ ಲೀಗ್​ ಯಶಸ್ಸು ಕಂಡಿದ್ದು, ಇದೇ ವರ್ಷ ದಿಪಾವಳಿ ಸಮಯಕ್ಕೆ ಮತ್ತೆ ಇನ್ನೊಂದು ಆವೃತ್ತಿಯ ಡಬ್ಲ್ಯೂಪಿಎಲ್ ಆಡಿಸುವ ಮುನ್ಸೂಚನೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ನೀಡಿದ್ದಾರೆ. ಅದು ತವರು ಮತ್ತು ತವರಿನಾಚೆಯ ಮಾದರಿಯಲ್ಲಿ ಇರಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಬಗ್ಗೆ ತಿಳಿಸಿದ್ದಾರೆ. "ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ ತವರು ಮತ್ತು ತವರಿನಾಚೆಯ ಮಾದರಿಯಲ್ಲಿ ಇದೇ ವರ್ಷ ಮಾಡುವ ಚಿಂತನೆಯಲ್ಲಿದ್ದೇವೆ. ದೀಪಾವಳಿಯ ಸಮಯಕ್ಕೆ ಸರಿ ಹೊಂದುವಂತೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ" ಎಂದಿದ್ದಾರೆ.

ಆದರೆ ಎರಡು ಆವೃತ್ತಿಗಳನ್ನು ಮುಂದಿನ ವರ್ಷಗಳಲ್ಲೂ ಆಯೋಜಿಸುವ ಚಿಂತನೆ ಇಲ್ಲ. ಬಿಡುವಿನ ಸಮಯ ನೋಡಿಕೊಂಡು ಲೀಗ್​ನ್ನು ಆಡಿಸುವ ಬಗ್ಗೆ ಚರ್ಚೆಗಳು ಮಾಡಲಾಗುತ್ತಿದೆ. ವುಮೆನ್ಸ್​ ಪ್ರೀಮಿಯರ್ ಲೀಗ್​ ತನ್ನದೇ ಆದ ಅಭಿಮಾನಿಗಳನ್ನು ಗಳಿಸಿದೆ. ಮುಂದಿನ ದಿನಗಳಲ್ಲಿ ಈ ಅಭಿಮಾನಿಗಳ ಸಂಖ್ಯೆ ಹೆಚ್ಚಲಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ವುಮೆನ್ಸ್​ ಪ್ರೀಮಿಯರ್​ ಲೀಗ್​ನ ಉದ್ಘಾಟನಾ ಆವೃತ್ತಿಯು ಈ ವರ್ಷ ಮಾರ್ಚ್ 4 ರಿಂದ ಮಾರ್ಚ್ 26 ರವರೆಗೆ ಮುಂಬೈನ ಎರಡು ಸ್ಥಳಗಳಲ್ಲಿ ನಡೆಸಲಾಯಿತು. ಐದು ತಂಡಗಳು ಭಾಗವಹಿಸಿದ್ದು, ಡಬಲ್​ ರೌಂಡ್​ ರಾಬಿನ್​ ಸುತ್ತುಗಳಲ್ಲಿ ಪಂದ್ಯವನ್ನು ನಡೆಸಲಾಗಿತ್ತು. ಮಹಿಳಾ ಲೀಗ್​ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾಗುವ ಐದು ದಿನಗಳ ಮೊದಲು ಮುಕ್ತಾಯಗೊಂಡಿತು. ನಾಕೌಟ್​ ಸುತ್ತಿನ ಪಂದ್ಯಗಳು ಹೆಚ್ಚು ಜನರನ್ನು ಆಕರ್ಷಿಸಿತ್ತು.

ಮೊದಲ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಮುಂಬೈ ಇಂಡಿಯನ್ಸ್​, ಡೆಲ್ಲಿ ಕ್ಯಾಪಿಟಲ್ಸ್​, ಗುಜರಾತ್​​ ಜೈಂಟ್ಸ್​ ಮತ್ತು ಯುಪಿ ವಾರಿಯರ್ಸ್​ ತಂಡಗಳ ಪಂದ್ಯಗಳು ನಡೆದಿದ್ದವು. ಮುಂದಿನ ಆವೃತ್ತಿಯಲ್ಲಿ ತಂಡಗಳು ಹೆಚ್ಚಾಗುವ ನಿರೀಕ್ಷೆಯನ್ನು ಬಿಸಿಸಿಐ ಹೇಳಿತ್ತು. ಎರಡನೇ ಆವೃತ್ತಿಯ ವೇಳೆಗೆ ಇನ್ನಷ್ಟೂ ತಂಡಗಳು ಸೇರಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮಾರ್ಚ್ 26 ರಂದು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಉದ್ಘಾಟನಾ ಪಂದ್ಯಾವಳಿಯನ್ನು ಗೆದ್ದುಕೊಂಡಿತು.

ಲ್ಯಾನಿಂಗ್ ಅವರು ಪಂದ್ಯಾವಳಿಯಲ್ಲಿ ಅಗ್ರ ರನ್-ಸ್ಕೋರರ್ ಆಗಿದ್ದರು, ಒಂಬತ್ತು ಪಂದ್ಯಗಳಲ್ಲಿ 49.28 ಸರಾಸರಿಯಲ್ಲಿ ಎರಡು ಅರ್ಧಶತಕಗಳು ಮತ್ತು 139 ಸ್ಟ್ರೈಕ್ ರೇಟ್‌ನೊಂದಿಗೆ 345 ರನ್ ಗಳಿಸಿದರು. ಅವರು ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ 'ಆರೆಂಜ್ ಕ್ಯಾಪ್' ಗೆದ್ದರು. ಮುಂಬೈ ಇಂಡಿಯನ್ಸ್​ನ ಹೇಲಿ ಮ್ಯಾಥ್ಯೂಸ್ 10 ಪಂದ್ಯಗಳಲ್ಲಿ 12.62 ಸರಾಸರಿಯಲ್ಲಿ ಮತ್ತು 5.94 ರ ಎಕಾನಮಿ ದರದಲ್ಲಿ 16 ವಿಕೆಟ್‌ಗಳನ್ನು ಕಬಳಿಸಿ 'ಪರ್ಪಲ್ ಕ್ಯಾಪ್' ಪಡೆದರು.

ಇದನ್ನೂ ಓದಿ: RCB vs DC : ವಿರಾಟ್​ ಅರ್ಧಶತಕ, ಡೆಲ್ಲಿಗೆ 175 ರನ್​ನ ಸಾಧಾರಣ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.