ETV Bharat / sports

ಪತಿರನ ಬೌಲಿಂಗ್​ಗಾಗಿ 4 ನಿಮಿಷ ಆಟ ನಿಲ್ಲಿಸಿದ ಧೋನಿ!: ಗವಾಸ್ಕರ್​ ಪ್ರತಿಕ್ರಿಯೆ ಹೀಗಿದೆ..

author img

By

Published : May 25, 2023, 12:48 PM IST

ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಸಿಎಸ್​ಕೆ ನಾಯಕ ಎಂ.ಎಸ್.​ಧೋನಿ ಬೌಲರ್​ಗಾಗಿ ನಾಲ್ಕು ನಿಮಿಷ ಆಟವನ್ನೇ ನಿಲ್ಲಿಸಿದ್ದರು. ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ಈ ನಡೆಯನ್ನು ಟೀಕಿಸಿದ್ದಾರೆ.

4 ನಿಮಿಷ ಆಟ ನಿಲ್ಲಿಸಿದ ಎಂಎಸ್​ ದೋನಿ
4 ನಿಮಿಷ ಆಟ ನಿಲ್ಲಿಸಿದ ಎಂಎಸ್​ ದೋನಿ

ಚೆನ್ನೈ: ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯದ ವೇಳೆ ಮೈದಾನದಲ್ಲಿ ಮಾಡುವ ಚಾಣಾಕ್ಷ ತಂತ್ರಗಳು ಒಂದೆರಡಲ್ಲ. ಅವುಗಳು ಎದುರಾಳಿ ತಂಡವನ್ನು ಸೋಲಿನ ದವಡೆಗೆ ಸಿಲುಕಿಸುತ್ತವೆ. ಆದರೆ, ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ತಂಡದ ಬೌಲರ್​ಗಾಗಿ ನಾಲ್ಕು ನಿಮಿಷ ಆಟವನ್ನು ಬೇಕಂತಲೇ ನಿಲ್ಲಿಸಿದ್ದರು. ಧೋನಿ ತಳೆದ ಈ ನಿರ್ಧಾರ ಚರ್ಚೆಗೀಡು ಮಾಡಿದೆ. ಇದು ದೋನಿಯದ್ದಲ್ಲ, ಅಂಪೈರ್​ಗಳ ತಪ್ಪು ಎಂದು ಹಿರಿಯ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ಟೀಕಿಸಿದ್ದಾರೆ.

ಏನಾಯ್ತು?: ಗುಜರಾತ್​ ವಿರುದ್ಧದ ಪಂದ್ಯದಲ್ಲಿ 16 ನೇ ಓವರ್​ ಎಸೆಯಲು ಮಥೀಶ್​ ಪತಿರನ ಬೌಲ್​ ಪಡೆದಾಗ ಅಂಪೈರ್​ಗಳು ತಡೆದರು. ಆಗ ನಾಯಕ ಧೋನಿ ಅಂಪೈರ್​ಗಳಾದ ಅನಿಲ್​ ಚೌಧರಿ, ಕ್ರಿಸ್​ ಗ್ಯಾಫನಿ ಬಳಿಗೆ ಬಂದು ಪ್ರಶ್ನಿಸಿದರು. ಪತಿರನ ಆಟದ ಮಧ್ಯೆ 9 ನಿಮಿಷ ಹೊರಗಿದ್ದರು. ಈಗ ನೇರವಾಗಿ ಬೌಲ್​ ಮಾಡಲು ಬಂದಿದ್ದು, ನಿಯಮಗಳ ವಿರುದ್ಧವಾಗಿದೆ. ಬೌಲ್​ ಮಾಡಬೇಕಾದಲ್ಲಿ ಅಷ್ಟೇ ನಿಮಿಷಗಳು ಆಟಗಾರ ಮೈದಾನದಲ್ಲಿ ಕಳೆಯಬೇಕು. ಹೀಗಾಗಿ ಬೌಲಿಂಗ್​ಗೆ ಅನುಮತಿಸಲಾಗಲ್ಲ ಎಂದಿದ್ದಾರೆ.

ಈ ವೇಳೆ ಧೋನಿ ಪತಿರನ ಬೌಲಿಂಗ್​ಗಾಗಿ ಅಂಪೈರ್​ಗಳನ್ನು ಕೋರಿದ್ದಾರೆ. ಇನ್ನೂ 4 ನಿಮಿಷಗಳು ಕಳೆದಲ್ಲಿ ಬೌಲಿಂಗ್ ಮಾಡಲು ಸಾಧ್ಯ ಎಂದು ರೂಲ್ಸ್​ ಹೇಳಿದರು. ಪತಿರನ ಹೊರತಾಗಿ ತುಷಾರ್​ ದೇಶಪಾಂಡೆಗೆ 3 ಓವರ್​ಗಳು ಬಾಕಿ ಇದ್ದವು. ಅಲ್ಲದೇ, ರವೀಂದ್ರ ಜಡೇಜಾ, ಮಹೇಶ್​ ತೀಕ್ಷಣ, ದೀಪಕ್​ ಚಹರ್​ ತಲಾ 4 ಓವರ್​ ಎಸೆದಿದ್ದರು. ಬೇರೊಂದು ಆಯ್ಕೆಯಾಗಿ ಮೊಯಿನ್​ ಅಲಿ ಮಾತ್ರ ಉಳಿದಿದ್ದರು. ಆದರೆ, 30 ಎಸೆತಗಳಲ್ಲಿ 71 ರನ್​ ಅಗತ್ಯವಿದ್ದಾಗ ಸ್ಪಿನ್ನರ್​ಗೆ ಬೌಲ್​ ನೀಡಲು ಧೋನಿ ಹಿಂದೇಟು ಹಾಕಿದರು.

4 ನಿಮಿಷ ಆಟ ಸ್ಥಗಿತ: ಅಂಪೈರ್​ಗಳ ಜೊತೆಗೆ ಮಾತನಾಡುತ್ತಲೇ ಧೋನಿ 4 ನಿಮಿಷಗಳ ಕಾಲ ಆಟವನ್ನು ನಿಲ್ಲಿಸಿದರು. ಈ ವೇಳೆ ಅಂಪೈರ್​ಗಳು ಧೋನಿ ಮತ್ತು ಇತರೆ ಆಟಗಾರರೊಂದಿಗೆ ಮಾತನಾಡುತ್ತಲೇ ಇದ್ದರು. ಸಮಯ ಕಳೆದ ಬಳಿಕ ಪತಿರನ ಬೌಲಿಂಗ್​ಗೆ ಇಳಿದರು. ಚೆನ್ನೈ ನಾಯಕನ ಈ ನಿರ್ಧಾರ ಪ್ರಶ್ನಾರ್ಹವಾಗಿದೆ. ಬೌಲರ್​ ಒಬ್ಬರಿಗಾಗಿ ಇಡೀ ಪಂದ್ಯವನ್ನು 4 ನಿಮಿಷಗಳ ಕಾಲ ನಿಲ್ಲಿಸಿದ್ದು ಚರ್ಚೆಗೀಡು ಮಾಡಿದೆ.

ಅಂಪೈರ್​ಗಳು ನಿರ್ಣಯಿಸಬೇಕಿತ್ತು: ಈ ಕುರಿತಂತೆ ಮಾತನಾಡಿರುವ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಆಟದ ಸಮಯದಲ್ಲಿ ಅಂಪೈರ್‌ಗಳು ದೃಢ ನಿರ್ಧಾರ ತಳೆಯಬೇಕು. ಫೀಲ್ಡ್​ನಲ್ಲಿ ಅಂಪೈರ್ ನಿರ್ಧಾರವನ್ನು ಎಲ್ಲರೂ ಒಪ್ಪಬೇಕು. ಇದು ನಿಯಮ. ಹೀಗಿದ್ದಾಗ ಧೋನಿ ಏನು ಮಾಡಿದರು ಎಂಬುದಕ್ಕಿಂತಲೂ ಅಂಪೈರ್​ಗಳು ಯಾಕೆ ಮೃದು ಧೋರಣೆ ತೋರಿದರು ಎಂದು ಪ್ರಶ್ನಿಸಿದರು.

ಧೋನಿ ಆಗಿರುವ ಕಾರಣದಿಂದಲೇ ಅಂಪೈರ್​ಗಳು ಇಷ್ಟು ಮೃದುವಾಗಿ ವರ್ತಿಸಿದ್ದಾರೆ. ಆ ಜಾಗದಲ್ಲಿ ಬೇರೆ ಯಾರಾದರೂ ಇದ್ದರೆ, ಬೇರೆ ರೀತಿಯೇ ನಡೆಯುತ್ತಿತ್ತು. ಎಂ.ಎಸ್. ಧೋನಿ ಕಡೆಗೆ ಬೆರಳು ತೋರಿಸುವ ಅಗತ್ಯವಿಲ್ಲ. ಬದಲಿಗೆ ಅಂಪೈರ್‌ಗಳನ್ನು ಇಲ್ಲಿ ಪ್ರಶ್ನಿಸಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ಗೆ 81 ರನ್​ ಜಯ: ಐಪಿಎಲ್​ನಿಂದ ಲಖನೌ 'ಎಲಿಮಿನೇಟ್​'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.