ETV Bharat / sports

Ipl-2021: Rr​ಗೆ ಹೀನಾಯ ಸೋಲು​... ಪ್ಲೇ ಆಫ್​​ ಸನಿಹ Kkr, ಮುಂಬೈ ಹಾದಿ ಕಷ್ಟಸಾಧ್ಯ!

author img

By

Published : Oct 7, 2021, 11:53 PM IST

Updated : Oct 8, 2021, 9:27 AM IST

ಶಿವಂ ಮಾವಿ ಮತ್ತು ಫರ್ಗುಸನ್ ಮಾರಕ ಬೌಲಿಂಗ್ ದಾಳಿಗೆ ರಾಜಸ್ಥಾನ ರಾಯಲ್ಸ್ ಕೇವಲ 85 ರನ್​ಗಳಿಗೆ ಆಲೌಟ್ ಆಗಿದೆ.

KKR
KKR

ಶಾರ್ಜಾ: ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ದಾಳಿಗೆ ರಾಜಸ್ಥಾನ ರಾಯಲ್ ತತ್ತರಿಸಿ, 16.1 ಓವರ್​ಗಳಲ್ಲಿ 85 ರನ್​ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿದೆ. ಈ ಗೆಲುವಿನ ಮೂಲಕ ಮೋರ್ಗನ್​ ಪಡೆ ಪ್ಲೇ ಆಫ್​ನತ್ತ ಮುನ್ನುಗ್ಗಿದ್ದು, ಮುಂಬೈಗೆ ಅಂತಿಮ ಲೀಗ್​ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಭರ್ಜರಿ ಗೆಲುವು ಅನಿವಾರ್ಯವಾಗಿದೆ.

ಟಾಸ್ ಸೋತು ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಕೆಕೆಆರ್ 172 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್ಮನ್ ಗಿಲ್​ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 56 ರನ್​ಗಳಿಸಿದರೆ, ಇವರ ಜೊತೆಗಾರ ವೆಂಕಟೇಶ್ ಅಯ್ಯರ್​ 35 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 38 ರನ್​ಗಳಿಸಿದರು.

ನಿತೀಶ್ ರಾಣಾ 12, ರಾಹುಲ್ ತ್ರಿಪಾಠಿ 14 ಎಸೆತಗಳಲ್ಲಿ 21, ದಿನೇಶ್ ಕಾರ್ತಿಕ್ ಅಜೇಯ 14 ಮತ್ತು ಇಯಾನ್ ಮಾರ್ಗನ್​ ಅಜೇಯ 13 ರನ್​ಗಳಿಸಿ 172 ರನ್​ಗಳ ಗುರಿ ನೀಡಿದರು. ಇದು ಶಾರ್ಜಾದಲ್ಲಿ ಈ ಆವೃತ್ತಿಯಲ್ಲಿ ದಾಖಲಾದ ಗರಿಷ್ಠ ರನ್​ ಗಳಿಕೆಯಾಗಿದೆ.

ರಾಜಸ್ಥಾನ್ ರಾಯಲ್ಸ್ ಪರ ಚೇತನ್ ಸಕಾರಿಯಾ 23ರನ್​ ನೀಡಿ 1 ವಿಕೆಟ್​ ಪಡೆದರೆ, ಮೋರಿಸ್​ 28ಕ್ಕೆ1, ತೆವಾಟಿಯಾ 11ಕ್ಕೆ1, ಗ್ಲೇನ್ ಫಿಲಿಫ್ಸ್​ 17ಕ್ಕೆ1 ವಿಕೆಟ್ ಪಡೆದರು.

ಇನ್ನು 172 ರನ್​ಗಳ ಬೃಹತ್ತ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್​ ಕೇವಲ 85 ರನ್​ಗಳಿಗೆ ಆಲೌಟ್ ಆಯಿತು. ಶಿವಮ್ ದುಬೆ (18), ರಾಹುಲ್ ತೆವಾಟಿ (44) ರನ್​ ಗಳಿಸಿದ್ದ ಬಿಟ್ಟು ಇನ್ನುಳಿದ ಯಾವುದೇ ಬ್ಯಾಟ್ಸಮನ್ ಎರಡಂಕಿ ದಾಟಲಿಲ್ಲ. ನಾಲ್ವರ ಬ್ಯಾಟ್ಸಮನ್​ಗಳ ಸೊನ್ನೆ ಸುತ್ತಿದರೆ, ಇಬ್ಬರು ಕೇವಲ 1 ರನ್ ಗಳಿಸಿ ಔಟಾದರು.

ಕೆಕೆಆರ್ ಪರ ಮಾರಕ ಬೌಲಿಂಗ್ ಮಾಡಿದ ಶಿವಂ ಮಾವಿ 4 ವಿಕೆಟ್, ಲೋಕೈ ಫರ್ಗುಸನ್ 3 ವಿಕೆಟ್ ಕಿತ್ತರು. ಶಕೀಬ್ ಅಲ್ ಹಸನ್ ಹಾಗೂ ವರುಣ್ ಚಕ್ರವರ್ತಿ ತಲಾ1 ವಿಕೆಟ್ ಕಬಳಿಸಿದರು. ಶಿವಂ ಮಾವಿ ಪಂದ್ಯ ಶ್ರೇಷ್ಠ ಪುರಸ್ಕಾರ ಪಡೆದರು.

ಮುಂಬೈ ಹಾದಿ ಕಠಿಣ:

ಪ್ಲೇ ಆಫ್​ ಸ್ಥಾನ ನಿರ್ಧರಿಸುವ ಈ ಪಂದ್ಯದಲ್ಲಿ ಕೋಲ್ಕತ್ತಾ ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿ ಹಾಗೂ ರನ್​ರೇಟ್​ ಉತ್ತಮಪಡಿಸಿಕೊಂಡಿದ್ದು, ಇನ್ನೊಂದೆಡೆ ಮುಂಬೈಗೆ ಮಾರಕವಾಗಿ ಪರಿಣಮಿಸಿದೆ. ಮುಂಬೈ ಮುಂದಿನ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಮೊದಲು ಬ್ಯಾಟಿಂಗ್​ ನಡೆಸಿ, 171 ರನ್​ಗಳ ಅಂತರದ ಭರ್ಜರಿ ಗೆಲುವು ಸಾಧಿಸಬೇಕಿದೆ. ಹೀಗಾದರೆ ಮಾತ್ರ ರೋಹಿತ್​ ಪಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಲು ಸಾಧ್ಯವಿದೆ. ಒಂದು ವೇಳೆ ಹೈದರಾಬಾದ್​ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದರೆ ಮುಂಬೈ ಪ್ಲೇ ಆಫ್ ಕನಸು ಕಮರಲಿದೆ.

Last Updated : Oct 8, 2021, 9:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.