ಚಿನ್ನದ ಮೊಟ್ಟೆ ಇಡುವ ಕೋಳಿಯಾದ ಐಪಿಎಲ್​​! ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ.. ಜಾಕ್​​ಪಾಟ್​ ಹೊಡೆದ ಬಿಸಿಸಿಐ

author img

By

Published : Jun 14, 2022, 1:18 PM IST

IPL Media Rights: Disney Star gets TV deal for Rs 23,575 crore, Viacom18 bags digital for Rs 20,500 crore

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2023-27ರವರೆಗಿನ ಆವೃತ್ತಿಯ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆದಿಯುತ್ತಿದೆ. ಸದ್ಯ ನಡೆಯುತ್ತಿರುವ ಹರಾಜಿಗೆ ಭಾರೀ ಪೈಪೋಟಿ ಕಂಡು ಬಂದಿದ್ದು ಬಿಸಿಸಿಐ ದಾಖಲೆ ಮೊತ್ತವನ್ನು ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದೆ.

ಹೊಸದೆಹಲಿ: 2023ರಿಂದ 2027ರ ವರೆಗಿನ 5 ವರ್ಷಗಳ ವರೆಗೆ ಐಪಿಎಲ್ ಪಂದ್ಯಗಳ ಪ್ರಸಾರ ಮಾಡುವ ಹಕ್ಕನ್ನು ಬಿಸಿಸಿಐ ಹರಾಜಿನ ಮೂಲಕ ಮಾರಾಟ ಮಾಡಿದೆ. ಈ ವರೆಗೆನ ಮಾಹಿತಿ ಪ್ರಕಾರ ಮೊದಲ ದಿನವೇ ದಾಖಲೆ ಮಟ್ಟದಲ್ಲಿ ಮಾರಾಟ ಮಾಡಿದೆ ಎಂಬ ಅಂಶ ಹೊರಬಿದ್ದಿದೆ.

ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ನೇರ ಪ್ರಸಾರದ ಟಿವಿ ಹಕ್ಕುಗಳನ್ನು ಡಿಸ್ನಿ ಸ್ಟಾರ್ (ಸ್ಟಾರ್​ ನೆಟ್​ವರ್ಕ್​) 23,575 ಕೋಟಿ ರೂ.ಗೆ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಇನ್ನು ಡಿಜಿಟಲ್ ಹಕ್ಕುಗಳನ್ನು ರಿಲಯನ್ಸ್ ಕಂಪನಿಯ ವಯಾಕಾಮ್-18 ರೂ. 20,500 ಕೋಟಿ ಖರೀದಿ ಮಾಡಿದೆ. ಐಪಿಎಲ್​ ಡಿಜಿಟಲ್​ ಹಕ್ಕುಗಳಿಗಾಗಿ ಸೋನಿ ನೆಟ್​ವರ್ಕ್​, ರಿಲಯನ್ಸ್ ಹಾಗೂ ಡಿಸ್ನಿ ಹಾಟ್​ ಸ್ಟಾರ್ ನಡುವೆ ಭರ್ಜರಿ ಪೈಪೋಟಿ ಏರ್ಪಟಿತ್ತು. ಆದರೆ, ಅಂತಿಮವಾಗಿ ಅಧಿಕ ಮೊತ್ತಕ್ಕೆ ಬಿಡ್ಡಿಂಗ್ ಮಾಡುವ ಮೂಲಕ ಡಿಜಿಟಲ್​ ಹಕ್ಕುಗಳನ್ನು ಖರೀದಿಸುವಲ್ಲಿ ರಿಲಯನ್ಸ್ ಕಂಪನಿ ಯಶಸ್ವಿಯಾಗಿದೆ.

ಪ್ಯಾಕೇಜ್​ ಎ ಮತ್ತು ಪ್ಯಾಕೇಜ್​ ಬಿ ಎಂಬ ಎರಡು ಕೆಟಗಿರಿಗಳ ಐದು ವರ್ಷಗಳ ಅವಧಿಯವರೆಗೆ ಐಪಿಎಲ್ ಟೂರ್ನಿಯ ಪಂದ್ಯಗಳ ಪ್ರಸಾರ (ಟಿವಿ ಮತ್ತು ಡಿಜಿಟಲ್) ಹಕ್ಕಿಗಾಗಿ ಈ ಹರಾಜು ಪ್ರಕ್ರಿಯೆ ನಡೆದಿದ್ದು, ಮೊದಲ ದಿನವೇ ಬಿಸಿಸಿಐಗೆ 44,075 ಕೋಟಿ ರೂ. ಹರಿದು ಬಂದಿದೆ. ಈ ಮೂಲಕ ಐಪಿಎಲ್​​ ಕೂಡ ಕ್ರೀಡಾ ಪ್ರಪಂಚದ ಶ್ರೀಮಂತ ಸಂಸ್ಥೆಗಳಲ್ಲಿ ಒಂದಾಗಿದೆ.

ಇಂದು ಸಹ ಪ್ಯಾಕೇಜ್​ ಸಿ ಮತ್ತು ಪ್ಯಾಕೇಜ್ ಡಿ ಹರಾಜು ಪ್ರಕ್ರಿಯೆ ಮುಂದುವರೆದಿದ್ದು, ಬಿಸಿಸಿಐಗೆ ಮತ್ತಷ್ಟು ಹಣ ಹರಿದು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸೋಮವಾರ ನಡೆದ ಹರಾಜಿನಲ್ಲಿ ಸ್ಟಾರ್​ ನೆಟ್​ವರ್ಕ್ ಮುಂದಿನ ಐದು ವರ್ಷಗಳ ಕಾಲ ಐಪಿಎಲ್‌ನ ಭಾರತೀಯ ಟಿವಿ ಹಕ್ಕುಗಳನ್ನು ಉಳಿಸಿಕೊಂಡರೆ ರಿಲಯನ್ಸ್ ಕಂಪನಿಯ ವಯಾಕಾಮ್-18 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ.

ಮುಂದಿನ 5 ವರ್ಷಗಳಲ್ಲಿ ಒಟ್ಟು 410 ಐಪಿಎಲ್ ಪಂದ್ಯಗಳು ನಡೆಯಲಿದ್ದು, ಒಟ್ಟು ಮೊತ್ತ ಲೆಕ್ಕಹಾಕಿದರೆ ಐಪಿಎಲ್ ಪ್ರಸಾರ ಹಕ್ಕು ಪಡೆದ ಸಂಸ್ಥೆಗಳು ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ 107.5 ಕೋಟಿ ರೂಪಾಯಿ ನೀಡಬೇಕು. ಸ್ಟಾರ್​ ನೆಟ್​ವರ್ಕ್ ಸಂಸ್ಥೆ ಟಿವಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರ ಮಾಡಲು ಪ್ರತಿ ಪಂದ್ಯಕ್ಕೆ 57.5 ಕೋಟಿ ರೂ. ಬಿಸಿಸಿಐಗೆ ನೀಡಬೇಕು. ಇನ್ನು ಡಿಜಿಟಲ್ ಹಕ್ಕು ಖರೀದಿಸಿದ ರಿಲಯನ್ಸ್ ಜಿಯೋ ಸಂಸ್ಥೆಯ ವಯಾಕಾಮ್-18 ಪ್ರತಿ ಪಂದ್ಯಕ್ಕೆ 50 ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದು ಹಿರಿಯ ಬಿಸಿಸಿಐ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಾರಿ ಬಿಸಿಸಿಐ ನಾಲ್ಕು ವಿಭಾಗಗಳಲ್ಲಿ ಹರಾಜು ನಡೆಸಲಿದ್ದು ಸದ್ಯ ಪ್ಯಾಕೇಜ್ ಎ ಮತ್ತು ಪ್ಯಾಕೇಜ್ ಬಿ ಪೂರ್ಣಗೊಂಡಿದೆ. ಹೀಗಾಗಿ ಎರಡು ಪ್ಯಾಕೇಜ್‌ಗಳನ್ನು ಮಾರಾಟ ಮಾಡಿದ ನಂತರ ಬಿಸಿಸಿಐ ಈಗ 44,075 ಕೋಟಿ ರೂ. ತನ್ನ ಖಾತೆಗೆ ಈಗಾಗಲೇ ಜಮೆ ಮಾಡಿಕೊಳ್ಳುವ ಮೂಲಕ ಅತ್ಯಂತ ಶ್ರೀಮಂತ ಸಂಸ್ಥೆಗಳಲ್ಲಿ ಒಂದಾಗಿದೆ. ಮೂರನೇ ದಿನಕ್ಕೆ ಕಾಲಿಟ್ಟಿರುವ ಹರಾಜು ಮಂಗಳವಾರ ಪ್ಯಾಕೇಜ್ ಸಿ ಯೊಂದಿಗೆ ಪುನಾರಂಭವಾಗಲಿದೆ.

ನಾವು ಈಗಾಗಲೇ ಎರಡು ಪ್ಯಾಕೇಜ್‌ಗಳನ್ನು ಮಾರಾಟ ಮಾಡಿದ್ದೇವೆ. ಈ ಮೂಲಕ ಈಗಾಗಲೇ ನಾವು USD 5.5 ಶತಕೋಟಿಗೆ ತಲುಪಿದ್ದೇವೆ. ಡಿಜಿಟಲ್​ ಹರಾಜು ಪ್ರಕ್ರಿಯೆಯಲ್ಲಿ ನಿರೀಕ್ಷೆಗೂ ಮೀರಿದ ಮೌಲ್ಯ ದೊರೆತಿದೆ. ಪ್ರಸ್ತುತ ಪ್ಯಾಕೇಜ್ ಸಿ ಅನ್ನು ಹರಾಜು ಮಾಡುತ್ತಿದ್ದೇವೆ ಎಂದು BCCI ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.