IPL 2021: ಡೆಲ್ಲಿಗೆ ವಿರೋಚಿತ ಸೋಲು... ಮೂರನೇ ಬಾರಿಗೆ ಫೈನಲ್​ ತಲುಪಿದ KKR

author img

By

Published : Oct 13, 2021, 11:20 PM IST

Updated : Oct 14, 2021, 7:17 AM IST

IPL 2021: Kolkata knight riders beat Delhi capitals to reach Final

14ನೇ ಆವೃತ್ತಿ ಐಪಿಎಲ್​​ನ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 3 ವಿಕೆಟ್​​ಗಳ ಅಂತರದ ಜಯ ಸಾಧಿಸಿ ಫೈನಲ್​ ತಲುಪಿದೆ.

ಶಾರ್ಜಾ: ಬೌಲರ್​ಗಳ ಕರಾರುವಾಕ್​ ದಾಳಿ ಹಾಗೂ ಆರಂಭಿಕ ಆಟಗಾರರ ಉತ್ತಮ ಜೊತೆಯಾಟದ ನೆರವಿನಿಂದ 14ನೇ ಆವೃತ್ತಿಯ ಐಪಿಎಲ್​​ನ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 3 ವಿಕೆಟ್​​ಗಳ ರೋಚಕ ಜಯ ಸಾಧಿಸಿ ಫೈನಲ್​ಗೆ ಲಗ್ಗೆ ಇಟ್ಟಿದೆ.

ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಟಾಸ್​​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ರಿಷಭ್ ಪಂತ್​ ಬಳಗ ನಿಗದಿತ 20 ಓವರ್​ಗಳಲ್ಲಿ 135 ರನ್​​ ರನ್​ಗಳಿಸಿತ್ತು. 136 ರನ್​ ಗುರಿ ಬೆನ್ನಟ್ಟಿದ ಕೆಕೆಆರ್​ಗೆ ಆರಂಭಿಕರಾದ ವೆಂಕಟೇಶ್​ ಅಯ್ಯರ್​ ಆಕರ್ಷಕ ಅರ್ಧಶತಕ ಹಾಗೂ ಶುಬ್ಮನ್​ ಗಿಲ್​ ಸಮಯೋಚಿತ ಬ್ಯಾಟಿಂಗ್​ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಅಯ್ಯರ್​ 41 ಎಸೆತಗಳಲ್ಲಿ 55 ರನ್​ ಬಾರಿಸಿ ಔಟಾದರೆ, ಗಿಲ್ ​46 ರನ್​ ಬಾರಿಸಿ ಗೆಲುವಿಗೆ 11 ರನ್​ ಬೇಕಿದ್ದಾಗ ಔಟಾದರು.

ದಿಢೀರ್​ ಕುಸಿತ ಕಂಡ ಕೆಕೆಆರ್​:

ವೆಂಕಟೇಶ್​ ವಿಕೆಟ್​ ಪತನದ ಬಳಿಕ ಬಂದ ನಿತೀಶ್​ ರಾಣಾ 13 ರನ್​ ಗಳಿಸಿ ವಿಕೆಟ್ ಒಪ್ಪಿಸಿದರೆ. ನಂತರ ಬಂದ ದಿನೇಶ್​ ಕಾರ್ತಿಕ್ (0),ನಾಯಕ ಇಯಾನ್​ ಮೋರ್ಗನ್ (0) ಡಕ್ ​ಔಟ್​ ಆಗಿ ಕೆಕೆಆರ್​ ಪಾಳಯದಲ್ಲಿ ಭೀತಿಯುಟ್ಟಲು ಕಾರಣವಾದರು . ಕೊನೆಯ ಓವರ್​ನಲ್ಲಿ ಕೋಲ್ಕತ್ತಾ ಗೆಲುವಿಗೆ 7 ರನ್​ ಅಗತ್ಯವಿತ್ತು.

ರೋಚಕ ಕೊನೆಯ ಓವರ್​:

ಕೊನೆಯ ಓವರ್ ಬೌಲಿಂಗ್​​ ಮಾಡಿದ ಆರ್​​.​ ಅಶ್ವಿನ್​, ಮೊದಲ ಎಸೆತದಲ್ಲಿ ಒಂದು ರನ್​ ನೀಡಿದರು. 2ನೇ ಎಸೆತದಲ್ಲಿ ರನ್​ ಗಳಿಸುವಲ್ಲಿ ಶಕಿಬ್​ ಉಲ್​ ಹಸನ್ (0) ವಿಫಲರಾಗಿದ್ದು, ಅಶ್ವಿನ್ ಹಾಕಿದ ಮೂರನೇ ಬಾಲ್​ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟ್​ ಆದರು. ಆಗ ಕೆಕೆಆರ್​ ಗೆಲುವಿಗೆ 3 ಎಸೆತಗಳಲ್ಲಿ 6 ರನ್​ ಬೇಕಿತ್ತು. ಆದರೆ ಬಳಿಕ ಬಂದ ಸುನಿಲ್​ ನರೈನ್ (0) ಕೂಡ ತಾವೆದುರಿಸಿದ ಮೊದಲ ಬಾಲ್​ನಲ್ಲೇ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದರು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ 6 ರನ್​ ಅಗತ್ಯವಿತ್ತು. ಆಗ 5ನೇ ಎಸೆತವನ್ನು ರಾಹುಲ್ ತ್ರಿಪಾಠಿ (12) ಲಾಂಗ್​ ಆಫ್​ನತ್ತ ಸಿಕ್ಸರ್​ಗೆ ಅಟ್ಟುವ​ ಗೆಲುವಿನ ನಿರೀಕ್ಷೆಯಲ್ಲಿದ್ದ ಡೆಲ್ಲಿಗೆ ಶಾಕ್​ ನೀಡಿದರು. ಕೋಲ್ಕತ್ತಾ 3 ವಿಕೆಟ್​​ ಜಯದ ನಗೆ ಬೀರಿ 3ನೇ ಬಾರಿ ಫೈನಲ್​ ಪ್ರವೇಶಿಸಿತು. 2012 ಮತ್ತು 2014ರಲ್ಲಿ ಕೆಕೆಆರ್ ಗಂಭೀರ್​ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದ್ದಲ್ಲದೆ, ಟ್ರೋಫಿ ಕೂಡ ಎತ್ತಿ ಹಿಡಿದಿತ್ತು.

ಡೆಲ್ಲಿ ಸಾಧಾರಣ ಮೊತ್ತ:

ಇದಕ್ಕೂ ಮುನ್ನ ಟಾಸ್​​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ರಿಷಭ್ ಪಂತ್​ ಬಳಗ ನಿಗದಿತ 20 ಓವರ್​ಗಳಲ್ಲಿ 135 ರನ್​​ ರನ್​ಗಳಿಸಿತ್ತು. ಉತ್ತಮ ಆರಂಭ ಪಡೆದ ಡೆಲ್ಲಿಗೆ ಮೊದಲ ವಿಕೆಟ್​ಗೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್​ಗೆ 32 ರನ್​ ಸೇರಿಸಿದರು. ಈ ವೇಳೆ 12 ಎಸೆತಗಳಲ್ಲಿ 18 ರನ್​ ಗಳಿಸಿದ್ದ ಪೃಥ್ವಿ ಔಟ್​ ಆದರು. ಬಳಿಕ ಗಾಯದಿಂದ ಚೇತರಿಸಿಕೊಂಡು ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿದ ಮಾರ್ಕಸ್​ ಸ್ಟೋನಿಸ್ ರನ್​ ಗಳಿಸಲು ಪರದಾಡಿದರು.

ಧವನ್ ​(29) ಜೊತೆಗೂಡಿ ಸ್ಟೋನಿಸ್(18)​ ಜೋಡಿ 10 ಓವರ್​ಗಳ ಅಂತ್ಯಕ್ಕೆ 65 ರನ್ ಸೇರಿಸಿದರು. 18 ರನ್ ಬಾರಿಸಿದ್ದ ಸ್ಟೋನಿಸ್​ ವಿಕೆಟ್​ ಪಡೆದುಕೊಳ್ಳುವಲ್ಲಿ ಶಿವಂ ಮಾವಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಧವನ್ ಕೂಡ 36 ರನ್​ಗೆ ವರುಣ್​ ಚಕ್ರವರ್ತಿ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಬಂದ ಕ್ಯಾಪ್ಟನ್​ ಪಂತ್ ಕೂಡ ಕೇವಲ 6 ರನ್​​ ಬಾರಿಸಿ ಪೆವಿಲಿಯನ್​ಗೆ ಸೇರಿಕೊಂಡರು.

ಬಳಿಕ 17 ರನ್​ ಗಳಿಸಿದ ಸ್ಫೋಟಕ ಆಟಗಾರ ಹೆಟ್ಮಾಯರ್​​​ ರನೌಟ್ ಆದರೆ, ಶ್ರೇಯಸ್ ಅಯ್ಯರ್ ಅಜೇಯ 37 ರನ್​ ಹಾಗೂ ಅಕ್ಸರ್ ಪಟೇಲ್​ 4 ರನ್ ​ಗಳಿಸಿದರು. ತಂಡ ಕೊನೆಯದಾಗಿ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 135 ರನ್​ ಪೇರಿಸಿತ್ತು.

ಕೆಕೆಆರ್​​ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಚಕ್ರವರ್ತಿ 2 ವಿಕೆಟ್​, ಶಿವಂ ಮಾವಿ, ಫರ್ಗುಸನ್​ ತಲಾ 1 ವಿಕೆಟ್​ ಪಡೆದುಕೊಂಡರು. ಸ್ಪಿನ್ನರ್​ಗಳಾದ ಶಕಿಬ್​ ಉಲ್​ ಹಸನ್​, ನರೈನ್​ ವಿಕೆಟ್​ ಪಡೆದುಕೊಳ್ಳುವಲ್ಲಿ ವಿಫಲರಾದರೂ, ರನ್ ​​ಗತಿಗೆ ಕಡಿವಾಣ ಹಾಕಿದರು.

ಮೂರನೇ ಬಾರಿಗೆ ಕೆಕೆಆರ್​ ಫೈನಲ್​ ಎಂಟ್ರಿ:

ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಡೆಲ್ಲಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋಲನುಭಿಸಿತ್ತು. ಇನ್ನೊಂದೆಡೆ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಮಣಿಸಿ ಕೆಕೆಆರ್​ ಈ ಹಂತಕ್ಕೆ ತಲುಪಿತ್ತು. ಅ.15ರಂದು ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದೆ. ಮೂರನೇ ಬಾರಿಗೆ ಕೆಕೆಆರ್​ ಫೈನಲ್​ ತಲುಪಿದ್ದು, ಗೆದ್ದರೆ ಮೂರನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ.

Last Updated :Oct 14, 2021, 7:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.