ETV Bharat / sports

ಗೆಲುವಿನ ತವಕದಲ್ಲಿ ಎಡವಿದ ಹಾರ್ದಿಕ್​ ಪಡೆ​.. ರೋಹಿತ್​ ಬಳಗಕ್ಕೆ 5 ರನ್​ಗಳ ರೋಚಕ ಗೆಲುವು

author img

By

Published : May 7, 2022, 7:05 AM IST

ಈಗಾಗಲೇ 2022ರ ಐಪಿಎಲ್​​ ಟೂರ್ನಿಯ ಪ್ಲೇ-ಆಫ್​ ರೇಸ್​​ನಿಂದ ಮುಂಬೈ ಇಂಡಿಯನ್ಸ್​ ತಂಡ ಹೊರಬಿದ್ದಿದೆ. ನಿನ್ನೆ ನಡೆದ ಪಂದ್ಯದಲ್ಲಿ ಬಲಿಷ್ಠ ಗುಜರಾತ್​ ತಂಡವು ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿತ್ತು. ಮೊದಲ ಬ್ಯಾಟ್​ ಮಾಡಿದ ಮುಂಬೈ ತಂಡ ಎದುರಾಳಿ ಗುಜರಾತ್ ತಂಡಕ್ಕೆ 178 ರನ್​ಗಳ ಟಾರ್ಗೆಟ್​ ನೀಡಿತ್ತು. ಆದ್ರೆ ನಿಗದಿತ ಓವರ್​ಗಳಲ್ಲಿ ಗುರಿ ಮುಟ್ಟದ ಹಾರ್ದಿಕ್​ ಪಾಂಡ್ಯ ತಂಡ ಐದು ರನ್​ಗಳಿಂದ ಸೋಲು ಕಂಡಿದೆ.

Mumbai Indians won against Gujarat Titans, Gujarat Titans vs Mumbai Indians match, Indian Premier League 2022, Mumbai Brabourne Stadium, Mumbai Indians won news, ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯ, ಇಂಡಿಯನ್ ಪ್ರೀಮಿಯರ್ ಲೀಗ್ 2022, ಮುಂಬೈ ಬ್ರಬೋರ್ನ್ ಸ್ಟೇಡಿಯಂ, ಗುಜರಾತ್ ಟೈಟಾನ್ಸ್ ವಿರುದ್ಧ  ಗೆದ್ದ ಮುಂಬೈ ಇಂಡಿಯನ್ಸ್, ಮುಂಬೈ ಇಂಡಿಯನ್ಸ್ ಗೆದ್ದ ಸುದ್ದಿ,
ಕೃಪೆ: IPL Twitter

ಮುಂಬೈ: ನಿನ್ನೆ ಬಲಾಢ್ಯ ಗುಜರಾತ್​​ ಟೈಟಾನ್ಸ್​ ಹಾಗೂ ಕಳಪೆ ಪ್ರದರ್ಶನದಿಂದ ಈಗಾಗಲೇ ಪ್ರಶಸ್ತಿ ಪೈಪೋಟಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಿದ್ದವು. ಟಾಸ್​ ಸೋತ ರೋಹಿತ್​ ಬಳಗ ಹಾರ್ದಿಕ್​ ಪಾಂಡ್ಯ ಬಳಗಕ್ಕೆ 178 ರನ್​ಗಳ ಗುರಿ ನೀಡಿತ್ತು. ಈ ಪಂದ್ಯ ಗೆದ್ದು ಪ್ಲೇ-ಆಫ್​​ಗೆ ಅಧಿಕೃತವಾಗಿ ಲಗ್ಗೆ ಹಾಕುವ ಕಾತರದಲ್ಲಿದ್ದ ಗುಜರಾತ್​ ತಂಡ ಕೊನೆಯಲ್ಲಿ ಎಡವಿ ಐದು ರನ್​ಗಳಿಂದ ಸೋಲು ಕಂಡಿತು. ಐಪಿಎಲ್​ ಟೂರ್ನಿಯಲ್ಲಿ ಮುಂಬೈ ತಂಡ 2ನೇ ಗೆಲುವು ಸಾಧಿಸಿದೆ.

ಮುಂಬೈ ಇಂಡಿಯನ್ಸ್​ ಇನ್ನಿಂಗ್ಸ್​: ಮೊದಲು ಬ್ಯಾಟಿಂಗ್​ ಆರಂಭಿಸಿದ್ದ ಮುಂಬೈ ಇಂಡಿಯನ್ಸ್​ ತಂಡ ಗುಜರಾತ್​ ಟೈಟಾನ್ಸ್​ ತಂಡದ ಬೌಲರ್​ಗಳ ಬೆವರಿಳಿಸಿದರು. ನಾಯಕ ರೋಹಿತ್​ ಶರ್ಮಾ ಮತ್ತು ಇಶಾನ್​ ಕಿಶಾನ್​ ಜೋಡಿ ಭರ್ಜರಿ ಬ್ಯಾಟಿಂಗ್​ ಮಾಡಿ, 7 ಓವರ್​ಗಳಿಗೆ ವಿಕೆಟ್​ ನಷ್ಟವಿಲ್ಲದೇ 74 ರನ್​ಗಳನ್ನು ಕಲೆ ಹಾಕಿ ಮುನ್ನುಗ್ಗುತ್ತಿತ್ತು. ಆದರೆ, 7ನೇ ಓವರ್​ನ ಮೂರನೇ ಎಸೆತದಲ್ಲಿ ನಾಯಕ ರೋಹಿತ್​ ಶರ್ಮಾ 43 ರನ್​ಗಳು ಕಲೆ ಹಾಕಿ ಪೆವಿಲಿಯನ್​ ಹಾದಿ ಹಿಡಿದರು.

ಭರ್ಜರಿ ಬ್ಯಾಟಿಂಗ್​ ನಡೆಸಿದ ಇಶಾನ್​ ಕಿಶಾನ್​ಗೆ ಸೂರ್ಯಕುಮಾರ್​ ಯಾದವ್​ ಜೊತೆಯಾದರು. ಆದರೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದ ಸೂರ್ಯಕುಮಾರ್​ ಯಾದವ್​ 13 ರನ್​ ಗಳಿಸಿ ಔಟಾದರು. ಬಳಿಕ ಆರಂಭಿಕ ಆಟಗಾರನಾದ ಇಶಾನ್​ ಸಹಿತ 45 ರನ್​ ಗಳಿಸಿ ಜೋಸೆಫ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು.

ಇಶಾನ್​ ಔಟಾದ ಬಳಿಕ 4 ರನ್​ಗಳಿಸಿ ಪೊಲಾರ್ಡ್​ ಸಹ ಔಟಾದರು. ಬಳಿಕ ತಿಲಕ್​ ವರ್ಮಾ 21 ರನ್​ ಮತ್ತು ಟಿಮ್​ ಡೇವಿಡ್ ಅಜೇಯರಾಗಿ 44 ರನ್​ ಕಲೆ ಹಾಕುವ ಮೂಲಕ​ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಶ್ರಮಿಸಿದರು. ಮುಂಬೈ ತಂಡ ನಿಗದಿತ 20 ಓವರ್​ಗಳಿಗೆ ಆರು ವಿಕೆಟ್​ ನಷ್ಟಕ್ಕೆ 177 ರನ್​ಗಳನ್ನು ಕಲೆ ಹಾಕುವ ಮೂಲಕ ಗುಜರಾತ್​ ಟೈಟಾನ್ಸ್​ಗೆ 178 ರನ್​ಗಳ ಗುರಿ ನೀಡಿತ್ತು. ಗುಜರಾತ್​ ಟೈಟಾನ್ಸ್​ ಪರ ರಶೀದ್ ಖಾನ್ ಎರಡು ವಿಕೆಟ್​ ಕಬಳಿಸಿದ್ರೆ, ಅಲ್ಜಾರಿ ಜೋಸೆಫ್​, ಲಾಕಿ ಫರ್ಗುಸನ್​, ಪ್ರದೀಪ್ ಸಂಗ್ವಾನ್ ತಲಾ ಒಂದೊಂದು ವಿಕೆಟ್​ ಪಡೆದು ತಂಡಕ್ಕೆ ಆಸರೆಯಾದರು.

ಓದಿ: ಅರ್ಧ ಶತಕದ ಹಾದಿಯಲ್ಲಿ ಎಡವಿದ ರೋಹಿತ್​, ಇಶಾನ್, ಡೇವಿಡ್​... ಬಲಿಷ್ಠ ಗುಜರಾತ್​ಗೆ 178 ರನ್​ಗಳ ಗುರಿ ನೀಡಿದ ಮುಂಬೈ​!

ಗುಜರಾತ್​ ಟೈಟಾನ್ಸ್​ ಇನ್ನಿಂಗ್ಸ್​: ಮುಂಬೈ ನೀಡಿದ ಗುರಿಯನ್ನು ಬೆನ್ನತ್ತಿದ್ದ ಗುಜರಾತ್​ ತಂಡಕ್ಕೆ ಉತ್ತಮ ಆರಂಭ ದೊರೆತಿತ್ತು. ಆರಂಭಿಕರಾದ ವೃದ್ಧಿಮಾನ್ ಸಹಾ ಮತ್ತು ಶುಬ್ಮನ್ ಗಿಲ್ ಮೊದಲ ವಿಕೆಟ್​ಗೆ 106 ರನ್​ಗಳ ಜೊತೆಯಾಟವಾಡಿ ಮಿಂಚಿದ್ರು. ಉತ್ತಮವಾಗಿಯೇ ಬ್ಯಾಟ್​ ಬೀಸುತ್ತಿದ್ದ ಶುಬ್ಮನ್​ ಗಿಲ್​ 52 ರನ್​ ಗಳಿಸಿ 12 ಓವರ್​ನ ಮೊದಲನೇ ಎಸೆತದಲ್ಲಿ ಮುರುಗನ್ ಅಶ್ವಿನ್​ಗೆ ವಿಕೆಟ್​ ನೀಡಿದ್ರು. ಇದರ ಬೆನ್ನಲ್ಲೇ 12 ಓವರ್​ನ ಕೊನೆಯ ಎಸೆತದಲ್ಲಿ ಮುರಗನ್​ ಅಶ್ವಿನ್​ಗೆ 55 ರನ್​ ಕಲೆ ಹಾಕಿದ್ದ ವೃದ್ಧಿಮಾನ್ ಸಹಾ ಕೂಡ ಪೆವಿಲಿಯನ್​ ಹಾದಿ ಹಿಡಿದರು. ಒಂದೇ ಓವರ್​ನಲ್ಲಿ ಆರಂಭಿಕರ ವಿಕೆಟ್ ಪಡೆದು​​ ಅಶ್ವಿನ್​ ಮಿಂಚಿದ್ರು.

ಒಂದೇ ಓವರ್​ನಲ್ಲಿ ಆರಂಭಿಕರನ್ನು ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ಸಾಯಿ ಸುದರ್ಶನ್​ ಮತ್ತು ಹಾರ್ದಿಕ್​ ಪಾಂಡ್ಯ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಸುದರ್ಶನ್​ 11 ರನ್​ಗಳಿಸಿ ಔಟಾದ್ರೆ, ನಾಯಕ ಹಾರ್ದಿಕ್​ ಪಾಂಡ್ಯ 24 ರನ್​​ ಗಳಿಸಿ ರನೌಟ್​ ಆದರು. ಡೇವಿಡ್​ ಮಿಲ್ಲರ್​ ಮತ್ತು ರಾಹುಲ್​ ತೆವಾಟಿಯಾ ತಂಡಕ್ಕೆ ಗೆಲುವು ಧಕ್ಕಿಸಿ ಕೊಡುವಲ್ಲಿ ವಿಫಲರಾದರು.

ಕೊನೆಯ ಓವರ್​ನಲ್ಲಿ ಗುಜರಾತ್​ ತಂಡಕ್ಕೆ ಗೆಲ್ಲಲು 6 ಎಸೆತಗಳಿಗೆ 9 ರನ್​ಗಳು ಬೇಕಾಗಿದ್ದವು. ಆದ್ರೆ 19 ಓವರ್​ನ ಮೂರನೇ ಎಸೆತದಲ್ಲಿ ರಾಹುಲ್​ ತೆವಾಟಿಯಾ ರನ್​ ಕದಿಯುವ ಭರದಲ್ಲಿ ರನೌಟ್​ ಆದರು. ಮೂರು ಎಸೆತದಲ್ಲಿ ತಂಡದ ಗೆಲುವಿಗಾಗಿ 7 ರನ್​ ಗಳಿಸುವ ಅವಶ್ಯಕತೆ ಗುಜರಾತ್​ಗೆ ಎದುರಾಯಿತು. ಆದ್ರೆ ಡೇವಿಡ್​ ಮಿಲ್ಲರ್​ ಮೂರು ಎಸೆತದಲ್ಲಿ ಕೇವಲ ಒಂದು ರನ್​ ಗಳಿಸಲು ಸಶಕ್ತರಾದರು.

ಒಟ್ಟಿನಲ್ಲಿ ಗುಜರಾತ್​ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗಳನ್ನು ಕಳೆದುಕೊಂಡು 172 ರನ್​ಗಳನ್ನು ಕಲೆ ಹಾಕಿ ಗುರಿ ಮುಟ್ಟದೇ ಐದು ರನ್​ಗಳ ಸೋಲು ಅನುಭವಿಸಿತು. ಮುಂಬೈ ಪರ ಮುರಗನ್​ ಅಶ್ವಿನ್​ ಎರಡು ವಿಕೆಟ್​ ಪಡೆದ್ರೆ, ಕೀರಾನ್ ಪೊಲಾರ್ಡ್​ ಒಂದು ವಿಕೆಟ್​ ಕಬಳಿಸಿ ಮಿಂಚಿದ್ರು.

ಇಂದು ಮಧ್ಯಾಹ್ನ 3.30ಕ್ಕೆ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪೈಪೋಟಿ ನಡೆಯಲಿದ್ದು, ಸಂಜೆ 7.30ಕ್ಕೆ ಲಖನೌ ಸೂಪರ್‌ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.