ETV Bharat / sports

ಜಡೇಜಾ ಮುಂದೆಯೇ 'ಕತ್ತಿವರಸೆ' ಮಾಡಿದ ಡೇವಿಡ್​ ವಾರ್ನರ್​: ನಗೆಬುಗ್ಗೆಯ ವಿಡಿಯೋ ನೋಡಿ

author img

By

Published : May 21, 2023, 1:25 PM IST

ಡೆಲ್ಲಿ ತಂಡದ ನಾಯಕ ಡೇವಿಡ್​ ವಾರ್ನರ್​, ರವೀಂದ್ರ ಜಡೇಜಾರನ್ನು ಕೆಣಕಲು ತಮಾಷೆಯಾಗಿ ಬ್ಯಾಟ್​ನಿಂದ ಕತ್ತಿವರಸೆ ಮಾಡಿದರು. ಇದು ಮೈದಾನದಲ್ಲಿ ನಗೆಬುಗ್ಗೆ ಹರಿಸಿತು.

ಡೇವಿಡ್​ ವಾರ್ನರ್ ಕತ್ತಿವರಸೆ
ಡೇವಿಡ್​ ವಾರ್ನರ್ ಕತ್ತಿವರಸೆ

ಭಾರತ ಕ್ರಿಕೆಟ್ ತಂಡದ ತಾರಾ ಆಲ್​ರೌಂಡರ್​ ರವೀಂದ್ರ ಜಡೇಜಾ ಕತ್ತಿವರಸೆ ಮಾದರಿಯಲ್ಲಿ ಬ್ಯಾಟ್​ ಝಳಪಿಸಿ ಸಂಭ್ರಮಾಚರಣೆ ಮಾಡುವುದು ಎಲ್ಲರಿಗೂ ಗೊತ್ತೇ ಇದೆ. ಜಡೇಜಾ ಬ್ಯಾಟ್​ನಿಂದ ಅರ್ಧಶತಕ, ಶತಕ ಸಿಡಿದಲ್ಲಿ ಬ್ಯಾಟ್​ ಅನ್ನು ಕತ್ತಿಯಂತೆ ತಿರುವು ಪ್ರಸಿದ್ಧವಾಗಿದೆ. ಅದನ್ನು ಹಲವು ಆಟಗಾರರು ನಕಲು ಕೂಡ ಮಾಡಿದ್ದಾರೆ. ಅದರಂತೆ ನಿನ್ನೆ ನಡೆದ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯದಲ್ಲಿ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಜಡೇಜಾರ ಕತ್ತಿವರಸೆಯನ್ನು ಮಾಡಿ ಗಮನ ಸೆಳೆದರು.

ಸಿಎಸ್​ಕೆ ಬೌಲರ್​ಗಳನ್ನು ಕಾಡಿದ ವಾರ್ನರ್​ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್​ ಬೀಸಿದರು. ಡೆಲ್ಲಿ ನಾಯಕ 58 ಎಸೆತಗಳಲ್ಲಿ 86 ರನ್ ಗಳಿಸಿದಾಗ್ಯೂ ಪಂದ್ಯದಲ್ಲಿ ಸೋಲುಂಟಾಯಿತು. ಪಂದ್ಯದ ನಡುವೆ ಜಡೇಜಾ ಮತ್ತು ವಾರ್ನರ್​ ನಡುವಿನ ತಮಾಷೆ ಗಮನ ಸೆಳೆಯಿತು.

ಐದನೇ ಓವರ್‌ನ ಮೂರನೇ ಎಸೆತದಲ್ಲಿ ವಾರ್ನರ್ ದೀಪಕ್ ಚಹರ್​ ಎಸೆತವನ್ನು ಕವರ್‌ ಡ್ರೈವ್​ ಮಾಡಿ ರನ್​ಗಾಗಿ ಓಡಿದರು. ಅಲ್ಲಿಯೇ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಮೊಯಿನ್ ಅಲಿ ನಾನ್ ಸ್ಟ್ರೈಕರ್‌ನತ್ತ ಚೆಂಡನ್ನು ವಿಕೆಟ್​ಗೆ ಗುರಿಯಾಗಿಸಿ ಎಸೆದರು. ಆದರೆ, ದೂರದಲ್ಲಿ ಸಾಗಿತು. ರನೌಟ್​ ಆಗುವುದನ್ನು ತಪ್ಪಿಸಲು ವಾರ್ನರ್​ ಡೈವ್​ ಹೊಡೆದರು. ಬಳಿಕ ಮತ್ತೊಂದು ರನ್​ಗಾಗಿ ಓಡಲು ಮುಂದಾದರು. ಅತ್ತ ಅಜಿಂಕ್ಯಾ ರಹಾನೆ ಚೆಂಡನ್ನು ಕೈಯಲ್ಲಿ ಹಿಡಿದು ಎಸೆಯುವಂತೆ ಮಾಡಿದರು.

ಈ ವೇಳೆ ವಾರ್ನರ್​ ಅಜಿಂಕ್ಯಾರನ್ನು ಕೆಣಕುವಂತೆ ಪಿಚ್​ ಕ್ರೀಸ್​ ದಾಟಿ ಮುಂದೆ ಸಾಗಿದರು. ಎದುರುಗಡೆ ಇದ್ದ ರವೀಂದ್ರ ಜಡೇಜಾ ಚೆಂಡನ್ನು ಎಸೆಯುವಂತೆ ಅಜಿಂಕ್ಯಾಗೆ ಸೂಚಿಸಿದರು. ತಕ್ಷಣ ರಹಾನೆ ಚೆಂಡನ್ನು ವಿಕೆಟ್​ಗಿಂತಲೂ ದೂರವೇ ಎಸೆದರು. ಇದರಿಂದ ಮತ್ತೆ ಓಡಲು ವಾರ್ನರ್ ಮುಂದೆ ಸಾಗಿದಾಗ ಚೆಂಡನ್ನು ಪಡೆದ ಜಡೇಜಾ ರನೌಟ್​ ಮಾಡುವ ಎಚ್ಚರಿಕೆ ನೀಡಿದರು. ಆಗ ವಾರ್ನರ್​ ತಮಾಷೆಯಾಗಿ ಜಡೇಜಾರ ಕತ್ತಿವರಸೆಯನ್ನು ಮಾಡುವ ಮೂಲಕ ಸವಾಲು ಹಾಕಿದರು. ವಾರ್ನರ್​ರ ಈ ತಮಾಷೆಯ ನಡೆ ಅಲ್ಲಿದ್ದವರಲ್ಲಿ ನಗು ತರಿಸಿತು. ಸ್ವತಃ ಜಡೇಜಾ ಕೂಡ ನಗುತ್ತಲೇ ಅಲ್ಲಿಂದ ಸಾಗಿದರು.

ಡಬ್ಬಿಂಗ್​ ಡೇವಿಡ್​ ವಾರ್ನರ್​: ಆಸ್ಟ್ರೇಲಿಯಾ ಎಡಗೈ ದಾಂಡಿಗ ಡೇವಿಡ್​ ವಾರ್ನರ್​ ನಕಲು ಮಾಡುವುದರಲ್ಲಿ ನಿಸ್ಸೀಮರು. ಹಲವಾರು ಸಿನಿಮಾ ಹಾಡುಗಳಿಗೆ ಟಿಕ್​​ಟಾಕ್​ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಡೈಲಾಗ್​ಗಳನ್ನು ಹೇಳಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಮೈದಾನದಲ್ಲೂ ಲವಲವಿಕೆಯಿಂದ ಇರುವ ವಾರ್ನರ್​ ತಮಾಷೆಯಾಗಿ ಎದುರಾಳಿಗಳನ್ನು ಕೆಣಕುತ್ತಲೇ ಇರುತ್ತಾರೆ. ಜಡೇಜಾರ ಕತ್ತಿವರಸೆ ನಕಲಿಗೆ ಅಭಿಮಾನಿಗಳು ಸಹಿತ ನಗೆಬುಗ್ಗೆ ಹರಿಸಿದ್ದಾರೆ.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 77 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಈ ಮೂಲಕ ಸಿಎಸ್​ಕೆ 14 ಪಂದ್ಯಗಳ ಲೀಗ್ ಅಭಿಯಾನವನ್ನು 17 ಅಂಕಗಳೊಂದಿಗೆ ಕೊನೆಗೊಳಿಸಿ, ನಾಕೌಟ್​ಗೆ ಕ್ವಾಲಿಫೈ ಆಯಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ ಆರಂಭಿಕರಾದ ಡೆವೋನ್ ಕಾನ್ವೆ ಮತ್ತು ಋತುರಾಜ್ ಗಾಯಕ್ವಾಡ್​ ಅವರ ಭರ್ಜರಿ ಅರ್ಧಶತಕದ ಬಲದಿಂದ 223 ರನ್​ಗಳ ಬೃಹತ್​ ಮೊತ್ತ ದಾಖಲಿಸಿತು.

ಡೆವೋನ್​ ಕಾನ್ವೆ 51 ಎಸೆತಗಳಲ್ಲಿ 87 ರನ್ ಮಾಡಿದರೆ, ಋತುರಾಜ್ ಗಾಯಕ್ವಾಡ್ 50 ಬಾಲ್​ಗಳಲ್ಲಿ 79 ರನ್ ಗಳಿಸಿದರು. ಇಬ್ಬರೂ ಸೇರಿ ಮೊದಲ ವಿಕೆಟ್​ಗೆ 141 ರನ್ ಜೊತೆಯಾಟ ನೀಡಿದರು. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಡೆಲ್ಲಿ ತನ್ನ ಕೊನೆಯ ಔಪಚಾರಿಕ ಪಂದ್ಯದಲ್ಲೂ ನಿರಾಶಾದಾಯಕ ಪ್ರದರ್ಶನ ನೀಡಿ 146 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಡೇವಿಡ್ ವಾರ್ನರ್ 58 ಎಸೆತಗಳಲ್ಲಿ 86 ರನ್ ಗಳಿಸಿದ್ದು, ತಂಡದ ಬ್ಯಾಟರ್​ಗಳ ಅತ್ಯಧಿಕ ಮೊತ್ತವಾಗಿತ್ತು.

ಇದನ್ನೂ ಓದಿ: ಆರ್​ಸಿಬಿ, ಮುಂಬೈ, ರಾಯಲ್ಸ್​: ಮೂವರಲ್ಲಿ 4ನೇ ಪ್ಲೇಆಫ್​ ಸ್ಥಾನ ಯಾರಿಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.