ETV Bharat / sports

CSK vs GT Final: 5ನೇ ಕಪ್​ ಗೆಲ್ಲಲು ಚೆನ್ನೈ ಸೂಪರ್​ ಕಿಂಗ್ಸ್​ 215 ರನ್​ಗಳ ಬೃಹತ್​ ಗುರಿ

author img

By

Published : May 29, 2023, 9:23 PM IST

Updated : May 29, 2023, 10:03 PM IST

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಇಳಿದ ಗುಜರಾತ್​ ತನ್ನ ಬ್ಯಾಟಿಂಗ್​ ಬಲದಿಂದ ಫೈನಲ್​ ಪಂದ್ಯದಲ್ಲಿ 214 ರನ್​ಗಳ ಗೋಪುರವನ್ನೇ ಕಟ್ಟಿದೆ.

Chennai Super Kings vs Gujarat Titans Final
CSK vs GT Final: 5ನೇ ಕಪ್​ ಗೆಲ್ಲಲು ಚೆನ್ನೈ ಸೂಪರ್​ ಕಿಂಗ್ಸ್​ 215 ರನ್​ ಬೇಧಿಸಬೇಕಿದೆ..

ಅಹಮದಾಬಾದ್​ (ಗುಜರಾತ್​): ಗುಜರಾತ್​ ಟೈಟಾನ್ಸ್​ ಫೈನಲ್​ ಪಂದ್ಯದಲ್ಲಿ ತನ್ನ ಬಲಿಷ್ಠ ಬ್ಯಾಟಿಂಗ್​ ಮುಂದುವರೆಸಿದ್ದು ಇಂಡಿಯನ್​ ಪ್ರೀಮಿಯರ್​ ಲೀಗ್​ನ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ಗೆ 215 ರನ್​ನ ಬೃಹತ್​​ ಗುರಿ ನೀಡಿದೆ. ನಾಲ್ಕು ರನ್​ನಿಂದ ಸಾಯಿ ಸುದರ್ಶನ್​ ಶತಕ ವಂಚಿತರಾದರೆ, ಅರ್ಧಶತಕ ಗಳಿಸಿ ವೃದ್ದಿಮಾನ್​ ಸಹ ವಿಕೆಟ್​ ಕೊಟ್ಟರು. ಈ ಇಬ್ಬರು ಬ್ಯಾಟರ್​ಗಳ ಇನ್ನಿಂಗ್ಸ್​ನ ಸಹಾಯದಿಂದ ನಿಗದಿತ ಓವರ್ ಅಂತ್ಯಕ್ಕೆ ಗುಜರಾತ್​ ಟೈಟಾನ್ಸ್​ 4 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸಿತು.

ಟಾಸ್ ಸೋರು ಮೊದಲು ಬ್ಯಾಟಿಂಗ್​ ಬಂದ ಗುಜರಾತ್​ ಎಂದಿನಂತೆ ಉತ್ತಮ ಆರಂಭ ಕಂಡಿತು. ಜಿಟಿಯ ಆರಂಭಿಕ ಜೋಡಿ ವೃದ್ಧಿಮಾನ್ ಸಹಾ ಮತ್ತು ಶುಭಮನ್​ ಗಿಲ್​ ಎಂದಿನಂತೆ ಅರ್ಧಶತಕದ ಜೊತೆಯಾಟವನ್ನು ಮೊದಲ ಐದು ಓವರ್​ನಲ್ಲೇ ಪೂರೈಸಿದರು. ಈ ಜೋಡಿ ಇಂದು 67 ರನ್​ನ ಜೊತೆಯಾಟವನ್ನು ಮಾಡಿತು. ಕಳೆದ ನಾಲ್ಕು ಪಂದ್ಯದಲ್ಲಿ ಮೂರು ಶತಕ ಗಳಿಸಿದ್ದ ಗಿಲ್​ ತಮ್ಮ ಅಬ್ಬರದ ಬ್ಯಾಟಿಂಗ್​ ಮಾಡುತ್ತಿದ್ದರು. ಪವರ್​ ಪ್ಲೇ ಮುಗಿಯುತ್ತಿದ್ದಂತೆ ಬೌಲಿಂಗ್​ಗೆ ಇಳಿದ ರವೀಂದ್ರ ಜಡೇಜಾ ತಮ್ಮ ಸ್ಪಿನ್​ ಕೈಚಳ ತೋರಿದರು.

20 ಬಾಲ್​ನಲ್ಲಿ 7 ಬೌಂಡರಿಯಿಂದ 39 ರನ್​ ಗಳಿಸಿ ಆಡುತ್ತಿದ್ದ ಶುಭಮನ್​ ಗಿಲ್​ ಜಡೇಜಾ ಅವರ ಬಾಲ್​ನಲ್ಲಿ ಕ್ರೀಸ್ ಬಿಟ್ಟು ಮುಂದೆ ಬಂದು ಧೋನಿ ಕೈಯಲ್ಲಿ ಸ್ಟಂಪ್​ ಔಟ್​ ಆದರು. ಗಿಲ್​ ವಿಕೆಟ್ ನಂತರ ಸಾಯಿ ಸುದರ್ಶನ್​​ ಮೈದಾನಕ್ಕಿಳಿದರು. ಗಿಲ್​ ನಿಲ್ಲಿಸಿದ್ದ ಇನ್ನಿಂಗ್ಸ್​ ಅನ್ನು ಅದೇ ವೇಗದಲ್ಲಿ ಸಾಯಿ ಮುಂದುವರೆಸಿದರು. ಗಿಲ್​ ಪಾತ್ರವನ್ನು ಸಮರ್ಥವಾಗಿಯೇ ನಿಭಾಯಿಸಿದರು.

ಆರಂಭಿಕ ವೃದ್ಧಿಮಾನ್​ ಸಹಾರ ಜೊತೆಗೂಡಿ ಸಾಯಿ ಅರ್ಧಶತಕದ ಇನ್ನೊಂದು ಜೊತೆಯಾಟ ನಿರ್ಮಿಸಿದರು. ಲೀಗ್​ನಲ್ಲಿ ಕೇವಲ 1 ಅರ್ಧಶತಕ ಗಳಿಸಿ 20 -30 ರನ್​ ನಡುವೆ ವಿಕೆಟ್​ ಕೊಡುತ್ತಿದ್ದ ಸಹಾ ಇಂದು ಈ ಆವೃತ್ತಿಯ ಎರಡನೇ ಅರ್ಧಶತಕ ದಾಖಲಿಸಿದರು. 39 ಬಾಲ್​ ಎದರಿಸಿದ ಸಹಾ 5 ಬೌಂಡರಿ ಮತ್ತು 1 ಸಿಕ್ಸ್​ನಿಂದ 54 ರನ್​ ಕಲೆ ಹಾಕಿ ದೀಪಕ್​ ಚಾಹರ್​ಗೆ ವಿಕೆಟ್​ ಒಪ್ಪಿಸಿದರು. ಈ ವರೆಗೆ ತಂಡದಲ್ಲಿ ಬ್ಯಾಟಿಂಗ್​ ವೈಫಲ್ಯ ಎದುರಿಸುತ್ತಿದ್ದರೂ ಮತ್ತೆ ಮತ್ತೆ ಅವಕಾಶಕೊಟ್ಟಿದ್ದನ್ನು ಕೊನೆಯ ಪಂದ್ಯದಲ್ಲಿ ಸದ್ಬಳಕೆ ಮಾಡಿಕೊಂಡರು.

4 ರನ್​ನಿಂದ ಶತಕ ವಂಚಿತರಾದ ಸಾಯಿ: ಎರಡು ವಿಕೆಟ್​ ಬಿದ್ದರೂ ಸಾಯಿ ಸುದರ್ಶನ್​ ತಮ್ಮ ಬ್ಯಾಟಿಂಗ್​ ವೇಗವನ್ನು ತಗ್ಗಿಸದೇ ಸಿಕ್ಸ್,​ ಫೋರ್​ಗಳ ಸುರಿಮಳೆಯನ್ನೇ ಹರಿಸಿದರು. ಆದರೆ, ಶತಕಕ್ಕೆ 4 ರನ್​ ಇರಬೇಕಾದರೆ ಎಡವಿದ ಸಾಯಿ ಮಥೀಶ ಪತಿರಣ ಬಾಲ್​ನಲ್ಲಿ ಎಲ್​ಬಿಡಬ್ಲೂಗೆ ಬಲಿಯಾಗಿ ಶತಕ ವಂಚಿತರಾದರು. ಸಾಯಿ ಇನ್ನಿಂಗ್ಸ್​ನಲ್ಲಿ 47 ಬಾಲ್​ ಫೇಸ್​ ಮಾಡಿ 8 ಬೌಂಡರಿ ಮತ್ತು 6 ಸಿಕ್ಸ್​ನಿಂದ 96 ರನ್​ ಕಲೆಹಾಕಿದ್ದರು. 4 ರನ್​ನಿಂದ ಐಪಿಎಲ್​ನ ಚೊಚ್ಚಲ ಶತಕ ತಪ್ಪಿಸಿಕೊಂಡರು.

13 ಓವರ್​ನಲ್ಲಿ ಸಹಾ ವಿಕೆಟ್​ ಬಿದ್ದಾಗ ಬಂದ ನಾಯಕ ಹಾರ್ದಿಕ್​ ಪಾಂಡ್ಯ ಹೆಚ್ಚು ಕ್ರೀಸ್​​ ಅನ್ನು ಸಾಯಿ ಬಿಟ್ಟುಕೊಟ್ಟಿದ್ದರಿಂದ 12 ಬಾಲ್​ನಲ್ಲಿ 2 ಸಿಕ್ಸ್​ ಗಳಿಸಿ ಅಜೇಯ 21 ರನ್​ ಮಾತ್ರ ಮಾಡಿದರು. ಸಾಯಿ ವಿಕೆಟ್ ನಂತರ ಕೊನೆಯ 3 ಬಾಲ್ ಇದ್ದಾಗ ಬಂದ ರಶೀದ್​ ಖಾನ್​ ಶೂನ್ಯಕ್ಕೆ ಔಟ್​ ಆದರು. ಚೆನ್ನೈ ಪರ ಮಥೀಶ ಪತಿರಣ 2, ಜಡೇಜ ಮತ್ತು ಚಾಹರ್​ ತಲಾ 1 ವಿಕೆಟ್​ ಕಿತ್ತರು.

ಇದನ್ನೂ ಓದಿ: ಸಚಿನ್​, ವಿರಾಟ್​ ಆಟವನ್ನು ಗಿಲ್​ ಮುಂದುವರೆಸುತ್ತಾರೆ ಎಂದ ಅಭಿಮಾನಿಗಳು: ಇದಕ್ಕೆ ಶುಭಮನ್​ ಪ್ರತಿಕ್ರಿಯೆ ಹೀಗಿದೆ...

Last Updated : May 29, 2023, 10:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.