ETV Bharat / sports

1994ರ ಈ ದಿನ: ಮಾಸ್ಟರ್ ಬ್ಲಾಸ್ಟರ್​ ಅಭಿಮಾನಿಗಳಿಗೆ ವಿಶೇಷ ದಿನ.. ಯಾಕೆ ಗೊತ್ತಾ?

author img

By

Published : Sep 9, 2021, 10:10 AM IST

ಏಕದಿನ ಪಂದ್ಯಕ್ಕೆ ಮೊದಲೇ, ಟೆಸ್ಟ್ ಕ್ರಿಕೆಟ್​ನಲ್ಲಿ ಸಚಿನ್ ಶತಕ ದಾಖಲಿಸಿದ್ದರು. ತಾವು 17 ವರ್ಷ, 112 ದಿನ ತುಂಬಿದ್ದಾಗಲೇ ಟೆಸ್ಟ್​ ಶತಕ ದಾಖಲಿಸಿದ್ದರು. ಈ ದಾಖಲೆ ಮಾಡಿದ ಮೂರನೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸಚಿನ್ ಪಾತ್ರರಾದರು.

On this day in 1994: Tendulkar scored his maiden ODI ton
1994ರ ಈ ದಿನ: ಮಾಸ್ಟರ್ ಬ್ಲಾಸ್ಟರ್​ ಅಭಿಮಾನಿಗಳ ವಿಶೇಷ ದಿನ.. ಯಾಕೆ ಗೊತ್ತಾ?

ನವದೆಹಲಿ: ಇಂದಿನ ದಿನ ಭಾರತದ ಕ್ರೀಡಾ ಇತಿಹಾಸದಲ್ಲಿ ಅದರಲ್ಲೂ ಕ್ರಿಕೆಟ್​ ಪ್ರಿಯರಿಗೆ ಸ್ಮರಣೀಯ ದಿನ. ಏಕೆಂದರೆ ಇಂದಿಗೆ ಸರಿಯಾಗಿ 27 ವರ್ಷಗಳ ಹಿಂದೆ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್​ ಮೊದಲ ಏಕದಿನ ಶತಕ ಬಾರಿಸಿದ್ದರು.

ಏಕದಿನ ಪಂದ್ಯದಲ್ಲಿ ಮೊದಲ ಶತಕ ದಾಖಲಿಸಲು ಸಚಿನ್ ತೆಂಡೂಲ್ಕರ್​ ತೆಗೆದುಕೊಂಡಿದ್ದು, ಬರೋಬ್ಬರಿ 79 ಪಂದ್ಯಗಳು ಅಥವಾ ಐದು ವರ್ಷ. ಸಚಿನ್ ತಮ್ಮ ಕ್ರಿಕೆಟ್ ಜೀವನದಲ್ಲಿ 49 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಈ ಏಕದಿನ ಶತಕಗಳಿಗೆ ಮೊದಲು ಬುನಾದಿ ಹಾಕಿದ್ದೇ 27 ವರ್ಷಗಳ ಹಿಂದೆ, ಅದೂ ಶ್ರೀಲಂಕಾದ ಕೊಲೊಂಬೋದಲ್ಲಿ..

ಅದು ಸೆಪ್ಟೆಂಬರ್ 9, 1994.. ಶ್ರೀಲಂಕಾದ ಕೊಲೊಂಬೋದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ತೆಂಡೂಲ್ಕರ್ 130 ಎಸೆತಗಳಲ್ಲಿ 110 ರನ್ ಗಳಿಸಿದ್ದರು. ಟೀಂ ಇಂಡಿಯಾ ಬೇರೆ ಆಟಗಾರರು ಯಾರೂ 50ರನ್​ಗಳ ಗಡಿ ದಾಟಿರಲಿಲ್ಲ.

ಸಚಿನ್ ತೆಂಡೂಲ್ಕರ್ ಅವರ ಈ ಶತಕದಿಂದಾಗಿ ಭಾರತ 31 ರನ್​ಗಳ ಅಂತರದಿಂದ ಗೆಲುವು ಕಂಡಿತ್ತು. ಎರಡು ಸಿಕ್ಸರ್​​ ಮತ್ತು ಎಂಟು ಫೋರ್​ಗಳ ಮೂಲಕ ಶತಕ ದಾಖಲಿಸಿದ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂದಿತ್ತು.

ಏಕದಿನ ಪಂದ್ಯಕ್ಕೆ ಮೊದಲೇ, ಟೆಸ್ಟ್ ಕ್ರಿಕೆಟ್​ನಲ್ಲಿ ಸಚಿನ್ ಶತಕ ದಾಖಲಿಸಿದ್ದರು. ತಾವು 17 ವರ್ಷ, 112 ದಿನ ತುಂಬಿದ್ದಾಗಲೇ ಟೆಸ್ಟ್​ ಶತಕ ದಾಖಲಿಸಿದ, ಮೂರನೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಗೆ ಸಚಿನ್ ಪಾತ್ರರಾದರು.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಅಜೇಯ 119ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಈ ಪಂದ್ಯ ಡ್ರಾ ಆಗಿತ್ತು. ಇನ್ನು ಸಚಿನ್ ತೆಂಡೂಲ್ಕರ್ 1989ರ ನವೆಂಬರ್ 15ರಂದು ಟೆಸ್ಟ್ ಕ್ರಿಕೆಟ್​​ಗೆ, ಅದೇ ವರ್ಷ ಡಿಸೆಂಬರ್ 18ರಂದು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಸಚಿನ್ ಹೆಸರಲ್ಲಿ ಹಲವಾರು ದಾಖಲೆಗಳಿದ್ದು, 51 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ತಮ್ಮ 24 ವರ್ಷದ ಕ್ರಿಕೆಟ್​​ನಲ್ಲಿ 6 ವಿಶ್ವಕಪ್​ಗಳಲ್ಲಿ ಆಡಿರುವ ಕೀರ್ತಿಯೂ ಸಚಿನ್ ತೆಂಡೂಲ್ಕರ್ ಹೆಸರಿಗಿದೆ.

ಇದನ್ನೂ ಓದಿ: ಚಹಾಲ್​,ಕುಲ್ದೀಪ್​ ಬಿಟ್ಟು 2017ರಲ್ಲಿ T-20 ಆಡಿರುವ ಅಶ್ವಿನ್​ಗೆ ಮಣೆ ಹಾಕಿದ BCCI; ಕಾರಣವಾಗಿದ್ದು ಈ ಅಂಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.