ETV Bharat / sports

ಗಿಲ್​ ಶತಕ, ಕೊಹ್ಲಿ ಅರ್ಧ ಶತಕ: 3ನೇ ದಿನದ ಅಂತ್ಯಕ್ಕೆ 289ಕ್ಕೆ3 ವಿಕೆಟ್​ ಕಳೆದುಕೊಂಡ ಟೀಂ ಇಂಡಿಯಾ!

author img

By

Published : Mar 11, 2023, 12:28 PM IST

Updated : Mar 11, 2023, 5:42 PM IST

ಶುಭಮನ್​ ಗಿಲ್​ ಶತಕ - ಉತ್ತಮ ಲಯದಲ್ಲಿ ಭಾರತದ ಬ್ಯಾಟರ್​ಗಳು - 300 ರನ್​ ಸನಿಹದಲ್ಲಿ ಭಾರತ - ವಿರಾಟ್​ ಕೊಹ್ಲಿ 4000 ರನ್​ಗಳ​ ದಾಖಲೆ

4ನೇ ಟೆಸ್ಟ್​​ ಅಪ್​ಡೇಟ್ಸ್
4ನೇ ಟೆಸ್ಟ್​​ ಅಪ್​ಡೇಟ್ಸ್

ಅಹಮದಾಬಾದ್​: ಆಸಿಸ್​ ಮೊದಲ ಇನ್ನಿಂಗ್ಸ್​ನಲ್ಲಿ ನೀಡಿದ್ದ ಬೃಹತ್​ ಮೊತ್ತಕ್ಕೆ ಭಾರತ ಸರಿಯಾದ ಉತ್ತರ ನೀಡುತ್ತಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 289 ರನ್​ ಗಳಿಸಿದೆ. ಶುಭಮನ್​ ಗಿಲ್​ 128 ಮತ್ತು ವಿರಾಟ್​ 59* ರನ್​ ಭಾರತಕ್ಕೆ 250+ ರನ್​ ದಾಟಲು ಬೆನ್ನೆಲುಬಾಗಿದೆ. ಮೂರನೇ ದಿನದಾಟದ ಅಂತ್ಯದ ವೇಳೆಗೆ ಭಾರತ ಮೂರು ವಿಕೆಟ್​ ಕಳೆದುಕೊಂಡಿದ್ದು 191ರನ್​ಗಳ ಹಿನ್ನಡೆಯಲ್ಲಿದೆ.

ಭಾರತ ಇಂದು ಮೂರು ಅವಧಿಯಲ್ಲಿ ಒಂದೊಂದು ವಿಕೆಟ್​ ಕಳೆದುಕೊಂಡಿತು. ಮೊದಲ ಅವಧಿಯಲ್ಲಿ ರೋಹಿತ್​, ಟೀ ಬ್ರೇಕ್​ ಮುನ್ನ ಪೂಜಾರ ಔಟ್​ ಆಗಿದ್ದಾರೆ. ಕೊನೆಯ ಸೆಷನ್​ನಲ್ಲಿ ಶತಕ ಗಳಿಸಿದ್ದ ಗಿಲ್​ ಔಟ್​ ಆದರು. ಗಿಲ್​ ನಂತರ ಬಡ್ತಿ ಪಡೆದು ರವೀಂದ್ರ ಜಡೇಜಾ (16) ಮತ್ತು ಮೂರನೇ ವಿಕೆಟ್​ ಆಗಿ ಬಂದ ವಿರಾಟ್​ ಕೊಹ್ಲಿ (59*) ಕ್ರೀಸ್​ನಲ್ಲಿದ್ದಾರೆ.

ತವರಿನಲ್ಲಿ ನಾಲ್ಕು ಸಾವಿರ ರನ್​ ದಾಖಲೆ: ವಿರಾಟ್ ಕೊಹ್ಲಿ ತವರಿನಲ್ಲಿ 4000 ರನ್​ ದಾಖಲಿಸಿದರು. ಬಾರ್ಡರ್​ ಗವಾಸ್ಕರ್​​ ಟ್ರೋಫಿಯ ನಾಲ್ಕನೇ ಪಂದ್ಯ ವಿರಾಟ್​ ಕೊಹ್ಲಿ ಅವರ ತವರಿನ 50ನೇ ಪಂದ್ಯವಾಗಿದೆ. 50 ನೇ ಪಂದ್ಯದಲ್ಲಿ 4 ಸಾವಿರ ರನ್​ ಗಡಿ ಮುಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ (7,216), ರಾಹುಲ್ ದ್ರಾವಿಡ್ (5,598), ಸುನಿಲ್ ಗವಾಸ್ಕರ್ (5,067) ಮತ್ತು ವೀರೇಂದ್ರ ಸೆಹ್ವಾಗ್ (4,656) ನಂತರ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ತವರಿನಲ್ಲಿ 4,000 ಟೆಸ್ಟ್ ರನ್‌ಗಳನ್ನು ತಲುಪಿದ ಐದನೇ ಭಾರತೀಯ ಬ್ಯಾಟರ್ ಆಗಿದ್ದಾರೆ. 77 ಇನ್ನಿಂಗ್ಸ್​ನಲ್ಲಿ ಈ ಸಾಧನೆಯನ್ನು ವಿರಾಟ್​ ಮಾಡಿದ್ದಾರೆ. ಈ ಮೂಲಕ ಗವಾಸ್ಕರ್ (87) ಮತ್ತು ದ್ರಾವಿಡ್ (88) ಅವರನ್ನು ಹಿಂದಿಕ್ಕಿದ್ದಾರೆ. ತವರಿನಲ್ಲಿ ಈ ವರೆಗೆ ಕೊಹ್ಲಿ 13 ಟೆಸ್ಟ್ ಶತಕಗಳನ್ನು ದಾಖಲಿಸಿದ್ದಾರೆ.

ಆರಂಭಿಕ ಆಟಗಾರ ಶುಭಮನ್​ ಗಿಲ್​​ ತನ್ನ ವೈಯಕ್ತಿಕ ಎರಡನೇ ಟೆಸ್ಟ್​ ಶತಕವನ್ನು ದಾಖಲು ಮಾಡಿದ್ದಾರೆ. ಮೊದಲ ಅವಧಿಯಲ್ಲಿ ರೋಹಿತ್​ ವಿಕೆಟ್​ ನಂತರ ಬಂದ ಚೇತೇಶ್ವರ ಪೂಜಾರ ಗಿಲ್​ ಜೊತೆ ಸೇರಿ 113 ರನ್​ಗಳ ಜೊತೆಯಾಟ ಮಾಡಿ ಔಟ್​ ಆದರು. ಪೂಜಾರ ವಿಕೆಟ್​ ಬೆನ್ನಲ್ಲೇ ಟೀ ಬ್ರೇಕ್​ ಘೋಷಣೆ ಮಾಡಿದರು, ಈ ವೇಳೆಗೆ ಭಾರತ 187ಕ್ಕೆ ಎರಡು ವಿಕೆಟ್​ ಕಳೆದುಕೊಂಡಿತು.

ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ರೋಹಿತ್​ ಶರ್ಮಾ 17 ಮತ್ತು ಗಿಲ್​ 18 ರನ್​ ಗಳಿಸಿದ್ದರು. ಭಾರತ ಯಾವುದೇ ವಿಕೆಟ್​ ನಷ್ಟ ಇಲ್ಲದೇ 444 ರನ್​ಗಳ ಹಿನ್ನಡೆಯಲ್ಲಿತ್ತು. ಇಂದು ಮುಂಜಾನೆ ಬ್ಯಾಟಿಂಗ್​ ಆರಂಭಿಸಿದ ಗಿಲ್​ ಮತ್ತು ರೋಹಿತ್ (35)​ ಜೋಡಿಯನ್ನು ಮ್ಯಾಥ್ಯೂ ಕುಹ್ನೆಮನ್ ಅಗಲಿಸಿದರು. ನಂತರ ಬಂದ ಚೇತೇಶ್ವರ ಪೂಜಾರ ತಮ್ಮ 102ನೇ ಪಂದ್ಯದಲ್ಲಿ 50 ರನ್​ಗೆ 8 ರನ್ನ ಸೇರಿಸುವಷ್ಟರಲ್ಲೇ ಎಡವಿದರು. 42 ರನ್​ ಗಳಿಸಿ ಆಡುತ್ತಿದ್ದ ಪೂಜಾರ ವಿಕೆಟ್ ಅನ್ನು​ ಮಾರ್ಫಿ ಪಡೆದರು.

17 ಸಾವಿರ ರನ್​ ಪೂರೈಸಿದ ರೋಹಿತ್​: ಭಾರತ ತಂಡದ ನಾಯಕ ರೋಹಿತ್​ ಶರ್ಮಾ 21 ರನ್​ ಗಳಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 17,000 ರನ್​ ಗಳಿಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ 7 ನೇ ಆಟಗಾರ ಮತ್ತು ಒಟ್ಟಾರೆ 28 ನೇ ಆಟಗಾರರಾಗಿದ್ದಾರೆ. ರೋಹಿತ್ ಶರ್ಮಾ ಮೊದಲು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಎರಡನೇ ದಿನದಾಟದ ಹೈಲೈಟ್ಸ್​: ಸರಣಿ ನಿರ್ಣಾಯಕ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 480 ರನ್‌ಗಳಿಗೆ ಆಲೌಟ್ ಮಾಡಿತು. ಭಾರತದ ಪರ ರವಿಚಂದ್ರನ್ ಅಶ್ವಿನ್ (6/91) ವಿಕೆಟ್​ಗಳನ್ನು ಪಡೆದಿದ್ದು, ಎರಡನೇ ದಿನದಂದು ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಆದರು.

ಮತ್ತೊಂದೆಡೆ ದ್ವಿಶತಕದ ಗಡಿ ತಲುಪುತ್ತಿದ್ದ ಆಸ್ಟ್ರೇಲಿಯಾದ ಬ್ಯಾಟರ್​ ಉಸ್ಮಾನ್​ ಖವಾಜಾ ಅವರ ಆಟಕ್ಕೆ ಅಕ್ಷರ್ ಪಟೇಲ್ ಬ್ರೇಕ್​ ಹಾಕಿದರು. 180 ರನ್​ಗಳನ್ನು ಕಲೆಹಾಕಿದ್ದ ಉಸ್ಮಾನ್​ ಖವಾಜಾ ಅಕ್ಷರ್​ ಪಾಟೇಲ್​ ಎಸೆತಕ್ಕೆ ಎಲ್​ಬಿಡಬ್ಲೂ ಬಲೆಗೆ ಬಿದ್ದು ಪೆವಿಲಿಯನ್​ ಸೇರುವ ಮೂಲಕ ದ್ವಿಶತಕದಿಂದ ವಂಚಿತರಾದರು.

ಮೊದಲ ದಿನ ಎರಡು ವಿಕೆಟ್​ಗಳನ್ನು ಪಡೆದಿರುವ ಶಮಿ ಎರಡನೇ ದಿನದಾಟದಲ್ಲಿ ವಿಕೆಟ್​ಗಳನ್ನು ಪಡೆಯಲು ವಿಫಲರಾದರು. ಮೊದಲನೇ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾದ ಸ್ಕೋರ್​ 4 ವಿಕೆಟ್‌ ನಷ್ಟಕ್ಕೆ 255 ರನ್‌ಗಳಾಗಿದ್ದವು. ಎರಡನೇ ದಿನದಾಟವನ್ನು ಪುನಾರಂಭ ಮಾಡಿದ ಖವಾಜಾ ಮತ್ತು ಕ್ಯಾಮರೂನ್ ಗ್ರೀನ್ ಜೋಡಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಎರಡನೇ ದಿನದಾಟದಲ್ಲೆ ಕ್ಯಾಮರೂನ್ ಗ್ರೀನ್ ತಮ್ಮ ಶತಕವನ್ನೂ ಪೂರೈಸಿದರು. 114 ರನ್​ಗಳನ್ನು ಕಲೆ ಹಾಕಿದ್ದ ಗ್ರೀನ್​ ಅಶ್ವೀನ್​ ಎಸೆದ ಬೌಲ್​ಗೆ ಶ್ರೀಕರ್​ ಭಾರತ್​ಗೆ ಕ್ಯಾಚ್​ ನೀಡಿ ಹೊರನಡೆದರು. ಖವಾಜಾ ಮತ್ತು ಗ್ರೀನ್​ ಜೋಡಿ ಎರಡನೇ ದಿನದಾಟದಲ್ಲಿ 123 ರನ್​ ಕಲೆ ಹಾಕಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಫಲರಾದರು. ಉಳಿದಂತೆ ಅಲೆಕ್ಸ್​ ಕ್ಯಾರಿ (0), ಸ್ಟಾರ್ಕ್​ (6), ಲಿಯಾನ್​ (34), ಮುರ್ಫಿ (41) ರನ್​ ಕಲೆಹಾಕಿದರು.

ಇದನ್ನೂ ಓದಿ: ಯುಪಿ ನಾಯಕಿಯ ಅಮೋಘ 96 ರನ್​ಗಳ ಆಟ: ಆರ್​ಸಿಬಿಗೆ ಸತತ 4ನೇ ಸೋಲು

Last Updated : Mar 11, 2023, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.