ETV Bharat / sports

3ನೇ ಏಕದಿನ: ವೆಸ್ಟ್ ಇಂಡೀಸ್ ವಿರುದ್ಧ 200 ರನ್ ಜಯ: 2-1 ರಿಂದ ಭಾರತಕ್ಕೆ ಸರಣಿ, ಸತತ 13ನೇ ಸಿರೀಸ್​ ಗೆಲುವು

author img

By

Published : Aug 2, 2023, 6:52 AM IST

ಮೂರನೇ ಏಕದಿನ ಪಂದ್ಯವನ್ನು 200 ರನ್​ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ವಿಂಡೀಸ್​ ವಿರುದ್ಧ ಸತತ 13ನೇ ಸರಣಿ ತನ್ನದಾಗಿಸಿಕೊಂಡಿತು. 3 ಅರ್ಧ ಶತಕಗಳ ಮೂಲಕ 184 ರನ್​ ಗಳಿಸಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್​ ಕಿಶನ್​ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಗೆಲುವು
ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಗೆಲುವು

ತರೌಬಾ(ವೆಸ್ಟ್​ಇಂಡೀಸ್​) : ವಿಶ್ವಕಪ್​ಗೆ ಸಿದ್ಧತಾ ಭಾಗವಾಗಿ ಹಲವು ಪ್ರಯೋಗಗಳ ನಡುವೆ ಭಾರತ ಕ್ರಿಕೆಟ್​ ತಂಡ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯನ್ನು 2-1 ರಿಂದ ಕೈವಶ ಮಾಡಿಕೊಂಡಿತು. ಆತಿಥೇಯರ ವಿರುದ್ಧದ 3ನೇ, ಅಂತಿಮ ಏಕದಿನ ಪಂದ್ಯದಲ್ಲಿ 200 ರನ್​ ಅಂತರದ ಜಯ ದಾಖಲಿಸಿತು. ಇದು ವಿಂಡೀಸ್​ ವಿರುದ್ಧದ 13ನೇ ಸರಣಿ ಗೆಲುವಾಗಿದೆ.

ಮಂಗಳವಾರ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಪೂರ್ಣ ಪ್ರಾಬಲ್ಯ ಮೆರೆದ ಭಾರತೀಯರು ಬ್ಯಾಟಿಂಗ್​, ಬೌಲಿಂಗ್​ ವಿಭಾಗದಲ್ಲಿ ರಾರಾಜಿಸಿದರು. ಮೊದಲು ಬ್ಯಾಟ್​ ಮಾಡಿದ ಭಾರತ ನಿಗದಿತ ಓವರ್​ನಲ್ಲಿ 5 ವಿಕೆಟ್​ಗೆ 351 ರನ್​ ಗಳಿಸಿದರು. ಪ್ರತ್ಯುತ್ತರವಾಗಿ ವಿಂಡೀಸ್​ ಸೊಲ್ಲೆತ್ತದೇ 151 ರನ್​ ಗಳಿಸಿ ಶರಣಾಯಿತು.

ಕೊನೆಯ ಪಂದ್ಯದಲ್ಲೂ ಪ್ರಯೋಗ ಮುಂದುವರಿಸಿದ ಭಾರತ ತಂಡ ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯನ್ನು ಹೊರಗಿಟ್ಟು, ಸಂಜು ಸ್ಯಾಮ್ಸನ್​, ಋತುರಾಜ್ ಗಾಯಕ್ವಾಡ್​​ಗೆ ಅವಕಾಶ ನೀಡಲಾಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವಪಡೆ ವಿಂಡೀಸ್​ ವಿರುದ್ಧ ಬ್ಯಾಟಿಂಗ್​ ಪರಾಕ್ರಮ ತೋರಿತು.

ಆರಂಭಿಕ ಜೋಡಿಯಾದ ಇಶಾನ್ ಕಿಶನ್​, ಶುಭ್​ಮನ್​ಗಿಲ್​ ಭರ್ಜರಿ ಬ್ಯಾಟ್​ ಮಾಡಿ ಮೊದಲ ವಿಕೆಟ್​ಗೆ 143 ರನ್​ ಪೇರಿಸಿತು. ಈ ಪಂದ್ಯದಲ್ಲೂ ಅಬ್ಬರಿಸಿದ ಕಿಶನ್​ 64 ಎಸೆತಗಳಲ್ಲಿ 77 ರನ್​ ಬಾರಿಸಿ ಸರಣಿಯಲ್ಲಿ ಸತತ ಮೂರನೇ ಅರ್ಧಶತಕ ಬಾರಿಸಿದರು. ಇನ್ನೊಂದು ತುದಿಯಲ್ಲಿ ಗಿಲ್​ ಕೂಡ ಉತ್ತಮ ಬ್ಯಾಟ್​ ಮಾಡಿ 85 ರನ್​ ಗಳಿಸಿದರು. ಋತುರಾಜ್​ ಗಾಯಕ್ವಾಡ್​ 8 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು.

ಮಿಂಚಿದ ಸ್ಯಾಮ್​; ಪ್ರತಿಭೆ ಇದ್ದರೂ ಅವಕಾಶ ವಂಚಿತವಾಗಿದ್ದ ಸಂಜು ಸ್ಯಾಮ್ಸನ್​ ಕಳೆದ ಪಂದ್ಯದಲ್ಲಿ ಮಂಕಾಗಿದ್ದರೂ, ಇಲ್ಲಿ ಅಬ್ಬರಿಸಿದರು. ಟಿ-20 ಮಾದರಿಯಲ್ಲಿ ಬ್ಯಾಟ್ ಮಾಡಿದ ಸಂಜು 4 ಸಿಕ್ಸರ್​, 2 ಬೌಂಡರಿ ಸಮೇತ 51 ರನ್​ ಬಾರಿಸಿದರು. ಆರಂಭದಿಂದಲೇ ರನ್​ ಗಳಿಕೆಗೆ ಒತ್ತು ನೀಡಿ ರಭಸವಾಗಿ ಬ್ಯಾಟ್​ ಮಾಡಿದರು. ಇನ್ನು ಸತತ ವೈಫಲ್ಯ ಕಾಣುತ್ತಿದ್ದ ಹಾರ್ದಿಕ್​ ಪಾಂಡ್ಯ ಚೇತರಿಕೆ ಆಟವಾಡಿದರು.

ಆರಂಭದಲ್ಲಿ ತಿಣುಕಾಡಿದರೂ ಲಯ ಕಂಡುಕೊಂಡು ಕೊನೆಯಲ್ಲಿ ಸ್ಫೋಟಿಸಿ 52 ಎಸೆತಗಳಲ್ಲಿ 70 ರನ್​ ಪೇರಿಸಿದರು. 5 ಸಿಕ್ಸರ್​, 4 ಬೌಂಡರಿ ಬಾರಿಸಿದರು. ಸೂರ್ಯಕುಮಾರ್​ ಯಾದವ್​ 35 ರನ್​ ಮಾಡಿದರು. ಕೊನೆಗೆ ಭಾರತ 351 ರನ್​ಗಳ ಗುರಿ ನೀಡಿತು.

ವಿಂಡೀಸ್​ ಉಡೀಸ್​; ದೊಡ್ಡ ಮೊತ್ತ ಬೆನ್ನಟ್ಟಿದ ವಿಂಡೀಸ್​ ಭಾರತದ ಬೌಲರ್​ಗಳನ್ನು ಎದುರಿಸಲಾಗದೇ ಪೆವಿಲಿಯನ್​ ಪರೇಡ್​ ನಡೆಸಿದರು. ಅಲಿಕ್ ಅಥಾಂಜೆ 32, ಸ್ಪಿನ್ನರ್​ ಗುಡಕೇಶ್​ ಮೋಟಿ 39, ಅಲ್ಜಾರಿ ಜೋಸೆಫ್​ 26, ಯನ್ನಿಕ್​ ಕಾರಿಯಾ 19 ರನ್​ ಗಳಿಸಿದರೆ, ಉಳಿದವರು ಒಂದಂಕಿ ದಾಟಲಿಲ್ಲ. ಇದರಿಂದ ತಂಡ 35.3 ಓವರ್​ಗಳಲ್ಲಿ 151 ರನ್​ಗೆ ಗಂಟುಮೂಟೆ ಕಟ್ಟಿತು. ಮಾರಕ ದಾಳಿ ನಡೆಸಿದ ಶಾರ್ದೂಲ್​ ಠಾಕೂರ್​ 4, ಮುಕೇಶ್​ ಕುಮಾರ್​ 3, ಕುಲದೀಪ್​ ಯಾದವ್​ 2 ವಿಕೆಟ್ ಕಿತ್ತು ವಿಂಡೀಸ್​ ಸಂಹಾರ ಮಾಡಿದರು.

ಸತತ 13 ನೇ ಸರಣಿ ಗೆಲುವು: ಕೆರೆಬಿಯನ್ನರ ವಿರುದ್ಧ ಭಾರತ ಎರಡನೇ ಅತ್ಯಧಿಕ(200) ರನ್​ ಗೆಲುವು ದಾಖಲಿಸುವ ಮೂಲಕ ಸತತ 13ನೇ ಸರಣಿ ಗೆಲುವು ಸಾಧಿಸಿತು. 2007 ರಿಂದ ವಿಂಡೀಸ್ ವಿರುದ್ಧ ಭಾರತ ತವರು, ತವರಿನಾಚೆ ಎಲ್ಲೂ ಸರಣಿ ಸೋತಿಲ್ಲ.

ಇದನ್ನೂ ಓದಿ: Ravindra Jadeja: ತಂಡದಲ್ಲಿ ಯಾರಿಗೂ ಅಹಂಕಾರ ಇಲ್ಲ.. ಮಾಜಿ ಆಟಗಾರರಿಗೆ ತಂಡದ ಬಗ್ಗೆ ಮಾತನಾಡುವ ಅಧಿಕಾರ ಇದೆ: ಜಡೇಜ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.