ETV Bharat / sports

ಬುಮ್ರಾ ಬೌಲಿಂಗ್​ ಶೈಲಿಯಲ್ಲಿ ಕೊಹ್ಲಿ ಫೀಲ್ಡಿಂಗ್​: ಅಭಿಮಾನಿಗಳಿಂದ ಬಣ್ಣನೆ

author img

By ETV Bharat Karnataka Team

Published : Jan 18, 2024, 6:09 PM IST

Updated : Jan 18, 2024, 6:49 PM IST

ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮಾಡಿರುವ ಫೀಲ್ಡಿಂಗ್​ನ ಫೋಟೋ ವೈರಲ್​ ಆಗಿದೆ.

ಬುಮ್ರಾ ಬೌಲಿಂಗ್​ ಶೈಲಿಯಲ್ಲಿ ಕೊಹ್ಲಿ ಫೀಲ್ಡಿಂಗ್
ಬುಮ್ರಾ ಬೌಲಿಂಗ್​ ಶೈಲಿಯಲ್ಲಿ ಕೊಹ್ಲಿ ಫೀಲ್ಡಿಂಗ್

ಹೈದರಾಬಾದ್​​: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಮತ್ತು ಅಂತಿಮ ಟಿ-20 ಪಂದ್ಯ ಬುಧವಾರ (ನಿನ್ನೆ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ರೋಚಕ ಪಂದ್ಯದಲ್ಲಿ ಎರಡು ಸೂಪರ್ ಓವರ್‌ಗಳು ಕಂಡುಬಂದವು. ಭಾರತ ನೀಡಿದ 212 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಅಫ್ಘಾನಿಸ್ತಾನ ಕೂಡ 20 ಓವರ್‌ಗಳಲ್ಲಿ 212 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಈ ವೇಳೆ ಸೂಪರ್​ ಓವರ್​ ನಡೆಸಲಾಯಿತು. ಅದೂ ಕೂಡ ಡ್ರಾನಲ್ಲೇ ಕೊನೆಗೊಂಡಿತು. ಇದಾದ ಬಳಿಕ ಎರಡನೇ ಸೂಪರ್ ಓವರ್ ನಡೆಯಿತು ಅದರಲ್ಲಿ ಭಾರತ ತಂಡ ಗೆಲುವು ಸಾಧಿಸಿತು.

ಈ ರೋಚಕ ಪಂದ್ಯದಲ್ಲಿ ಮತ್ತೊಂದು ರೋಚಕ ಸಂಗತಿ ಕೂಡ ಕಂಡುಬಂದಿದೆ. ವಾಸ್ತವವಾಗಿ, ಕಿಂಗ್ ಕೊಹ್ಲಿ ಪಂದ್ಯದಲ್ಲಿ ಒಂದೂ ರನ್ ​ಗಳಿಸಲು ಸಾಧ್ಯವಾಗದಿದ್ದರೂ, ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಅವರ ಅದ್ಭುತ ಫೀಲ್ಡಿಂಗ್​ನ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಕೂಡ ಆಗಿದೆ.

ಎರಡನೇ ಇನಿಂಗ್ಸ್‌ನ 17ನೇ ಓವರ್‌ನಲ್ಲಿ, ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಸ್ಟ್ರೈಕ್​ನಲ್ಲಿದ್ದ ಕರೀಂ ಜನ್ನತ್ ಬ್ಯಾಕ್ ಫುಟ್‌ನಲ್ಲಿ ಚೆಂಡನ್ನು ಬೌಂಡರಿಯತ್ತ ಬಾರಿಸಿದ್ದರು. ಈ ವೇಳೆ ಬೌಂಡರಿ ಬಳಿ ಫೀಲ್ಡಿಂಗ್​ ಮಾಡುತ್ತಿದ್ದ ವಿರಾಟ್ ಕೊಹ್ಲಿ ಸಿಕ್ಸರ್ ಹೋಗದಂತೆ ಹೈಜಂಪ್​ ಮಾಡಿ ಚೆಂಡನ್ನು ತಡೆದು 5ರನ್​ ಉಳಿಸಿದ್ದರು.

ಕೊಹ್ಲಿ ಜಂಪ್ ಮಾಡುವ ಫೋಟೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಲ್ಲಿ ಕೊಹ್ಲಿ ಫೀಲ್ಡಿಂಗ್​ ಆಕ್ಷನ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುವ ಶೈಲಿಯಂತೆ ಕಂಡುಬಂದಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಜನರು ಈ ಕೊಹ್ಲಿ ಫೀಲ್ಡಿಂಗ್​ನ ಚಿತ್ರ ಮತ್ತು ಬುಮ್ರಾ ಅವರ ಬೌಲಿಂಗ್​ ಮಾಡುತ್ತಿರುವ ಚಿತ್ರಗಳನ್ನು ಹೋಲಿಕೆ ಮಾಡಿ ಜಾಲತಾಣಗಳಲ್ಲಿ ಶೇರ್​ ಮಾಡಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಿ-20ಯಲ್ಲಿ ಮೊದಲ ಬಾರಿಗೆ ಗೋಲ್ಡನ್ ಡಕ್‌ ಔಟಾದರು. 14 ತಿಂಗಳ ನಂತರ ಟಿ-20 ಪುನರಾಗಮನ ಮಾಡಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ 2022ರ ಟಿ-20 ವಿಶ್ವಕಪ್‌ನಲ್ಲಿ ಆಡಿದ್ದರು. ಇದುವರೆಗೂ ಕೊಹ್ಲಿ 117 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದು, ಒಂದು ಶತಕ ಮತ್ತು 37 ಅರ್ಧಶತಕಗಳೊಂದಿಗೆ 4037 ರನ್​ಗಳನ್ನು ಕಲೆ ಹಾಕಿದ್ದಾರೆ. ಟಿ20ಯಲ್ಲಿ 12000 ರನ್​ಗಳನ್ನು ಪೂರೈಸಲು ಕೇವಲ 6ರನ್​ಗಳ ಅವಶ್ಯಕತೆ ಇದೆ.

ಇದನ್ನೂ ಓದಿ: ಸೂಪರ್​ ಓವರ್​ನಲ್ಲಿ ರಿಟೈರ್ಡ್​​​ ಆಗಿ ಮತ್ತೆ ಬ್ಯಾಟಿಂಗ್​ಗಿಳಿದ ರೋಹಿತ್​: ಐಸಿಸಿ ರೂಲ್ಸ್​​ ಹೇಳುವುದೇನು?

Last Updated : Jan 18, 2024, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.