ETV Bharat / sports

ವಿಶ್ವಕಪ್​ ಕ್ರಿಕೆಟ್​: ಇಂಗ್ಲೆಂಡ್‌ ವಿರುದ್ಧ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದೇ ಭಾರತ?

author img

By ETV Bharat Karnataka Team

Published : Oct 26, 2023, 5:44 PM IST

ಮುಂದಿನ ವಿಶ್ವಕಪ್ ಕ್ರಿಕೆಟ್​ ಪಂದ್ಯದಲ್ಲಿ ಭಾರತವು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಕಳಪೆ ಪ್ರದರ್ಶನದ ಫಲವಾಗಿ ಕುಸಿದಿದೆ.

ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿ
ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿ

ಲಕ್ನೋ (ಉತ್ತರ ಪ್ರದೇಶ) : ವಿಶ್ವಕಪ್​ ಕ್ರಿಕೆಟ್‌ನ 29ನೇ ಪಂದ್ಯ ಭಾನುವಾರ (ಅಕ್ಬೋಬರ್ 29) ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಲಕ್ನೋದ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ಭಾರತ ಬೌಲಿಂಗ್​ ವಿಭಾಗದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಈ ಮೈದಾನವು ಸ್ಪಿನ್ನರ್‌ಸ್ನೇಹಿ ಆಗಿದ್ದು ತಂಡದಲ್ಲಿ ಮೂವರು ಸ್ಪಿನ್ನರ್ಸ್​​ ಕಣಕ್ಕಿಳಿಯುವ ಸಂಭವವಿದೆ.

ಧರ್ಮಶಾಲಾದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಅಲ್ಲಿನ ಪಿಚ್ ನ್ಯೂಜಿಲೆಂಡ್​ ಸೀಮರ್‌ಗಳಿಗೆ ಅನುಕೂಲವಾದರೆ, ಲಕ್ನೋ ನಿಧಾನಗತಿ ಬೌಲಿಂಗ್​ಗೆ ಸಹಾಯಕಾರಿಯಾಗಿದೆ. ಭಾರತ ತಂಡದಲ್ಲಿ ಈಗಿರುವ ರವೀಂದ್ರ ಜಡೇಜಾ ಮತ್ತು ಕುಲಿದೀಪ್​ ಯಾದವ್​ ಕ್ವಾಲಿಟಿ ಸ್ಪಿನ್ನರ್ಸ್​ಗಳಾಗಿದ್ದು, ತಂಡಕ್ಕೆ ಅವಶ್ಯವಾದ ಸಂದರ್ಭದಲ್ಲಿ ವಿಕೆಟ್ ಉರುಳಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.​ ಆದರೆ ಮತ್ತೊಬ್ಬ ಸ್ಪಿನ್ನರ್​ ತಂಡಕ್ಕೆ ಸೇರ್ಪಡೆಯಾದರೆ ಹಾಲಿ ಚಾಂಪಿಯನ್​ ಆಂಗ್ಲರನ್ನು ಸುಲಭವಾಗಿ ಕಟ್ಟಿಹಾಕುವ ಲೆಕ್ಕಾಚಾರ ಭಾರತ ತಂಡದ್ದು.

ಅನುಭವಿ ಆಲ್‌ರೌಂಡರ್ ಹಾಗು ಕೇರಂ ಬಾಲ್ ಸ್ಪೆಷಲಿಸ್ಟ್​ ರವಿಚಂದ್ರನ್​ ಆಶ್ವಿನ್​ ಚೆನ್ನೈ ಪಿಚ್​ನಲ್ಲಿ​ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೋಡಿ ಮಾಡಿದ್ದರು. ಆಸೀಸ್​ ಬ್ಯಾಟರ್​ಗಳನ್ನು ಕಟ್ಟಿ ಹಾಕುವಲ್ಲಿ ಅವರು ಯಶ ಕಂಡಿದ್ದರು. ಹೀಗಿರುವಾಗ ನಾಯಕ ರೋಹಿತ್ ಶರ್ಮಾ​ ಅವರು ಆಶ್ವಿನ್​ಗೆ ಮಣೆ ಹಾಕಿದರೆ, ಆಡುವ ಹನ್ನೊಂದರ ಬಳಗ ಬೌಲಿಂಗ್​ ವಿಭಾಗವಷ್ಟೇ ಅಲ್ಲದೆ, ಜಡೇಜಾ ನಂತರ ಬ್ಯಾಟಿಂಗ್​ ಕ್ರಮಾಂಕವು 8 ವಿಕೆಟ್​ಗಳವರೆಗೂ ವಿಸ್ತರಿಸಲಿದೆ. ಆಶ್ವಿನ್​ ಕೂಡ ಉತ್ತಮವಾಗಿ ಬ್ಯಾಟ್​ ಬೀಸುವ ಕೌಶಲ್ಯ ಹೊಂದಿದ್ದಾರೆ.

ಕುಲದೀಪ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 73 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಇವರು ಒಟ್ಟು 10 ಓವರ್ ಬೌಲ್ ಮಾಡಿದ್ದು, ತಮ್ಮ ಕೋಟಾದ 8 ಮತ್ತು 10ನೇ ಓವರ್‌ನಲ್ಲಿ ಹೆಚ್ಚು ರನ್​ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಇನ್ನು ಜಡೇಜಾ ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಪಂದ್ಯದ ಗತಿ ಬದಲಿಸಬಲ್ಲ ಆಟಗಾರ. ಇವರೊಂದಿಗೆ ಆಶ್ವಿನ್​ಗೂ ಸ್ಥಾನ ಸಿಕ್ಕರೆ, ತ್ರಿವಳಿ ಸ್ಪಿನ್ನರ್ಸ್​ ಕಮಾಲ್​ ಮಾಡುವ ನಿರೀಕ್ಷೆ ಇದೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದು, ಮುಂದಿನ ಎರಡು ಪಂದ್ಯಗಳಿಂದ ಅಲಭ್ಯರಾಗಿದ್ದಾರೆ. ಹೀಗಾಗಿ ಸೂರ್ಯ ಕುಮಾರ್ ಯಾದವ್ ಮತ್ತು ಎಡಗೈ ಬ್ಯಾಟರ್​ ಇಶಾನ್ ಕಿಶನ್‌ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ.

ಪ್ರಧಾನ ಕೋಚ್​ ರಾಹುಲ್​ ದ್ರಾವಿಡ್​ ಪ್ರತಿಕ್ರಿಯಿಸಿ, 360 ಡಿಗ್ರಿ ಹಿಟ್ಟರ್ ಎಂದು ಸೂರ್ಯ ಹೆಸರುವಾಸಿಯಾಗಿದ್ದು, ಸ್ಪಿನ್ ಬೌಲಿಂಗ್‌ಗೆ ಹೊಂದಿಕೊಂಡು ಆಡುವ ಅದ್ಭುತ ಆಟಗಾರನೂ ಹೌದು. ಇಂಗ್ಲೆಂಡ್ ತಂಡದಲ್ಲಿರುವ ಸ್ಟಾರ್​ ಸ್ಪಿನ್ನರ್ಸ್​ ಆದಿಲ್ ರಶೀದ್ ಮತ್ತು ಮೊಯಿನ್ ಅಲಿ ಅವರ ಸ್ಪಿನ್​ ಟರ್ನರ್‌ಗಳನ್ನು ಇವರು ನಿಭಾಯಿಸಬಹುದು ಎಂದು ತಿಳಿಸಿದ್ದಾರೆ.

ಬೌಲಿಂಗ್‌ನಲ್ಲಿ ಬದಲಾವಣೆಯಾದರೆ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ನಡುವೆ ಪೈಪೋಟಿ ಹೆಚ್ಚಾಗುತ್ತದೆ. ನ್ಯೂಜಿಲೆಂಡ್ ವಿರುದ್ಧ ಐದು ವಿಕೆಟ್‌ಗಳೊಂದಿಗೆ ಆಡುವ 11ರಲ್ಲಿ ಶಮಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಂಡದಿಂದ ಶಮಿ ಮತ್ತು ಸಿರಾಜ್​ ಇಬ್ಬರನ್ನು ಕೈ ಬಿಡುವುದು ಕಷ್ಟವಾಗುತ್ತದೆ. ಈವರೆಗೆ ವೇಗಿಗಳ ಬೌಲಿಂಗ್​ ವಿಭಾಗದ ಆಧಾರವಾಗಿರುವ ಜಸ್ರೀತ್ ಬುಮ್ರಾ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ICC Cricket World Cup​: ನಾಳೆ ದಕ್ಷಿಣ ಆಫ್ರಿಕಾ vs ಪಾಕಿಸ್ತಾನ ಪಂದ್ಯ.. ಸೆಮಿಸ್​ ರೇಸ್​ನಲ್ಲಿ ಉಳಿಯಲು ಪಾಕ್​ಗೆ ಗೆಲುವು ಅನಿವಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.