ETV Bharat / sports

ವಿಶ್ವಕಪ್​ ಕ್ರಿಕೆಟ್​: ರಾಹುಲ್​, ಅಯ್ಯರ್​ ಭರ್ಜರಿ ಶತಕ; ಡಚ್ಚರಿಗೆ 411 ರನ್​ಗಳ ಬೃಹತ್​ ಗುರಿ

author img

By ETV Bharat Karnataka Team

Published : Nov 12, 2023, 2:02 PM IST

Updated : Nov 12, 2023, 6:02 PM IST

ICC World Cup​​: ನೆದರ್ಲೆಂಡ್ಸ್‌ ವಿರುದ್ಧ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

India vs Netherlands
ಭಾರತ vs ನೆದರ್ಲೆಂಡ್ಸ್‌

ಬೆಂಗಳೂರು: ವಿಶ್ವಕಪ್​ನ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಟೀಮ್​ ಇಂಡಿಯಾದ ಶ್ರೇಯಸ್​ ಅಯ್ಯರ್​, ಕೆ ಎಲ್​ ರಾಹುಲ್​, ರೋಹಿತ್​ ಶರ್ಮಾ, ಶುಭಮನ್ ಗಿಲ್​ ಮತ್ತು ವಿರಾಟ್​ ಕೊಹ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ. ಐವರ ಬ್ಯಾಟಿಂಗ್​ ನೆರವಿನಿಂದ ಭಾರತ ತಂಡ ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನೆದರ್ಲೆಂಡ್ಸ್​ ವಿರುದ್ಧ ನಿಗದಿತ ಓವರ್​ ಅಂತ್ಯಕ್ಕೆ 4 ವಿಕೆಟ್​ ನಷ್ಟಕ್ಕೆ 410 ರನ್​ ಕಲೆಹಾಕಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಿರ್ಧಾರ ಮಾಡಿದ ಟೀಮ್​ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿತು. ಡಚ್ಚರ ವಿರುದ್ಧ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿ ಸೆಮೀಸ್​ಗೂ ಮುನ್ನ ಆತ್ಮವಿಶ್ವಾಸವನ್ನು ಇನ್ನಷ್ಟೂ ಹೆಚ್ಚಿಸಿಕೊಳ್ಳಲು ರೋಹಿತ್​ ಶರ್ಮಾ ಲೆಕ್ಕಾಚಾರ ಹಾಕಿದ್ದರು. ಅದಕ್ಕೆ ತಕ್ಕಂತೆ ತಂಡ ಆರಂಭವನ್ನು ಪಡೆದುಕೊಂಡಿತು. ಶುಭಮನ್​ ಗಿಲ್​ ಎಂದಿನಂತೆ ಬಿರುಸಿನ ಆರಂಭವನ್ನು ಪಡೆದುಕೊಂಡರು. ಆರಂಭಿಕರಿಬ್ಬರು ಈ ವರ್ಷದ 5ನೇ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. 4 ಸಿಕ್ಸ್​ ಮತ್ತು 3 ಬೌಂಡರಿಯ ಸಹಾಯದಿಂದ 51 ರನ್​ ಗಳಿಸಿದ ಗಿಲ್​ ಔಟ್​ ಆದರು.

ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ 29 ರನ್​ಗಳ ಜೊತೆಯಾಟವನ್ನು ಮಾಡಿದರು. ಈ ವೇಳೆ ರೋಹಿತ್​ ಶರ್ಮಾ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು. ಆದರೆ ಇನ್ನಿಂಗ್ಸ್​ ಮತ್ತು ಜೊತೆಯಾಟ ಮುಂದುವರೆಸುವಲ್ಲಿ ವಿಫಲರಾದರು. 61 ರನ್​ ಗಳಿಸಿ ರೋಹಿತ್​ ಸಹ ವಿಕೆಟ್​ ಒಪ್ಪಿಸಿದರು. ಇದರಿಂದ 100 ಅಂತಾರಾಷ್ಟ್ರೀಯ ಅರ್ಧಶತಕ ಗಳಿಸಿದ ದಾಖಲೆಯನ್ನು ಮಾಡಿದರು. ಇನ್ನಿಂಗ್ಸ್​ನಲ್ಲಿ ರೋಹಿತ್​ 8 ಬೌಂಡರಿ ಮತ್ತು 2 ಸಿಕ್ಸ್​ ಗಳಿಸಿದ್ದರು.

50ನೇ ಶತಕ ಮಿಸ್​: ಮೂರನೇ ವಿಕೆಟ್​ಗೆ ಒಂದಾದ ಅಯ್ಯರ್​ ಮತ್ತು ವಿರಾಟ್​ ಕೊಹ್ಲಿ 71 ರನ್​ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ವಿರಾಟ್​ ತಮ್ಮ ಎರಡನೇ ತವರು ಮನೆಯಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿ ಅರ್ಧಶತಕ ಪೂರೈಸಿಕೊಂಡರು. ಇಂದು ಅವರ ಬ್ಯಾಟ್​ನಿಂದ 50ನೇ ಏಕದಿನ ಶತಕ ದಾಖಲಾಗುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. 56 ಬಾಲ್​ ಆಡಿ 5 ಬೌಂಡರಿ ಮತ್ತು 1 ಸಿಕ್ಸ್​ನಿಂದ 51 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಮೊದಲ ಮೂವರು ಬ್ಯಾಟರ್​ಗಳು ಅರ್ಧಶತಕಕ್ಕೆ ವಿಕೆಟ್​ ಒಪ್ಪಿಸಿದರು. ದೊಡ್ಡ ಇನ್ನಿಂಗ್ಸ್​ ನಿರೀಕ್ಷೆ ಮೂವರಿಂದಲೂ ಹುಸಿಯಾಯಿತು.

ರಾಹುಲ್​- ಅಯ್ಯರ್​ ಶತಕ: ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್​ ಮತ್ತು ಕೆಎಲ್​ ರಾಹುಲ್​ ಶತಕ ಗಳಿಸಿ ಸಂಭ್ರಮಿಸಿದರು. 4ನೇ ವಿಕೆಟ್​ಗೆ ಈ ಜೋಡಿ 208 ರನ್​ಗಳ ಪಾಲುದಾರಿಕೆ ಹಂಚಿಕೊಂಡಿತು. 64 ಬಾಲ್​ ಎದುರಿಸಿದ ಕೆ ಎಲ್​ ರಾಹುಲ್​ 11 ಬೌಂಡರಿ ಮತ್ತು 4 ಸಿಕ್ಸ್​ನಿಂದ 102 ರನ್​ ಗಳಿಸಿ ಕೊನೆಯಲ್ಲಿ ಔಟ್​ ಆದರು. ಅಯ್ಯರ್​ ಅಜೇಯವಾಗಿ 128 ರನ್​ ಕಲೆಹಾಕಿದರು. ಇನ್ನಿಂಗ್ಸ್​ನಲ್ಲಿ ಅವರು 94 ಬಾಲ್​ ಆಡಿ 10 ಬೌಂಡರಿ ಮತ್ತು 5 ಸಿಕ್ಸರ್​ ಗಳಿಸಿದರು. ಇವರ ಈ ಆಟದ ನೆರವಿನಿಂದ ಟೀಮ್​ ಇಂಡಿಯಾ 50 ಓವರ್​ಗೆ 4 ವಿಕೆಟ್​ ನಷ್ಟದೊಂದಿಗೆ 410 ರನ್​ ಕಲೆಹಾಕಿದೆ.

ಇದನ್ನೂ ಓದಿ: ಈ ಬಾರಿ ಭಾರತ ಗೆಲ್ಲದಿದ್ರೆ ಇನ್ನು ಮೂರು ವಿಶ್ವಕಪ್​ಗಳವರೆಗೆ ಸಾಧ್ಯವಿಲ್ಲ; ರವಿಶಾಸ್ತ್ರಿ

Last Updated : Nov 12, 2023, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.