T20 World Cup: ಇಂದಿನಿಂದ ಚುಟುಕು ಕ್ರಿಕೆಟ್​ ಟೂರ್ನಿ ಆರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ

author img

By

Published : Oct 17, 2021, 2:47 AM IST

Updated : Oct 17, 2021, 4:07 AM IST

icc-t20-world-cup-to-start-from-today

ಇಂದಿನಿಂದ ಐಸಿಸಿ ಟಿ-20 ವಿಶ್ವಕಪ್ ಯುಎಇಯಲ್ಲಿ ಆರಂಭವಾಗಲಿದೆ. 'ಸೂಪರ್ 12'ರ ಹಂತದ ಗುಂಪು 2ರಲ್ಲಿರುವ ಭಾರತ ತಂಡವು ಅಕ್ಟೋಬರ್ 24ರಂದು ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಚುಟುಕು ಟೂರ್ನಿಯ ಅಭಿಯಾನವನ್ನು ಆರಂಭಿಸಲಿದೆ.

ದುಬೈ: 2021ರ 14ನೇ ಐಪಿಎಲ್ ಆವೃತ್ತಿಯು ಅಂತ್ಯವಾಗುತ್ತಿದ್ದಂತೆ ಕ್ರಿಕೆಟ್​ ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್​ ವಿಶ್ವಕಪ್​ ಮನರಂಜನೆಗೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಐಸಿಸಿ ಟಿ-20 ವಿಶ್ವಕಪ್ ಯುಎಇಯಲ್ಲಿ ಆರಂಭವಾಗಲಿದೆ. ಕೋವಿಡ್​ ಹಿನ್ನೆಲೆಯಲ್ಲಿ ಭಾರತದಿಂದ ಸ್ಥಳಾಂತರಗೊಂಡಿರುವ ಟೂರ್ನಿಯು ಬಿಸಿಸಿಐ ಅತಿಥ್ಯದಲ್ಲಿ ಯುಎಇ ಮತ್ತು ಒಮಾನ್‌ನಲ್ಲಿ ಆಯೋಜನೆಗೊಂಡಿದೆ.

ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಒಮನ್ ತಂಡವು ಪಪುವಾ ನ್ಯೂಗಿನಿಯಾವನ್ನು ಎದುರಿಸಲಿದೆ. ಹಾಗೆಯೇ ಇಂದಿನ ಮತ್ತೊಂದು ಹಣಾಹಣಿಯಲ್ಲಿ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್ ತಂಡಗಳು ಕಣಕ್ಕಿಳಿಯಲಿವೆ.

t20 world cup to start from today
T20 World Cup: ಪಂದ್ಯಗಳ ವಿವರ

ವಿಶ್ವಕಪ್‌ನಲ್ಲಿ ಈ ಬಾರಿ ಗರಿಷ್ಠ 16 ತಂಡಗಳು ಭಾಗವಹಿಸುತ್ತಿದ್ದು, ಎರಡು ಸುತ್ತುಗಳಲ್ಲಿ ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಅರ್ಹತಾ ಪಂದ್ಯಗಳಿದ್ದು, 8 ತಂಡಗಳು ಎರಡು ಗುಂಪುಗಳಲ್ಲಿ ವಿಂಗಡಿಸಲ್ಪಟ್ಟಿದ್ದು, 12 ಪಂದ್ಯಗಳು ನಡೆಯಲಿವೆ. ಎ ಗ್ರೂಪ್​​ನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಮೀಬಿಯಾ ಹಾಗೂ ಬಿ ಗ್ರೂಪ್​ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಓಮನ್ ಎದುರಾಗಲಿವೆ.

ಅಲ್ ಅಮರತ್, ಶಾರ್ಜಾ, ದುಬೈ ಮತ್ತು ಅಬುಧಾಬಿಯಲ್ಲಿ ಈ ಪಂದ್ಯಗಳಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಮುಂದಿನ ಸುತ್ತು ಅಂದರೆ ಸೂಪರ್​​-12ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಸೂಪರ್​​-12ನಲ್ಲಿ ಕೂಡ 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗುಂಪು 1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಎ1, ಬಿ2 ಹಾಗೂ ಗುಂಪು 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ, ಬಿ1, ಎ2 ಇರಲಿವೆ.

'ಸೂಪರ್ 12'ರ ಹಂತದ ಪಂದ್ಯಗಳು ಅಕ್ಟೋಬರ್ 24ರಂದು ಆರಂಭವಾಗಲಿದ್ದು, ಅಂದು ಗುಂಪು 2ರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ವಿಶ್ವಕಪ್​ನ ಮೊದಲ ಸೆಮಿಫೈನಲ್​ ನ. 10ರಂದು, ಸಂಜೆ 07:30 ಗಂಟೆಗೆ ಅಬುಧಾಬಿ ಹಾಗೂ ಎರಡನೇ ಸೆಮಿಫೈನಲ್ ನವೆಂಬರ್ 11ರಂದು ಸಂಜೆ 7.30 ಗಂಟೆಗೆ ದುಬೈನಲ್ಲಿ ನಡೆಯಲಿವೆ. ನವೆಂಬರ್ 14ರಂದು ಸಂಜೆ 07:30 ಗಂಟೆಗೆ ಫೈನಲ್ ಹಣಾಹಣಿ ದುಬೈಯಲ್ಲಿದೆ.

ಸೂಪರ್‌ 12 ಹಂತದಲ್ಲಿ ಭಾರತ ತಂಡದ ಪಂದ್ಯಗಳು:

  • ಅಕ್ಟೋಬರ್‌ 24: ಭಾರತ vs ಪಾಕಿಸ್ತಾನ (ರಾತ್ರಿ: 7:30ಕ್ಕೆ, ದುಬೈ)
  • ಅಕ್ಟೋಬರ್‌ 31: ಭಾರತ vs ನ್ಯೂಜಿಲೆಂಡ್‌ (ರಾತ್ರಿ: 7:30ಕ್ಕೆ, ದುಬೈ)
  • ನವೆಂಬರ್‌ 3: ಭಾರತ vs ಅಫ್ಘಾನಿಸ್ತಾನ (ರಾತ್ರಿ: 7:30ಕ್ಕೆ, ಅಬುಧಾಬಿ)
  • ನವೆಂಬರ್‌ 5: ಭಾರತ vs ಬಿ1 ಅರ್ಹತಾ ತಂಡ (ರಾತ್ರಿ: 7:30ಕ್ಕೆ, ದುಬೈ)
  • ನವೆಂಬರ್‌ 8: ಭಾರತ vs ಎ2 ಅರ್ಹತಾ ತಂಡ (ರಾತ್ರಿ 7:30ಕ್ಕೆ, ದುಬೈ)

ಡಿಆರ್​ಎಸ್​ಗೆ ಅವಕಾಶ:

ಮೊದಲ ಬಾರಿಗೆ ಪುರುಷರ ಟಿ 20 ವಿಶ್ವಕಪ್​ನಲ್ಲಿ ಡಿಆರ್​ಎಸ್ ಬಳಕೆಗೆ ಅನುಮತಿ ನೀಡಲಾಗಿದೆ. ಪ್ರತಿ ತಂಡವು ಪ್ರತಿ ಇನ್ನಿಂಗ್ಸ್‌ಗೆ ಗರಿಷ್ಠ ಎರಡು ವಿಮರ್ಶೆಗಳನ್ನು ಬಳಸಲು ಅವಕಾಶವಿದೆ. ಅಲ್ಲದೆ, ಪಂದ್ಯ ಟೈ ಆಗಿದ್ದರೆ, ಉಭಯ ತಂಡಗಳು ಸೂಪರ್ ಓವರ್ ಆಡಲಿವೆ. ಆ ಸೂಪರ್ ಓವರ್​​ನಲ್ಲೂ ಟೈ ಆದರೆ, ಫಲಿತಾಂಶ ಬರುವವರೆಗೂ ಸೂಪರ್ ಓವರ್ ಆಡಲು ಅವಕಾಶವಿದೆ.

t20 world cup to start from today
T20 World Cup: ಭಾರತದ ಪಂದ್ಯಗಳ ವಿವರ

ಸೆಮಿಫೈನಲ್ ಹಂತದಲ್ಲಿ ಸ್ಪಷ್ಟ ಫಲಿತಾಂಶ ಕಂಡುಬರದಿದ್ದರೆ ಸೂಪರ್ 12 ಗ್ರೂಪ್​ನಲ್ಲಿ ಅಗ್ರ ಸ್ಥಾನ ಪಡೆದವರು ಫೈನಲ್​ ಪ್ರವೇಶಿಸಲಿದ್ದಾರೆ. ಫೈನಲ್‌ನಲ್ಲೂ ಫಲಿತಾಂಶ ಸಿಗದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ತೀರ್ಮಾನಿಸಲಾಗುತ್ತದೆ.

ಪಂದ್ಯಕ್ಕೆ ಮೀಸಲು ದಿನ?

ಗ್ರೂಪ್​ ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನಗಳಿಲ್ಲ. ಸೆಮಿಫೈನಲ್ ಮತ್ತು ಫೈನಲ್‌ ಮ್ಯಾಚ್​ಗೆ ಮಾತ್ರ ಮೀಸಲು ದಿನ ನೀಡಲಾಗಿದೆ. ಹವಾಮಾನ ತೊಂದರೆಯಿಂದ ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಮೀಸಲು ದಿನದಂದು ಆಡಿಸಲಾಗುತ್ತದೆ.

ವಿಶ್ವಕಪ್ ವಿಜೇತರಿಗೆ 12.02 ಕೋಟಿ ರೂ. ಹಾಗೂ ಮತ್ತು ರನ್ನರ್​​ ಅಪ್​ ತಂಡವು 6 ಕೋಟಿ ರೂ. ಬಹುಮಾನ ಪಡೆಯಲಿವೆ. ಅಲ್ಲದೆ, ಸೆಮಿಫೈನಲ್​ ತಲುಪಿದವರಿಗೆ ತಲಾ 3 ಕೋಟಿ ರೂ. ಸಿಗಲಿದೆ. ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿವೆ. ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.

ಇದನ್ನೂ ಓದಿ: T20 World Cup: ಅಕ್ಟೋಬರ್‌ 24 ರಂದು ಭಾರತ-ಪಾಕ್‌ ಹಣಾಹಣಿ: ಮುಂದಿನ ಪಂದ್ಯಗಳ ವಿವರ ಇಲ್ಲಿದೆ..

Last Updated :Oct 17, 2021, 4:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.