ETV Bharat / sports

ODI World Cup: ಭಾರತ-ಪಾಕ್ ಸೇರಿ 8 ಪಂದ್ಯಗಳ ದಿನ ಬದಲು; ಇದೇ 15ರಿಂದ ಟಿಕೆಟ್​ ಬುಕ್ಕಿಂಗ್​ ಶುರು

author img

By

Published : Aug 9, 2023, 7:41 PM IST

Updated : Aug 9, 2023, 8:14 PM IST

ICC revise ODI World Cup fixtures: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌​ ವೇಳಾಪಟ್ಟಿಯಲ್ಲಿ ಎಂಟು ಪಂದ್ಯಗಳ ಬದಲಾವಣೆಯಾಗಿದೆ. ಬೆಂಗಳೂರಿನ ಮೈದಾನದಲ್ಲಿ ಭಾರತ- ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಒಂದು ದಿನ ಮುಂದೂಡಲಾಗಿದೆ.

ICC World Cup
ICC World Cup

ದುಬೈ: ಗುಜರಾತ್‌ನ ಅಹಮದಾಬಾದ್​ನಲ್ಲಿ ನಡೆಯುವ ಭಾರತ-ಪಾಕಿಸ್ತಾನ ಪಂದ್ಯ ಸೇರಿದಂತೆ ಒಟ್ಟು ಎಂಟು ಪಂದ್ಯಗಳ ದಿನ ಬದಲಾಗಿದ್ದು, ಹೊಸ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆಗೊಳಿಸಿತು. ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ವೇಳಾಪಟ್ಟಿಯ ಬದಲಾವಣೆಯ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದರು. ರಾಜ್ಯಗಳ ಕ್ರಿಕೆಟ್​ ಸಂಸ್ಥೆಗಳು, ಹಬ್ಬದಂದು ಕ್ರಿಕೆಟ್ ಪಂದ್ಯಗಳು ನಡೆದರೆ ಭದ್ರತಾ ಸಮಸ್ಯೆ ಉಂಟಾಗುವ ಸಮಸ್ಯೆಯಿದೆ ಎಂದು ಮನವಿ ಮಾಡಿದ್ದವು.

  • Nine fixtures have been rescheduled for #CWC23.

    Details 👇

    — ICC (@ICC) August 9, 2023 " class="align-text-top noRightClick twitterSection" data=" ">

ಅದರಂತೆ, ಭಾರತ- ಪಾಕಿಸ್ತಾನದ ನಡುವಿನ ಪಂದ್ಯ ಈ ಹಿಂದೆ ಅಕ್ಟೋಬರ್ 15ರ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಈ ಪಂದ್ಯ ಒಂದು ದಿನ ಮುಂಚಿತವಾಗಿ ಅಕ್ಟೋಬರ್ 14ರಂದು ಶನಿವಾರ ಅದೇ ಮೈದಾನದಲ್ಲಿ ನಡೆಯಲಿದೆ. ಇದರ ಪರಿಣಾಮವಾಗಿ, ಅಕ್ಟೋಬರ್​ 14ರ ಶನಿವಾರ ದೆಹಲಿಯಲ್ಲಿ ಅಫ್ಘಾನಿಸ್ತಾನ- ಇಂಗ್ಲೆಂಡ್ ನಡುವಿನ ಪಂದ್ಯ ಅಕ್ಟೋಬರ್ 15 ರ ಭಾನುವಾರ ನಡೆಯಲಿದೆ.

ಹೈದರಾಬಾದ್‌ನಲ್ಲಿ ಅಕ್ಟೋಬರ್​ 10ರಂದು ನಡೆಯಬೇಕಿದ್ದ ಶ್ರೀಲಂಕಾ- ಪಾಕಿಸ್ತಾನ ಪಂದ್ಯ ಎರಡು ದಿನ ಮುನ್ನ ಅಂದರೆ, ಅಕ್ಟೋಬರ್ 10ರಂದು ನಿಗದಿಯಾಗಿದೆ. ಹೀಗಾಗಿ, ಅಕ್ಟೋಬರ್‌ 13ರಂದು ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ಪಂದ್ಯ 24 ಗಂಟೆ ಮುಂಚಿತವಾಗಿ, 12ರಂದೇ ನಡೆಯಬೇಕಿದೆ.

ಅಕ್ಟೋಬರ್ 14ರಂದು ಚೆನ್ನೈನಲ್ಲಿ ನಡೆಯಲಿದ್ದ ಬಾಂಗ್ಲಾದೇಶದ-ನ್ಯೂಜಿಲೆಂಡ್‌ ಪಂದ್ಯ ಅಕ್ಟೋಬರ್ 13 ಶುಕ್ರವಾರ ನಡೆಯಲಿದೆ. ಅಕ್ಟೋಬರ್​​ 10ರಂದು ಧರ್ಮಶಾಲಾದಲ್ಲಿ ನಡೆಯುವ ಬಾಂಗ್ಲಾದೇಶ-ಇಂಗ್ಲೆಂಡ್‌ ನಡುವಿನ ಪಂದ್ಯದ ಸಮಯ ಬದಲಾಗಿದ್ದು, ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ನಿಗದಿಯಾಗಿದೆ.

ಲೀಗ್​ನ ಕೊನೆಯ ಮೂರು ಪಂದ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ. ನವೆಂಬರ್​ 11ರಂದು ಭಾರತ- ನೆದರ್ಲ್ಯಾಂಡ್ಸ್ ಬೆಂಗಳೂರಿನಲ್ಲಿ ಆಡಬೇಕಿದ್ದ ಪಂದ್ಯ 12ರಂದು ನಡೆಯಲಿದೆ. ಭಾನುವಾರ ಇದ್ದ ಡಬಲ್​ ಹೆಡರ್​ ಪಂದ್ಯಗಳು ಶನಿವಾರ ನಡೆಯುತ್ತವೆ. ಅದರಂತೆ, ಬೆಳಗ್ಗೆ 10:30ಕ್ಕೆ ಪುಣೆಯಲ್ಲಿ ಆಸ್ಟ್ರೇಲಿಯಾ- ಬಾಂಗ್ಲಾದೇಶ, ಮಧ್ಯಾಹ್ನ 2ಕ್ಕೆ ಕೋಲ್ಕತ್ತಾದಲ್ಲಿ ಇಂಗ್ಲೆಂಡ್​-ಪಾಕಿಸ್ತಾನ ಪಂದ್ಯಗಳು ನಡೆಯಲಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2019ರ ಫೈನಲಿಸ್ಟ್‌ಗಳಾದ ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳು (ಅಕ್ಟೋಬರ್ 5ರ ಗುರುವಾರ) ವಿಶ್ವಕಪ್ ಮೊದಲ ಪಂದ್ಯ ಆಡಲಿವೆ. ಇದೇ ಮೈದಾನದಲ್ಲಿ ನವೆಂಬರ್ 19ರ ಭಾನುವಾರ ಫೈನಲ್‌ ನಡೆಯಲಿದೆ.

ಟಿಕೆಟ್​ ಬುಕ್ಕಿಂಗ್​ ಯಾವಾಗ? : ಐಸಿಸಿ ಟಿಕೆಟ್​ ಬುಕ್ಕಿಂಗ್​ ದಿನಾಂಕ ಪ್ರಕಟಿಸಿದೆ. ಆಗಸ್ಟ್ 15ರಿಂದ ಐಸಿಸಿ ವೆಬ್​ಸೈಟ್​ನಲ್ಲಿ ಟಿಕೆಟ್‌ಗಳು ಲಭ್ಯ ಎಂದು ತಿಳಿಸಿದೆ. ಆಗಸ್ಟ್ 25 ರಿಂದ ಭಾರತೇತರ ಅಭ್ಯಾಸ ಪಂದ್ಯಗಳು ಮತ್ತು ಎಲ್ಲ ಭಾರತೇತರ ಈವೆಂಟ್ ಪಂದ್ಯಗಳ ಟಿಕೆಟ್​ ಮಾರಾಟ ನಡೆಯಲಿದೆ.

ಆಗಸ್ಟ್ 30 - ಗುವಾಹಟಿ ಮತ್ತು ತಿರುವನಂತಪುರದಲ್ಲಿ ಭಾರತದ ಪಂದ್ಯದ ಟಿಕೆಟ್ ಮಾರಾಟ​

ಆಗಸ್ಟ್ 31 - ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿನ ಭಾರತ ಪಂದ್ಯದ ಟಿಕೆಟ್​ ಮಾರಾಟ

ಸೆಪ್ಟೆಂಬರ್ 1 - ಧರ್ಮಶಾಲಾ, ಲಕ್ನೋ ಮತ್ತು ಮುಂಬೈನಲ್ಲಿ ಭಾರತ ಪಂದ್ಯಗಳ ಟಿಕೆಟ್ ಮಾರಾಟ​

ಸೆಪ್ಟೆಂಬರ್ 2 - ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಭಾರತ ಪಂದ್ಯದ ಟಿಕೆಟ್ ಮಾರಾಟ​

ಸೆಪ್ಟೆಂಬರ್ 3 - ಅಹಮದಾಬಾದ್‌ನಲ್ಲಿನ ಭಾರತ ಪಂದ್ಯದ ಟಿಕೆಟ್ ಮಾರಾಟ​

ಸೆಪ್ಟೆಂಬರ್​ 15 - ಸೆಮಿಫೈನಲ್, ಫೈನಲ್ ಟಿಕೆಟ್​ ಮಾರಾಟ

ಇದನ್ನೂ ಓದಿ: ICC ODI Rankings: ಗಿಲ್​, ಕಿಶನ್‌ಗೆ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಸಿಹಿ ಸುದ್ದಿ!

Last Updated :Aug 9, 2023, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.