ETV Bharat / sports

ವಿಶ್ವಕಪ್‌ ಫೈನಲ್ ನಡೆದ ಅಹಮದಾಬಾದ್​ ಪಿಚ್ 'ಸಾಮಾನ್ಯ', ವಾಂಖೆಡೆ 'ಉತ್ತಮ': ಐಸಿಸಿ ರೇಟಿಂಗ್ ​​

author img

By PTI

Published : Dec 8, 2023, 4:14 PM IST

ICC Pitch Rating: ಏಕದಿನ ಕ್ರಿಕೆಟ್ ವಿಶ್ವಕಪ್​​ ಸೆಮೀಸ್​ ಮತ್ತು ಫೈನಲ್​ ಪಂದ್ಯದ ಪಿಚ್​​ಗಳ ರೇಟಿಂಗ್​ ಅನ್ನು ಐಸಿಸಿ ಬಿಡುಗಡೆ ಮಾಡಿದೆ.

ICC rates Ahmedabad pitch
ICC rates Ahmedabad pitch

ಹೈದರಾಬಾದ್: ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್ ಆವೃತ್ತಿಗಳ ಪಿಚ್ ರೇಟಿಂಗ್‌ ಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆಗೊಳಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದ ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್​ಗೆ 'ಸಾಮಾನ್ಯ' ಎಂದು ರೇಟಿಂಗ್ ಕೊಟ್ಟಿದೆ.

ಫೈನಲ್​ ಪಂದ್ಯ ಸ್ವಾರಸ್ಯಕರ ಆಗಿರಲಿಲ್ಲ. ಪಂದ್ಯ ಹೆಚ್ಚೂ ಕಡಿಮೆ ಆಸ್ಟ್ರೇಲಿಯಾದ ಕಡೆ ವಾಲಿತ್ತು. ಆಸೀಸ್​ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಾಗ ಪಿಚ್​ ಬೌಲರ್​​ಗಳಿಗೆ ಸಹಕಾರಿಯಾಗಿ ವರ್ತಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ​ ಸಂಪೂರ್ಣ ಬ್ಯಾಟಿಂಗ್‌ಸ್ನೇಹಿ ಆಗಿ ಕಂಡು ಬಂತು. ಹೀಗಾಗಿ ಏಕಪಕ್ಷೀಯ ಪಂದ್ಯವಾಗಿತ್ತು.

ಆಸ್ಟ್ರೇಲಿಯಾ ನಿಧಾನಗತಿಯ ವಿಕೆಟ್‌ನಲ್ಲಿ ಮೊದಲು ಬೌಲಿಂಗ್ ಆಯ್ಕೆ ಮಾಡಿ ಭಾರತವನ್ನು 240 ರನ್‌ಗಳಿಗೆ ಆಲ್​ಔಟ್​ ಮಾಡಿತು. ಈ ಗುರಿಯನ್ನು ಆಸೀಸ್ 43 ಓವರ್‌ಗಳಲ್ಲಿ ತಲುಪಿತು. ಟ್ರಾವಿಸ್ ಹೆಡ್ ಎರಡನೇ ಇನ್ನಿಂಗ್ಸ್‌ನಲ್ಲಿ 137 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಐಸಿಸಿ ಮ್ಯಾಚ್ ರೆಫರಿ ಮತ್ತು ಮಾಜಿ ಜಿಂಬಾಬ್ವೆ ಬ್ಯಾಟರ್ ಆ್ಯಂಡಿ ಪೈಕ್ರಾಫ್ಟ್ ಪಿಚ್​ಗೆ 'ಸಾಮಾನ್ಯ' ಎಂದು ರೇಟ್ ಮಾಡಿದ್ದಾರೆ.

ಸೆಮೀಸ್​ ಪಿಚ್​: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ಪಿಚ್​​ಗೂ ಸಾಮಾನ್ಯ ಎಂಬ ರೇಟಿಂಗ್​ ನೀಡಲಾಗಿದೆ. ಈ ಪಂದ್ಯ ಹೆಚ್ಚು ಸ್ವಾರಸ್ಯಕರವಾಗಿತ್ತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗಿಳಿದ ಹರಿಣಗಳ ಮೇಲಿನ ಕ್ರಮಾಂಕ ಬೇಗ ಕುಸಿತ ಅನುಭವಿಸಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಿಲ್ಲರ್​ ಶತಕ ದಾಖಲಿಸಿದ್ದರಿಂದ 212 ರನ್​ಗಳ ಸಾಧಾರಣ ಗುರಿಯನ್ನು ಆಸೀಸ್ ಎದುರಿಸಿತು. ದಕ್ಷಿಣ ಆಫ್ರಿಕಾ ಬಿಗಿಯಾದ ಬೌಲಿಂಗ್​ ಹೋರಾಟ ನಡೆಸಿತಾದರೂ 2.4 ಓವರ್​ ಮತ್ತು 3 ವಿಕೆಟ್​ ಉಳಿಸಿಕೊಂಡು ಆಸ್ಟ್ರೇಲಿಯಾ ಪಂದ್ಯ ಗೆದ್ದು ಫೈನಲ್​​ ಪ್ರವೇಶಿಸಿತ್ತು. ಇಷ್ಟು ರೋಚಕ ಪಂದ್ಯ ನಡೆದ ಪಿಚ್​ಗೆ ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ 'ಸಾಮಾನ್ಯ' ಎಂಬ ರೇಟಿಂಗ್​ ಕೊಟ್ಟಿದ್ದಾರೆ.

ವಾಂಖೆಡೆಗೆ ಉತ್ತಮ ರೇಟಿಂಗ್​: ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ನಡೆದ ಮೊದಲ ಸೆಮೀಸ್​ ಪಂದ್ಯಕ್ಕೆ 'ಉತ್ತಮ' ಎಂಬ ರೇಟಿಂಗ್​ ನೀಡಲಾಗಿದೆ. ಈ ಪಂದ್ಯ ಬೃಹತ್​ ಸ್ಕೋರ್​ ಕಂಡಿತ್ತು ಮತ್ತು ಭಾರತ 70 ರನ್​ನಿಂದ ಗೆದ್ದು ಫೈನಲ್​ಗೆ ಸ್ಥಾನ ಮಾಡಿಕೊಂಡಿತ್ತು. ವಾಂಖೆಡೆ ಮೈದಾನದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​ ಶತಕದ ನೆರವಿನಿಂದ 398 ರನ್​ಗಳ ಗುರಿ ನೀಡಿದರೆ, ಡೇರಿಯಲ್​ ಮಿಚೆಲ್​ ಶತಕದ ಹೊರತಾಗಿಯೂ 327 ಸರ್ವಪತನ ಕಂಡ ಕಿವೀಸ್​ 70 ರನ್​ಗಳಿಂದ ಸೋಲನುಭವಿಸಿತ್ತು.

2023ರ ಭಾರತ ಆಡಿದ 11 ಪಂದ್ಯಗಳಲ್ಲಿ ಹೆಚ್ಚಿನ ಪಿಚ್​ಗಳು ಸಾಮಾನ್ಯ ಎಂಬ ರೇಟಿಂಗ್​ ಪಡೆದುಕೊಂಡಿದೆ. ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ, ಅಹಮದಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳು ಸಾಮಾನ್ಯ ಎಂಬ ರೇಟಿಂಗ್​ ಗಳಿಸಿದ ಪಿಚ್​ಗಳು.

ಇದನ್ನೂ ಓದಿ: 'ಮೈದಾನದಲ್ಲಿ ​ನನ್ನನ್ನು ಫಿಕ್ಸರ್ ಎಂದು ಕರೆದರು': ಗಂಭೀರ್​ ಜೊತೆಗಿನ ವಾಗ್ವಾದದ ಬಗ್ಗೆ ಶ್ರೀಶಾಂತ್​ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.