ETV Bharat / sports

ಸ್ಯಾಂಟ್ನರ್‌ ದಾಳಿಗೆ ತತ್ತರಿಸಿದ ನೆದರ್ಲೆಂಡ್‌; ಕಿವೀಸ್​ಗೆ 99 ರನ್​​ಗಳ ಭರ್ಜರಿ ಗೆಲುವು

author img

By ETV Bharat Karnataka Team

Published : Oct 9, 2023, 10:06 PM IST

ವಿಶ್ವಕಪ್​ ಕ್ರಿಕೆಟ್‌ನ ಲೀಗ್​ ಹಂತದ ಸತತ ಎರಡು ಪಂದ್ಯಗಳನ್ನು ಉತ್ತಮ ರನ್​ರೇಟ್​ನಿಂದ ನ್ಯೂಜಿಲೆಂಡ್​ ಜಯಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

New Zealand
New Zealand

ಹೈದರಾಬಾದ್​ (ತೆಲಂಗಾಣ): ಸತತ ಎರಡು ವಿಶ್ವಕಪ್​​ನಲ್ಲಿ ರನ್ನರ್‌ಅಪ್ ಆಗಿರುವ​ ನ್ಯೂಜಿಲೆಂಡ್​ ತಂಡ ಈ ಬಾರಿ ಆರಂಭದಿಂದಲೇ ಪ್ರಬಲ ತಂಡವಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಮುಖ ಆಟಗಾರರ ಹೊರತಾಗಿಯೂ ಲೀಗ್​ನಲ್ಲಿ ಸತತ ಎರಡು ಪಂದ್ಯಗಳನ್ನು ಉತ್ತಮ ರನ್​ರೇಟ್​ನಿಂದ ಜಯಿಸಿದೆ. ಇಂದು ನಡೆದ ನೆದರ್ಲೆಂಡ್‌​ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಟ್ ಹೆನ್ರಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದು ಕಿವೀಸ್​ 99 ರನ್​ಗಳ ಅಂತರದ ಗೆಲುವಿ ಪಡೆಯಿತು. ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ ತಂಡ ಅಗ್ರಸ್ಥಾನ ಉಳಿಸಿಕೊಂಡಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್​ ಗೆದ್ದ ಡಚ್ಚರು ಮೊದಲು ಕ್ಷೇತ್ರ ರಕ್ಷಣೆಗೆ ಮುಂದಾದರು. ಮೊದಲು ಬ್ಯಾಟ್​​ ಮಾಡಿದ ಕಿವೀಸ್​ 323 ರನ್‌ಗಳ ಬೃಹತ್​ ಗುರಿಯನ್ನು ನೆದರ್ಲೆಂಡ್‌ಗೆ ನೀಡಿದರು. ಈ ಗುರಿಯನ್ನು ಬೆನ್ನತ್ತಿದ ಡಚ್ಚರಿಗೆ ಬೃಹತ್​ ಜೊತೆಯಾಟದ ಕೊರತೆ ಕಾಡಿತು. ಇದು ಅಂತಿಮವಾಗಿ ಪಂದ್ಯದ ಸೋಲಿಗೆ ಕಾರಣವಾಯಿತು. ಪಾಕಿಸ್ತಾನದ ವಿರುದ್ಧವೂ ದೊಡ್ಡ ಪಾಲುದಾರಿಕೆ ಮಾಡುವಲ್ಲಿ ಎಡವಿದ ತಂಡ ಸೋಲನುಭವಿಸಿತು. ಸತತ ಎರಡು ಸೋಲು ಕಂಡ ನೆದರ್ಲೆಂಡ್‌​ ಅಂಕಪಟ್ಟಿಯ ಕೊನೆಗೆ ಜಾರಿತು.

ಕಿವೀಸ್​ ವಿರುದ್ಧ ಡಚ್ಚರು ಉತ್ತಮ ಹೋರಾಟ ತೋರಿದರು. 46.3 ಓವರ್‌ಗವರೆಗೆ ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್ ಮತ್ತು ರಚಿನ್​ ರವೀಂದ್ರ ಅವರಂತಹ ಟಾಪ್​ ಕ್ಲಾಸ್​ ಬೌಲರ್​ಗಳನ್ನು ಯಶಸ್ವಿಯಾಗಿ ಎದುರಿಸಿ 223 ರನ್​ಗಳಿಸಿದರು. 'ಕ್ರಿಕೆಟ್​ ಶಿಶು' ಎಂದು ಕರೆಸಿಕೊಳ್ಳುವ ನೆದರ್ಲೆಂಡ್‌​ ಕಿವೀಸ್​ ವಿರುದ್ಧ ನೀಡಿದ ಈ ಪ್ರದರ್ಶನ ಸೋಲಿನಲ್ಲೂ ಮೆಚ್ಚುವಂತಿತ್ತು.

ತಂಡದಲ್ಲಿ ಆರಂಭದಿಂದ ಜೊತೆಯಾಟ ನಿರ್ಮಾಣವಾಗಲಿಲ್ಲ. ಕಾಲಿನ್ ಅಕರ್ಮನ್ 69 ರನ್​ಗಳ ಇನ್ನಿಂಗ್ಸ್​ ಕಟ್ಟಿದ್ದು ಬಿಟ್ಟರೆ ಬಾಕಿ ಆಟಗಾರರು ಕಿವೀಸ್​ ದಾಳಿಯ ಮುಂದೆ ವಿಕೆಟ್​ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರು. ಸ್ಕಾಟ್ ಎಡ್ವರ್ಡ್ಸ್ (30), ಸೈಬ್ರಾಂಡ್ ಎಂಗಲ್ಬ್ರೆಕ್ಟ್ (29) ಮತ್ತು ತೇಜ ನಿಡಮನೂರು (21) ಮಧ್ಯಮ ಕ್ರಮಾಂಕದಲ್ಲಿ ಕಿವೀಸ್​ಗೆ ಪ್ರತಿರೋಧ ಒಡ್ಡಿದ್ದು ಬಿಟ್ಟರೆ ಮತ್ತಾರೂ ರನ್​ ಗಳಿಸುವಲ್ಲಿ ಸಫಲರಾಗಲಿಲ್ಲ.

ಸ್ಯಾಂಟ್ನರ್‌ಗೆ 5 ವಿಕೆಟ್ ಗುಚ್ಚ: ನ್ಯೂಜಿಲೆಂಡ್​ ಪರ ಸ್ಯಾಂಟ್ನರ್​​ ಐದು ವಿಕೆಟ್​ ಕಿತ್ತು ಸ್ಟಾರ್​ ಆದರು. ಈ ಮೂಲಕ 2023 ವಿಶ್ವಕಪ್​ನಲ್ಲಿ ಐದು ವಿಕೆಟ್​ ಪಡೆದ ಮೊದಲ ಬೌಲರ್​ ಎನಿಸಿಕೊಂಡರು. ವಿಶ್ವಕಪ್​ನಲ್ಲಿ 5 ವಿಕೆಟ್​ ಕಿತ್ತ ಮೂರನೇ ಎಡಗೈ ಸ್ಪಿನ್ನರ್​ ಎಂಬ ಪಟ್ಟಿಗೂ ಸೇರ್ಪಡೆಯಾದರು. ಈ ಮೊದಲು ಯುವರಾಜ್​ ಸಿಂಗ್​ (2011), ಶಕೀಬ್​ ಅಲ್​ ಹಸನ್​ (2019) ಈ ಸಾಧನೆ ಮಾಡಿದ್ದರು. ಉಳಿದಂತೆ, ಮ್ಯಾಟ್​ ಹೆನ್ರಿ 3 ಮತ್ತು ರಚಿನ್​ ರವೀಂದ್ರ 1 ವಿಕೆಟ್​ ಕಬಳಿಸಿದರು. ಪಂದ್ಯದಲ್ಲಿ ಐದು ವಿಕೆಟ್​ ಪಡೆದ ಸ್ಯಾಂಟ್ನರ್​ 'ಪಂದ್ಯ ಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕೆ ಮಹೇಶ್​ ತೀಕ್ಷಣ ಸೇರ್ಪಡೆ: ಶ್ರೀಲಂಕಾ ಸಹಾಯಕ ಕೋಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.