ETV Bharat / sports

ಕೇನ್‌ ವಿಲಿಯಮ್ಸನ್, ಡೇರಿಲ್‌ ಮಿಚೆಲ್‌ ಜವಾಬ್ದಾರಿಯುತ ಆಟ; ಬಾಂಗ್ಲಾ ಮಣಿಸಿದ ನ್ಯೂಜಿಲೆಂಡ್‌ಗೆ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ವಿಜಯ

author img

By ETV Bharat Karnataka Team

Published : Oct 13, 2023, 10:15 PM IST

Cricket World Cup 2023: ಬಾಂಗ್ಲಾದೇಶದ ವಿರುದ್ಧ ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್​ 8 ವಿಕೆಟ್​ಗಳಿಂದ ಭರ್ಜರಿ ಜಯ ದಾಖಲಿಸಿತು. ​

ICC Cricket World Cup 2023
ICC Cricket World Cup 2023

ಚೆನ್ನೈ (ತಮಿಳುನಾಡು): ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅವರ ಅರ್ಧಶತಕದ ಇನ್ನಿಂಗ್ಸ್​ ನೆರವಿನಿಂದ ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಇಂದು ಬಾಂಗ್ಲಾದೇಶವನ್ನು ನ್ಯೂಜಿಲೆಂಡ್​ ತಂಡ 7.1 ಓವರ್‌ಗಳಿರುವಂತೆಯೇ​ 8 ವಿಕೆಟ್​ಗಳಿಂದ ಮಣಿಸಿತು. ವಿಶ್ವಕಪ್​ ಲೀಗ್‌ ಪಂದ್ಯಗಳಲ್ಲಿ ಹ್ಯಾಟ್ರಿಕ್​​ ಗೆಲುವು ದಾಖಲಿಸುವ ಮೂಲಕ ನ್ಯೂಜಿಲೆಂಡ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.

2019ರಲ್ಲಿ ಉತ್ತಮ ಪ್ರದರ್ಶನ ನೀಡಿಯೂ ರನ್ನರ್​ ಅಪ್​ಗೆ ತೃಪ್ತಿಪಟ್ಟಿದ್ದ ಕಿವೀಸ್​ ಈ ಬಾರಿ ಚೊಚ್ಚಲ ಟ್ರೋಫಿಯನ್ನು ಗೆದ್ದೇ ತೀರುತ್ತೇವೆ ಎಂದು ಪಣತೊಟ್ಟಂತೆ ಕಾಣುತ್ತಿದೆ. ಲೀಗ್​ ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಅನ್ನು ಬೃಹತ್​ ಅಂತರದಿಂದ ಮಣಿಸಿದರೆ, ಎರಡನೇ ಪಂದ್ಯದಲ್ಲಿ ನೆದ​ರ್ಲೆಂಡ್​ ವಿರುದ್ಧ ಸುಲಭ ಜಯ ದಾಖಲಿಸಿತು. ಮೂರನೇ ಪಂದ್ಯದಲ್ಲಿ ಇಂದು ಬಾಂಗ್ಲಾ ತಂಡವನ್ನು ಸೋಲಿಸಿತು.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಬಾಂಗ್ಲಾದೇಶ ಶಕೀಬ್ ಅಲ್ ಹಸನ್​, ಮುಶ್ಫಿಕರ್ ರಹೀಮ್ ಮತ್ತು ಮಹಮ್ಮದುಲ್ಲಾ ಬ್ಯಾಟಿಂಗ್​ ನೆರವಿನಿಂದ 246 ರನ್​ಗಳ ಗುರಿ ನೀಡಿತು. ಈ ಗುರಿಯನ್ನು ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಕಿವೀಸ್​ ಗೆದ್ದುಕೊಂಡಿತು.

ಮೊದಲ ಪಂದ್ಯದಲ್ಲಿ ಶತಕ ಮತ್ತು ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ಕೊಟ್ಟಿದ್ದ ರಚಿನ್ ರವೀಂದ್ರ (9) ಅವಸರದ ಹೊಡೆತಕ್ಕೆ ಕೈಹಾಕಿ ವಿಕೆಟ್​ ಕಳೆದುಕೊಂಡರು. ರವೀಂದ್ರ ವಿಕೆಟ್​ ನಂತರ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ಕೇನ್​ ವಿಲಿಯಮ್ಸನ್ ಮೈದಾನಕ್ಕಿಳಿದಿದ್ದರು. ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಕೇನ್​ ಕಳೆದೆರಡು ಪಂದ್ಯವನ್ನು ಆಡಿರಲಿಲ್ಲ.

ಹೊಸ ಬಾಲ್​ನಲ್ಲಿ ಬಾಂಗ್ಲಾ ಬೌಲರ್​ಗಳು ಇನ್​ಸ್ವಿಂಗ್​ ಮತ್ತು ಔಟ್​ ಸ್ವಿಂಗ್​ನಿಂದ ಕಾಡಿದರಾದರೂ, ಬಾಲ್​ ಹಳೆಯದಾದ ಮೇಲೆ ಕಿವೀಸ್​ ಬ್ಯಾಟರ್​​ಗಳು ತಮ್ಮ ವೈಖರಿ ತೋರಿದರು. ಪಿಚ್​ಗೆ ಸೆಟ್​​ ಆದ ಕೇನ್​ ವಿಲಿಯಮ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಜೊತೆ 80 ರನ್​ಗಳ ಜೊತೆಯಾಟ ಮಾಡಿದರು. 45 ರನ್​ ಗಳಿಸಿ ಕಾನ್ವೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಡೇರಿಲ್ ಮಿಚೆಲ್ ನಾಯಕನ ಜೊತೆ ಇನ್ನಿಂಗ್ಸ್​ ಮುಂದುವರೆಸಿದರು.

ವಿಲಿಯಮ್ಸನ್​ಗೆ ಮತ್ತೆ ಗಾಯ: ಕೇನ್​ ವಿಲಿಯಮ್ಸನ್​ 107 ಬಾಲ್​ ಎದುರಿಸಿ 78 ರನ್​ ಗಳಿಸಿ ಆಡುತ್ತಿದ್ದಾಗ ಕೈ ಬೆರಳಿಗೆ ಚೆಂಡು​ ಜೋರಾಗಿ ತಗುಲಿದ್ದರಿಂದ ಮೈದಾನದಿಂದ ಹೊರನಡೆದರು. ಈಗಾಗಲೇ ಎರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿರುವ ಕೇನ್,​ ಮುಂದಿನ ಪಂದ್ಯದ ವೇಳೆಗೆ ಚೇತರಿಸಿಕೊಂಡಲ್ಲಿ ತಂಡಕ್ಕೆ ಸಹಾಯವಾಗಲಿದೆ.

ಡೇರಿಲ್ ಮಿಚೆಲ್ ಅಬ್ಬರ: ಆರಂಭದಲ್ಲಿ ಸ್ವಿಂಗ್​ನಿಂದ ಕಾಡಿದ್ದರಿಂದ ರನ್​​ರೇಟ್​ ಒತ್ತಡ ತಂಡಕ್ಕಿತ್ತು. ಮಿಚೆಲ್​ ಮೊದಲ ಬಾಲ್ ಅ​ನ್ನು ಸಿಕ್ಸ್​ಗೆ ಅಟ್ಟುವ ಮೂಲಕ ಅಬ್ಬರಿಸುವ ಸೂಚನೆ ನೀಡಿದರು. ಅಲ್ಲದೇ ಉತ್ತಮವಾಗಿ ಸಿಕ್ಕ ಬಾಲ್​ಗಳನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸಿದರು. 67 ಬಾಲ್​ ಆಡಿದ ಮಿಚೆಲ್​ 6 ಬೌಂಡರಿ ಮತ್ತು 4ಸಿಕ್ಸ್​ನಿಂದ 89 ರನ್​ ಕಲೆಹಾಕಿ ಅಜೇಯವಾಗಿ ಉಳಿದರು.

ಲಾಕಿ ಫರ್ಗುಸನ್ 'ಪಂದ್ಯಶ್ರೇಷ್ಠ': ಬಾಂಗ್ಲಾ ಪರ ಮುಶ್ಫಿಕರ್ ರಹೀಮ್ ಮತ್ತು ಶಕೀಬ್ ಅಲ್ ಹಸನ್ ತಲಾ ಒಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. 10 ಓವರ್​ ಮಾಡಿ 4.9 ಎಕಾನಮಿ ಸಾಧಿಸಿ 3 ವಿಕೆಟ್​ ಉರುಳಿಸಿದ ಲಾಕಿ ಫರ್ಗುಸನ್ 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಶುಭ್‌ಮನ್​ ಗಿಲ್​ಗೆ 'ಐಸಿಸಿ ತಿಂಗಳ ಆಟಗಾರ' ಗೌರವ; ನಾಳೆ ಪಾಕಿಸ್ತಾನ ವಿರುದ್ಧ ಆಡಿದರೆ ನಂ.1 ಪಟ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.