ETV Bharat / sports

ICC Cricket World Cup 2023: ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ, ಆದ್ರೆ ಈ ಟೀಂಗಳು ಕೂಡ ಬಲಿಷ್ಠ... ಈಟಿವಿ ಭಾರತ್ ಸಂದರ್ಶನದಲ್ಲಿ ರವೀಂದ್ರ ಜಡೇಜಾ ಕೋಚ್

author img

By ETV Bharat Karnataka Team

Published : Oct 1, 2023, 11:09 AM IST

ICC Cricket World Cup 2023 ನಲ್ಲಿ ಟೀಂ ಇಂಡಿಯಾಗಿರುವ ಗೆಲ್ಲುವ ಅವಕಾಶ ಮತ್ತು ಟೂರ್ನಿಯಲ್ಲಿ ರವೀಂದ್ರ ಜಡೇಜಾ ತೋರುವ ಪ್ರದರ್ಶನದ ಬಗ್ಗೆ ಅವರ ಕೋಚ್ ಮಹೇಂದ್ರ ಸಿಂಗ್ ಚೌವ್ಹಾಣ್ ಅವರು ಈಟಿವಿ ಭಾರತ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

jadeja and coach
ಕೋಚ್ ಜೊತೆ ಜಡೇಜಾ

ಅಹಮದಾಬಾದ್: ಕ್ರಿಕೆಟ್ ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಶುರುವಾಗಲಿರುವ ಕ್ರಿಕೆಟ್ ಮಹಾ ಹಬ್ಬಕ್ಕೆ ಎಲ್ಲ ದೇಶಗಳ ತಂಡಗಳು ಸರ್ವ ಸನ್ನದ್ಧವಾಗಿದ್ದು, ರಣತಂತ್ರಗಳೊಂದಿಗೆ ಕಣಕ್ಕಿಳಿಯಲಿವೆ. ಇನ್ನು ಕ್ರಿಕೆಟ್ ಹಂಗಾಮ ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಪ್ರಸಕ್ತ ಸಾಲಿನ ಐಸಿಸಿ ಕ್ರಿಕೆಟ್ ವಿಶ್ವಕಪ್​ ಟೂರ್ನಿ ಆಯೋಜನೆಗೆ ಭಾರತ ಕೂಡ ಸಿದ್ಧವಾಗಿದ್ದು, ಪಂದ್ಯಗಳು ನಡೆಯಲಿರುವ ಎಲ್ಲ ಸ್ಟೇಡಿಯಂಗಳನ್ನು ಸಜ್ಜುಗೊಳಿಸಲಾಗಿದೆ. ಪಿಚ್​ಗಳು ಸ್ಪಿನ್ನರ್​ಗಳಿಗೆ ನೆರವಾಗುವುದರಿಂದ, ಟೂರ್ನಿಯಲ್ಲಿ ಸ್ಪಿನ್ನ ಬೌಲರ್​ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಟೀಂ ಇಂಡಿಯಾದ ಆಲ್​ರೌಂಡರ್ ರವೀಂದ್ರ ಜಡೇಜಾ ಅವರು ಟೂರ್ನಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಮಧ್ಯೆ ಜಡೇಜಾ ಅವರ ಬಾಲ್ಯದ ಕೋಚ್ ಮಹೇಂದ್ರ ಸಿಂಗ್ ಚೌವ್ಹಾಣ್ ಅವರು ಈಟಿವಿ ಭಾರತ ಜೊತೆ ವಿಶ್ವಕಪ್ ಕ್ರಿಕೆಟ್ ಮತ್ತು ಟೀಂ ಇಂಡಿಯಾಗಿರುವ ಗೆಲ್ಲುವ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ.

jadeja and coach
ಕೋಚ್ ಜೊತೆ ಜಡೇಜಾ

ಟೀಂ ಇಂಡಿಯಾದಲ್ಲಿ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಲ್‌ರೌಂಡರ್‌ಗಳಿದ್ದು, ಇವರು ಪ್ರಮುಖ ಓವರ್‌ಗಳಲ್ಲಿ ಚಮತ್ಕಾರ ತೋರುವ ಸಾಮರ್ಥ್ಯ ಹೊಂದಿದ್ದಾರೆ. ಇದರಿಂದಾಗಿ ಬ್ಯಾಟಿಂಗ್ ಲೈನ್‌ಅಪ್ ಸಾಕಷ್ಟು ಬಲಿಷ್ಠವಾಗಿದೆ. ಹೀಗಾಗಿ ಭಾರತ ಇತರ ತಂಡಗಳಿಂಗ ಸ್ಟ್ರಾಂಗ್ ಆಗಿದ್ದು, ಟೂರ್ನಿ ಗೆಲ್ಲುವ ಅವಕಾಶ ಹೊಂದಿದೆ. ಹಾಗೆಯೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕೂಡ ಬಲಿಷ್ಠ ಆಲ್​ರೌಂಡರ್​ಗಳನ್ನು ಹೊಂದಿದ್ದು, ಟೂರ್ನಿಯಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಇದೆ ಎಂದು ರವೀಂದ್ರ ಜಡೇಜಾ ಕೋಚ್ ಮಹೇಂದ್ರ ಸಿಂಗ್ ಚೌವ್ಹಾಣ್ ತಿಳಿಸಿದ್ದಾರೆ.

ಭಾರತ ನನ್ನ ಮೆಚ್ಚಿನ ತಂಡವಾಗಿದ್ದು, ವಿಶ್ವಕಪ್‌ ಜಯಿಸಲಿ ಎಂದು ಆಶಿಸುತ್ತೇನೆ. ಆದರೆ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ಕೂಡ ಬಲಿಷ್ಠವಾಗಿದ್ದು, ಪ್ರಬಲ ಪೈಪೋಟಿ ನೀಡಿ ಟೂರ್ನಿ ಗೆಲ್ಲುವ ಅವಕಾಶಗಳಿವೆ ಎಂದಿದ್ದಾರೆ.

ಜಡೇಜಾ ಬಗ್ಗೆ ಕೋಚ್ ಹೇಳಿದ್ದೇನು?: ರವೀಂದ್ರ ಜಡೇಜಾ ಜೊತೆಗಿನ ಆರಂಭಿಕ ದಿನಗಳನ್ನು ನೆನೆದ ಕೋಚ್, ಸದ್ಯ ಸ್ಪಿನ್ ಆಲ್​ರೌಂಡರ್ ಆಗಿರುವ ಜಡೇಜಾ ಮೊದಲು ವೇಗದ ಬೌಲರ್ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದರು ಎಂಬುದನ್ನು ಸಂದರ್ಶನದಲ್ಲಿ ಬಹಿರಂಗಪಡಿಸಿದರು.

"ಜಡೇಜಾ 8 ವರ್ಷದ ಬಾಲಕನಿದ್ದಾಗ ತಮ್ಮ ಪೋಷಕರ ಜೊತೆ ಬಂದು ನನ್ನನ್ನು ಭೇಟಿಯಾಗಿದ್ದರು. ಆಗಿನಿಂದಲೇ ಅವರಿಗೆ ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ಇತ್ತೆಂಬುದು ಸ್ಪಷ್ಟವಾಗಿತ್ತು. ಬಾಲ್ಯದಲ್ಲಿ ವೇಗದ ಬೌಲರ್ ಆಗಲು ಬಯಸಿದ್ದರು. ಆದರೆ ಅವರ ಎತ್ತರಕ್ಕೆ ಸೂಕ್ತವಾಗುವ ಹಾಗೆ ಬಳಿಕ ಸ್ಪಿನ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನತ್ತ ಗಮನ ಹರಿಸಿದರು. ಇದು ಅವರಿಗೆ ಅದ್ಭುತವಾಗಿ ವರ್ಕ್ ಆಗಿ ಸದ್ಯ ವಿಶ್ವದ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ" ಎಂದು ಶಿಷ್ಯನ ಬಗ್ಗೆ ಕೋಚ್ ಮಾತನಾಡಿದರು.

ಮೈದಾನದಲ್ಲಿ ಪ್ರದರ್ಶಿಸುವ ಚುರುಕುತನವೇ ಜಡೇಜಾರನ್ನು ಸ್ಟಾರ್ ಆಟಗಾರನನ್ನಾಗಿಸಿದೆ. ಅವರ ಚುರುಕಿನ ಬ್ಯಾಟಿಂಗ್ ಮತ್ತು ಬೌಲಿಂಗ್​ನಿಂದಲೇ ಈ ಮೊದಲು ಹಲವು ಪಂದ್ಯಗಳನ್ನು ಭಾರತ ಗೆಲ್ಲಲು ಸಾಧ್ಯವಾಗಿದೆ. ಅಲ್ಲದೆ, ಪ್ರಮುಖ ಓವರ್​ಗಳಲ್ಲಿ ಬಿರುಸಿನ ಆಟವನ್ನು ಪ್ರದರ್ಶಿಸಿರುವುದನ್ನು ನೋಡಿದ್ದೇವೆ. ಜಡೇಜಾ ಆಡುವ ಪಂದ್ಯಗಳನ್ನು ಟಿವಿಯಲ್ಲಿ ನಾನು ನೋಡುವುದಿಲ್ಲ. ಆದರೆ ಅವರ ಪ್ರದರ್ಶನದ ಬಗ್ಗೆ ಜನರಿಂದ ತಿಳಿದುಕೊಳ್ಳುತ್ತೇನೆ. ಒಂದೊಮ್ಮೆ ಕಳಪೆ ಪ್ರದರ್ಶನ ನೀಡಿರುವುದು ಗೊತ್ತಾದರೆ ಬೇಸರವಾಗುತ್ತದೆ. ಜಡೇಜಾ ಉತ್ತಮ ಫೀಲ್ಡರ್ ಎಂಬುದರಲ್ಲಿ ಸಂದೇಹವಿಲ್ಲ. ಜೊತೆಗೆ ಅವರ ಬೌಲಿಂಗ್​ನಲ್ಲಿ ಸುಧಾರಣೆ ಆಗಿದ್ದು, ತಂಡಕ್ಕೆ ನೆರವಾಗಲಿದ್ದಾರೆ ಎಂದು ಕೋಚ್ ಭರವಸೆ ವ್ಯಕ್ತಪಡಿಸಿದ್ದಾರೆ.

ಜಡೇಜಾ ನೀಡುತ್ತಿರುವ ಪ್ರದರ್ಶನ ನೋಡಿದ್ರೆ ಅವರಿಗೆ ಯಾವುದೇ ಸಲಹೆಯ ಅಗತ್ಯವಿಲ್ಲ, ಆದ್ರೆ ವಿಶ್ವಕಪ್ ಗೆಲ್ಲಬೇಕೆಂಬುದಷ್ಟೇ ನಮ್ಮ ಆಶಯ. ಜಡೇಜಾ ಜೊತೆ ಫೋನ್​ನಲ್ಲಿ ಸಂಪರ್ಕದಲ್ಲಿದ್ದೇನೆ. ಆದ್ರೆ ಅವರು ಆಗಾಗ ಸ್ಥಳೀಯ ಕ್ರಿಕೆಟಿಗರ ಬಗ್ಗೆ ಕೇಳುತ್ತಿರುತ್ತಾರೆ ಎಂದು ಕೋಚ್ ಚೌವ್ಹಾಣ್ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ: Cricket World Cup 2023: ಈ ಅವಕಾಶದ ಬಗ್ಗೆ ಅಚ್ಚರಿ ತಂದಿದೆ.. ಇದು ನನಗೆ ಕೊನೆಯ ವಿಶ್ವಕಪ್ : ರವಿಚಂದ್ರನ್ ಅಶ್ವಿನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.