ETV Bharat / sports

ವಿಶ್ವಕಪ್​ ಕ್ರಿಕೆಟ್​​: ಆಸ್ಟ್ರೇಲಿಯಾ ಭರ್ಜರಿ ಕಮ್​ಬ್ಯಾಕ್​.. ​ಪಾಕಿಸ್ತಾನಕ್ಕೆ ಸತತ ಎರಡನೇ ಸೋಲು

author img

By ETV Bharat Karnataka Team

Published : Oct 20, 2023, 10:45 PM IST

Updated : Oct 20, 2023, 11:05 PM IST

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂದಿನ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯಾ 62 ರನ್​ನಿಂದ ಮಣಿಸಿದೆ.

ICC Cricket World Cup 2023
ವಿಶ್ವಕಪ್​ ಕ್ರಿಕೆಟ್​​

ಬೆಂಗಳೂರು: ವಿಶ್ವಕಪ್​ ಕ್ರಿಕೆಟ್​ ಟೂರ್ನಿಯ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ​ ಸುಧಾರಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನವನ್ನು 62 ರನ್​ಗಳ​ ಅಂತರದಿಂದ ಮಣಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಆ್ಯಡಂ​ ಝಂಪಾ ಪಾಕಿಸ್ತಾನಿ ಬ್ಯಾಟರ್​ಗಳಿಗೆ ಕಂಠಕವಾದರು. ಪಾಕ್​ ಪರ ಆರಂಭಿಕ ಜೋಡಿಯ ದೊಡ್ಡ ಜೊತೆಯಾಟದ ಹೊರತಾಗಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಮೂಡಿಬರಲಿಲ್ಲ. ಇದರಿಂದ 45.3 ಓವರ್​ಗೆ 305ಕ್ಕೆ ಸರ್ವಪತನ ಕಂಡು ಸೋಲುಂಡಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ಡೇವಿಡ್​ ವಾರ್ನರ್​ (163) ಮತ್ತು ಮಿಚೆಲ್​ ಮಾರ್ಷ್​ (121) ಅವರ ಅಮೋಘ ಶತಕದಗಳ ನೆರವಿನಿಂದ 367 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ಆಡದ ಕಾರಣ ಸೋಲನುಭವಿಸಬೇಕಾಯಿತು.

ಆರಂಭಿಕರ ಶತಕದ ಜೊತೆಯಾಟ : ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಪಾಕಿಸ್ತಾನಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಬೆಂಗಳೂರಿನ ಮೈದಾನದಲ್ಲಿ ಲೀಲಾಜಾಲವಾಗಿ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿದರು. ಮೊದಲ ಪವರ್​ ಪ್ಲೇ ಅಂತ್ಯಕ್ಕೆ ವಿಕೆಟ್​ನಷ್ಟವಿಲ್ಲದೇ 59 ರನ್​ ಕಲೆಹಾಕಿದರು. ಈ ಜೋಡಿ ತಲಾ ಅರ್ಧಶತಕ ಗಳಿಸಿ ಸಂಭ್ರಮಿಸಿತು. 64 ರನ್​ ಗಳಿಸಿದ್ದ ಅಬ್ದುಲ್ಲಾ ಶಫೀಕ್ ಸ್ಟೋಯ್ನಿಸ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದರಿಂದ 134 ರನ್​ ಜೊತೆಯಾಟ ಅಂತ್ಯವಾಯಿತು. ಶಫೀಕ್ ಬೆನ್ನಲ್ಲೇ ಇಮಾಮ್​ ಉಲ್​ ಹಕ್​ ಸಹ 70 ರನ್​ಗೆ ಔಟಾದರು.

ಮಧ್ಯಮ ಕ್ರಮಾಂಕದ ಕುಸಿತ: ವಿಕೆಟ್​ ಕೀಪರ್​ ಮೊಹಮ್ಮದ್ ರಿಜ್ವಾನ್ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ರನ್​ ಸೇರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ನಾಯಕ ಬಾಬರ್ ಅಜಮ್​ (18) ಮತ್ತೆ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದರು. ಸೌದ್ ಶಕೀಲ್ (30), ಇಫ್ತಿಕರ್ ಅಹ್ಮದ್ (26) ಮತ್ತು ಮೊಹಮ್ಮದ್ ನವಾಜ್ (14) ಬೇಗ ವಿಕೆಟ್​ ಕೊಟ್ಟರು. ತಂಡಕ್ಕೆ ಆಸರೆಯ ಇನ್ನಿಂಗ್ಸ್​ನ್ನು ಆಡುತ್ತಿದ್ದ ರಿಜ್ವಾನ್​ ಸಹ 46 ರನ್​ಗೆ ಪೆವಿಲಿಯನ್​ ಹಾದಿ ಹಿಡಿದರು.

  • " class="align-text-top noRightClick twitterSection" data="">

ಮಧ್ಯಮ ಮತ್ತು ಕೆಳ ಕ್ರಮಾಂಕದ ಕುಸಿತ ಕಂಡ ಬಳಿಕ ಪಾಕ್​ ತಂಡ ಸೋಲಿನತ್ತ ಮುಖ ಮಾಡಿತು. ಈ ವೇಳೆ ರನ್​ರೇಟ್​ ಕುಸಿಯದಂತೆ ನೋಡಿಕೊಳ್ಳಲು ಪಾಕ್​ ಬಾಲಂಗೋಚಿಗಳು ಪ್ರಯತ್ನಿಸಿದರು. ಆದರೆ ಅವರಿಂದಲೂ ಸಂಪೂರ್ಣ ಓವರ್​​ ಆಡಲು ಸಾಧ್ಯವಾಗಲಿಲ್ಲ. 45.3 ಓವರ್​ನಲ್ಲಿ 305 ರನ್​ ಗಳಿಸಿದ್ದಾಗ ಪಾಕಿಸ್ತಾನ ಸರ್ವಪತನ ಕಂಡಿತು. ವಿಶ್ವಕಪ್​ನ ನಾಲ್ಕು ಪಂದ್ಯದಲ್ಲಿ ಪಾಕ್​ ಎರಡು ಸೋಲು ಹಾಗೂ ಎರಡು ಗೆಲುವು ಕಂಡಂತಾಯಿತು.

ಆಸ್ಟ್ರೇಲಿಯಾ ಪರ ಆ್ಯಡಂ​ ಝಂಪಾ 4 ವಿಕೆಟ್​ ಪಡೆದು ಉತ್ತಮ ಬೌಲಿಂಗ್​ ನಿರ್ವಹಣೆ ಮಾಡಿದರು. ಉಳಿದಂತೆ ಪ್ಯಾಟ್​ ಕಮಿನ್ಸ್​, ಮಾರ್ಕಸ್ ಸ್ಟೊಯ್ನಿಸ್​ ತಲಾ 2, ಸ್ಟಾರ್ಕ್​, ಜೋಶ್ ಹೇಜಲ್‌ವುಡ್ ತಲಾ ಒಂದೊಂದು ವಿಕೆಟ್​ ಪಡೆದರು. 163 ರನ್​ ಗಳಿಸಿದ ಡೇವಿಡ್​ ವಾರ್ನರ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ವಾಂಖೆಡೆ ಮೈದಾನದಲ್ಲಿ ಸಚಿನ್​ ಪ್ರತಿಮೆ ನಿರ್ಮಾಣ: ನವೆಂಬರ್​ 1ರಂದು ಅನಾವರಣ

Last Updated : Oct 20, 2023, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.