'ಕೆಲವೊಮ್ಮೆ ಮರೆತುಬಿಡುತ್ತಾರೆ': ವಿಶ್ವಕಪ್ ಫೈನಲ್ ಪಂದ್ಯಕ್ಕೆ 83ರ ಗೆಲುವಿನ ರೂವಾರಿ ಕಪಿಲ್‌ದೇವ್‌ಗಿರಲಿಲ್ಲ ಆಹ್ವಾನ

'ಕೆಲವೊಮ್ಮೆ ಮರೆತುಬಿಡುತ್ತಾರೆ': ವಿಶ್ವಕಪ್ ಫೈನಲ್ ಪಂದ್ಯಕ್ಕೆ 83ರ ಗೆಲುವಿನ ರೂವಾರಿ ಕಪಿಲ್‌ದೇವ್‌ಗಿರಲಿಲ್ಲ ಆಹ್ವಾನ
Kapil Dev: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್‌ಗೆ ನನಗೆ ಆಹ್ವಾನ ನೀಡಿರಲಿಲ್ಲ ಎಂದು ಭಾರತ ಕ್ರಿಕೆಟ್ ಮಾಜಿ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.
ಅಹಮದಾಬಾದ್(ಗುಜರಾತ್): ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಿನ್ನೆ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್‌ಗೆ ನನಗೆ ಆಹ್ವಾನ ನೀಡಿರಲಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಭಾನುವಾರ ಹೇಳಿದರು.
1983ರಲ್ಲಿ ಮೊದಲ ಬಾರಿಗೆ ಭಾರತ ವಿಶ್ವಕಪ್ ಗೆದ್ದಾಗ ತಂಡದ ನಾಯಕರಾಗಿದ್ದ ಕಪಿಲ್ ದೇವ್, ತಾವು ಆಗಿನ ತಂಡದ ಇತರೆ ಆಟಗಾರರ ಜೊತೆಗೆ ಈ ಪಂದ್ಯಕ್ಕೆ ಪ್ರಯಾಣಿಸಲು ಬಯಸಿದ್ದಾಗಿ ತಿಳಿಸಿದರು. "ನನಗೆ ಆಹ್ವಾನ ಕೊಟ್ಟಿರಲಿಲ್ಲ. ಯಾರೂ ಕೂಡಾ ಕರೆ ಮಾಡಿಲ್ಲ. ಹೀಗಾಗಿ, ನಾನು ಹೋಗಿಲ್ಲ ಅಷ್ಟೇ. 1983ರಲ್ಲಿ ನಾನು ಗೆದ್ದ ತಂಡದ ಆಟಗಾರರೊಂದಿಗೆ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಹೋಗಬೇಕೆಂದಿದ್ದೆ. ಇದು ಬಹಳ ದೊಡ್ಡ ಕಾರ್ಯಕ್ರಮ. ಅಲ್ಲಿರುವವರೆಲ್ಲರೂ ಜವಾಬ್ದಾರಿ ನಿರ್ವಹಿಸುವಲ್ಲಿ ನಿರತರಾಗಿರುತ್ತಾರೆ. ಕೆಲವೊಮ್ಮೆ ಅವರು ಮರೆತುಬಿಡುತ್ತಾರೆ" ಎಂದು ಕಪಿಲ್ ದೇವ್ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದರು.
ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರೆಂಬ ಹಿನ್ನೆಲೆಯಲ್ಲಿ ಆಹ್ವಾನಿಸಲಾಗಿತ್ತು. ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಹ್ವಾನಿಸುವುದು ಬಿಸಿಸಿಐನ ಸಂಪ್ರದಾಯ. ನಿನ್ನೆ ಪಂದ್ಯ ವೀಕ್ಷಣೆ ವೇಳೆ ಹಾಜರಿದ್ದ ಇತರೆ ಗಣ್ಯರಲ್ಲಿ ಶಾರೂಕ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಕೂಡ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದರು.
ಇನ್ನೊಂದೆಡೆ, ಕಪಿಲ್ ದೇವ್ ಅವರ ಈ ಹೇಳಿಕೆಯ ನಂತರ ವಿವಾದ ತೀವ್ರಗೊಂಡಿದೆ. ಕಪಿಲ್ ವಿಶ್ವ ವಿಜೇತ ನಾಯಕ. ಅವರನ್ನು ಈ ರೀತಿ ಕರೆಯದಿರುವುದು ಅವಮಾನಕರ. ಟೀಂ ಇಂಡಿಯಾದಲ್ಲಿ ಕ್ರಿಕೆಟ್ ಆಡಲು ಉತ್ತಮ ಸೌಲಭ್ಯಗಳಿಲ್ಲದ ಹಾಗೂ ಭಾರತೀಯ ಕ್ರಿಕೆಟ್ ಮಂಡಳಿಗೆ ಹಣವಿಲ್ಲದ ಸಮಯದಲ್ಲಿ ಅವರು ದೇಶವನ್ನು ವಿಶ್ವ ಚಾಂಪಿಯನ್ ಮಾಡಿದರು. ವಿಶ್ವವಿಜೇತ ನಾಯಕನೊಂದಿಗೆ ಬಿಸಿಸಿಐನ ಇಂತಹ ವರ್ತನೆ ಖಂಡನೀಯ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: 'ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ; ನೀವು ದೇಶಕ್ಕೆ ಹಮ್ಮೆ ತಂದಿದ್ದೀರಿ': ಟೀಂ ಇಂಡಿಯಾಗೆ ಧೈರ್ಯ ತುಂಬಿದ ಶಾರುಖ್ ಖಾನ್
ಭಾರತ ಕ್ರಿಕೆಟ್ ತಂಡ ಇದುವರೆಗೆ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದಿದೆ. 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಯಿತು. ಬಳಿಕ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಎರಡನೇ ಬಾರಿಗೆ ಭಾರತ ವಿಶ್ವಕಪ್ ಮುಡಿಗೇರಿಸಿಕೊಂಡಿತು. ಪ್ರಸ್ತುತ, ನಿನ್ನೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವಕಪ್ 2023 ರ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿದ್ದು, ಆಸ್ಟ್ರೇಲಿಯಾ ಜಯ ಗಳಿಸಿದೆ.
