ETV Bharat / sports

ಟೀಂ ಇಂಡಿಯಾ ಐತಿಹಾಸಿಕ ಗೆಲುವಿನ ಕನಸು ಭಗ್ನ.. ಟೆಸ್ಟ್​ ಸರಣಿ 2-2 ಅಂತರದಲ್ಲಿ ಡ್ರಾ

author img

By

Published : Jul 5, 2022, 4:37 PM IST

ಜೋ ರೂಟ್​ ಮತ್ತು ಬೈರ್​ಸ್ಟೋ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ 7 ವಿಕೆಟ್​​ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಭಾರತದ ಐತಿಹಾಸಿಕ ಗೆಲುವಿನ ಕನಸು ಭಗ್ನಗೊಂಡಿದೆ.

England win against India
England win against India

ಬರ್ಮಿಂಗ್​ಹ್ಯಾಮ್​​: ಬರೋಬ್ಬರಿ 15 ವರ್ಷಗಳ ಬಳಿಕ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಕನಸು ಕಾಣುತ್ತಿದ್ದ ಭಾರತದ ಆಸೆ ಭಗ್ನಗೊಂಡಿದೆ. ಮರುನಿಗದಿಯಾಗಿದ್ದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಬಳಗ ಸೋಲು ಕಾಣುವ ಮೂಲಕ ಐದು ಟೆಸ್ಟ್​ ಪಂದ್ಯಗಳ ಸರಣಿ 2-2 ಅಂತರದಲ್ಲಿ ಮುಕ್ತಾಯಗೊಂಡಿದೆ.

ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಮೊದಲ ಮೂರು ದಿನ ಭಾರತ ಮೆಲುಗೈ ಸಾಧಿಸಿದ್ರೂ, ಕೊನೆಯ ಎರಡು ದಿನ ಪಂದ್ಯವನ್ನ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಆತಿಥೇಯ ಇಂಗ್ಲೆಂಡ್ 7 ವಿಕೆಟ್​​ಗಳ ಅಂತರದ ಗೆಲುವಿನ ನಗೆ ಬೀರಿದೆ. ಈ ಮೂಲಕ ಸರಣಿ ಸೋಲಿನಿಂದ ಪಾರಾಗಿದೆ.

ಇಂಗ್ಲೆಂಡ್​ ವಿರುದ್ಧ ಟಾಸ್​ ಸೋತು ಮೊದಲ ಇನ್ನಿಂಗ್ಸ್​​ನಲ್ಲಿ ಬ್ಯಾಟ್​ ಬೀಸಿದ್ದ ಟೀಂ ಇಂಡಿಯಾ ರಿಷಭ್ ಪಂತ್​​(146) ಹಾಗೂ ರವೀಂದ್ರ ಜಡೇಜಾ(104)ರನ್​ಗಳ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 416ರನ್​ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಮಾಡಿದ್ದ ಇಂಗ್ಲೆಂಡ್​ ಬೈರ್​ ಸ್ಟೋ(106)ರನ್​ಗಳ ನೆರವಿನಿಂದ 284ರನ್​ಗಳಿಕೆ ಮಾಡಿತ್ತು. ಹೀಗಾಗಿ, ಟೀಂ ಇಂಡಿಯಾ 132ರನ್​ಗಳ ಮುನ್ನಡೆ ಪಡೆದುಕೊಂಡಿತ್ತು.

ಎರಡನೇ ಇನ್ನಿಂಗ್ಸ್​​ನಲ್ಲಿ ಭಾರತ ಕಳಪೆ ಬ್ಯಾಟಿಂಗ್: ಇಂಗ್ಲೆಂಡ್ ಮಾರಕ ಬೌಲಿಂಗ್ ದಾಳಿಗೆ ಎರಡನೇ ಇನ್ನಿಂಗ್ಸ್​​ನಲ್ಲಿ ಸಂಪೂರ್ಣವಾಗಿ ತತ್ತರಿಸಿದ ಭಾರತ ತಂಡ 10ವಿಕೆಟ್​ ನಷ್ಟಕ್ಕೆ 245ರನ್​​ಗಳಿಕೆ ಮಾಡಿ, ಆಲೌಟ್​ ಆಯಿತು. ತಂಡದ ಪರ ಪೂಜಾರಾ(66) ಹಾಗೂ ಪಂತ್​​(57)ರನ್​ಗಳಿಕೆ ಮಾಡಿದರು.

ಇದನ್ನೂ ಓದಿರಿ: ಐತಿಹಾಸಿಕ ನಿರ್ಧಾರ: ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್​ನಿಂದ ಪುರುಷ - ಮಹಿಳಾ ಕ್ರಿಕೆಟರ್ಸ್​​ಗೆ ಸಮಾನ ವೇತನ

ಇಂಗ್ಲೆಂಡ್ ತಂಡದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಬೆನ್​ ಸ್ಟೋಕ್ಸ್​ 4 ವಿಕೆಟ್ ಪಡೆದುಕೊಂಡಿದ್ದು, ಬ್ರಾಡ್​, ಪ್ಯಾಟ್ಸ್ ತಲಾ 2 ವಿಕೆಟ್ ಹಾಗೂ ಆ್ಯಂಡರ್ಸನ್ ಮತ್ತು ಲೆಂಚ್ 1 ವಿಕೆಟ್ ಕಬಳಿಸಿದ್ದಾರೆ.

ಇಂಗ್ಲೆಂಡ್​ಗೆ 378ರನ್​ ಗೆಲುವಿನ ಟಾರ್ಗೆಟ್​: ಆತಿಥೆಯ ಇಂಗ್ಲೆಂಡ್​ ಗೆಲುವಿಗೆ ಟೀಂ ಇಂಡಿಯಾ 378ರನ್​ಗಳ ಗುರಿ ನೀಡಿತ್ತು. ಈ ರನ್​ ಗುರಿ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ ಮಾಡಿತು. ಆರಂಭಿಕರಾದ ಅಲೆಕ್ಸ್ ಹಾಗೂ ಜಾಕ್ ಜೋಡಿ ಮೊದಲ ವಿಕೆಟ್​ಗೆ 107 ರನ್​ಗಳ ಜೊತೆಯಾಟವಾಡಿತು.

ಈ ವೇಳೆ, 46ರನ್​ಗಳಿಕೆ ಮಾಡಿದ್ದ ಜಾಕ್​ ವಿಕೆಟ್ ಪಡೆದುಕೊಳ್ಳುವಲ್ಲಿ ಬುಮ್ರಾ ಯಶಸ್ವಿಯಾದರು. ಇದರ ಬೆನ್ನಲ್ಲೇ ಬಂದ ಪೊಪೆ(0) ಸೊನ್ನೆಗೆ ಔಟಾದರು. 56ರನ್​ಗಳಿಕೆ ಮಾಡಿ ಉತ್ತಮವಾಗಿ ಆಡ್ತಿದ್ದ ಅಲೆಕ್ಸ್ ಕೂಡ ರನೌಟ್ ಬಲೆಗೆ ಬಿದ್ದರು.

ರೂಟ್​-ಬೈರ್​​ ಸ್ಟೋ ಉತ್ತಮ ಜೊತೆಯಾಟ: ಮಧ್ಯಮ ಕ್ರಮಾಂಕದಲ್ಲಿ ರೂಟ್ ಹಾಗೂ ಬೈರ್​​ ಸ್ಟೋ ಉತ್ತಮ ಜೊತೆಯಾಟವಾಡಿ, ತಂಡವನ್ನ ಗೆಲುವಿನ ದಡ ಸೇರಿಸಿದರು. 270 ರನ್​​ಗಳ ಜೊತೆಯಾಟವಾಡಿ ತಂಡಕ್ಕೆ ಸುಲಭ ಗೆಲುವು ತಂದಿಟ್ಟರು. ಬೈರ್​ ಸ್ಟೋ ಅಜೇಯ 114 ರನ್​ಗಳಿಕೆ ಮಾಡಿದ್ರೆ, ಮಾಜಿ ಕ್ಯಾಪ್ಟನ್​ ರೂಟ್​​ ಅಜೇಯ 142ರನ್​ಗಳಿಸಿದರು. ಈ ಮೂಲಕ ಇಂಗ್ಲೆಂಡ್​​​ 7 ವಿಕೆಟ್​ಗಳ ಗೆಲುವು ದಾಖಲು ಮಾಡಿದೆ.

ಈ ಹಿಂದೆ, 2007ರಲ್ಲಿ ರಾಹುಲ್​ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ ಇಂಗ್ಲೆಂಡ್​ನಲ್ಲಿ ಐತಿಹಾಸಿಕ ಗೆಲುವು ದಾಖಲು ಮಾಡಿತ್ತು. ಆದರೆ, ಇದೀಗ ಮತ್ತೊಮ್ಮೆ ಇತಿಹಾಸ ನಿರ್ಮಿಸುವ ಅವಕಾಶ ಕೈಚೆಲ್ಲಿಕೊಂಡಿದೆ.

ಸಂಕ್ಷೀಪ್ತ ಸ್ಕೋರ್​​​: ಭಾರತ ತಂಡ: 416 ಮತ್ತು 245ರನ್​

ಇಂಗ್ಲೆಂಡ್ ತಂಡ: 248 ಮತ್ತು 378/3: ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್​ಗಳ ಜಯ, ಟೆಸ್ಟ್ ಸರಣಿ ಸಮಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.