ETV Bharat / sports

ENG vs IND Test Series: ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಆರಂಭ

author img

By

Published : Aug 4, 2021, 5:56 AM IST

ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

eng-vs-ind-1st-test-starts-from-today-in-trent-bridge-nottingham
ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಆರಂಭ

ಟ್ರೆಂಟ್​ಬ್ರಿಡ್ಜ್​: ಇಂಗ್ಲೆಂಡ್​ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್​​ ತಂಡ ತಿಂಗಳುಗಟ್ಟಲೆ ದಿನಗಳ ವಿರಾಮದ ಬಳಿಕ ಮತ್ತೆ ಮೈದಾನಕ್ಕಿಳಿಯಲಿದೆ. ಅತಿಥೇಯ ಆಂಗ್ಲರ ವಿರುದ್ಧದ 5 ಟೆಸ್ಟ್​ ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಲಿದ್ದು, ಟೆಸ್ಟ್​ ಚಾಂಪಿಯನ್​ಶಿಪ್ ಸೋಲಿನ ಬಳಿಕ ವಿರಾಟ್​ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಮೂಡಿರುವ ಕಾರಣ ಈ ಸರಣಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಪಂದ್ಯದ ಮುನ್ನಾದಿನ ಮಾಧ್ಯಮದವರೊಂದಿಗೆ ಮಾತನಾಡಿರುವ ನಾಯಕ ಕೊಹ್ಲಿ, ಪಂದ್ಯಕ್ಕೂ ಮುನ್ನ ಕೆಲ ಹೊತ್ತಲ್ಲಿ ಆಡುವ 11ರ ಬಳಗ ಘೋಷಿಸುವುದಾಗಿ ತಿಳಿಸಿದ್ದಾರೆ.

ಗಾಯಗೊಂಡಿರುವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್​ ಬದಲಿಗೆ ಮತ್ತೋರ್ವ ಕನ್ನಡಿಗ ಕೆ.ಎಲ್​.ರಾಹುಲ್​ ಕಣಕ್ಕಿಳಿಯವುದು ಬಹುತೇಕ ಖಚಿತವಾಗಿದೆ. ಇನ್ನುಳಿದಂತೆ ಇಬ್ಬರು ಸ್ಪಿನ್ನರ್​ಗಳು ಹಾಗೂ ಮೂವರು ವೇಗದ ಬೌಲರ್​ಗಳಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಈ ನಡುವೆ ಹನುಮ ವಿಹಾರಿ, ಬೌಲರ್​ಗಳಾದ ಮೊಹಮದ್​ ಸಿರಾಜ್ ಅಥವಾ​ ಶಾರ್ದುಲ್​ ಠಾಕೂರ್​ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದು ಪಂದ್ಯಕ್ಕೂ ಮುನ್ನವೇ ಗೊತ್ತಾಗಲಿದೆ.

ಇಂಗ್ಲೆಂಡ್​ ತಂಡದಲ್ಲಿ ನಾಯಕ ಜೋ ರೂಟ್​ ಜೊತೆಗೆ ಅನುಭವಿ ವೇಗದ ಬೌಲರ್​ಗಳಾದ ಜೇಮ್ಸ್​ ಆ್ಯಂಡರ್ಸನ್​ ಹಾಗೂ ಸ್ಟುವರ್ಟ್​​ ಬ್ರಾಡ್​ ಪ್ರಮುಖ ಅಸ್ತ್ರಗಳಾಗಿದ್ದಾರೆ. ಸದ್ಯ ಕ್ರಿಕೆಟ್​ನಿಂದ ವಿರಾಮ ಪಡೆದಿರುವ ಬೆನ್​ ಸ್ಟೋಕ್ಸ್​ ತಂಡದಲ್ಲಿ ಇರದಿರುವುದು ಆಂಗ್ಲರಿಗೆ ಆಲ್​ರೌಂಡರ್​ ವಿಭಾಗದಲ್ಲಿ ಕೊಂಚ ಹಿನ್ನಡೆಯಾಗಿ ಪರಿಣಮಿಸಲಿದೆ.

ಇನ್ನುಳಿದಂತೆ ರೊರಿ ಬರ್ನ್ಸ್​, ಡಾಮ್​ ಸಿಬ್ಲಿ, ಡಾನ್​ ಲಾರೆನ್ಸ್​, ಸ್ಯಾಮ್ ಕರನ್, ಜಾಕ್​ ಕ್ರಾವ್ಲಿ ಹಾಗೂ ಒಲಿ ಪಾಪ್​ ಅವರನ್ನೊಳಗೊಂಡ ಯುವ ಹಾಗೂ ಪ್ರತಿಭಾವಂತ ಬ್ಯಾಟಿಂಗ್​ ಪಡೆಗೆ ಜೋಸ್​​ ಬಟ್ಲರ್​ ಹಾಗೂ ಜಾನಿ ಬೈರ್​ಸ್ಟೋ ಅನುಭವದ ಬಲ ಸಿಗಲಿದೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಎರಡೂ ತಂಡಗಳು ಇಂತಿವೆ:

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿ.ಕೀ), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮದ್ ಶಮಿ, ಮೊಹಮದ್​ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿ.ಕೀ), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್

ಇಂಗ್ಲೆಂಡ್: ಜೋ ರೂಟ್ (ನಾಯಕ), ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೊ, ಡೊಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರಾಲಿ, ಸ್ಯಾಮ್ ಕರನ್, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಓಲಿ ಪೋಪ್, ಓಲ್ಲಿ ರಾಬಿನ್ಸನ್, ಡಾಮ್ ಸಿಬ್ಲಿ, ಮಾರ್ಕ್ ವುಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.