ETV Bharat / sports

ಪರಸ್ಪರರ ಯಶಸ್ಸನ್ನು ಆನಂದಿಸಿ, ಇಂದಲ್ಲ ನಾಳೆ ಅವಕಾಶ ಸಿಕ್ಕೇ ಸಿಗುತ್ತದೆ: 5 ವಿಕೆಟ್​ಗಳ ಸರದಾರ ಮೊಹಮದ್​ ಶಮಿ

author img

By ETV Bharat Karnataka Team

Published : Oct 23, 2023, 8:24 PM IST

ನ್ಯೂಜಿಲೆಂಡ್​ ವಿರುದ್ಧ ಸಿಕ್ಕ ಮೊದಲ ಅವಕಾಶದಲ್ಲೇ 5 ವಿಕೆಟ್​ ಕಿತ್ತು ರಾರಾಜಿಸಿದ ಮೊಹಮದ್​ ಶಮಿ, ತಂಡದಲ್ಲಿನ ತಮ್ಮ ಸ್ಥಾನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೊಹಮದ್​ ಶಮಿ
ಮೊಹಮದ್​ ಶಮಿ

ಧರ್ಮಶಾಲಾ (ಹಿಮಾಚಲಪ್ರದೇಶ) : ಏಕದಿನ ವಿಶ್ವಕಪ್​ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್​​ ವಿರುದ್ಧದ ಪಂದ್ಯದಲ್ಲಿ ಬೆಂಕಿ ಚೆಂಡು ಎಸೆದ ಮೊಹಮದ್​ ಶಮಿ 5 ವಿಕೆಟ್​ಗಳ ಗೊಂಚಲು ಪಡೆದರು. ಟೂರ್ನಿಯಲ್ಲಿ ಸಿಕ್ಕ ಮೊದಲ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಬಲಗೈ ವೇಗಿ, ತಮ್ಮ ತೋಳ್ಬಲವನ್ನು ತೋರಿಸಿದರು. ಈ ಮೂಲಕ ಭಾರತ 20 ವರ್ಷಗಳ ಬಳಿಕ ಕಿವೀಸ್​ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸುವಂತೆ ಮಾಡಿದರು.

ಪಂದ್ಯದ ಬಳಿಕ ಮಾತನಾಡಿದ ಶಮಿ, ಆಡುವ ಹನ್ನೊಂದರಲ್ಲಿ ಅವಕಾಶ ಸಿಗಲಿಲ್ಲವೆಂದು ಬೇಸರಿಸಿಕೊಳ್ಳಬಾರದು ಎಂಬುದು ನನ್ನ ಭಾವನೆ. ಕಾರಣ ಅಲ್ಲಿದ್ದವರು ನಮ್ಮಷ್ಟೇ ಶಕ್ತರಾಗಿರುತ್ತಾರೆ. ಅವಕಾಶಕ್ಕಾಗಿ ಕಾಯಬೇಕು. ಆದರೂ ಮಹತ್ವದ ಪಂದ್ಯಗಳಲ್ಲಿ ಆಡಲು ಅವಕಾಶ ಸಿಗದೇ ಬೆಂಚ್​ ಕಾಯುವಾಗ ಸಣ್ಣ ಬೇಸರ ಉಂಟಾಗುತ್ತದೆ. ತಂಡ ಯಶಸ್ಸು ಕಾಣುತ್ತಿದ್ದಾಗ ಅದರ ಭಾಗವಾಗಬೇಕು. ಪ್ರತಿಯೊಬ್ಬರೂ ಪರಸ್ಪರರ ಯಶಸ್ಸನ್ನು ಆನಂದಿಸಬೇಕು ಎಂದು ಹೇಳಿದರು.

ತಂಡದಲ್ಲಿ ಸ್ಥಾನ ಸಿಗುವುದೇ ದೊಡ್ಡದು: ಭಾರತ ತಂಡದಲ್ಲಿ ಸ್ಥಾನ ಸಿಗುವುದೇ ಕಠಿಣ. ಅಂಥದ್ದರಲ್ಲಿ ನೀವು ಆಡುವ 11 ರಲ್ಲಿ ಸ್ಥಾನ ಸಿಗದಿದ್ದರೆ ಬೇಸರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. 15 ಸದಸ್ಯರ ತಂಡದಲ್ಲಿ ನಾವು ಇದ್ದೇವೆ. ತಂಡದ ಪ್ರತಿ ಗೆಲುವಿನಲ್ಲಿ ನಾವೂ ಭಾಗಿದಾರರೇ. ಫಲಿತಾಂಶಗಳ ಮೇಲೆ ನಮ್ಮ ಗಮನ ಇರಬೇಕು ಎಂದರು.

ಆಡುವ 11 ರಲ್ಲಿ ಇಂದಲ್ಲ ನಾಳೆ ಅವಕಾಶ ಸಿಕ್ಕೇ ಸಿಗುತ್ತದೆ. ಬೇರೆಯವರು ಇಂದು ಆಡುತ್ತಾರೆ. ನಾಳೆ ನಾವು ಆಡುತ್ತೇವೆ. ಆಗ ನಮ್ಮ ಸಾಮರ್ಥ್ಯ ಸಾಬೀತು ಮಾಡಬೇಕು. ಮುಂದೆ ಮತ್ಯಾರೋ ತಂಡದಲ್ಲಿ ಬರುತ್ತಾರೆ. ಇದೆಲ್ಲಾ ಸಾಮಾನ್ಯ. ಏನೇ ಆದರೂ ಸಂತೋಷವಾಗಿರಬೇಕು ಎಂದು ವೇದಾಂತದ ನುಡಿಗಳನ್ನಾಡಿದರು.

ಪಂದ್ಯದಲ್ಲಿ ನೀವು ವಿಕೆಟ್​ ಪಡೆದಾಗ ಅದರಲ್ಲಿ ದೊಡ್ಡದು, ಸಣ್ಣದು ಎಂಬುದಿರಲ್ಲ. ಎಲ್ಲ ವಿಕೆಟ್​ಗಳೂ ಮುಖ್ಯವೇ. ದೇಶಕ್ಕಾಗಿ ಆಡುವಾಗ ಪ್ರತಿ ವಿಕೆಟ್ ಮಹತ್ವವಾಗಿರುತ್ತದೆ. ನಾನು ಯಾವುದೇ ನಿರ್ದಿಷ್ಟ ವಿಕೆಟ್ ಅನ್ನು ಹೆಚ್ಚು ಇಷ್ಟಪಡುವುದಿಲ್ಲ. ಯಾವುದೇ ಸಮಯದಲ್ಲಿ ವಿಕೆಟ್​ ಪಡೆದರೂ ಆನಂದಿಸುತ್ತೇನೆ ಎಂದರು.

ಶಮಿಗೆ ಶಕ್ತಿಯಿದ್ದರೂ ಅವಕಾಶವಿಲ್ಲ: ಮೊಹಮದ್​ ಶಮಿ 2013 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರೂ, ಈ ವಿಶ್ವಕಪ್​ನ ಮೊದಲ 4 ಪಂದ್ಯಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನದಿಂದಾಗಿ ಶಮಿಗೆ ಅವಕಾಶ ಸಿಗದಂತಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಗಾಯಗೊಂಡಿದ್ದಾರೆ. ಅಲ್ಲದೇ, ಧರ್ಮಶಾಲಾ ಮೈದಾನ ವೇಗಿಗಳಿಗೆ ನೆರವು ನೀಡಲಿದೆ ಎಂಬ ಕಾರಣಕ್ಕಾಗಿ ಶಮಿ ಅವರನ್ನು ನ್ಯೂಜಿಲ್ಯಾಂಡ್​ ವಿರುದ್ಧ ಕಣಕ್ಕಿಳಿಸಲಾಗಿತ್ತು.

ಇದನ್ನೂ ಓದಿ: ನ್ಯೂಜಿಲೆಂಡ್‌ನ 5 ವಿಕೆಟ್‌ ಉರುಳಿಸಿದ ಮೊಹಮ್ಮದ್ ಶಮಿ: ಕಪಿಲ್​ ದೇವ್​, ಯುವರಾಜ್​ ಸಿಂಗ್​ ದಾಖಲೆ ಪುಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.