ETV Bharat / sports

ಫ್ಯಾಷನ್​ ಶೋಗಳಿಗೆ ಹೋಗಿ ಫಿಟ್​ ಇರುವವರನ್ನು ಹುಡುಕಿ: ಆಯ್ಕೆಗಾರರ ವಿರುದ್ಧ ಚಾಟಿ ಬೀಸಿದ ಗವಾಸ್ಕರ್​

author img

By

Published : Jan 20, 2023, 8:13 PM IST

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸರ್ಫರಾಜ್ ಖಾನ್ ಉತ್ತಮ ಪ್ರದರ್ಶನ ನೀಡಿದರೂ ಆಸ್ಟ್ರೇಲಿಯಾ ಎದುರಿನ ಬಾರ್ಡರ್ ಗವಾಸ್ಕರ್ ಟೆಸ್ಟ್‌ ಸರಣಿಗೆ ಆಯ್ಕೆ ಮಾಡದಿರುವ ಬಗ್ಗೆ ಅಭಿಮಾನಿ ಬಳಗದಲ್ಲಿ ಚರ್ಚೆ ಆಗುತ್ತಿರುವುದಲ್ಲದೇ, ಕ್ರಿಕೆಟ್​ ದಿಗ್ಗಜರೂ ಸಹ ಈ ಬಗ್ಗೆ ಆಯ್ಕೆಗಾರರನ್ನು ಟೀಕಿಸುತ್ತಿದ್ದಾರೆ.

Gavaskar
ಗವಾಸ್ಕರ್​

ನವದೆಹಲಿ: ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ಅವರನ್ನು ಟೆಸ್ಟ್​ ಟೀಂಗೆ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಕ್ರಿಕೆಟ್​ ಅಭಿಮಾನಿ ಪಾಳೆಯದಲ್ಲಿ ತಂಡ ಅನೌನ್ಸ್​ ಆದಾಗಿನಿಂದ ಚರ್ಚೆ ಆರಂಭವಾಗಿತ್ತು. ಇದಕ್ಕೆ ಈಗ ದಿಗ್ಗಜ ಕ್ರಿಕೆಟ್​ ಆಟಗಾರರೂ ಸಹ ಆಯ್ಕೆಗಾರರನ್ನು ತರಾಟೆಗೆ ತೆಗೆದು ಕೊಳ್ಳುತ್ತಿದ್ದಾರೆ. ವೆಂಕಟೇಶ್​ ಪ್ರಸಾದ್​ ಇತ್ತೀಚೆಗೆ ಟ್ವೀಟ್​ ಮಾಡಿ ಸರ್ಫರಾಜ್ ಖಾನ್ ಫಿಟ್​ ಇಲ್ಲ ಎಂದು ತಂಡದಿಂದ ಹೊರಗಿಡುವುದು ಸರಿಯಲ್ಲ ಎಂದಿದ್ದರು.

ಈಗ ಭಾರತದ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಅಭಿಪ್ರಾಯ ವ್ಯಕ್ತಡಿಸಿದ್ದಾರೆ. ಸರ್ಫರಾಜ್​ ಪರ ಬ್ಯಾಟ್​ ಬೀಸಿರುವ ಗವಾಸ್ಕರ್ 'ಕ್ರಿಕೆಟಿಗರನ್ನು ಮೈದಾನದಲ್ಲಿನ ಪ್ರದರ್ಶನದಿಂದ ಮಾತ್ರ ನಿರ್ಣಯಿಸಬೇಕು, ಅವರ ಗಾತ್ರ ಅಥವಾ ಆಕಾರದಿಂದ ಅಲ್ಲ ಎಂದು ಆಯ್ಕೆಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಫರಾಜ್ ಖಾನ್​ ದೇಶೀಯ ಟೂರ್ನಿಗಳಲ್ಲಿ, ವಿಶೇಷವಾಗಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ರನ್​ ಗಳಿಸಿದ್ದಾರೆ. ಅಲ್ಲದೇ ಸರಾಸರಿಯನ್ನೂ ಉತ್ತಮವಾಗಿ ಹೊಂದಿದ್ದಾರೆ. ಕಳೆದ ಎರಡು ರಣಜಿ ಟ್ರೋಫಿ ಋತುವಿನಲ್ಲಿ 12 ಪಂದ್ಯಗಳಲ್ಲಿ 1,910 ರನ್ ಗಳಿಸಿದ್ದಾರೆ. 136.42 ಸರಾಸರಿ ಬ್ಯಾಟ್​ ಬೀಸಿದ್ದಾರೆ. ರಣಜಿ ಟ್ರೋಫಿ ಗ್ರೂಪ್ ಬಿ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮಂಗಳವಾರ ಮತ್ತೊಂದು ಶತಕ (125) ಗಳಿಸಿದ್ದಾರೆ. ಇದು ಬ್ಯಾಟರ್‌ನ 13 ನೇ ಪ್ರಥಮ ದರ್ಜೆ ಶತಕವಾಗಿದೆ. ಈ ಬಾರಿಯ ಮೂರನೇ ಶತಕವಾಗಿದೆ.

'ನೀವು ಕೇವಲ ಸ್ಲಿಮ್ ಮತ್ತು ಟ್ರಿಮ್ ಹುಡುಗರನ್ನು ಹುಡುಕುತ್ತಿದ್ದರೆ ಫ್ಯಾಷನ್ ಶೋಗೆ ಹೋಗಬಹುದು. ಇತರ ಕೆಲವು ಮಾಡೆಲ್‌ಗಳನ್ನು ಹುಡುಕಬಹುದು. ಅವರ ಕೈಯಲ್ಲಿ ಬ್ಯಾಟ್ ಮತ್ತು ಬಾಲ್ ನೀಡಿ ನಂತರ ಅವರನ್ನು ಸುಧಾರಿಸಬಹುದು. ಅದು ಕ್ರಿಕೆಟ್​ ಆಯ್ಕೆ ಮಾಡುವ ಮಾರ್ಗವಲ್ಲ. ನಮ್ಮಲ್ಲಿ ಎಲ್ಲ ಆಕಾರಗಳು ಮತ್ತು ಗಾತ್ರಗಳಲ್ಲಿ ಕ್ರಿಕೆಟಿಗರು ಇದ್ದಾರೆ. ಗಾತ್ರದ ಮೇಲೆ ಆಯ್ಕೆ ಮಾಡಬೇಡಿ, ಅಂಕಗಳು ಅಥವಾ ವಿಕೆಟ್‌ಗಳ ಮೂಲಕ ಸೆಲೆಕ್ಟ್​ ಮಾಡಿ. ಸರ್ಫರಾಜ್​ ಶತಕ ಗಳಿಸಿದ ನಂತರ ಮೈದಾನದಿಂದ ಹೊರಗುಳಿಯುವುದಿಲ್ಲ. ಮತ್ತೆ ಮೈದಾನಕ್ಕೆ ಮರಳಿ ಆಡುತ್ತಾರೆ. ಆದ್ದರಿಂದ, ಸರ್ಫರಾಜ್​ ಫಿಟ್​ ಆಗಿದ್ದಾರೆ' ಎಂದು ಗವಾಸ್ಕರ್ ಹೇಳಿದ್ದಾರೆ.

ರಣಜಿ ಟ್ರೋಫಿಯಲ್ಲಿ ಕಾಲಕಾಲಕ್ಕೆ ಶತಕಗಳನ್ನು ಗಳಿಸುತ್ತಿರುವ ಸರ್ಫರಾಜ್ ಅನರ್ಹರಲ್ಲ. ಸರ್ಫರಾಜ್​ ರನ್​ ಗಳಿಸುತ್ತಿರುವ ರೀತಿ ನೋಡಿದರೆ ಅವರನ್ನು ತಂಡದಿಂದ ಹೊರಗಿಡುವ ಅಗತ್ಯ ಇಲ್ಲ. ಅನರ್ಹರಾಗಿದ್ದರೆ ಸತತ ಶತಕ ಗಳಿಸಲು ಸಾಧ್ಯವಿರಲಿಲ್ಲ. ಕ್ರಿಕೆಟ್ ಫಿಟ್ನೆಸ್ ಅತ್ಯಂತ ಮುಖ್ಯವಾದ ವಿಷಯ. ಆದರೆ ಯೋ-ಯೋ ಪರೀಕ್ಷೆ ಮಾತ್ರ ಮಾನದಂಡವಾಗಬಾರದು. ಆ ವ್ಯಕ್ತಿಯೂ ಕ್ರಿಕೆಟ್‌ಗೆ ಫಿಟ್ ಆಗಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಬ್ಬ ವ್ಯಕ್ತಿ, ಅವನು ಯಾರೇ ಆಗಿರಲಿ, ಅವನು ಕ್ರಿಕೆಟ್ ಆಡಲು ಯೋಗ್ಯನಾಗಿದ್ದರೆ, ಆಯ್ಕೆಗೆ ಯಾವುದೇ ಸಮಸ್ಯೆ ಆಗಬಾರದು ಎಂದಿದ್ದಾರೆ.

53 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳನ್ನು ಆಡಿರುವ ಸರ್ಫರಾಜ್ ಖಾನ್​ ಬ್ಯಾಟಿಂಗ್ ಸರಾಸರಿಯಲ್ಲಿ ಸರ್ ಡಾನ್ ಬ್ರಾಡ್‌ಮನ್‌ ಅವರನ್ನು ಹಿಂದಿಕ್ಕಿದ್ದಾರೆ. ಸರ್ಫರಾಜ್ ಶೀಘ್ರದಲ್ಲೇ ಭಾರತದ ಟೆಸ್ಟ್ ತಂಡಕ್ಕೆ ಆಯ್ಕೆ ಆಗಲಿದ್ದಾರೆ ಎಂದು ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ: ಫೆಬ್ರವರಿ 9-12 ಮೊದಲ ಟೆಸ್ಟ್ ನಾಗ್ಪುರದಲ್ಲಿ ನಡೆಯಲಿದೆ. ಫೆಬ್ರವರಿ 17-21ರ ವರೆಗೆ ಎರಡನೇ ಟೆಸ್ಟ್ ದೆಹಲಿಯಲ್ಲಿ, ಮಾರ್ಚ್‌ 01-05ರ ತನಕ ಮೂರನೇ ಟೆಸ್ಟ್ ಧರ್ಮಶಾಲಾ ಮತ್ತು ಮಾರ್ಚ್‌ 09-13ರ ವರೆಗೆ ನಾಲ್ಕನೇ ಟೆಸ್ಟ್ ಅಹಮದಾಬಾದ್​ನಲ್ಲಿ ನಡೆಯಲಿದೆ.

ಬಾರ್ಡರ್ ಗವಾಸ್ಕರ್ ಟೆಸ್ಟ್‌ ಸರಣಿಗೆ ಭಾರತ ತಂಡ: ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಆಯ್ಕೆಯಾಗದ ಸರ್ಫರಾಜ್ ಖಾನ್​: ವೆಂಕಟೇಶ್​ ಪ್ರಸಾದ್​ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.