ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟ: ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಶಿಖರ್ ಧವನ್​

author img

By

Published : Sep 22, 2022, 8:56 AM IST

Dhawan urges UP govt

ಮಹಿಳಾ ಕಬಡ್ಡಿ ಆಟಗಾರರಿಗೆ ಶೌಚಾಲಯದೊಳಗೆ ಆಹಾರ ಉಣಬಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಕ್ರಿಕೆಟರ್ ಶಿಖರ್ ಧವನ್​ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಕಬಡ್ಡಿ ಕ್ರೀಡಾಪಟುಗಳಿಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ ಮಾಡಿರುವ ವಿಡಿಯೋವೊಂದು ಕಳೆದ ಕೆಲ ದಿನಗಳ ಹಿಂದೆ ವೈರಲ್​ ಆಗಿತ್ತು. ಈ ಘಟನೆ ಉತ್ತರ ಪ್ರದೇಶದ ಸಹರಾನ್​​ಪುರ್​​ದಲ್ಲಿ ನಡೆದಿದೆ ಎಂದು ಹೇಳಲಾಗಿತ್ತು. ಆ ವಿಚಾರವಾಗಿ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಕ್ರಿಕೆಟರ್​​ ಶಿಖರ್​ ಧವನ್​​ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಟಗಾರರು ಶೌಚಾಲಯದಲ್ಲಿ ಆಹಾರ ಸೇವಿಸುವುದನ್ನು ನೋಡಿ ಬೇಸರವಾಯಿತು ಎಂದಿರುವ ಅವರು​, ತಪ್ಪಿತಸ್ಥರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಹಿಳಾ ಕಬಡ್ಡಿ ಪ್ಲೇಯರ್ಸ್​ಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ: ಕ್ರೀಡಾಧಿಕಾರಿ ಅಮಾನತು

ಉತ್ತರ ಪ್ರದೇಶದಲ್ಲಿ ರಾಜ್ಯಮಟ್ಟದ ಅಂಡರ್‌-16 ಕಬಡ್ಡಿ ಪಂದ್ಯಾವಳಿ ಸಂದರ್ಭದಲ್ಲಿ ಆಟಗಾರರಿಗೆ ಶೌಚಾಲಯದಲ್ಲಿ ಊಟ ಬಡಿಸಿದ ಅಮಾನವೀಯ ಘಟನೆ ಸೆಪ್ಟೆಂಬರ್ 16ರಂದು ನಡೆದಿತ್ತು. ಮೂತ್ರ ಮಾಡುವ ಜಾಗದ ಸಮೀಪದಲ್ಲಿ ಬೇರೆ ಬೇರೆ ಪಾತ್ರೆಗಳಲ್ಲಿ ಅನ್ನ, ಸಾಂಬರ್​​ ಮುಂತಾದ ಪದಾರ್ಥಗಳನ್ನು ಇರಿಸಿದ್ದು, ಆಟಗಾರ್ತಿಯರು ಬಡಿಸಿಕೊಂಡು ಊಟ ಮಾಡಿದ್ದರು.

ಶಿಖರ್ ಧವನ್ ಟ್ವೀಟ್‌ ಹೀಗಿದೆ..: ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕಬಡ್ಡಿ ಆಟಗಾರರು ಶೌಚಾಲಯದಲ್ಲಿ ಆಹಾರ ಸೇವನೆ ಮಾಡುತ್ತಿರುವುದನ್ನು ನೋಡಿ ಬೇಸರವಾಯಿತು. ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಹಾಗೂ ಉತ್ತರ ಪ್ರದೇಶ ಕ್ರೀಡಾ ಇಲಾಖೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ಧವನ್ ತಿಳಿಸಿದ್ದಾರೆ .ಉತ್ತರ ಪ್ರದೇಶದಲ್ಲಿ ರಾಜ್ಯಮಟ್ಟದ ಸಬ್​ ಜೂನಿಯರ್​​ ಬಾಲಕಿಯರ ಕಬಡ್ಡಿ ಪಂದ್ಯಾವಳಿ ಸೆ.16ರಿಂದ 18ರವರೆಗೆ ನಡೆದಿದ್ದು, ಇದರಲ್ಲಿ 300ಕ್ಕೂ ಹೆಚ್ಚು ಪ್ಲೇಯರ್ಸ್​​ ಭಾಗಿಯಾಗಿದ್ದರು.

ತನಿಖೆಗೆ ಆದೇಶಿಸಿದ ಕೇಂದ್ರ ಕ್ರೀಡಾ ಸಚಿವ: ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್ ತನಿಖೆಗೆ ಆದೇಶಿಸಿದ್ದಾರೆ. ಆರೋಪಿ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಮುಂದಿನ ಕ್ರೀಡಾ ಕಾರ್ಯಕ್ರಮಗಳಲ್ಲಿ ಆಹಾರ ಪೂರೈಸದಂತೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಿರ್ದೇಶಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಅನುರಾಗ್​ ಠಾಕೂರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.