ETV Bharat / sports

ಏಕದಿನ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ವಿದಾಯ​

author img

By PTI

Published : Jan 1, 2024, 8:55 AM IST

ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್​ ಪಂದ್ಯವನ್ನು ಆಡುತ್ತಿರುವ ಡೇವಿಡ್​ ವಾರ್ನರ್ ಇದೀಗ​ ಏಕದಿನ ಕ್ರಿಕೆಟ್‌ ಮಾದರಿಗೂ ಗುಡ್​ ಬೈ ಹೇಳಿದ್ದಾರೆ.

David Warner
David Warner

ಸಿಡ್ನಿ(ಆಸ್ಟ್ರೇಲಿಯಾ): ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಕ್ರಿಕೆಟ್ ಸರಣಿಯ ನಂತರ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ರೆಡ್​ ಬಾಲ್ (ಟೆಸ್ಟ್)​ ಕ್ರಿಕೆಟ್​ಗೆ ವಿದಾಯ ಹೇಳುತ್ತಾರೆ ಎಂಬುದು ಹಳೆಯ ವಿಷಯ. ಆದರೆ ಇದೀಗ ಹೊಸ ವರ್ಷದಂದು ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದು, ಏಕದಿನ ಕ್ರಿಕೆಟ್​ಗೂ ನಿವೃತ್ತಿ ಪ್ರಕಟಿಸಿದ್ದಾರೆ.

2023ರ ಏಕದಿನ ವಿಶ್ವಕಪ್​​ ತಂಡದ ಭಾಗವಾಗಿದ್ದ ವಾರ್ನರ್, ಆಸೀಸ್​ಗೆ ಉತ್ತಮ ಆರಂಭ ನೀಡಿದ್ದರು. ತಂಡವು ಭಾರತದೆದುರು ವಿಶ್ವಕಪ್ ಗೆದ್ದು ಬೀಗಿತ್ತು. ಈ ಸ್ಮರಣೀಯ ಸಾಧನೆಯ ನಂತರ ಒನ್​ ಡೇ ಮಾದರಿಯಿಂದಲೂ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. 2025ರಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿಯ ವೇಳೆ ಅಗತ್ಯಬಿದ್ದರೆ ತಂಡಕ್ಕಾಗಿ ಆಡುವೆ ಎಂದು ತಿಳಿಸಿದ್ದಾರೆ.

"ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದುತ್ತಿದ್ದೇನೆ. ಭಾರತದಲ್ಲಿ ಏಕದಿನ ವಿಶ್ವಕಪ್​ ಗೆಲುವು ದೊಡ್ಡ ಸಾಧನೆ. ಇದಾದ ನಂತರ ನಾನು ಈ ನಿರ್ಧಾರಕ್ಕೆ ಬಂದೆ. ಇಂದು ಏಕದಿನ ಮಾದರಿಯಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸುತ್ತಿದ್ದೇನೆ. ಇದರಿಂದ ನಾನು ಪ್ರಪಂಚಾದ್ಯಂತ ಲೀಗ್‌ಗಳಲ್ಲಿ ಆಡುವ ಅವಕಾಶ ಪಡೆಯುತ್ತೇನೆ. ಮುಂದೆ ಚಾಂಪಿಯನ್ಸ್​ ಟ್ರೋಫಿ ಇರುವುದು ನನಗೆ ಅರಿವಿದೆ. ನಾನು ತಂಡದ ಜೊತೆಗಿರುತ್ತೇನೆ. ನನ್ನ ಅವಶ್ಯಕತೆ ಇದ್ದರೆ ತಂಡವನ್ನು ಸೇರಲು ಸದಾ ಲಭ್ಯವಿರುತ್ತೇನೆ"ಎಂದು ಸೋಮವಾರ ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ಹೇಳಿದರು.

ಕಳೆದೆರಡು ವರ್ಷಗಳಿಂದ ಅದ್ಭುತ ಫಾರ್ಮ್​ನಲ್ಲಿರುವ ವಾರ್ನರ್​ಗೆ ಅಹಮದಾಬಾದ್​ನಲ್ಲಿ ನಡೆದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯವೇ ಕೊನೆಯದ್ದಾಗುತ್ತದೆ. ಏಕದಿನದಲ್ಲಿ 45.30 ಸರಾಸರಿಯಲ್ಲಿ 22 ಶತಕಗಳೊಂದಿಗೆ 6,932 ರನ್ ಗಳಿಸಿದ್ದಾರೆ. ಇವರು ಆಸ್ಟ್ರೇಲಿಯಾ ಪರ 6ನೇ ಅತಿ ಹೆಚ್ಚು ಏಕದಿನ ರನ್​ ಗಳಿಸಿದ ಆಟಗಾರ. 205 ಏಕದಿನ ಇನ್ನಿಂಗ್ಸ್​ ಆಡಿರುವ ವಾರ್ನರ್,​ ಅತಿ ಹೆಚ್ಚು ಏಕದಿನ ಇನ್ನಿಂಗ್ಸ್​ ಆಡಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್​ ಮೊದಲಿಗರು.

ವಾರ್ನರ್ ದುಬೈ ಕ್ಯಾಪಿಟಲ್ಸ್‌ನೊಂದಿಗೆ ಐಎಲ್‌ಟಿ 20 ಒಪ್ಪಂದ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಆಡುವುದಿಲ್ಲ ಎಂದು ಹೇಳಲಾಗಿತ್ತು. ಸದ್ಯ ಟಿ20 ಮಾದರಿಯಲ್ಲಿ ಮುಂದುವರೆದಿದ್ದು, ಈ ವರ್ಷ ಜೂನ್​ನಲ್ಲಿ ವೆಸ್ಟ್​ ಇಂಡೀಸ್​ ಮತ್ತು ಯುಎಸ್​ಎನಲ್ಲಿ ನಡೆಯುವ ವಿಶ್ವಕಪ್‌ವರೆಗೆ ಆಡುತ್ತಾರೆ ಎಂದು ಹೇಳಲಾಗುತ್ತಿದೆ. ನಂತರ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಬಂದು ಲೀಗ್​ಗಳ ಕಡೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ.

ಡೇವಿಡ್​ ವಾರ್ನರ್​ ​​ಜನವರಿ 3ರಿಂದ ಪಾಕಿಸ್ತಾನದ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (SCG) ತಮ್ಮ ಅಂತಿಮ ಟೆಸ್ಟ್ ಪಂದ್ಯ ಆಡಲಿದ್ದಾರೆ.

ಇದನ್ನೂ ಓದಿ: 023ರ "ವಿರಾಟ" ದಾಖಲೆ ಪುಟ: ರನ್​ ಮಷಿನ್​ ಕೊಹ್ಲಿಯ ಮೈಲಿಗಲ್ಲುಗಳಿವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.