ETV Bharat / sports

ಕೌಟುಂಬಿಕ ದುರಂತ, ಬಡತನವನ್ನು ಮೀರಿ ಐಪಿಎಲ್​ನಲ್ಲಿ​ ಅವಕಾಶ ಪಡೆದ ಸಕಾರಿಯಾಗೆ ನೆರವಾಗಿದ್ದು ಆರ್​ಸಿಬಿ!

author img

By

Published : Apr 13, 2021, 10:01 PM IST

ಐಪಿಎಲ್​ನಲ್ಲಿ ಆಡುವ ಅವಕಾಶಕ್ಕಾಗಿ ಲಕ್ಷಾಂತರ ಯುವ ಕ್ರಿಕೆಟಿಗರು ಸಾಲು ಸಾಲಾಗಿ ಕಾದು ನಿಂತಿದ್ದಾರೆ. ಇಂತಹದ್ದೇ ಕನಸಿನ್ನಿಟ್ಟುಕೊಂಡಿದ್ದ ಚೇತನ್​ ಸಕಾರಿಯಾ ನಿನ್ನೆ ನಡೆದ ಪಂದ್ಯದಲ್ಲಿ ಕ್ರಿಕೆಟ್​ ಅಭಿಮಾನಿಗಳು, ಪಂಡಿತರು ಸ್ವತಃ ರಾಜಸ್ಥಾನ್ ರಾಯಲ್ಸ್ ಡೈರೆಕ್ಟರ್​ ಕುಮಾರ್​ ಸಂಗಕ್ಕರ ಅವರಿಂದಲೇ ಪ್ರಶಂಸೆಗೆ ಪಾತ್ರರಾಗಿದ್ದರು. ಅವರು ನಿನ್ನೆ ಕೆಎಲ್ ರಾಹುಲ್, ಅಗರ್​ವಾಲ್ ಮತ್ತು ಜೇ ರಿಚರ್ಡ್ಸನ್​ ವಿಕೆಟ್ ಪಡೆದಿದ್ದರು.

ಚೇತನ್ ಸಕಾರಿಯಾ
ಚೇತನ್ ಸಕಾರಿಯಾ

ಮುಂಬೈ: ದೈತ್ಯ ಕ್ರಿಸ್​ ಗೇಲ್, ಸ್ಟಾರ್​ ಬ್ಯಾಟ್ಸ್​ಮನ್​ ರಾಹುಲ್​ ಮತ್ತು ದೀಪಕ್​ ಹೂಡಾ ಬ್ಯಾಟಿಂಗ್​ ಅಬ್ಬರಕ್ಕೆ ರಾಜಸ್ಥಾನ್​ ರಾಯಲ್ಸ್​ನ ಬೌಲರ್​ಗಳು ದಿಕ್ಕು ತೋಚದಂತಾಗಿದ್ದರು. ಆದರೆ ಅದೇ ತಂಡದ ಹೊಸಮುಖ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ತಿಳಿದಿದ್ದ ಸಕಾರಿಯಾ ಇಂತಹ ಬಲಿಷ್ಠ ಆಟಗಾರರಿಗೆ ಚಳ್ಳೇಹಣ್ಣು ತಿನ್ನಿಸಿ 3 ವಿಕೆಟ್ ಪಡೆದು ಮಿಂಚಿದ್ದರು.

ಐಪಿಎಲ್​ನಲ್ಲಿ ಆಡುವ ಅವಕಾಶಕ್ಕಾಗಿ ಲಕ್ಷಾಂತರ ಯುವ ಕ್ರಿಕೆಟಿಗರು ಸಾಲು ಸಾಲಾಗಿ ಕಾದು ನಿಂತಿದ್ದಾರೆ. ಇಂತಹದ್ದೇ ಕನಸಿನ್ನಿಟ್ಟುಕೊಂಡಿದ್ದ ಚೇತನ್​ ಸಕಾರಿಯಾ ನಿನ್ನೆ ನಡೆದ ಪಂದ್ಯದಲ್ಲಿ ಕ್ರಿಕೆಟ್​ ಅಭಿಮಾನಿಗಳು, ಪಂಡಿತರು ಸ್ವತಃ ರಾಜಸ್ಥಾನ್ ರಾಯಲ್ಸ್ ಡೈರೆಕ್ಟರ್​ ಕುಮಾರ್​ ಸಂಗಕ್ಕರ ಅವರಿಂದಲೇ ಪ್ರಶಂಸೆಗೆ ಪಾತ್ರರಾಗಿದ್ದರು. ಅವರು ನಿನ್ನೆ ಕೆಎಲ್ ರಾಹುಲ್, ಅಗರ್​ವಾಲ್ ಮತ್ತು ಜೇ ರಿಚರ್ಡ್ಸನ್​ ವಿಕೆಟ್ ಪಡೆದಿದ್ದರು.

ಸಕಾರಿಯಾ ಐಪಿಎಲ್​ಗೂ ಬರುವ ಮುನ್ನ ದೊಡ್ಡ ದುರಂತವನ್ನೇ ಎದುರಿಸಿ ಬಂದಿದ್ದರು. ಇದೇ ವರ್ಷ ಸಯ್ಯದ್ ಮುಸ್ತಾಕ್​ ಟಿ-20 ವೇಳೆ ತಮ್ಮನನ್ನು ಕಳೆದುಕೊಂಡಿದ್ದರು. ಆದರೆ ಈತನ ಕ್ರಿಕೆಟ್​ ಜೀವನ ಹಾಳಗಬಾರದೆಂದು ಲಾರಿ ಡ್ರೈವರ್​ ಆಗಿದ್ದ ತಂದೆ ಮತ್ತು ಟೈಲರಿಂಗ್ ಮಾಡುತ್ತಿದ್ದ ತಾಯಿ ಸಕಾರಿಯಾ ಅವರಿಂದ 10 ದಿನಗಳ ಕಾಲ 2ನೇ ಮಗನ ಸಾವಿನ ಸುದ್ದಿಯನ್ನು ಮುಚ್ಚಿಟ್ಟಿದ್ದರು.

ಬಡತನದಲ್ಲಿ ಕ್ರಿಕೆಟ್​ ಆಟವನ್ನು ಒಲಿಸಿಕೊಂಡಿದ್ದ ಈತನನ್ನು ದೊಡ್ಡ ಮಟ್ಟದಲ್ಲಿ ನೋಡುವ ಅವರ ಕನಸು ಮನೆಯಲ್ಲಿ ಇಂತಹ ದುರಂತವನ್ನು ಮುಚ್ಚಿಡುವ ಮಟ್ಟಿಗೆ ಅವರನ್ನು ಕಲ್ಲು ಹೃದಯವಂತರನ್ನಾಗಿಸಿತ್ತು. ಆದರೆ ತಮ್ಮನ ಜೊತೆ ತುಂಬಾ ಅನ್ಯೋನ್ಯವಾಗಿದ್ದ ಸಕಾರಿಯಾ ಈ ಘಟನೆ ತಿಳಿದು ಆಘಾತಕ್ಕೊಳಗಾದರು. ಒಂದು ವಾರ ಊಟ ತ್ಯಜಿಸಿ, ಯಾರೊಂದಿಗೂ ಮಾತನಾಡದೆ ಒಂಟಿಯಾಗಿ ಕಾಲ ಕಳೆದಿದ್ದರೆಂದು ಅವರ ತಾಯಿ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಇಷ್ಟೆಲ್ಲಾ ಕಷ್ಟಗಳ ನಡುವೆ ಐಪಿಎಲ್​ನಲ್ಲಿ ದೊಡ್ಡ ಮೊತ್ತದ ಒಪ್ಪಂದ ಪಡೆದ ಸಕಾರಿಯ ಮೊದಲ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಆದರೆ ಟೆಸ್ಟ್​ ಕ್ರಿಕೆಟ್​ಗೆ ಹೊಂದಿಕೊಂಡಿದ್ದ ತಾವು ಟಿ-20 ಆಟಕ್ಕೆ ಬೇಗ ಹೊಂದಿಕೊಳ್ಳಲು ಆರ್​ಸಿಬಿ ಕಾರಣ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

"2019-20 ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ವೇಳೆ ನಾನು ಜಾರ್ಖಂಡ್ ವಿರುದ್ಧ ಆಡುತ್ತಿದ್ದ ವೇಳೆ ಆರ್​ಸಿಬಿ ಸ್ಕೌಟ್ಸ್​ ನನ್ನ ಪ್ರದರ್ಶನದಿಂದ ಆಕರ್ಷಿತರಾಗಿ ಟ್ರಯಲ್ಸ್​ಗೆ ಕರೆದರು. ಟ್ರಯಲ್ಸ್​ನಲ್ಲಿ ಮೈಕ್​ ಹೆಸನ್​ ಕೂಡ ಮೆಚ್ಚಿಕೊಂಡರು. ನೆಟ್ಸ್​ನಲ್ಲಿ ಪಂದ್ಯದ ಸನ್ನಿವೇಶಗಳಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ಪರೀಕ್ಷೆಯಿಟ್ಟರು. ನಾನು ಅವರು ಹೇಳಿದ ಹಾಗೆ ಯಶಸ್ವಿಯಾಗಿ ಮಾಡಿ ತೋರಿಸಿದೆ. ದುರದೃಷ್ಟವಶಾತ್ ಅದೇ ಸಂದರ್ಭದಲ್ಲಿ ಲಾಕ್‌ಡೌನ್ ಹೇರಲಾಯಿತು. ಆದರೂ ಅವರು ನನ್ನ ಸಂಪರ್ಕದಲ್ಲಿದ್ದರು ಮತ್ತು ನನ್ನೊಂದಿಗೆ ಒಪ್ಪಂದ ಮಾಡಿಕೊಂಡರು" ಎಂದು ಸಕರಿಯಾ ನಿನ್ನೆಯ ಪಂದ್ಯದ ನಂತರ ಮಾಧ್ಯಮಕ್ಕೆ ಹೇಳಿದ್ದಾರೆ.

"2020ರ ಐಪಿಎಲ್​ಗೆ ನೆಟ್ ಬೌಲರ್​ ಆಗಿ ತಂಡದ ಜೊತೆ ಯುಎಇಗೆ ಪ್ರಯಾಣಿಸಿದೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್​ ಮತ್ತು ಉಮೇಶ್ ಯಾದವ್​ ನೆಟ್ಸ್​ನಲ್ಲಿದ್ದ ವೇಳೆ ಸಾಕಷ್ಟು ಸಲಹೆ ನೀಡಿದರು" ಎಂದು 23 ವರ್ಷದ ವೇಗಿ ನೆನಪಿಸಿಕೊಂಡರು.

ಸ್ಟೈನ್ ನನಗೆ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮಾಡುವ ಯೋಜನೆಗಳಿಗೆ ಸಂಬಂಧಿಸಿದ ಬಹಳಷ್ಟು ವಿಷಯಗಳನ್ನು ಕಲಿಸಿದರು. ಎಡಗೈ ಬ್ಯಾಟ್ಸ್‌ಮನ್‌ಗೆ ರೌಂಡ್​ ದ ವಿಕೆಟ್​ ಮತ್ತು ಆಫ್-ಸ್ಟಂಪ್ ಹೊರಗೆ ಅಗಲವಾಗಿ ಬೌಲ್ ಮಾಡುವುದು ಹೇಗೆ ಎಂದು ಅವರು ನನಗೆ ಕಲಿಸಿದರು. ಈ ರೀತಿಯ ಎಸೆತಗಳಿಗೆ ಎಡಗೈ ಆಟಗಾರರಿಗೆ ಆಡುವುದು ತುಂಬಾ ಕಷ್ಟವಾಗುತ್ತದೆ. ನಾನು ಮೊಯೀನ್ ಅಲಿ ಅವರನ್ನು ಇಂಟ್ರಾಸ್ಕ್ವಾಡ್ ಪಂದ್ಯದಲ್ಲಿ ಔಟ್​ ಮಾಡಿದ್ದೆ ಎಂದು ನೆನಪಿಸಿಕೊಂಡರು.

ಇನ್ನು ಮತ್ತೊಬ್ಬ ಅನುಭವಿ ವೇಗಿ ಉಮೇಶ್ ಯಾದವ್​ ಕೂಡ ನನ್ನ ಕೌಶಲ್ಯಗಳು ಮತ್ತು ವೇರಿಯೇಸನ್ಸ್​ಗಳ ಹೇಗೆ ಅಭಿವೃದ್ಧಿಗೊಳಿಸಬೇಕು ಎಂಬುದನ್ನು ಕಲಿಸಿಕೊಟ್ಟರು ಎಂದು ಸಕಾರಿಯಾ ತಿಳಿಸಿದ್ದಾರೆ.

ಆರ್​ಸಿಬಿಯಲ್ಲಿ ನೆಟ್​ ಬೌಲರ್​ ಕೆಲಸ ಮುಗಿಸಿ ಬಂದ ನಂತರ ರಾಜಸ್ಥಾನ್ ರಾಯಲ್ಸ್​ ಟ್ರಯಲ್ಸ್​ಗೆ ಕರೆಯಿತು. ಅಲ್ಲೂ ನನ್ನ ಬೌಲಿಂಗ್ ಮತ್ತು ವಿಭಿನ್ನ ವೇರಿಯೇಸನ್ಸ್​ ಇಷ್ಟಪಟ್ಟರು. ನಂತರ ಸಯ್ಯದ್ ಮುಷ್ತಾಕ್ ಅಲಿಯಲ್ಲಿ ನೀಡಿದ ಪ್ರದರ್ಶನ ದೊಡ್ಡ ಮೊತ್ತದ ಒಪ್ಪಂದಕ್ಕೆ ನೆರವಾಯಿತು ಎಂದು ತಿಳಿಸಿದ್ದಾರೆ.

ಸಕಾರಿಯ ಅವರನ್ನು ಫೆಬ್ರವರಿ 19ರಂದು ನಡೆದ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್​ ರಾಯಲ್ಸ್​ 1.2 ಕೋಟಿ ರೂ. ನೀಡಿ ಖರೀದಿಸಿತು. ಟೆಂಪೋ ಡ್ರೈವರ್ ಮಗ, ಶಾಲಾ ದಿನಗಳಲ್ಲಿ ಕ್ರಿಕೆಟ್​ ಸಾಮಾಗ್ರಿಗಳನ್ನು ಖರೀದಿಸಲಾಗದೆ ಸ್ವತಃ ಸ್ಟೆಷನರಿ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಸಕಾರಿಯಾ ತಾವು ಪಟ್ಟ ಕಷ್ಟಗಳಿಗೆಲ್ಲ ಇಂದು ಪ್ರತಿಫಲ ಪಡೆದಿದ್ದಾರೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.