ETV Bharat / sports

'ದಿ ವಾಲ್​'ಗೆ 48ರ ಹರೆಯ: ರಾಹುಲ್ ದ್ರಾವಿಡ್ ಕ್ರಿಕೆಟ್ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದ ಮಹತ್ವದ ಸಂಗತಿಗಳಿವು!

author img

By

Published : Jan 11, 2021, 8:32 AM IST

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಸಾಲಿನಲ್ಲಿ ನಿಲ್ಲುವ ಜಂಟಲ್​ಮ್ಯಾನ್​ ಗೇಮ್​ನ ಜಂಟಲ್​ಮ್ಯಾನ್, ಕನ್ನಡಿಗ ರಾಹುಲ್ ದ್ರಾವಿಡ್ ಇಂದು 48ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

Rahul Dravid Birthday
ರಾಹುಲ್ ದ್ರಾವಿಡ್

ಬೆಂಗಳೂರು: ತನ್ನ ತಾಳ್ಮೆ ಹಾಗೂ ಅದ್ಭುತ ಆಟದಿಂದ 'ದಿ ವಾಲ್​' ಎಂದು ಕರೆಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕನ್ನಡಿಗ ರಾಹುಲ್​ ದ್ರಾವಿಡ್​ ಇಂದು 48 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

Rahul Dravid Birthday
ರಾಹುಲ್ ದ್ರಾವಿಡ್

ಹುಟ್ಟಿದ್ದು ಮಧ್ಯಪ್ರದೇಶದ ಇಂದೋರ್​ನಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಅಂಡರ್​ 15, ಅಂಡರ್ ​17, ಅಂಡರ್​ 19 ನಿಂದಲೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಅವರು ಕನ್ನಡಿಗರಿಗಷ್ಟೇ ಅಲ್ಲ ವಿಶ್ವದ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗರಾಗಿದ್ದಾರೆ.

ಶರದ್​ ದ್ರಾವಿಡ್​, ಪುಷ್ಪಾ ದ್ರಾವಿಡ್​ರ ಎರಡನೇ ಮಗನಾಗಿ ಜನವರಿ 11, 1973 ರಲ್ಲಿ ರಾಹುಲ್​ ದ್ರಾವಿಡ್​ ಜನಿಸಿದರು. ಅವರ ತಂದೆ ಕ್ರಿಕೆಟ್​ ಪ್ರೇಮಿಯಾಗಿದ್ದರಿಂದ ದ್ರಾವಿಡ್​ಗೆ ಚಿಕ್ಕಂದಿನಿಂದಲೇ ಕ್ರಿಕೆಟ್​ಗೆ ಬೇಕಾದ ಎಲ್ಲ ರೀತಿಯ ಸೌಕರ್ಯ ಸಿಕ್ಕಿತ್ತು. ಬೆಂಗಳೂರು ಯುನೈಟೆಡ್​ ಕ್ರಿಕೆಟ್​ ಕ್ಲಬ್​ ನಲ್ಲಿ ಕ್ರಿಕೆಟ್​ ಶುರು ಮಾಡಿದ ದ್ರಾವಿಡ್​ ಕರ್ನಾಟಕದ ಪರ ಕಿರಿಯರ ವಿಭಾಗದಿಂದಲೇ(ಅಂಡರ್​15, 17, 19) ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದರು.

Rahul Dravid Birthday
ರಾಹುಲ್ ದ್ರಾವಿಡ್

ರಣಜಿ ಕ್ರಿಕೆಟ್​ನಲ್ಲಿ ದ್ರಾವಿಡ್​:

ದ್ರಾವಿಡ್​ ಕೇವಲ 17 ವರ್ಷದವರಿದ್ದಾಗಲೇ ರಣಜಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಭರ್ಜರಿ 84 ರನ್​ಗಳಿಸಿ ಮಿಂಚಿದ ಅವರು ನಂತರದ ಮೂರು ರಣಜಿ ಪಂದ್ಯಗಳಲ್ಲಿ (ಗಂಗೂಲಿಯಿದ್ದ ​ಬೆಂಗಾಲ್ ತಂಡವೂ ಸೇರಿದಂತೆ​) ಶತಕ ಸಿಡಿಸಿ ಮಿಂಚಿದರು. 1992 ರಿಂದ 1994 ರವರೆಗೆ ರಣಜಿ ಕ್ರಿಕೆಟ್​ನಲ್ಲಿ ಭರ್ಜರಿ ಆಟ ಪ್ರದರ್ಶನ ನೀಡಿದರೂ ಆಯ್ಕೆಗಾರರ ಕಣ್ಣಿಗೆ ಮಾತ್ರ ದ್ರಾವಿಡ್​ ಆಟ ಕಾಣಿಸಿರಲಿಲ್ಲ. 1994 ರಲ್ಲಿ ತಂಡಕ್ಕೆ ಆಯ್ಕೆಯಾದರೂ ಆಡುವ 11ರ ಬಳಗದಲ್ಲಿ ಅವಕಾಶ ಸಿಗಲಿಲ್ಲ. 1994-95ರಲ್ಲಿ ರಲ್ಲಿ ಭಾರತ ಎ ಪರ ಹಾಗೂ 1995-96 ರ ರಣಜಿ ಆವೃತ್ತಿಗಳಲ್ಲಿ ರನ್​ ಹೊಳೆಯನ್ನೇ ಹರಿಸಿದ ದ್ರಾವಿಡ್​ ಕೊನೆಗೂ 1996ರಲ್ಲಿ ಶ್ರೀಲಂಕಾ ವಿರುದ್ಧ ರಾಷ್ಟ್ರೀಯ ತಂಡದ ಪರ ಕ್ರಿಕೆಟ್​ಗೆ ಎಂಟ್ರಿಕೊಟ್ರು. ಆದರೆ, ಆ ಟೂರ್ನಿಯಲ್ಲಿ ದ್ರಾವಿಡ್​ ಕಳಪೆ ಪದರ್ಶನ ತೋರಿ ನಿರಾಸೆಯನುಭವಿಸಿದ್ದರು.

Rahul Dravid Birthday
ರಾಹುಲ್ ದ್ರಾವಿಡ್

ಲಾರ್ಡ್ಸ್​ನಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ದ್ರಾವಿಡ್ :

ಇಂಗ್ಲೆಂಡ್​ ವಿರುದ್ಧ ಅವರ ನೆಲದಲ್ಲೇ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದ ದ್ರಾವಿಡ್​ಗೆ, ತಮ್ಮ ಪ್ರೀತಿಯ 3 ನೇ ಕ್ರಮಾಂಕ ಸಿಗದಿದ್ದರೂ 7ನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್​ ನಡೆಸಿ 95 ರನ್​ಗಳಿಸಿದ್ದರು. (ಅದೇ ಪಂದ್ಯದಲ್ಲಿ ಗಂಗೂಲಿ ಕೂಡ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಭರ್ಜರಿ ಶತಕ ಸಿಡಿಸಿರುತ್ತಾರೆ). ಆ ಸರಣಿಯಲ್ಲಿ ಶತಕಗಳಿಸುವಲ್ಲಿ ವಿಫಲರಾದರೂ ಬ್ರಿಟಿಷ್​ ಮಾಧ್ಯಮಗಳ ಹೊಗಳಿಕೆಗೆ ಪಾತ್ರರಾಗಿದ್ದರು.

ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್​:

ಇಂಗ್ಲೆಂಡ್​ ಸರಣಿಯ ನಂತರ ತಿರುಗಿ ನೋಡದ ದ್ರಾವಿಡ್​ ದೇಶ ವಿದೇಶಗಳಲ್ಲಿ ಅದ್ಭುತ ಪ್ರದರ್ಶನ ತೋರಿ, ಭಾರತ ಕ್ರಿಕೆಟ್​ನಲ್ಲಿ ಸಚಿನ್​ ನಂತರದ ಸ್ಥಾನದಲ್ಲಿ ಬಂದು ನಿಂತರು. ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ ಎರಡರಲ್ಲೂ ಸಚಿನ್​ರಂತೆಯೇ ರನ್​ಗಳಿಸಿದ ದ್ರಾವಿಡ್​, ಭಾರತದ ಪರ ಎರಡು ಮಾದರಿಯ ಕ್ರಿಕೆಟ್​ನಲ್ಲಿ 10 ಸಾವಿರ ಗಳಿಸಿದ ಎರಡನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಅಲ್ಲದೇ 2004ರಲ್ಲಿ ಟೆಸ್ಟ್​ ಆಡುವ ಎಲ್ಲ ದೇಶಗಳ ವಿರುದ್ಧ ಶತಕಗಳಿಸಿದ ಏಕೈಕ ಬ್ಯಾಟ್ಸ್​ಮನ್​ ಎಂಬ ಶ್ರೇಯಕ್ಕೂ ದ್ರಾವಿಡ್​ ಪಾತ್ರರಾಗಿದ್ದಾರೆ.

Rahul Dravid Birthday
ರಾಹುಲ್ ದ್ರಾವಿಡ್

ಭಾರತದ ಪರ 164 ಟೆಸ್ಟ್​ ಪಂದ್ಯಗಳನ್ನಾಡಿರುವ ದ್ರಾವಿಡ್​ 13,288 ರನ್​ಗಳಿಸಿದ್ದಾರೆ. ಇದರಲ್ಲಿ 36 ಶತಕ ಹಾಗೂ 63 ಅರ್ಧಶತಕ ಸೇರಿವೆ. ದ್ರಾವಿಡ್​ರ ಶತಕಗಳಲ್ಲಿ ಬಹುಪಾಲು ಶತಕಗಳು ಬಂದಿರುವುದು ವಿದೇಶಗಳಲ್ಲೇ ಎಂಬುದು ಅವರನ್ನು ವಿಶಿಷ್ಠ ಸಾಲಿನಲ್ಲಿ ಸೇರಿಸುತ್ತದೆ. ದ್ರಾವಿಡ್​ ಸಿಡಿಸಿರುವ 36 ಶತಕಗಳಲ್ಲಿ ಭಾರತ 32 ಶತಕಗಳು ಗೆಲುವು ಮತ್ತು ಡ್ರಾ ಸಾಧಿಸಲು ನೆರವಾಗಿವೆ.

Rahul Dravid Birthday
ರಾಹುಲ್ ದ್ರಾವಿಡ್

ದ್ರಾವಿಡ್​ ಟೆಸ್ಟ್​ ಆಡುವುದಕ್ಕೆ ಲಾಯಕ್ಕೂ ಎಂಬ ಟೀಕೆಗೆ ತನ್ನ ಬ್ಯಾಟ್​​ ಮೂಲಕವೇ ಉತ್ತರಿಸಿದ ದ್ರಾವಿಡ್​ 344 ಏಕದಿನ​ ಪಂದ್ಯಗಳನ್ನಾಡಿದ್ದು 10889 ರನ್​ಗಳಿಸಿದ್ದಾರೆ. ಇದರಲ್ಲಿ 12 ಶತಕ ಹಾಗೂ 83 ಅರ್ಧಶತಕ ಸಿಡಿಸಿದ್ದಾರೆ. 20 ಎಸೆತಗಳಲ್ಲಿ ಅರ್ಧಶತಕ ಹಾಗೂ ಎರಡು ಬಾರಿ 300ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ದ್ರಾವಿಡ್​ರದ್ದಾಗಿದೆ. ದ್ರಾವಿಡ್​ 2012ರಲ್ಲಿ ತಮ್ಮ 16 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದರು.

ದ್ರಾವಿಡ್​ ಹೆಸರಿನಲ್ಲಿರುವ ಟೆಸ್ಟ್​ ಕ್ರಿಕೆಟ್​ ದಾಖಲೆಗಳು:

3ನೇ ಕ್ರಮಾಂದಲ್ಲಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನಾಡಿರುವ ದ್ರಾವಿಡ್​ ಆ ಕ್ರಮಾಂಕದಲ್ಲಿ 10 ಸಾವಿರ ರನ್​ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಒಂದು ಟೆಸ್ಟ್​ನ ಎರಡು ಇನ್ನಿಂಗ್ಸ್​ನಲ್ಲಿ ಎರಡು ಶತಕಗಳನ್ನು ಎರಡು ಬಾರಿ ಸಿಡಿಸಿದ್ದಾರೆ. ಅತಿ ಹೆಚ್ಚು (66) ಶತಕದ ಜೊತೆಯಾಟ, ಅತಿ ಹೆಚ್ಚು ಕ್ಯಾಚ್​(210), ಅತಿ ಹೆಚ್ಚು ಎಸೆತಗಳನ್ನು ಎದುರಿಸಿರುವ ಬ್ಯಾಟ್ಸ್​ಮನ್ ಎಂಬ ದಾಖಲೆಯೂ ದ್ರಾವಿಡ್​ ಹೆಸರಿನಲ್ಲಿದೆ.

Rahul Dravid Birthday
ರಾಹುಲ್ ದ್ರಾವಿಡ್

ನಾಯಕನಾಗಿ ದ್ರಾವಿಡ್​ ಸಾಧನೆ:

ದ್ರಾವಿಡ್​ ಕೇವಲ ಆಟಗಾರನಾಗಿಯಲ್ಲದೇ ಭಾರತ ತಂಡದ ನಾಯಕನಾಗಿಯೂ ಸೇವೆಸಲ್ಲಿಸಿದ್ದಾರೆ. ಅವರು ನಾಯಕತ್ವದಲ್ಲಿ ಭಾರತ 79 ಏಕದಿನ ಪಂದ್ಯಗಳನ್ನಾಡಿದ್ದು 42 ಗೆಲುವು 33 ಸೋಲುಕಂಡಿದೆ. 25 ಟೆಸ್ಟ್​ ಪಂದ್ಯಗಳಲ್ಲ 8 ಸೋಲು, 8 ಗೆಲುವು ಕಂಡಿದೆ. 2007ರಲ್ಲಿ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆಲುವು ಹಾಗೂ ಪಾಕಿಸ್ತಾನದಲ್ಲಿ 4-1ರಲ್ಲಿ ಏಕದಿನ ಸರಣಿ ಗೆಲುವು ಅವರ ನಾಯಕತ್ವದ ವಿಶೇಷತೆ.

Rahul Dravid Birthday
ರಾಹುಲ್ ದ್ರಾವಿಡ್

ಕೋಚ್​ ಆಗಿ ದ್ರಾವಿಡ್​:

ಭಾರತ ಕ್ರಿಕೆಟ್​ಗೆ ಅಪಾರ ಸೇವೆ ಸಲ್ಲಿಸಿದ ನಂತರ ದ್ರಾವಿಡ್​ ಭವಿಷ್ಯದಲ್ಲಿ ಭಾರತ ತಂಡಕ್ಕೆ ಉತ್ತಮ ಕ್ರಿಕೆಟಿಗರನ್ನು ತಯಾರು ಮಾಡಲು ಅಂಡರ್​ 19 ಹಾಗೂ ಭಾರತ ಎ ತಂಡಗಳ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಕೋಚಿಂಗ್​ನಲ್ಲಿ ಭಾರತ ತಂಡ ಸತತ ಎರಡು ಬಾರಿ ಅಂಡರ್​ 19 ವಿಶ್ವಕಪ್​ ಫೈನಲ್​ ಪ್ರವೇಶಿಸಿದೆ. ಒಮ್ಮೆ ಚಾಂಪಿಯನ್​ ಮತ್ತೊಮ್ಮೆ ರನ್ನರ್​ ಆಪ್​ ಪ್ರಶಸ್ತಿಗೆ ತೃಪ್ತಿಪಟ್ಟಿತು. ಇವರ ಗರಡಿಯಲ್ಲಿ ಪಳಗಿದ ಪೃಥ್ವಿ ಶಾ, ಮಯಾಂಕ್​ ಅಗರ್​ವಾಲ್​, ಕೆಎಲ್​ ರಾಹುಲ್​ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡದ ಪರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸದ್ಯಕ್ಕೆ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿ ಆಟಗಾರರಿಗೆ ತರಬೇತಿ, ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಹೊತ್ತಿದ್ದಾರೆ.

Rahul Dravid Birthday
ರಾಹುಲ್ ದ್ರಾವಿಡ್

ದ್ರಾವಿಡ್​ಗೆ ಸಿಕ್ಕಿರುವ ಪ್ರಶಸ್ತಿ ಪುರಸ್ಕಾರಗಳು

  • 1998-ಅರ್ಜುನ ಪ್ರಶಸ್ತಿ
  • 2004- ಪದ್ಮಶ್ರೀ
  • 2013- ಪದ್ಮಭೂಷಣ
  • 1999 -ಸಿಯೆಟ್​(CEAT) ಅಂತಾರಾಷ್ಟ್ರೀಯ ಕ್ರಿಕೆಟರ್​ ಆಫ್​ ದಿ ವರ್ಲ್ಡ್ ಕಪ್​
  • 2000- ವಿಸ್ಡನ್​ ವರ್ಷದ ಕ್ರಿಕೆಟರ್(​ಟಾಪ್​ 5ರಲ್ಲಿ ಒಬ್ಬರು)
  • 2004- ಐಸಿಸಿ ವರ್ಷದ ಕ್ರಿಕೆಟರ್
  • ​2004- ಐಸಿಸಿ ವರ್ಷದ ಟೆಸ್ಟ್​ ಆಟಗಾರ
  • 2006- ಐಸಿಸಿ ಟೆಸ್ಟ್​ ತಂಡದ ನಾಯಕ
  • 2011- NDTV ಇಂಡಿಯನ್​ ಆಫ್​ ದಿ ಇಯರ್​
  • 2012- ಡಾನ್​ ಬ್ರಾಡ್ಮನ್​ ಪ್ರಶಸ್ತಿ
  • 2015- 'ವಿಸ್ಡನ್' ಭಾರತದ ಅತ್ಯಧಿಕ ಪರಿಣಾಮ ಟೆಸ್ಟ್ ಬ್ಯಾಟ್ಸ್‌ಮನ್
  • 2018- ಐಸಿಸಿ ಹಾಲ್​ ಆಫ್​ ಫೇಮ್​ ಗೌರವ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.