ETV Bharat / sports

ಪಾಂಡ್ಯ, ಧವನ್ ಹೋರಾಟ ವ್ಯರ್ಥ.. ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಆಸೀಸ್

author img

By

Published : Nov 27, 2020, 5:55 PM IST

ಸ್ಫೋಟಕ ಬ್ಯಾಟಿಂಗ್ ಮತ್ತು ಶಿಸ್ತಿನ ಬೌಲಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಅಂಕಗಳ ಮುನ್ನಡೆ ಸಾಧಿಸಿದೆ..

Ind vs Aus
ಪಾಂಡ್ಯ, ಧವನ್ ಹೋರಾಟ ವ್ಯರ್ಥ

ಸಿಡ್ನಿ(ಆಸ್ಟ್ರೇಲಿಯಾ): ಎಸ್​​ಸಿಜಿ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ಬೌಲರ್​ಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 66 ರನ್​ಗಳಿಂದ ಕಾಂಗ್ರೋಗಳಿಗೆ ಶರಣಾಗಿದೆ.

ಆ್ಯಡಂ ಜಂಪಾ ಮತ್ತು ಹೆಜಲ್​ವುಡ್ ಬೌಲಿಂಗ್​ ದಾಳಿಗೆ ಪೆಲಿಲಿಯನ್ ಸೇರಿದ ಭಾರತೀಯ ಆಟಗಾರರು, ನಿಗದಿತ 50 ಓವರ್​ಗಳಲ್ಲಿ 308 ರನ್​ಗಳಿಸಿದ್ರು. ಮೊದಲ ಏಕದಿನ ಪಂದ್ಯದಲ್ಲಿ 66 ರನ್​ಗಳ ಜಯ ದಾಖಲಿಸಿದ ಆಸೀಸ್‌ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

375 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 22 ರನ್​ಗಳಿಸಿ ಪೆವಿಲಿಯನ್ ಸೇರಿದ್ರು, ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚು ಸಮಯ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. 21 ರನ್​​ಗಳಿಸಿ ಹೆಜಲ್​ವುಡ್​ಗೆ ವಿಕೆಟ್ ಒಪ್ಪಿಸಿದ್ರು.

ನಂತರ ಬಂದ ಶ್ರೇಯಸ್ ಅಯ್ಯರ್(2), ಕೆ ಎಲ್​ ರಾಹುಲ್(12) ಬೇಗನೆ ಪೆವಿಲಿಯನ್ ಸೇರಿದ್ರು. ಭಾರತ ತಂಡ 13 ಓವರ್​ಗಳಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು 113 ರನ್​ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್​ ಉತ್ತಮವಾಗಿ ಬ್ಯಾಟ್ ಬೀಸಿದ್ರು.

ಈ ಜೋಡಿ ಐದನೇ ವಿಕೆಟ್​ಗೆ 128 ರನ್​ಗಳ ಉತ್ತಮ ಜೊತೆಯಾಟ ನೀಡಿತು. 74 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ಧವನ್, ಜಂಪಾಗೆ​ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು. ಒಂದೆಡೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪಾಂಡ್ಯ 76 ಎಸೆತಗಳಲ್ಲಿ 90 ರನ್​ಗಳಿಸಿ ಜಂಪಾ ಬೌಲಿಂಗ್​ನಲ್ಲಿ ಸ್ಟಾರ್ಕ್​​ಗೆ ಕ್ಯಾಚ್​ ನೀಡಿದ್ರು. ಈ ಮೂಲಕ ಟೀಂ ಇಂಡಿಯಾದ ಗೆಲುವಿನ ಆಸೆಗೆ ತಣ್ಣೀರು ಬಿತ್ತು.

ಅಂತಿಮವಾಗಿ ಭಾರತ ತಂಡ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 308 ರನ್​ ಗಳಿಸಿತು. ಆಸ್ಟ್ರೇಲಿಯಾ ಪರ ಜಂಪಾ 4 ವಿಕೆಟ್ ಪಡೆದ್ರೆ, ಹೆಜಲ್​ವುಡ್ 3 ಮತ್ತು ಸ್ಟಾರ್ಕ್ 1 ವಿಕೆಟ್​ ಪಡೆದು ಮಿಂಚಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.