ETV Bharat / sports

ಐಸಿಸಿ ಏಕದಿನ ವಿಶ್ವಕಪ್: ಪಂದ್ಯಾವಳಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತಷ್ಟು ಮೇಲ್ದರ್ಜೆಗೆ, ವಿಶೇಷತೆಗಳೇನು‌?

author img

By ETV Bharat Karnataka Team

Published : Oct 3, 2023, 12:37 PM IST

ಈ ಬಾರಿಯ ಏಕದಿನ ವಿಶ್ವಕಪ್​ನ ಐದು ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕ್ರಿಡಾಂಗಣವನ್ನು ಮೇಲ್ದರ್ಜೆಗೆ ಏರಿಸಲಾಗಿದೆ.​

ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಕ್ರೀಡಾಂಗಣ

ಬೆಂಗಳೂರು: ಏಕದಿನ ವಿಶ್ವಕಪ್ ಸರಣಿ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಐದು ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್ 20ರಂದು ಆಸ್ಟ್ರೇಲಿಯಾ - ಪಾಕಿಸ್ತಾನ, ಅಕ್ಟೋಬರ್ 26ರಂದು ಇಂಗ್ಲೆಂಡ್ - ಶ್ರೀಲಂಕಾ, ನವೆಂಬರ್ 4ರಂದು ನ್ಯೂಜಿಲೆಂಡ್ - ಪಾಕಿಸ್ತಾನ, ನವೆಂಬರ್ 9ರಂದು ನ್ಯೂಜಿಲೆಂಡ್ - ಶ್ರೀಲಂಕಾ ಹಾಗೂ ನವೆಂಬರ್ 12ರಂದು ಭಾರತ - ನೆದರ್ಲೆಂಡ್ಸ್‌ ನಡುವಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಕೆಲ ಪ್ರಮುಖ ಸೌಲಭ್ಯಗಳನ್ನ ಮೇಲ್ದರ್ಜೆಗೇರಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಕ್ರೀಡಾಂಗಣ

ನಲವತ್ತು ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣ ಮಳೆ ಬಾಧಿತ ಸಂದರ್ಭಗಳನ್ನ ಎದುರಿಸಲು 'ಸಬ್ ಏರ್' ವ್ಯವಸ್ಥೆ, ವಿದ್ಯುತ್​ಗಾಗಿ ಮೇಲ್ಛಾವಣಿಗಳಲ್ಲಿ ಸೋಲಾರ್ ಪ್ಯಾನೆಲ್ ವ್ಯವಸ್ಥೆ, ಮಳೆ ನೀರು ಮರುಬಳಕೆಯಂಥಹ ವ್ಯವಸ್ಥೆಗಳನ್ನು ಹೊಂದಿದ ದೇಶದ ಮೊದಲ ಕ್ರೀಡಾಂಗಣವಾಗಿದೆ. ಈ ಬಾರಿಯ ವಿಶ್ವಕಪ್ ಸರಣಿಗೆ ಅಂತಿಮ ಕ್ರೀಡಾಂಗಣಗಳ ಪಟ್ಟಿ ಪ್ರಕಟವಾದ ಬಳಿಕ ಐಸಿಸಿಯ ಅಧಿಕಾರಿಗಳ ತಂಡ ಬೆಂಗಳೂರಿಗೆ ಭೇಟಿ ನೀಡಿದ್ದು ಕೆಲ ಸಲಹೆ ಸೂಚನೆಗಳನ್ನು ನೀಡಿದೆ. ಅದರಂತೆ ಕ್ರೀಡಾಂಗಣದ ಕೆಲ ಸ್ಟ್ಯಾಂಡ್​ಗಳ ಮೇಲ್ಛಾವಣಿ ಬದಲಾವಣೆ, ಆಸನಗಳ ಬದಲಾವಣೆ, ಮಾಧ್ಯಮ ಕೊಠಡಿಯ ಊಟದ ಕೊಣೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿದೆ.

ಡ್ರೆಸ್ಸಿಂಗ್ ರೂಮ್: ಆಟಗಾರರ ಡ್ರೆಸ್ಸಿಂಗ್ ರೂಮ್ ಪ್ರಮುಖ ಮಾರ್ಪಾಡು ಹೊಂದಿದ್ದು, ನೆಲಹಾಸು ಸಂಪೂರ್ಣವಾಗಿ ಬದಲಿಸಲಾಗಿದೆ. ಅಲ್ಲದೇ ಡ್ರೆಸ್ಸಿಂಗ್ ರೂಮ್ ಶೌಚಾಲಯಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಕ್ರೀಡಾಂಗಣ

ಹಾಸ್ಪಿಟಾಲಿಟಿ ಬಾಕ್ಸ್: ಕ್ರೀಡಾಂಗಣವು P2, P, P-ಟೆರೇಸ್, ಹಾಗೂ ಡೈಮಂಡ್ ಎಂಬ ನಾಲ್ಕು ಬಾಕ್ಸ್​ಗಳನ್ನು ಹೊಂದಿದ್ದು, ಅಭಿಮಾನಿಗಳು ಊಟ, ಐಷಾರಾಮಿ ಸೌಲಭ್ಯದೊಂದಿಗೆ ಪಂದ್ಯಗಳನ್ನ ವೀಕ್ಷಿಸಬಹುದು‌. ಇನ್ನು ಆಟಗಾರರ ಡ್ರೆಸ್ಸಿಂಗ್ ರೂಮ್ ಪಕ್ಕದಲ್ಲಿರುವ ಡೈಮಂಡ್ ಬಾಕ್ಸ್ ವಿಶೇಷ ಅತಿಥಿಗಳಿಗಾಗಿ ಮೀಸಲಿರಲಿದ್ದು ರಾಜ್ಯದ ದಿಗ್ಗಜ ಕ್ರಿಕೆಟಿಗರೊಂದಿಗೆ ಕುಳಿತು ಕ್ರಿಕೆಟ್ ವೀಕ್ಷಿಸುವ ಅವಕಾಶವಿರಲಿದೆ.

ಆಟಗಾರರ ಅಭ್ಯಾಸ: ಚಿನ್ನಸ್ವಾಮಿ ಕ್ರೀಡಾಂಗಣವು ಆಟಗಾರರ ನೆಟ್ ಸೆಷನ್ಸ್ ಬಳಕೆಗಾಗಿ ಐದು ಪಿಚ್ ಹೊಂದಿದೆ. ಇದಲ್ಲದೇ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್.ಸಿ‌ಎ) ಗ್ರೌಂಡ್ ಸಹ ಆಟಗಾರರ ಅಭ್ಯಾಸಕ್ಕೆ ಬಳಕೆಯಾಗಲಿದೆ.

ಪಿಚ್: ಮೈದಾನದ ಮೂರು ಪಿಚ್​ಗಳನ್ನು ಅಂತರಾಷ್ಟ್ರೀಯ ಪಂದ್ಯಗಳ ಬಳಕೆಗಾಗಿ ಐಸಿಸಿ ಗುರುತಿಸಿದೆ. ಆ ಪೈಕಿ ಕೆಂಪು ಮಣ್ಣಿನ ಪಿಚ್ ಹೆಚ್ಚು ಬಳಕೆಯಾಗುತ್ತಿದೆ. ಅಲ್ಲದೆ ನಾಲ್ಕನೇ ಪಿಚ್ ಸ್ಟ್ಯಾಂಡ್ ಬೈ ಎಂದು ಗುರುತಿಸಲ್ಪಟ್ಟಿದೆ.

ಸಬ್ ಏರ್ ಸಿಸ್ಟಮ್: ಮಳೆಯಿಂದ ಪಂದ್ಯ ರದ್ದಾಗುವುದನ್ನು ತಪ್ಪಿಸಲು ದೇಶದಲ್ಲೇ ಅತ್ಯುತ್ತಮವಾದ 'ಸಬ್ ಏರ್' ತಂತ್ರಜ್ಞಾನವನ್ನು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನ ಹೊಂದಿದೆ. ಇದರಿಂದಾಗಿ ಎಷ್ಟೇ ಪ್ರಮಾಣದ ಮಳೆಯಾದರೂ ಸಹ ಒಮ್ಮೆ ಮಳೆ ನಿಂತ ನಂತರ ಕೇವಲ 15-20 ನಿಮಿಷಗಳೊಳಗಾಗಿ ಮೈದಾನ ಪಂದ್ಯಕ್ಕೆ ಯೋಗ್ಯವಾಗಿ ಸಜ್ಜುಗೊಳ್ಳಲಿದೆ. 2017ರಲ್ಲಿ ಅಮೇರಿಕಾದ ಸಬ್ ಏರ್ ಕಂಪನಿಯ ಸಹಯೋಗದೊಂದಿಗೆ 4.25 ಕೋಟಿ ರೂ.ವೆಚ್ಚದಲ್ಲಿ ಚಿನ್ನಸ್ವಾಮಿಗೆ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಕಳೆದ ಐಪಿಎಲ್ ವೇಳೆ ವರುಣನ ಅವಕೃಪೆಯ ನಂತರವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು - ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಸಂಪೂರ್ಣ ಓವರ್‌ಗಳು ನಡೆದು ಫಲಿತಾಂಶ ಕಂಡಿದ್ದು ಸಬ್ ಏರ್ ಸಿಸ್ಟಂ ಕಾರ್ಯಕ್ಷಮತೆಗೆ ಸಾಕ್ಷಿ ಎನ್ನಬಹುದು

ಪ್ರವೇಶ ದ್ವಾರಗಳು: ಚಿನ್ನಸ್ವಾಮಿ ಕ್ರೀಡಾಂಗಣವು 21 ಪ್ರವೇಶ ದ್ವಾರಗಳನ್ನ ಹೊಂದಿದ್ದು, ಕಬ್ಬನ್ ಪಾರ್ಕ್ ಎದುರಿನ ಪ್ರಮುಖ ದ್ವಾರ ಆಟಗಾರರು, ವಿಐಪಿಗಳ ಪ್ರವೇಶಕ್ಕೆ ಸೀಮಿತವಿರಲಿದೆ. ಉಳಿದಂತೆ ಇನ್ನಿತರ ಪ್ರವೇಶದ್ವಾರಗಳು ಪ್ರತೀ ಪಂದ್ಯಕ್ಕೂ ಮೂರು ಗಂಟೆಗಳ ಮುನ್ನವೇ ತೆರೆದಿರಲಿದ್ದು ಕೆ.ಎಸ್.ಸಿ.ಎ ಸಿಬ್ಬಂದಿ ಹಾಗೂ ಟಿಕೆಟ್ ಏಜೆನ್ಸಿಯ ಸಿಬ್ಬಂದಿಗಳು ಅಭಿಮಾನಿಗಳಿಗೆ ನೆರವಾಗಲಿದ್ದಾರೆ.

ಮಾಧ್ಯಮ ಕೊಠಡಿ: ಪಂದ್ಯಗಳ ವರದಿಗಾಗಿ ಆಗಮಿಸುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ವರದಿಗಾರರಿಗಾಗಿ ಅತ್ಯುತ್ತಮ ಮಾಧ್ಯಮ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಆಸನಗಳು, ತಡೆರಹಿತ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪರಿಸರ ಕಾಳಜಿ: ಪರಿಸರ ಕಾಳಜಿಯ ಭಾಗವಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಈಗಾಗಲೇ ವಿದ್ಯುತ್​ಗಾಗಿ ಸೋಲಾರ್ ಪ್ಯಾನೆಲ್, ಮಳೆ ನೀರು ಕೊಯ್ಲು ವ್ಯವಸ್ಥೆ ಹೊಂದಿದೆ. ಅದರ ಜೊತೆಗೆ ಈ ಬಾರಿ ಕ್ರೀಡಾಂಗಣದಲ್ಲಿ ಬಳಕೆಯಾಗುವ ಪ್ಲ್ಯಾಸ್ಟಿಕ್ ಬಾಟಲಿಗಳ ಕ್ರಶಿಂಗ್ ಹಾಗೂ ಮರು ಬಳಕೆ ಯಂತ್ರಗಳನ್ನ ಅಳವಡಿಸಲಾಗುತ್ತಿದೆ.

ವೈದ್ಯಕೀಯ ಹಾಗೂ ಸಂಚಾರ ನೆರವು: ಪ್ರತೀ ಪಂದ್ಯಗಳ ಸಂದರ್ಭದಲ್ಲಿ ಕ್ರೀಡಾಂಗಣದ ಬಳಿ ವೈದ್ಯಕೀಯ ಸಿಬ್ಬಂದಿ ಹಾಗೂ ತುರ್ತು ಸೇವೆ ಆ್ಯಂಬುಲೆನ್ಸ್ ಸಹ ಇರಲಿದೆ. ಅಭಿಮಾನಿಗಳ ಸಂಚಾರಕ್ಕೆ ಅನುಕೂವಾಗಲೆಂದು ಪಂದ್ಯಗಳಿರುವ ದಿನ ಮಧ್ಯರಾತ್ರಿ 1ರವರೆಗೂ ಮೆಟ್ರೋ ಸೇವೆ ಇರಲಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌ ಕ್ರಿಕೆಟ್‌: ಜೈಸ್ವಾಲ್ ಶತಕ, ಬಿಷ್ಣೋಯ್, ಅವೇಶ್​ ಮಿಂಚು.. ನೇಪಾಳ ವಿರುದ್ಧ ಗೆದ್ದ ಟೀಂ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.