ETV Bharat / sports

WI vs Ind,1st T20:ಸ್ಪಿನ್​ ಬಲೆಗೆ ಬಿದ್ದ ಕೆರೆಬಿಯನ್ನರು..ಭಾರತಕ್ಕೆ 68 ರನ್​ಗಳ ಜಯ

author img

By

Published : Jul 30, 2022, 7:13 AM IST

ತರೊಬಾದ ಬ್ರಿಯಾನ್​ ಲಾರಾ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್​ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 68 ರನ್​ಗಳ ಜಯ ದಾಖಲಿಸಿದೆ. ಈ ಮೂಲಕ 1-0 ಮುನ್ನಡೆ ಪಡೆದಿದೆ.

a-comprehensive-68-run-win
ಭಾರತಕ್ಕೆ 68 ರನ್​ಗಳ ಜಯ

ತರೊಬಾ(ವೆಸ್ಟ್ ಇಂಡೀಸ್​): ಚುಟುಕು ಕ್ರಿಕೆಟ್​ನಲ್ಲಿ ಬಲಾಢ್ಯರು ಎಂದೇ ಗುರುತಿಸಿಕೊಂಡ ವೆಸ್ಟ್​ ಇಂಡೀಸ್​ ತಂಡ, ಭಾರತ ವಿರುದ್ಧದ ಮೊದಲ ಟಿ-20ಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನೀಡಿದ 190 ರನ್​ ಗುರು ಬೆನ್ನಟ್ಟಿ ಕೇವಲ 122 ಗಳಿಸಿ 68 ರನ್​ಗಳ ಸೋಲೊಪ್ಪಿಕೊಂಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.

ಸ್ಪಿನ್ನರ್​ಗಳ ಕರಾಮತ್ತು: ನಿಧಾನಗತಿಯ ಪಿಚ್​ನ ಲಾಭ ಪಡೆದ ಭಾರತೀಯ ಸ್ಪಿನ್ನರ್​ಗಳು ವೆಸ್ಟ್​ ಇಂಡೀಸ್​ ಆಟಗಾರರು ಪೆವಿಲಿಯನ್​ ಪರೇಡ್​ ನಡೆಸುವಂತೆ ಮಾಡಿದರು. ಇದಕ್ಕೆ ಸಾಕ್ಷಿ ಎಂಬಂತೆ ತಂಡದ ಯಾವೊಬ್ಬ ಆಟಗಾರನೂ 20 ಕ್ಕೂ ಅಧಿಕ ರನ್​ ಗಳಿಸುವಲ್ಲಿ ಸಫಲವಾಗಲಿಲ್ಲ.

ಏಕದಿನ ಸರಣಿಯಲ್ಲಿ ಮಿಂಚಿದ್ದ ಆಲ್​ರೌಂಡರ್​ ಕೈಲ್​ ಮೇಯರ್ಸ್​ ಮಿಂಚಿನ ಆರಂಭ ಪಡೆದರು. 1 ಸಿಕ್ಸ್​ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ, ಇದಕ್ಕೆ ಅರ್ಷದೀಪ್​ ಸಿಂಗ್​ ಅವಕಾಶ ಮಾಡಿಕೊಡದೇ 15 ರನ್​ಗೆ ಕಟ್ಟಿ ಹಾಕಿದರು. ಆಮ್ರಾಹ್​ ಬ್ರೂಕ್ಸ್​ 20 ರನ್​ ಗಳಿಸಿದ್ದೇ ತಂಡದ ಆಟಗಾರರ ಅತ್ಯಧಿಕ ಮೊತ್ತವಾಗಿದೆ.

ಜಾಸನ್​ ಹೋಲ್ಡರ್​ ಸೊನ್ನೆ ಸುತ್ತಿದರೆ, ನಾಯಕ ನಿಕೋಲಸ್​ ಪೂರನ್​ 18, ರೋವಮನ್​ ಪೊವೆಲ್​14, ಶಿಮ್ರಾನ ಹೆಟ್ಮಾಯಿರ್​ 14, ಅಕೀಲ್​ ಹುಸೈನ್​ 11 ಕೀಮೋ ಪೌಲ್ 19 ರನ್​ ಗಳಿಸಿದರು. ತಂಡ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡ 122 ರನ್​ ಗಳಿಸಿಲಷ್ಟೇ ಸಾಧ್ಯವಾಯಿತು.

ತ್ರಿವಳಿ ಸ್ಪಿನ್ನರ್​ಗಳಾದ ಆರ್​.ಅಶ್ವಿನ್​, ರವಿ ಬಿಷ್ಣೋಯಿ ತಲಾ 2 ವಿಕೆಟ್​ ಪಡೆದರೆ, ರವೀಂದ್ರ ಜಡೇಜಾ 1, ಅರ್ಷದೀಪ್​ ಸಿಂಗ್​ 2, ಭುವನೇಶ್ವರ್​ ಕುಮಾರ್​ 1 ವಿಕೆಟ್​ ಪಡೆದು ಗೆಲುವಿನ ಶಾಸ್ತ್ರ ಮುಗಿಸಿದರು.

ರೋಹಿತ್​, ಕಾರ್ತಿಕ್​ ಧಮಾಕಾ: ಟಾಸ್​ ಗೆದ್ದು ಮೊದಲು ಬ್ಯಾಟ್​ ಆಯ್ದುಕೊಂಡ ನಾಯಕ ರೋಹಿತ್​, ಇದೇ ಮೊದಲ ಬಾರಿಗೆ ಸೂರ್ಯಕುಮಾರ್​ ಯಾದವ್​ರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿದರು. ಇಬ್ಬರೂ ಸೇರಿ ಮೊದಲ ವಿಕೆಟ್​ಗೆ 44 ರನ್​ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್​(24) ಅಕೀಲ್​ ಹುಸೈನ್​ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾದರು.

ಏಕದಿನ ಸರಣಿಯಲ್ಲಿ ವಿಂಡೀಸ್​ ಬೌಲರ್​ಗಳ ಚಳಿ ಬಿಡಿಸಿದ್ದ ಶ್ರೇಯಸ್​ ಅಯ್ಯರ್​ ಸೊನ್ನೆ ಸುತ್ತಿದರು. ವಿಶ್ರಾಂತಿಯ ಬಳಿಕ ತಂಡ ಸೇರಿದ ರಿಷಬ್​ ಪಂತ್​ 14 ರನ್​ ಮಾಡಿದರೆ, ಬಹು ನಿರೀಕ್ಷೆಯ ಆಟಗಾರನಾಗಿ ಗುರುತಿಸಿಕೊಂಡ ಹಾರ್ದಿಕ್​ ಪಾಂಡ್ಯಾ 1 ರನ್​ ಗಳಿಸಿ ಅಭಿಮಾನಿಗಳ ನಂಬಿಕೆ ಹುಸಿ ಮಾಡಿದರು.ಆಲ್​ರೌಂಡರ್​ ರವೀಂದ್ರ ಜಡೇಜಾ 16 ರನ್​ಗಳಿಗೆ ಔಟಾದರು.

ಒಂದೆಡೆ ವಿಕೆಟ್​ ಬೀಳುತ್ತಿದ್ದರೆ ಗಟ್ಟಿಯಾಗಿ ನಿಂತ ನಾಯಕ ರೋಹಿತ್​ ಶರ್ಮಾ 44 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್​​, 7 ಬೌಂಡರಿ ಸಮೇತ 64 ರನ್ ಸಿಡಿಸಿ ಔಟಾದರು. ಕೊನೆಯಲ್ಲಿ ರನ್​ ಪೇರಿಸುವ ಜವಾಬ್ದಾರಿ ಹೊತ್ತ ದಿನೇಶ್​ ಕಾರ್ತಿಕ್​, ಆರ್​. ಅಶ್ವಿನ್​ (13) ಜೊತೆಗೂಡಿ

52 ರನ್​ ಬಾರಿಸಿದರು. ಕಾರ್ತಿಕ್​​ 2 ಸಿಕ್ಸರ್​, 4 ಬೌಂಡರಿ ಸಮೇತ 41 ರನ್ ಸಿಡಿಸಿದರು. ಇದರಿಂದ ಭಾರತ 6 ವಿಕೆಟ್​ ನಷ್ಟಕ್ಕೆ 190 ರನ್​ಗಳ ಬೃಹತ್ ಮೊತ್ತ ಪೇರಿಸಿತು. ವೆಸ್ಟ್ ಇಂಡೀಸ್ ಪರವಾಗಿ ಜೋಸೆಪ್ 2 ವಿಕೆಟ್ ಪಡೆದರೆ, ಹೋಲ್ಡರ್, ಒಬ್ಡೆ, ಕಿಮೋ ತಲಾ 1 ವಿಕೆಟ್ ಪಡೆದುಕೊಂಡರು.

ಓದಿ: ಟಿ-20 ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಬಾಂಬ್​​ ಸ್ಫೋಟ.. ನಾಲ್ವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.