ETV Bharat / sitara

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟರಾಕ್ಷಸ ಡಾಲಿ​.. ಅಣ್ಣಾವ್ರ ಸಿನಿಮಾಗಳನ್ನ‌‌ ನೋಡಿ ಹೀರೋ ಆದ ಹುಡುಗನ ಕಥೆ

author img

By

Published : Aug 23, 2021, 1:15 PM IST

ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಧನಂಜಯ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

story-of-birthday-boy-actor-dali-dhananjay
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟರಾಕ್ಷಸ ಧನಂಜಯ್​... ರಂಗಭೂಮಿಯಿಂದ ಬಂದು 'ಡಾಲಿ' ಆಗಿದ್ದು ಹೀಗೆ...

ಸಿನಿಮಾ‌‌ ಎಂಬ ಬಣ್ಣದ ಲೋಕದಲ್ಲಿ ಯಾರು, ಯಾವಾಗ ಸ್ಟಾರ್ ಆಗ್ತಾರೆ? ಯಾವಾಗ ಯಶಸ್ವಿ ನಿರ್ದೇಶಕರಾಗ್ತಾರೆ ಅಂತ ಊಹಿಸೋಕೆ ಆಗಲ್ಲ. ಅದೃಷ್ಟದ ಜೊತೆಗೆ ಪ್ರತಿಭೆ, ಶ್ರಮ ಇದ್ದರೆ ಸಾಕಷ್ಟು ಮಂದಿ ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಿದರ್ಶನ ನಮ್ಮ ಮುಂದಿವೆ. ಅಂತವರ ಸಾಲಿನಲ್ಲಿ ಡಾಲಿ ಧನಂಜಯ್​ ಕೂಡ ಒಬ್ಬರಾಗಿದ್ದಾರೆ.

ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ನಟರಾಕ್ಷಸ ಡಾಲಿ ಧನಂಜಯ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆಗಸ್ಟ್ 23, 1986ರಲ್ಲಿ ಹಾಸನ ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಇವರು ಜನಿಸಿದ್ರು. 35ನೇ ವಸಂತಕ್ಕೆ ಕಾಲಿಟ್ಟಿರುವ 'ಡೈರೆಕ್ಟರ್ ಸ್ಪೆಷಲ್' ಹೀರೋ ಸಿನಿಮಾಗೆ ಜಗತ್ತಿಗೆ ಬಂದಿದ್ದು ಅಚ್ಚರಿಯ ಸಂಗತಿಯಾಗಿದೆ.

Story on birthday boy actor Dali Dhananjay
ಶಿವರಾಜ್​ಕುಮಾರ್​ ಜೊತೆ ಡಾಲಿ

ಹಾಸನ ಜಿಲ್ಲೆಯವರಾದ ಧನಂಜಯ್​ ತಂದೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು. ತಂದೆ ಶಿಕ್ಷಕರಾಗಿರುವ ಕಾರಣ ಮಗನಿಗೂ ಕೂಡ ಬಾಲ್ಯದಿಂದಲೇ ವಿದ್ಯ ಒಲಿದಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಡಾಲಿ 7 ಹಾಗೂ ಮತ್ತು 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ಗಮನ ಸೆಳೆದಿದ್ದರು.

ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ:

ಓದಿನಲ್ಲಿ ಸದಾ ಮುಂದಿದ್ದ ಧನಂಜಯ್​ ಬಾಲ್ಯದಿಂದಲೇ, ನಾಟಕಗಳು, ಏಕಪಾತ್ರಾಭಿನಯ ಮತ್ತು ಬೀದಿ ನಾಟಕಗಳಲ್ಲಿ ಪ್ರತಿಭೆ ತೋರ್ಪಡಿಸಿದ್ದರು. ಅವರ ಈ ಕಲೆಗೆ ಮತ್ತಷ್ಟು ಸ್ಫೂರ್ತಿಯಾಗಿದ್ದು ವರನಟ ಡಾ. ರಾಜ್ ಕುಮಾರ್ ಸಿನಿಮಾಗಳು. ಅಣ್ಣಾವ್ರ ಸಿನಿಮಾಗಳನ್ನು ನೋಡಿ, ಅವರಿಂದ ಪ್ರಭಾವಿತರಾಗಿ ತಾನು ಕೂಡ ಸಿನಿಮಾ ಹೀರೋ ಆಗಬೇಕು ಅಂತಾ ಕನಸು ಕಂಡಿದ್ರಂತೆ ಧನಂಜಯ್​.

Story on birthday boy actor Dali Dhananjay
ಸೈಮಾದಲ್ಲಿ ಧನಂಜಯ್​ ಮಿಂಚು

ಆದರೆ ಧನಂಜಯ್​ ಉನ್ನತ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದು, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಮುಗಿಸುತ್ತಾರೆ. ಅದೇ ಮೈಸೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸುತ್ತಾರೆ. ಆಗ ಇನ್ಫೋಸಿಸ್ ಸಾಫ್ಟ್‌ವೇರ್ ಕಂಪನಿಯಲ್ಲಿ ಅವರಿಗೆ ಉದ್ಯೋಗ ಸಿಗುತ್ತೆ. ಕೆಲವು ತಿಂಗಳು, ಇನ್ಫೋಸಿಸ್ ಉದ್ಯೋಗಿಯಾಗಿದ್ದ ಧನಂಜಯ್​ಗೆ ಬಣ್ಣದ ಗೀಳು ಈ ಕೆಲಸ ಮಾಡೋದಕ್ಕೆ ಬಿಡುವುದಿಲ್ಲ. ತಮ್ಮ‌ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಜಿಪಿಐಇಆರ್ (GPIER) ಎಂಬ ಹವ್ಯಾಸಿ ನಾಟಕ ತಂಡ ಸೇರಿಕೊಳ್ತಾರೆ.

Story on birthday boy actor Dali Dhananjay
ಧನಂಜಯ್

ಉದಯೋನ್ಮುಖ ಉತ್ತಮ ನಟ ಪ್ರಶಸ್ತಿ:

ಅಲ್ಲಿಂದ ಸಾಕಷ್ಟು ನಾಟಕಗಳಲ್ಲಿನ ಅಭಿನಯಿಸುತ್ತಿದ್ದ ಧನಂಜಯ ತಮ್ಮ ಪ್ರತಿಭೆಯಿಂದಲೇ ಹಿರಿಯ ರಂಗಾಯಣ ಕಲಾವಿದರಿಂದ ಮೆಚ್ಚುಗೆ ಗಳಿಸುತ್ತಾರೆ. ಒಮ್ಮೆ ನಾಟಕವೊಂದರಲ್ಲಿ ಧನಂಜಯ್​ ಅಭಿನಯ ಕಂಡು ನಿರ್ದೇಶಕ ಗುರುಪ್ರಸಾದ್ ಮೆಚ್ಚಿ, ತಮ್ಮ ಚಿತ್ರದಲ್ಲಿ ಹೀರೋ ಪಟ್ಟ ನೀಡುತ್ತಾರೆ. ಅದುವೇ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರ. 2013ರಲ್ಲಿ ಈ ಮೂಲಕ ಚಿತ್ರರಂಗಕ್ಕೆ ನಾಯಕ ನಟನಾಗಿ ಪ್ರವೇಶ ಮಾಡಿದ ಧನಂಜಯ್​, ಈ ಚಿತ್ರದಲ್ಲಿನ ನಟನೆಗಾಗಿ ಸೈಮಾ ಉದಯೋನ್ಮುಖ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗ್ತಾರೆ.

Story on birthday boy actor Dali Dhananjay
ಬಾಲ್ಯದ ದಿನಗಳಲ್ಲಿ ಧನಂಜಯ್​

ಈ ಚಿತ್ರದ ಬಳಿಕ ಧನಂಜಯ್​, ರಾಟೆ, ಜೆಸ್ಸಿ, ಬದ್ಮಾಶ್, ಸಿನಿಮಾಗಳನ್ನ ಮಾಡ್ತಾರೆ. ಆದರೆ ಈ‌ ಚಿತ್ರಗಳು ಅವರಿಗೆ ಅಷ್ಟೊಂದು ಹೆಸರು ತಂದುಕೊಡಲ್ಲ. ಆಗ ಮತ್ತೆ ಅವರಿಗೆ ಸ್ವಲ್ಪ ಸ್ಟಾರ್ ಪಟ್ಟ ನೀಡಿದ ಚಿತ್ರ ಅಂದ್ರೆ ಗುರು ಪ್ರಸಾದ್ ನಿರ್ದೇಶನದ 'ಎರಡನೇ ಸಲ' ಚಿತ್ರ.

Story of birthday boy actor Dali Dhananjay
ಪುನೀತ್​ ಜೊತೆ ಧನಂಜಯ್

ಡಾಲಿ ಧನಂಜಯ್​ ಆಗಿದ್ದು ಹೀಗೆ:

ಬಳಿಕ ಅವರ ಹೆಸರಿನ ಮುಂದೆ ಡಾಲಿ ಅಂತಾ ಬಿರುದು ಬಂದ ಸಿನಿಮಾ‌ 'ಟಗರು'. ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಅಭಿನಯದ, ಸೂರಿ ನಿರ್ದೇಶನದಲ್ಲಿ ಮೂಡಿಬಂದ ಟಗರು ಚಿತ್ರದಲ್ಲಿ ಡಾಲಿಯಾಗಿ ವಿಲನ್ ಲುಕ್​ನಲ್ಲಿ ಮಿಂಚಿದ ಧನಂಜಯ್​ ಅಪಾರ ಅಭಿಮಾನಿಗಳನ್ನು ಸೆಳೆಯುತ್ತಾರೆ. ಅಲ್ಲಿಂದ ಧನಂಜಯ್​ ಸ್ಟಾರ್ ಡಮ್ ಹೆಚ್ಚಾಗುತ್ತೆ. ಯಾವ ಮಟ್ಟಿಗೆ ಅಂದ್ರೆ, ತೆಲುಗಿನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, 'ಭೈರವ ಗೀತಾ' ಸಿನಿಮಾ ಮಾಡ್ತಾರೆ. ಇದು ಕೂಡ ಅವರ ಸಿನಿಪಯಣಕ್ಕೆ ಪ್ಲಸ್ ಪಾಯಿಂಟ್ ಆಗುತ್ತೆ. ಬಳಿಕ ​ಪುನೀತ್ ರಾಜ್‍ಕುಮಾರ್ ಹಾಗೂ ​ ದರ್ಶನ್​ರಂತಹ ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಳ್ತಾರೆ ಡಾಲಿ.

Story on birthday boy actor Dali Dhananjay
ಧನಂಜಯ್

ಸದ್ಯ ಕನ್ನಡ ಹಾಗು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಧನಂಜಯ್​, 'ಪುಷ್ಪ', 'ಹೆಡ್ ಬುಷ್',‌ 'ಮಾನ್ಸೂನ್ ರಾಗ', 'ರತ್ನನ್ ಪ್ರಪಂಚ', 'ಬಡವ ರಾಸ್ಕಲ್' ಹೀಗೆ ಒಂದರ ಹಿಂದೊಂದು ಸಿನಿಮಾ ಮಾಡುತ್ತಿದ್ದಾರೆ. ಡಾಲಿ ಹುಟ್ಟುಹಬ್ಬಕ್ಕೆ 'ಹೆಡ್ ಬುಷ್', 'ರತ್ನನ್ ಪ್ರಪಂಚ' ಸಿನಿಮಾದ ಟೀಸರ್ ಬಿಡುಗಡೆಯಾಗುವ ಮೂಲಕ ಭರ್ಜರಿ ಉಡುಗೊರೆ ಸಿಕ್ಕಿವೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ನಲ್ಲಿ ರಕ್ಷಾಬಂಧನ ಸಂಭ್ರಮ: ಸ್ಟಾರ್​ ಕುಟುಂಬದಲ್ಲಿ ಹೀಗಿತ್ತು ಹಬ್ಬದಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.