ETV Bharat / science-and-technology

ಏನಿದು ಕ್ಲೌಡ್ ಲ್ಯಾಪ್​ಟಾಪ್? ಬೆಲೆ ಇಷ್ಟು ಕಡಿಮೆ ಹೇಗೆ?

author img

By ETV Bharat Karnataka Team

Published : Nov 20, 2023, 4:40 PM IST

ರಿಲಯನ್ಸ್​ ಜಿಯೋ ಕ್ಲೌಡ್ ಲ್ಯಾಪ್​ಟಾಪ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

Mukesh Ambani may launch Rs 15000 cloud
Mukesh Ambani may launch Rs 15000 cloud

ನವದೆಹಲಿ: ಮುಖೇಶ್ ಅಂಬಾನಿ ಈಗಾಗಲೇ ಕಡಿಮೆ ಬೆಲೆಯ ಸಾಧನಗಳು ಮತ್ತು ಇಂಟರ್​ನೆಟ್​ ನೀಡುವ ಮೂಲಕ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ್ದಾರೆ. ಈಗ ಮತ್ತೊಂದು ಕ್ರಾಂತಿಗೆ ಅವರು ಮುಂದಾಗಿದ್ದು, 15 ಸಾವಿರ ರೂಪಾಯಿಗಳಲ್ಲಿ ದೇಶದ ಜನರಿಗೆ ಲ್ಯಾಪ್​ಟಾಪ್ ನೀಡಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಈ ಮೂಲಕ 70 ಸಾವಿರ ಕೋಟಿ ರೂ. ಮೌಲ್ಯದ ಮಾರುಕಟ್ಟೆ ಮೇಲೆ ಅವರು ಕಣ್ಣಿಟ್ಟಿದ್ದಾರೆ.

ಮಾಧ್ಯಮಗಳ ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಶೀಘ್ರದಲ್ಲೇ 15,000 ರೂ.ಗಳ ಲ್ಯಾಪ್​ಟಾಪ್ ತಯಾರಿಸಲು ಯೋಜಿಸುತ್ತಿದೆ. ಅಂದರೆ ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಲ್ಯಾಪ್​ಟಾಪ್ ಸಿಗಲಿದೆ. ಮುಂಬರುವ ತಿಂಗಳುಗಳಲ್ಲಿ ಲ್ಯಾಪ್​ಟಾಪ್ ಬಿಡುಗಡೆ ಮಾಡಲು ಕಂಪನಿ ಈಗಾಗಲೇ ಲ್ಯಾಪ್ ಟಾಪ್ ತಯಾರಕರಾದ ಎಚ್ ಪಿ, ಏಸರ್, ಲೆನೊವೊ ಮತ್ತು ಇತರರೊಂದಿಗೆ ಮಾತುಕತೆ ನಡೆಸುತ್ತಿದೆ. ವರದಿಯ ಪ್ರಕಾರ, ಜಿಯೋ ಲ್ಯಾಪ್​ಟಾಪ್ ಕ್ಲೌಡ್ ಲ್ಯಾಪ್​ಟಾಪ್ ಆಗಿದ್ದು, ಇದು 'ಕ್ಲೌಡ್' ನಿಂದಲೇ ನಿಯಂತ್ರಿಸಲ್ಪಡುತ್ತದೆ. ಹೀಗಾಗಿ ಲ್ಯಾಪ್​ಟಾಪ್ ಸಾಧನವು ಕೇವಲ ಒಂದು ಟರ್ಮಿನಲ್ ಆಗಿರುತ್ತದೆ.

ಇದರರ್ಥ ಲ್ಯಾಪ್​ಟಾಪ್​ನ ಪ್ರೊಸೆಸಿಂಗ್ ಮತ್ತು ಸ್ಟೋರೇಜ್ ರಿಲಯನ್ಸ್ ಜಿಯೋದ ಕ್ಲೌಡ್ ಕಂಪ್ಯೂಟಿಂಗ್ ಸೇವೆಯಾದ ಜಿಯೋ ಕ್ಲೌಡ್​ನಲ್ಲಿ ನಡೆಯಲಿದೆ. ಇದರಿಂದ ಬಳಕೆದಾರು ಕಡಿಮೆ ವೆಚ್ಚದಲ್ಲಿ ಲ್ಯಾಪ್​ಟಾಪ್​ ಪಡೆಯಲು ಸಾಧ್ಯವಾಗಲಿದೆ. ಮೊದಲ ಬಾರಿಗೆ ಲ್ಯಾಪ್​ಟಾಪ್ ಬಳಸಬಯಸುವವರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕಡಿಮೆ ಖರ್ಚಿನಲ್ಲಿ ಲ್ಯಾಪ್​ಟಾಪ್​ ನೀಡಬಹುದಾಗಿದೆ. ಜಿಯೋ ಕ್ಲೌಡ್ ಚಂದಾದಾರಿಕೆ ವಿಧಾನದಲ್ಲಿ ಲಭ್ಯವಾಗಲಿದೆ ಮತ್ತು ಒಂದೇ ಲ್ಯಾಪ್​ಟಾಪ್​ನಲ್ಲಿ ಅನೇಕ ಸಬ್​ಸ್ಕ್ರಿಪ್ಷನ್​ಗಳನ್ನು ಬಳಸಬಹುದು. ವರದಿಯ ಪ್ರಕಾರ, ಕಂಪನಿಯು ಈಗಾಗಲೇ ಎಚ್​ಪಿ ಕ್ರೋಮ್​ಬುಕ್​​ನಲ್ಲಿ ಪ್ರಯೋಗಗಳನ್ನು ನಡೆಸಲು ಪ್ರಾರಂಭಿಸಿದೆ.

ಹೊಸ ಲ್ಯಾಪ್​ಟಾಪ್ ಬಗ್ಗೆ ಜಿಯೋ ಇನ್ನೂ ಯಾವುದೇ ವಿವರಗಳನ್ನು ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಜಿಯೋಬುಕ್ ಬಿಡುಗಡೆಯೊಂದಿಗೆ ಈ ಲ್ಯಾಪ್​ಟಾಪ್ ಘೋಷಣೆಯಾಗಬಹುದು. 16,499 ರೂಪಾಯಿ ಬೆಲೆಯ ರಿಲಯನ್ಸ್ ಜಿಯೋಬುಕ್ ಜಿಯೋಓಎಸ್ ನಲ್ಲಿ ರನ್ ಆಗುತ್ತದೆ. ಇದು 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ನೊಂದಿಗೆ ಮೀಡಿಯಾಟೆಕ್ ಚಿಪ್ ಸೆಟ್ ನಿಂದ ನಿಯಂತ್ರಿಸಲ್ಪಡುತ್ತದೆ ಹಾಗೂ ಇದನ್ನು ವಿಸ್ತರಿಸಬಹುದು. ಕಂಪನಿಯು ಲ್ಯಾಪ್​ಟಾಪ್ ಜೊತೆಗೆ ಖರೀದಿದಾರರಿಗೆ 100 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಸಹ ದೊರೆಯಲಿದೆ.

ಇದನ್ನೂ ಓದಿ : Google Photos ಬಳಸಿ ಸ್ಲೈಡ್ ಶೋ ರಚಿಸುವುದು ಹೇಗೆ? ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.