ETV Bharat / science-and-technology

ತಮಿಳುನಾಡಿನಲ್ಲಿ ಅತಿದೊಡ್ಡ ಐಫೋನ್ ಘಟಕ ಸ್ಥಾಪಿಸಲಿದೆ ಟಾಟಾ ಗ್ರೂಪ್; 50 ಸಾವಿರ ಉದ್ಯೋಗಾವಕಾಶ ಸಾಧ್ಯತೆ

author img

By ETV Bharat Karnataka Team

Published : Dec 8, 2023, 6:46 PM IST

ಟಾಟಾ ಗ್ರೂಪ್ ಭಾರತದ ತಮಿಳುನಾಡಿನಲ್ಲಿ ಅತಿದೊಡ್ಡ ಐಫೋನ್ ಜೋಡಣಾ ಘಟಕ ಸ್ಥಾಪಿಸಲು ಸಿದ್ಧತೆ ನಡೆಸಿದೆ.

Tata plans to build new iPhone factory in Tamil Nadu, hire 50K workers: Report
Tata plans to build new iPhone factory in Tamil Nadu, hire 50K workers: Report

ನವದೆಹಲಿ: ಟಾಟಾ ಗ್ರೂಪ್ ಭಾರತದ ಅತಿದೊಡ್ಡ ಐಫೋನ್ ಜೋಡಣೆ ಘಟಕ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ತಮಿಳುನಾಡಿನ ಹೊಸೂರಿನಲ್ಲಿ ಈ ಬೃಹತ್ ಕಾರ್ಖಾನೆ ತಲೆ ಎತ್ತಲಿದೆ ಎಂದು ಮಾಧ್ಯಮ ವರದಿಗಳು ಶುಕ್ರವಾರ ತಿಳಿಸಿವೆ. ವರದಿಗಳ ಪ್ರಕಾರ, ಈ ಕಾರ್ಖಾನೆಯಲ್ಲಿ ಸುಮಾರು 20 ಅಸೆಂಬ್ಲಿ ಲೈನ್‌ಗಳಿರುವ ಸಾಧ್ಯತೆಯಿದೆ ಮತ್ತು ಎರಡು ವರ್ಷಗಳಲ್ಲಿ 50,000 ಕಾರ್ಮಿಕರನ್ನು ಟಾಟಾ ಗ್ರೂಪ್ ನೇಮಿಸಿಕೊಳ್ಳಲಿದೆ. ಈ ಘಟಕ 12ರಿಂದ 18 ತಿಂಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ದಕ್ಷಿಣ ಏಷ್ಯಾದ ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ವಿಸ್ತರಿಸುವ ಆ್ಯಪಲ್‌ನ ಗುರಿಯ ಭಾಗವಾಗಿ ಈ ಘಟಕ ಆರಂಭವಾಗಲಿದೆ. ಆದಾಗ್ಯೂ, ಟಾಟಾ ಗ್ರೂಪ್ ಅಥವಾ ಆ್ಯಪಲ್ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಟಾಟಾ ಈಗಾಗಲೇ ಕರ್ನಾಟಕದಲ್ಲಿ ಐಫೋನ್ ಉತ್ಪಾದನೆ ಮಾಡುತ್ತಿದ್ದ ವಿಸ್ಟ್ರಾನ್ ಕಾರ್ಪ್ ಕಂಪನಿಯನ್ನು ಖರೀದಿಸಿ ನಿರ್ವಹಿಸುತ್ತಿದೆ.

ಆ್ಯಪಲ್ ಚೀನಾದಲ್ಲಿನ ತನ್ನ ಉತ್ಪಾದನೆಯನ್ನು ಕಡಿಮೆ ಮಾಡಿ ಭಾರತ, ಥಾಯ್ಲೆಂಡ್, ಮಲೇಷ್ಯಾ ಮತ್ತು ಇತರ ಪ್ರದೇಶಗಳಲ್ಲಿ ಉತ್ಪಾದನೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರಸ್ತಾವಿತ ಹೊಸ ಐಫೋನ್ ಕಾರ್ಖಾನೆಯು ಮಧ್ಯಮ ಗಾತ್ರದ್ದಾಗಿರುತ್ತದೆ. ಸದ್ಯ 10,000 ಜನ ಕೆಲಸ ಮಾಡುತ್ತಿರುವ ವಿಸ್ಟ್ರಾನ್‌ಗಿಂತ ದೊಡ್ಡದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ, ಆ್ಯಪಲ್ ಭಾರತದಲ್ಲಿ ವರ್ಷಕ್ಕೆ 50 ದಶಲಕ್ಷಕ್ಕೂ ಹೆಚ್ಚು ಐಫೋನ್​ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದೆ.

ಟಾಟಾ ಗ್ರೂಪ್ ಆ್ಯಪಲ್‌ನೊಂದಿಗಿನ ತನ್ನ ವ್ಯವಹಾರವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಹೊಸೂರಿನಲ್ಲಿರುವ ತನ್ನ ಕಾರ್ಖಾನೆಯಲ್ಲಿ ಹೆಚ್ಚಿನ ನೇಮಕಾತಿ ಮಾಡಿಕೊಳ್ಳುತ್ತಿದೆ. ಸದ್ಯ ಇಲ್ಲಿ ಅದು ಐಫೋನ್ ಕೇಸಿಂಗ್ ಅಥವಾ ಲೋಹದ ಕವಚಗಳನ್ನು ಉತ್ಪಾದಿಸುತ್ತಿದೆ. ಅಲ್ಲದೆ ಪ್ರಮುಖವಾಗಿ ಆ್ಯಪಲ್ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ 100 ರಿಟೇಲ್ ಮಳಿಗೆಗಳನ್ನು ಪ್ರಾರಂಭಿಸುವುದಾಗಿ ಟಾಟಾ ಹೇಳಿದೆ. ಆ್ಯಪಲ್ ಈಗಾಗಲೇ ದೇಶದಲ್ಲಿ ಎರಡು ಮಳಿಗೆಗಳನ್ನು ತೆರೆದಿದೆ ಮತ್ತು ಇನ್ನೂ ಮೂರು ಮಳಿಗೆ ಆರಂಭಿಸಲು ಯೋಜಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ಉತ್ಪಾದನಾ ಸಂಬಂಧಿತ ಸಬ್ಸಿಡಿ ಯೋಜನೆಗಳು ಆ್ಯಪಲ್‌ನ ಪ್ರಮುಖ ಪೂರೈಕೆದಾರರಾದ ತೈವಾನ್​ನ ಫಾಕ್ಸ್​ಕಾನ್ ಟೆಕ್ನಾಲಜಿ ಗ್ರೂಪ್ ಮತ್ತು ಪೆಗಾಟ್ರಾನ್ ಕಾರ್ಪ್ ಇವು ಭಾರತದಲ್ಲಿ ತಮ್ಮ ಉತ್ಪಾದನೆ ಹೆಚ್ಚಿಸಲು ಉತ್ತೇಜನ ನೀಡಿವೆ. ಇದರಿಂದ ಹಿಂದಿನ ಹಣಕಾಸು ವರ್ಷದಲ್ಲಿ ಆಪಲ್ ಭಾರತದಲ್ಲಿ 7 ಬಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯದ ಐಫೋನ್ ಗಳನ್ನು ಜೋಡಣೆ ಮಾಡಿದೆ.

ಇದನ್ನೂ ಓದಿ: ಭಾರತದಲ್ಲಿ ಪ್ರತಿವರ್ಷ 50 ಮಿಲಿಯನ್​ ಐಫೋನ್​ ಉತ್ಪಾದನೆಗೆ ಮುಂದಾದ ಆ್ಯಪಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.