ETV Bharat / science-and-technology

ಪಾಸ್​ವರ್ಡ್​ ರಹಿತ ಲಾಗಿನ್​; ಇದು ವಾಟ್ಸ್​ಆ್ಯಪ್​ನ ಹೊಸ ಪಾಸ್​ ಕೀ ವೈಶಿಷ್ಟ್ಯ!

author img

By ETV Bharat Karnataka Team

Published : Oct 17, 2023, 1:39 PM IST

ವಾಟ್ಸ್​ಆಪ್ ಇನ್ನು ಮುಂದೆ ಆಂಡ್ರಾಯ್ಡ್​ ಬಳಕೆದಾರರಿಗಾಗಿ ಪಾಸ್​ವರ್ಡ್ ಬದಲು ಪಾಸ್ ಕೀ ವೈಶಿಷ್ಟ್ಯ ಹೊರತರಲಿದೆ.

WhatsApp rolls out passwordless logins with passkeys on Android
WhatsApp rolls out passwordless logins with passkeys on Android

ನವದೆಹಲಿ: ತನ್ನ ಪ್ಲಾಟ್​ಫಾರ್ಮ್​ನಲ್ಲಿ ಪಾಸ್​ವರ್ಡ್ ಬದಲಾಗಿ ಪಾಸ್​ ಕೀ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ವಾಟ್ಸ್​ಆ್ಯಪ್ ಘೋಷಿಸಿದೆ. ಈ ಬದಲಾವಣೆಯಿಂದ ಬಳಕೆದಾರರು ಕಿರಿಕಿರಿ ಉಂಟು ಮಾಡುವ ಹಾಗೂ ಅಸುರಕ್ಷಿತವಾದ ಟು - ಸ್ಟೆಪ್ ಎಸ್​ಎಂಎಸ್​ ದೃಢೀಕರಣದ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ. "ಆಂಡ್ರಾಯ್ಡ್ ಬಳಕೆದಾರರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಪಾಸ್ ಕೀಗಳೊಂದಿಗೆ ಲಾಗ್ ಇನ್ ಮಾಡಬಹುದು. ನಿಮ್ಮ ಮುಖ, ಬೆರಳಚ್ಚು ಅಥವಾ ಪಿನ್ ಮಾತ್ರ ನಿಮ್ಮ ವಾಟ್ಸ್​​ಆ್ಯಪ್ ಖಾತೆಯನ್ನು ಅನ್ಲಾಕ್ ಮಾಡುತ್ತದೆ" ಎಂದು ಕಂಪನಿ ಸೋಮವಾರ ತಡರಾತ್ರಿ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ.

ಪಾಸ್​ ಕೀ ವೈಶಿಷ್ಟ್ಯವನ್ನು ಈ ಹಿಂದೆಯೇ ವಾಟ್ಸ್​ಆ್ಯಪ್ ತನ್ನ ಬೀಟಾ ಚಾನೆಲ್​ನಲ್ಲಿ ಪರೀಕ್ಷಿಸಿದೆ. ಹೀಗಾಗಿ ಇನ್ನು ಮುಂದೆ ಇದನ್ನು ಎಲ್ಲ ಬಳಕೆದಾರರಿಗೂ ಪರಿಚಯಿಸಲು ವಾಟ್ಸ್​ಆ್ಯಪ್ ಮುಂದಾಗಿದೆ. ಆದರೆ ಐಫೋನ್ ಗಳಲ್ಲಿ ಪಾಸ್​ ಕೀ ವೈಶಿಷ್ಟ್ಯ ಯಾವಾಗ ಸಿಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಆಂಡ್ರಾಯ್ಡ್ ಸಾಧನಗಳಲ್ಲಿ ಪಾಸ್​ ಕೀ ವೈಶಿಷ್ಟ್ಯವು ಮುಂದಿನ ಕೆಲ ವಾರಗಳಲ್ಲಿ ಮತ್ತು ತಿಂಗಳುಗಳಲ್ಲಿ ಹೊರಬರಲಿದೆ ಎಂದು ಕಂಪನಿ ತಿಳಿಸಿದೆ. ಪಾಸ್ ಕೀಗಳು ಸಾಂಪ್ರದಾಯಿಕ ಪಾಸ್ ವರ್ಡ್ ಗಳನ್ನು ನಿಮ್ಮ ಸಾಧನದ ಸ್ವಂತ ದೃಢೀಕರಣ ವಿಧಾನಗಳೊಂದಿಗೆ ಬದಲಾಯಿಸಲಿವೆ. ಅಂದರೆ ಇನ್ನುಮುಂದೆ ಪಾಸ್​ವರ್ಡ್​ ಲಾಗಿನ್ ಕಣ್ಮರೆಯಾಗಲಿದೆ.

ಆ್ಯಪಲ್ ಮತ್ತು ಗೂಗಲ್ ಸಾಧನಗಳು ಈಗಾಗಲೇ ಪಾಸ್ ಕೀಗಳನ್ನು ಸಪೋರ್ಟ್ ಮಾಡುತ್ತಿವೆ. ಪಾಸ್ ಕೀಗಳನ್ನು ಬಳಸಲಾರಂಭಿಸುವಂತೆ ಮತ್ತು ಅದಕ್ಕಾಗಿ ತಮ್ಮ ಖಾತೆಗಳಲ್ಲಿ ಪಾಸ್ ವರ್ಡ್ ಗಳನ್ನು ತ್ಯಜಿಸುವಂತೆ ಗೂಗಲ್ ಕಳೆದ ವಾರ ಬಳಕೆದಾರರಿಗೆ ಮನವಿ ಮಾಡಿದೆ. ಪಾಸ್ ಕೀಗಳನ್ನು ಬಳಸುವ ಸಮಯದಲ್ಲಿ ನಿಮ್ಮ ಸಾಧನವನ್ನು ಅನ್ ಲಾಕ್ ಮಾಡಲು ನೀವು ಫಿಂಗರ್ ಪ್ರಿಂಟ್, ಫೇಸ್ ಸ್ಕ್ಯಾನ್ ಅಥವಾ ಪಿನ್ ಅನ್ನು ಬಳಸಬೇಕಾಗುತ್ತದೆ ಮತ್ತು ಅವು ಪಾಸ್ ವರ್ಡ್ ಗಳಿಗಿಂತ ಶೇಕಡಾ 40 ರಷ್ಟು ವೇಗವಾಗಿರುತ್ತವೆ ಮತ್ತು ಅವುಗಳನ್ನು ಹೆಚ್ಚು ಸುರಕ್ಷಿತವಾಗಿಸುವ ಒಂದು ರೀತಿಯ ಕ್ರಿಪ್ಟೋಗ್ರಫಿಯನ್ನು ಅವಲಂಬಿಸಿರುತ್ತವೆ.

"ಪಾಸ್​ ಕೀ ಗಳ ಅಳವಡಿಕೆ ಒಂದು ದೊಡ್ಡ ಹೆಜ್ಜೆಯಾಗಿದ್ದರೂ, ಹೊಸ ತಂತ್ರಜ್ಞಾನಗಳನ್ನು ಜಾರಿಗೊಳಿಸುವುದು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಮಗೆ ತಿಳಿದಿದೆ. ಹೀಗಾಗಿ ಪಾಸ್​ವರ್ಡ್​ಗಳು ಇನ್ನೂ ಕೆಲ ಸಮಯದವರೆಗೆ ಬಳಕೆಯಲ್ಲಿರುತ್ತವೆ" ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಗೂಗಲ್ ಬಳಕೆದಾರರ ಖಾತೆಗಳಿಗೆ ಸೈನ್ ಇನ್ ಮಾಡಲು ಪಾಸ್​ವರ್ಡ್ ಬದಲಿಗೆ ಪಾಸ್​ ಕೀ ಬಳಸುವ ವೈಶಿಷ್ಟ್ಯವನ್ನು ಆರಂಭಿಸಿತ್ತು.

ಇದನ್ನೂ ಓದಿ : ಹದಿಹರೆಯದವರನ್ನು ಸಾಮಾಜಿಕ ಮಾಧ್ಯಮಗಳಿಂದ ನಿಷೇಧಿಸದಂತೆ ಗೂಗಲ್ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.