ETV Bharat / science-and-technology

ವಿಂಡೋಸ್​ ಫೋನ್​ ನಿಲ್ಲಿಸಿದ್ದು ತಪ್ಪು ನಿರ್ಧಾರವಾಗಿತ್ತು; ಮೈಕ್ರೊಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ

author img

By ETV Bharat Karnataka Team

Published : Oct 25, 2023, 12:37 PM IST

ಮೈಕ್ರೊಸಾಫ್ಟ್​ ಸ್ಮಾರ್ಟ್​ಫೋನ್ ವ್ಯವಹಾರವನ್ನು ನಿಲ್ಲಿಸಿದ್ದು ತಪ್ಪು ನಿರ್ಧಾರವಾಗಿತ್ತು ಎಂದು ಕಂಪನಿಯ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.

Giving up on Windows Phone was a mistake, says Microsoft CEO Satya Nadella
Giving up on Windows Phone was a mistake, says Microsoft CEO Satya Nadella

ನವದೆಹಲಿ : ತಮ್ಮ ಕಂಪನಿಯು ಸ್ಮಾರ್ಟ್​ಫೋನ್ ವ್ಯವಹಾರದಿಂದ ನಿರ್ಗಮಿಸಿದ್ದು ತಪ್ಪು ನಿರ್ಧಾರವಾಗಿತ್ತು ಹಾಗೂ ಅದನ್ನು ಇನ್ನೂ ಚೆನ್ನಾಗಿ ನಿರ್ವಹಣೆ ಮಾಡಬಹುದಿತ್ತು ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ. ಗೂಗಲ್​ನ ಆಂಡ್ರಾಯ್ಡ್ ಮತ್ತು ಆ್ಯಪಲ್ ಐಒಎಸ್ ಆಪರೇಟಿಂಗ್ ಸಿಸ್ಟಮ್​ (ಒಎಸ್)ಗಳು ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸುತ್ತಿದ್ದಂತೆ ಮೈಕ್ರೊಸಾಫ್ಟ್​ ತನ್ನ ವಿಂಡೋಸ್​ ಫೋನ್​ಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿತ್ತು. ಹೀಗಾಗಿ 2017ರಲ್ಲಿ ವಿಂಡೋಸ್​ 10 ಮೊಬೈಲ್​ಗಳಿಗೆ ಇನ್ನು ಮುಂದೆ ಯಾವುದೇ ಹೊಸ ಫೀಚರ್​ ಅಥವಾ ಹಾರ್ಡ್​ವೇರ್​ ಅಭಿವೃದ್ಧಿಪಡಿಸುವುದಿಲ್ಲ ಎಂದು ಹೇಳಿ ಸ್ಮಾರ್ಟ್​ಫೋನ್ ಮಾರುಕಟ್ಟೆಯಿಂದ ಮೈಕ್ರೊಸಾಫ್ಟ್​ ಹೊರನಡೆದಿತ್ತು.

ಡಿಸೆಂಬರ್ 10, 2019 ರಂದು ವಿಂಡೋಸ್ 10 ಮೊಬೈಲ್​ಗಳಿಗೆ ಹೊಸ ಸೆಕ್ಯೂರಿಟಿ ಅಪ್​ಡೇಟ್​ಗಳು, ದೋಷ ಪರಿಹಾರಗಳು ಮತ್ತು ಸಪೋರ್ಟ್​ ನೀಡುವುದನ್ನು ಮೈಕ್ರೊಸಾಫ್ಟ್​ ನಿಲ್ಲಿಸಿತ್ತು. ಈ ಬಗ್ಗೆ ಬಿಸಿನೆಸ್​ ಇನ್​ಸೈಡರ್​ ಪತ್ರಿಕೆಯೊಂದಿಗೆ ಮಾತನಾಡಿದ ನಾದೆಲ್ಲ, ಕಂಪನಿಯು ಸ್ಮಾರ್ಟ್​ಫೋನ್ ವ್ಯವಹಾರ ನಿಲ್ಲಿಸಿದ್ದು ತಪ್ಪು ನಿರ್ಧಾರವಾಗಿತ್ತು ಎಂದಿದ್ದಾರೆ.

ನಾನು ತೆಗೆದುಕೊಂಡ ಕಠಿಣ ನಿರ್ಧಾರಗಳಲ್ಲಿ ಇದೂ ಒಂದು: "ಸ್ಮಾರ್ಟ್​ಫೋನ್ ವ್ಯವಹಾರ ನಿಲ್ಲಿಸುವ ನಮ್ಮ ನಿರ್ಧಾರದ ಬಗ್ಗೆ ಜನರು ಬಹಳ ಚರ್ಚೆ ಮಾಡಿದ್ದರು. ಆದರೆ ನಾನು ಸಿಇಒ ಆಗಿದ್ದಾಗ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಇದೂ ಒಂದಾಗಿತ್ತು." ಎಂದು ಅವರು ಉಲ್ಲೇಖಿಸಿದ್ದಾರೆ. "ಈಗ ಹಿಂತಿರುಗಿ ನೋಡಿದರೆ ಪಿಸಿಗಳು, ಟ್ಯಾಬ್ಲೆಟ್​ಗಳು ಮತ್ತು ಫೋನ್​ಗಳ ನಡುವಿನ ಕಂಪ್ಯೂಟಿಂಗ್ ಬಳಕೆದಾರರ ವರ್ಗವನ್ನು ಮರು ಶೋಧಿಸುವ ಮೂಲಕ ನಾವು ಅದನ್ನು ಕಾರ್ಯರೂಪಕ್ಕೆ ತರಬಹುದಿತ್ತು ಎಂದು ನಾನು ಭಾವಿಸುತ್ತೇನೆ" ಎಂದು ನಾದೆಲ್ಲಾ ಹೇಳಿದರು.

ಮೈಕ್ರೋಸಾಫ್ಟ್​ನ ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಅವರಿಂದ ನಾದೆಲ್ಲಾ 2014 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. 2015 ರಲ್ಲಿ, ಮೈಕ್ರೋಸಾಫ್ಟ್ ಮುಖ್ಯವಾಗಿ ತನ್ನ ಫೋನ್ ವ್ಯವಹಾರದಲ್ಲಿ 7,800 ಉದ್ಯೋಗಗಳನ್ನು ಕಡಿತಗೊಳಿಸಿತ್ತು ಮತ್ತು ನೋಕಿಯಾ ಫೋನ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ 7.6 ಬಿಲಿಯನ್ ಡಾಲರ್ ಅನ್ನು ರೈಟ್​ ಆಫ್ ಮಾಡಿತ್ತು.

ಮೈಕ್ರೊಸಾಫ್ಟ್​ ನೋಕಿಯಾ ಫೋನ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡು ನೋಕಿಯಾ ಹೆಸರಿನಲ್ಲಿ ವಿಂಡೋಸ್​ ಆಪರೇಟಿಂಗ್ ಸಿಸ್ಟಮ್ ಆಧರಿತ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿತ್ತು. ಆದರೆ ಮೈಕ್ರೋಸಾಫ್ಟ್ ಅಂತಿಮವಾಗಿ 2017 ರಲ್ಲಿ ವಿಂಡೋಸ್ ಫೋನ್ ಕಾಲ ಮುಗಿದಿದೆ ಎಂದು ದೃಢಪಡಿಸಿತ್ತು. ಕಂಪನಿಯ ಸಹ - ಸಂಸ್ಥಾಪಕ ಮತ್ತು ಮಾಜಿ ಸಿಇಒ ಬಿಲ್ ಗೇಟ್ಸ್ ಕೂಡ ಮೈಕ್ರೋಸಾಫ್ಟ್ ಆಂಡ್ರಾಯ್ಡ್ ವಿರುದ್ಧ ಸೋತಿದ್ದು ತಮ್ಮ ಕಂಪನಿಯ ಅತಿದೊಡ್ಡ ತಪ್ಪು ಎಂದು ಹೇಳಿದ್ದರು.

ಇದನ್ನೂ ಓದಿ : ಚಂದ್ರ ಇಲ್ಲಿಯವರೆಗೆ ತಿಳಿದುಕೊಂಡಿದ್ದಕ್ಕಿಂತ 40 ಮಿಲಿಯನ್ ವರ್ಷ ಹಳೆಯದು; ಚಂದ್ರನ ವಯಸ್ಸೆಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.