ETV Bharat / science-and-technology

ISRO: ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಿದ್ಧತೆ; ಸೆಪ್ಟೆಂಬರ್​ನಲ್ಲಿ 'ಆದಿತ್ಯ ಎಲ್​-1' ಉಪಗ್ರಹ ಉಡ್ಡಯನ?

author img

By

Published : Aug 14, 2023, 8:08 PM IST

Isro Solar Mission: ಸೂರ್ಯನಿಂದ ಹೊರಸೂಸುವ ಅತ್ಯಂತ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡಲು ಇಸ್ರೋ 'ಆದಿತ್ಯ'ನನ್ನು ಕಳುಹಿಸಲು ಮುಂದಾಗಿದೆ. ಚಂದ್ರಯಾನ-3 ಬೆನ್ನಲ್ಲೇ ಸೂರ್ಯಶಿಕಾರಿಗೆ ಸಿದ್ಧತೆಗಳು ನಡೆಯುತ್ತಿವೆ.

ಆದಿತ್ಯ ಎಲ್​-1 ಉಪಗ್ರಹ
ಆದಿತ್ಯ ಎಲ್​-1 ಉಪಗ್ರಹ

ಹೈದರಾಬಾದ್​: ಚಂದ್ರನ ಅಧ್ಯಯನದ ಹಾದಿಯಲ್ಲಿರುವ ಇಸ್ರೋ ಚಂದ್ರಯಾನ-3 ನೌಕೆಯನ್ನು ಈಗಾಗಲೇ ನಭಕ್ಕೆ ಕಳುಹಿಸಿದೆ. ಈ ನೌಕೆ ಇನ್ನು ಕೆಲವೇ ದಿನಗಳಲ್ಲಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಇದರ ನಡುವೆಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಪ್ರಮುಖ ಉಡಾವಣೆಗೆ ತಯಾರಿ ನಡೆಸುತ್ತಿದೆ.

ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಮಿಷನ್ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಸೌರ ವಾತಾವರಣವನ್ನು ಕೂಲಂಕಷವಾಗಿ ಅಧ್ಯಯನ ಮಾಡುವುದು ಯೋಜನೆಯ ಗುರಿ. ಉದ್ದೇಶಿತ ಆದಿತ್ಯ-ಎಲ್1 ಉಪಗ್ರಹವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಪಿಎಸ್ಎಲ್​ವಿ-ಸಿ57 ರಾಕೆಟ್ ಮೂಲಕ ಉಡಾವಣೆಗೆ ಯೋಜಿಸಲಾಗಿದೆ. ಇದರ ಭಾಗವಾಗಿ ಆದಿತ್ಯ-ಎಲ್1 ಉಪಗ್ರಹ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವನ್ನು ತಲುಪಿದೆ.

  • PSLV-C57/Aditya-L1 Mission:

    Aditya-L1, the first space-based Indian observatory to study the Sun ☀️, is getting ready for the launch.

    The satellite realised at the U R Rao Satellite Centre (URSC), Bengaluru has arrived at SDSC-SHAR, Sriharikota.

    More pics… pic.twitter.com/JSJiOBSHp1

    — ISRO (@isro) August 14, 2023 " class="align-text-top noRightClick twitterSection" data=" ">

ಇಸ್ರೋ ಈ ವರ್ಷ ಆರು ನೌಕೆಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಚಂದ್ರನ ಅಧ್ಯಯನಕ್ಕಾಗಿ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿದ್ದು, ಚಂದ್ರನ ಕಕ್ಷೆಗೆ ಸೇರಿಸಿದೆ. ಇದೇ ತಿಂಗಳ 23ರಂದು ಚಂದ್ರಯಾನ-3 ಲ್ಯಾಂಡರ್ ಚಂದಮಾಮನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಈ ಸಾಹಸವನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.

ಬೆಂಗಳೂರಿನಲ್ಲಿ ಆದಿತ್ಯ ಎಲ್​-1 ತಯಾರಿ: ಚಂದ್ರನ ಅಧ್ಯಯನ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ರಾಕೆಟ್​ ಸಿದ್ಧಗೊಳಿಸಲಾಗಿದೆ. ಇದನ್ನು ಬೆಂಗಳೂರಿನ ಯು.ಆರ್.ರಾವ್​ ಸಂಶೋಧನಾ ಕೇಂದ್ರದಲ್ಲಿ ತಯಾರಿಸಲಾಗಿದೆ. ಇದನ್ನು ಸೆಪ್ಟೆಂಬರ್​ನಲ್ಲಿ ಉಡಾವಣೆ ಮಾಡುವ ಉದ್ದೇಶವಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಯೋಜನೆಯ ಮಹತ್ವ: ಇದು ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮೊದಲ ಕಾರ್ಯಾಚರಣೆ. ಆದಿತ್ಯ ಎಲ್​-1 ಉಪಗ್ರಹದ ತೂಕ 1500 ಕೆ.ಜಿ. ಸೌರ ಚಟುವಟಿಕೆ ಮತ್ತು ಬಾಹ್ಯಾಕಾಶ ವಾತಾವರಣದ ಮೇಲೆ ಅದರ ಪರಿಣಾಮವನ್ನು ಅಧ್ಯಯನ ಮಾಡಲು ಉಪಗ್ರಹವನ್ನು ಸಜ್ಜುಗೊಳಿಸಲಾಗಿದೆ. ಇದು ಭೂಮಿಯಿಂದ ಸೂರ್ಯನ ಕಡೆಗೆ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ 1 ರ ಕಕ್ಷೆಯಲ್ಲಿ ನೆಲೆಯಾಗಲಿದೆ. ಬಳಿಕ ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡುತ್ತದೆ.

ಆದಿತ್ಯನಲ್ಲಿ ಏನೇನಿದೆ?: ಆದಿತ್ಯ-ಎಲ್​1 ಉಪಗ್ರಹ ಒಟ್ಟು 7 ಪೆಲೋಡ್‌ಗಳನ್ನು ಹೊತ್ತೊಯ್ಯುತ್ತದೆ. ಇದರಲ್ಲಿ ಮುಖ್ಯವಾಗಿ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC), ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್, ಸೌರ ಮಾರುತದ ಕಣದ ಪ್ರಯೋಗ, ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್, ಸೌರ ಶಕ್ತಿಯ ಅಧ್ಯಯನಕ್ಕಾಗಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್, ಹೈ ಎನರ್ಜಿ ಎಲ್​-1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಮತ್ತು ಮ್ಯಾಗ್ನೆಟೋಮೀಟರ್ ಇದೆ.

ಉಪಗ್ರಹದಲ್ಲಿನ ಪೆಲೋಡ್​ಗಳು ಸೂರ್ಯನಿಂದ ಹೊರಸೂಸುವ ಅತ್ಯಂತ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ. ಇವುಗಳು ದ್ಯುತಿಗೋಳ, ವರ್ಣಗೋಳ, ಸೂರ್ಯನ ಹೊರ ಪದರಗಳು, ಸೌರ ಶಕ್ತಿ ಕೋಶಗಳು ಮತ್ತು ಸೂರ್ಯನ ಕಾಂತಕ್ಷೇತ್ರವನ್ನು ಅಧ್ಯಯನ ನಡೆಸಲಿವೆ.

ಇದನ್ನೂ ಓದಿ: Chandrayaan-3 ಮತ್ತೊಂದು ಹಂತದ ಕಕ್ಷಾವರೋಹಣ; ಚಂದ್ರನಿಗೆ ಅತಿ ಸನಿಹದಲ್ಲಿ ನೌಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.