ETV Bharat / science-and-technology

ಭಾರತದಲ್ಲಿ $50 ಶತಕೋಟಿ ಮೌಲ್ಯದ ಮೊಬೈಲ್ ಫೋನ್ ಉತ್ಪಾದನೆ

author img

By ETV Bharat Karnataka Team

Published : Dec 31, 2023, 12:49 PM IST

ಭಾರತದ ಎಲೆಕ್ಟ್ರಾನಿಕ್ಸ್​ ಸರಕು ಉತ್ಪಾದನೆ ಈ ವರ್ಷ 115 ಶತಕೋಟಿ ಡಾಲರ್ ದಾಟಲಿದೆ ಎಂದು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಹೇಳಿದೆ.

Electronic goods production in India
Electronic goods production in India

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದಲ್ಲಿ 50 ಶತಕೋಟಿ ಡಾಲರ್ ಮೌಲ್ಯದ ಮೊಬೈಲ್ ಫೋನ್​ಗಳು ತಯಾರಾಗುವ ನಿರೀಕ್ಷೆಯಿದ್ದು, 2023-24ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಒಟ್ಟು ಎಲೆಕ್ಟ್ರಾನಿಕ್ ಸರಕು ಉತ್ಪಾದನೆ 115 ಶತಕೋಟಿ ಡಾಲರ್ ತಲುಪುವ ಸಾಧ್ಯತೆಯಿದೆ ಎಂದು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಭಾನುವಾರ ತಿಳಿಸಿದೆ.

ಇಲ್ಲಿಯವರೆಗೆ, ಈ ಹಣಕಾಸು ವರ್ಷದಲ್ಲಿ ದೇಶದಲ್ಲಿ 100 ಬಿಲಿಯನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ಸ್ ಸರಕು ಉತ್ಪಾದನೆ ಮಾಡಲಾಗಿದ್ದು, ಇದರಲ್ಲಿ ಮೊಬೈಲ್ ಫೋನ್ ಪಾಲು 44 ಬಿಲಿಯನ್ ಡಾಲರ್ ಆಗಿದೆ.

ಸಮಗ್ರ ಉತ್ಪಾದನೆ ಮತ್ತು ಸ್ಥಳೀಯವಾಗಿ ಹೆಚ್ಚಿನ ಸಲಕರಣೆಗಳ ಅಳವಡಿಕೆಯಿಂದಾಗಿ ಮೊಬೈಲ್ ಫೋನ್ ಉದ್ಯಮವು ಪಿಸಿಬಿಎಗಳು, ಚಾರ್ಜರ್​ಗಳು, ಬ್ಯಾಟರಿ ಪ್ಯಾಕ್​ಗಳು, ಕೇಬಲ್​ಗಳು ಇತ್ಯಾದಿಗಳ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ದೇಶವು ಇತರ ಮೌಲ್ಯ ಸರಪಳಿ ವಸ್ತುಗಳ ಸ್ಥಳೀಕರಣದತ್ತ ಸಾಗುತ್ತಿದೆ ಮತ್ತು ಮೆಕ್ಯಾನಿಕ್ಸ್, ಡೈ ಕಟ್ ಭಾಗಗಳು, ಕ್ಯಾಮೆರಾ ಮಾಡ್ಯೂಲ್​ಗಳು, ಡಿಸ್​ಪ್ಲೇ ಅಸೆಂಬ್ಲಿಗಳು ಇತ್ಯಾದಿಗಳನ್ನು ಸ್ಥಳೀಯವಾಗಿ ತಯಾರಿಸಲು ಗಣನೀಯ ಹೂಡಿಕೆಗಳನ್ನು ಮಾಡಲಾಗಿದೆ.

"ಜಗತ್ತಿಗಾಗಿ ಸರಕು ಉತ್ಪಾದಿಸುವತ್ತ ನಮ್ಮ ಗಮನವಿರಬೇಕು ಮತ್ತು ಯಾವುದೇ ಆರ್ಥಿಕತೆ ಅಥವಾ ವಲಯವು ತನ್ನ ರಾಷ್ಟ್ರಕ್ಕೆ ದೊಡ್ಡ ಮಟ್ಟದ ರಫ್ತು ನೆಲೆಯನ್ನು ರಚಿಸದೆ ಶ್ರೇಷ್ಠವಾಗಲು ಸಾಧ್ಯವಿಲ್ಲ" ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದರು.

"ಭಾರತೀಯ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (ಇಎಸ್​ಡಿಎಂ) ಉದ್ಯಮದ ಇತರ ಅಂಗಗಳಾದ ಐಟಿ ಹಾರ್ಡ್​ವೇರ್, ಧರಿಸಬಹುದಾದ ಮತ್ತು ಕೇಳಬಹುದಾದ, ಎಲೆಕ್ಟ್ರಾನಿಕ್ ಘಟಕಗಳು ಇತ್ಯಾದಿಗಳಲ್ಲಿ ಮೊಬೈಲ್ ಫೋನ್ ಉತ್ಪಾದನಾ ಕ್ಷೇತ್ರದ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪುನರಾವರ್ತಿಸಲು ಇದು ಸೂಕ್ತ ಸಮಯ" ಎಂದು ಅವರು ತಿಳಿಸಿದರು.

2025-26ರ ವೇಳೆಗೆ 300 ಬಿಲಿಯನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಸಾಧಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ರಫ್ತುಗಳಿಂದ 100 ಬಿಲಿಯನ್ ಡಾಲರ್ ಆದಾಯ ಬರುವ ನಿರೀಕ್ಷೆಯಿದೆ. ಮೊಬೈಲ್ ಫೋನ್‌ಗಳು ಮಾತ್ರ 2025-26ರ ವೇಳೆಗೆ 50 ಬಿಲಿಯನ್ ಡಾಲರ್ ಮೌಲ್ಯದ ರಫ್ತಿಗೆ ಕೊಡುಗೆ ನೀಡುವ ನಿರೀಕ್ಷೆಯಿದೆ.

"ಭವಿಷ್ಯ ಆಶಾದಾಯಕವಾಗಿದೆ. 17,000 ಕೋಟಿ ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ ಐಟಿ ಹಾರ್ಡ್​ವೇರ್​ನ ಪಿಎಲ್ಐ 2.0 ಖಂಡಿತವಾಗಿಯೂ ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿದೆ" ಎಂದು ಐಸಿಇಎ ಹೇಳಿದೆ.

ಇದನ್ನೂ ಓದಿ: $6 ಬಿಲಿಯನ್ ತಲುಪಿದ ಭಾರತದ ಸೈಬರ್ ಸೆಕ್ಯೂರಿಟಿ ಮಾರುಕಟ್ಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.