ETV Bharat / opinion

ಭವಿಷ್ಯದ ಸಾಮರ್ಥ್ಯ ಅಭಿವೃದ್ಧಿ ಮೇಲೆ ಚಿತ್ತ ಹರಿಸಿದ ಭಾರತೀಯ ನೌಕಾಪಡೆ

author img

By ETV Bharat Karnataka Team

Published : Jan 16, 2024, 1:05 PM IST

ಇಂಡೋ-ಪೆಸಿಫಿಕ್‌ನಲ್ಲಿ ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯ ನಡುವೆ ಭಾರತೀಯ ನೌಕಾಪಡೆಯು ತನ್ನ ಪ್ರಬಲ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ವಿಮಾನವಾಹಕ ನೌಕೆಗಳು, ಎಯುವಿ, ಯುಎಸ್​ವಿಎಸ್​ ಹಡಗುಗಳು ಸೇರಿದಂತೆ ಪ್ರಮುಖ ಸ್ವತ್ತುಗಳನ್ನು ಸೇರಿಸುವುದನ್ನು ಮುಂದುವರೆಸಿದೆ.

Indian Navy  Emerging Naval Prowess  ಭಾರತೀಯ ನೌಕಾಪಡೆ  ಜಲಾಂತರ್ಗಾಮಿ ನೌಕೆಗಳು  ವಿಮಾನವಾಹಕ ನೌಕೆಗಳು
ಭವಿಷ್ಯದ ಸಾಮರ್ಥ್ಯ ಅಭಿವೃದ್ಧಿ ಮೇಲೆ ದೃಷ್ಟಿ ಇರಿಸಿದ ಭಾರತೀಯ ನೌಕಾಪಡೆ

ಹೈದರಾಬಾದ್: 7,800 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಕರಾವಳಿ ತೀರ ಹೊಂದಿರುವ ಭಾರತೀಯ ನೌಕಾಪಡೆಯು ಎಲ್ಲಾ ಸಮಯದಲ್ಲೂ ದೇಶದ ಕಡಲ ಪ್ರದೇಶವನ್ನು ರಕ್ಷಿಸುವ ಸವಾಲು ಎದುರಿಸುತ್ತಿದೆ. ನಿರ್ಣಾಯಕ ಹಿಂದೂ ಮಹಾಸಾಗರದ ಸಮುದ್ರ ಮಾರ್ಗಗಳನ್ನು ಭದ್ರಪಡಿಸುವುದರ ಹೊರತಾಗಿ, ನೌಕಾಪಡೆಯು ಮಾದಕವಸ್ತು ಕಳ್ಳಸಾಗಣೆ, ಸಶಸ್ತ್ರ ದರೋಡೆ, ಮಾನವ ಕಳ್ಳಸಾಗಣೆ, ಭಯೋತ್ಪಾದನೆ, ಕಡಲ್ಗಳ್ಳತನ, ಸಮುದ್ರದಲ್ಲಿನ ಅಪರಾಧ ಚಟುವಟಿಕೆಗಳು, ಅಕ್ರಮ ವಲಸೆ, ಅಕ್ರಮ ಮೀನುಗಾರಿಕೆ ಮತ್ತು ನೈಸರ್ಗಿಕ ವಿಕೋಪಗಳಂತಹ ಸವಾಲುಗಳನ್ನು ಭಾರತ ಮೆಟ್ಟಿ ನಿಲ್ಲುತ್ತಿದೆ.

ಇಂಡೋ-ಪೆಸಿಫಿಕ್‌ನಲ್ಲಿ ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯ ನಡುವೆ, ಭಾರತೀಯ ನೌಕಾಪಡೆಯು ತನ್ನ ಪ್ರಬಲ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ. ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ವಿಮಾನವಾಹಕ ನೌಕೆಗಳು, ಎಯುವಿ, ಯುಎಸ್​ವಿಎಸ್​ ಹಡಗುಗಳು ಸೇರಿದಂತೆ ಪ್ರಮುಖ ಸ್ವತ್ತುಗಳನ್ನು ಸೇರಿಸುವ ಕಾರ್ಯವನ್ನು ಮುಂದುವರೆಸಿದೆ. 2035ರ ವೇಳೆಗೆ 175 ಹಡಗುಗಳ ಪಡೆಯನ್ನು ರಚಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನೂ ಆರಂಭಿಸಿದೆ. ಜೊತೆಗೆ ಆತ್ಮನಿರ್ಭರ್ ಭಾರತಕ್ಕೆ ಒತ್ತು ನೀಡಿದೆ.

ಭಾರತದ ಸಮೀಪ ಸಮುದ್ರಗಳಲ್ಲಿ ಚೀನಾದ ಯುದ್ಧನೌಕೆಗಳು: ಭಾರತೀಯ ನೌಕಾಪಡೆಯು ತನ್ನ ಕಡಲ ಕಾರ್ಯತಂತ್ರದ ದಾಖಲೆ (2004-2015) ಮೂಲಕ ತನ್ನ ಪಾತ್ರವನ್ನು ವಿವರಿಸುವತ್ತ ಕ್ರಮಗಳನ್ನು ಕೈಗೊಂಡಿದೆ. ಕಡಲ ಕ್ಷೇತ್ರದಲ್ಲಿ ನವದೆಹಲಿಯ ದೊಡ್ಡ ಸವಾಲು ನಿಸ್ಸಂದೇಹವಾಗಿ ಬೀಜಿಂಗ್ ಆಗಿದೆ. ಭಾರತವನ್ನು ಮೂಲೆಗುಂಪು ಮಾಡಲು ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥಾಯ್ಲೆಂಡ್ ಮೇಲೆ ಪ್ರಭಾವ ಬೀರಲು ಚೀನಾ ಪ್ರಯತ್ನಿಸಿದೆ.

ಭಾರತದ ಸಮೀಪ ಸಮುದ್ರಗಳಲ್ಲಿ ಚೀನಾದ ಯುದ್ಧನೌಕೆಗಳು ಮತ್ತು ಪರಮಾಣು ಜಲಾಂತರ್ಗಾಮಿ ನೌಕೆಗಳ ನಿಯೋಜನೆ ಮಾತ್ರವಲ್ಲದೇ ಚೀನಾದ ಮೀನುಗಾರಿಕಾ ಸೇನೆ ಮತ್ತು ಹೆಚ್ಚುತ್ತಿರುವ ಚೀನಾದ ಸಂಶೋಧನಾ ಹಡಗುಗಳ ಬಗ್ಗೆ ಭಾರತವು ಚಿಂತಿಸುತ್ತಿದೆ. ಇದಲ್ಲದೆ, ಪ್ರಸ್ತುತ, ಚೀನಾದ ಸಮುದ್ರದ ಒಳಗಿನ ಉಪಸ್ಥಿತಿಯು ಕಳವಳಕ್ಕೆ ಪ್ರಮುಖ ಕಾರಣವಾಗಿದೆ. ಡಿಸೆಂಬರ್ 2019ರಿಂದ ಫೆಬ್ರವರಿ 2020ರವರೆಗೆ, ಚೀನಾದ ನೌಕಾಪಡೆಯು ಐಒಆರ್​ನಲ್ಲಿ 12 ನೀರೊಳಗಿನ ಡ್ರೋನ್‌ಗಳ ಫ್ಲೀಟ್ ನಿಯೋಜಿಸಿದೆ.

ಜನವರಿ 2023ರಲ್ಲಿ, ಇದು ವಿಶ್ವದ ಮೊದಲ ಮಾನವರಹಿತ ಡ್ರೋನ್ ಕ್ಯಾರಿಯರ್ ಝು ಹೈ ಯುನ್ ಅನ್ನು ಪ್ರಾರಂಭಿಸಿತ್ತು. ಇದನ್ನು ದೂರದಿಂದಲೇ ನಿಯಂತ್ರಿಸಬಹುದು ಮತ್ತು ಸ್ವಾಯತ್ತವಾಗಿ ನ್ಯಾವಿಗೇಟ್ ಮಾಡಬಹುದು. ಚೀನಾ ಪ್ರಸ್ತುತ ನೌಕಾ ಗುಪ್ತಚರ ಕಾರ್ಯಾಚರಣೆಗಳಿಗಾಗಿ ಯುಯುವಿಗಳನ್ನು ಬಳಸುತ್ತಿದೆ. ಇವುಗಳನ್ನು ಪ್ರಮುಖ ಚೆಕ್‌ಪಾಯಿಂಟ್‌ಗಳಲ್ಲಿ ನಿಯೋಜಿಸಿದರೆ, ಗಂಭೀರವಾದ ಭೌಗೋಳಿಕ ರಾಜಕೀಯ ಮತ್ತು ಕಾರ್ಯತಂತ್ರದ ಪರಿಣಾಮ ಬೀರುವ ಸಾಧ್ಯತೆಯಿದೆ.

41 ಹಡಗುಗಳ ನಿರ್ಮಾಣ: ಭಾರತೀಯ ನೌಕಾಪಡೆಯು ಸಮುದ್ರಗಡಿಯನ್ನು ಮತ್ತಷ್ಟು ಭದ್ರಪಡಿಸುವ ಕಾರ್ಯಕ್ಕೆ ಪ್ರಯತ್ನಿಸಿದೆ. 2035ರ ವೇಳೆಗೆ 175-ಹಡಗು ಪಡೆಗಳನ್ನು ರಚಿಸಲು ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ಆತ್ಮನಿರ್ಭರ್ ಭಾರತಕ್ಕೆ ಒತ್ತು ಕೊಡಲಾಗಿದ್ದು, ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕ್ರಮೇಣವಾಗಿ ಬಿಟ್ಟುಬಿಡಲು ನೌಕಾಪಡೆ ನಿರ್ಧರಿಸಿದೆ. ನಿರ್ಮಾಣ ಹಂತದಲ್ಲಿರುವ 43 ಹಡಗುಗಳ ಪೈಕಿ, 41 ಹಡಗುಗಳನ್ನು ಭಾರತೀಯ ಹಡಗುಕಟ್ಟೆಗಳಲ್ಲಿ ನಿರ್ಮಾಣವಾಗುತ್ತಿವೆ. ಇನ್ನೂ 49 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಪ್ರಸ್ತಾವ ಇವೆ.

ಸಾಗರ ಮೂಲಸೌಕರ್ಯ: ನೌಕಾಪಡೆಯ ಸಾಗರ ಮೂಲಸೌಕರ್ಯ ದೃಷ್ಟಿಕೋನ ಯೋಜನೆ (2012-27) ಪ್ರಕಾರ, ಐದು ಕಲ್ವರಿ ವರ್ಗದ ಜಲಾಂತರ್ಗಾಮಿ ನೌಕೆಗಳ ಎಂಟ್ರಿ ನಂತರವೂ, ಭಾರತೀಯ ನೌಕಾಪಡೆಯು 2030ರ ವೇಳೆಗೆ ಸೇರ್ಪಡೆಗೆ ನಿಗದಿತ 24ಕ್ಕಿಂತ ಎಂಟು ಹಡಗುಗಳ ಕೊರತೆಯಿದೆ. ಭಾರತವು ಪ್ರಸ್ತುತ ಎರಡು ವಿಮಾನವಾಹಕ ನೌಕೆಗಳನ್ನು ಹೊಂದಿದ್ದು, INS ವಿಕ್ರಮಾದಿತ್ಯ ಮತ್ತು INS ವಿಕ್ರಾಂತ್ ಕೆಲಸ ಮಾಡುತ್ತಿದೆ. ಇದಲ್ಲದೆ, ನೌಕಾಪಡೆಗೆ ಭವಿಷ್ಯಕ್ಕಾಗಿ ಯುಎಸ್​ವಿಗಳು ಮತ್ತು ಯುಯುವಿಗಳ ತುರ್ತು ಅವಶ್ಯಕತೆಯಿದೆ. ಆದ್ದರಿಂದ, 2021 ರಿಂದ 2030 ರವರೆಗೆ ಮಾನವರಹಿತ ಪ್ಲಾಟ್‌ಫಾರ್ಮ್‌ಗಳ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು ಭಾರತವು, ನೌಕಾಪಡೆಗಾಗಿ ಸಮಗ್ರ ಮಾನವರಹಿತ ಮಾರ್ಗಸೂಚಿ ಪ್ರಾರಂಭಿಸಿತು. ಯುದ್ಧನೌಕೆಗಳಿಗಾಗಿ 40 ನೌಕಾ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು (NUAS) ತಯಾರಿಸಲು ಭಾರತೀಯ ನೌಕಾಪಡೆಯು 2022ರಲ್ಲಿ ಜಾಗತಿಕ ಟೆಂಡರ್‌ ಕರೆದಿತ್ತು.

ಸುಮಾರು 1,300 ಕೋಟಿ ರೂಪಾಯಿ ಮೌಲ್ಯದ 10 ಹಡಗುಗಳ ಮೂಲಕ NUAS ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ಚುರುಕುಗೊಂಡಿದೆ. ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಲಿಮಿಟೆಡ್ ಜುಲೈ 28, 2023ರಂದು AUV ಅನ್ನು ಪ್ರಾರಂಭಿಸಿತು. ಇದನ್ನು ಗಣಿ ಪತ್ತೆ, ಗಣಿ ವಿಲೇವಾರಿ ಮತ್ತು ನೀರಿನ ಒಳಗಿನ ಸಮೀಕ್ಷೆಗಾಗಿ ಬಳಸಬಹುದು. ಅಲ್ಲದೆ, ಮಾನವರಹಿತ ಡೊಮೇನ್‌ನಲ್ಲಿ ಆತ್ಮನಿರ್ಭರಭಾರತವನ್ನು ಉತ್ತೇಜಿಸಲು ನೌಕಾಪಡೆಯು ಖಾಸಗಿ ಉದ್ಯಮವನ್ನು ಒಳಗೊಂಡ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ಲಾರ್ಸೆನ್ & ಟೌಬ್ರೊ ಅವರಿಂದ ಅದಮ್ಯ, ಅಮೋಘ್ ಮತ್ತು ಮಾಯಾ ನೀರೊಳಗಿನ ಡ್ರೋನ್‌ಗಳು, ಟಾರ್ಡಿಡ್ ಟೆಕ್ನಾಲಜೀಸ್​ನಿಂದ ಯುಎಸ್​ವಿಗಳ ಮೂರು ಘಟಕಗಳು, ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಲಿಮಿಟೆಡ್‌ನಿಂದ ಸಮೂಹ ಸಾಮರ್ಥ್ಯಗಳನ್ನು ಹೊಂದಿರುವ ಭಾರತದ ಮೊದಲ ಸಶಸ್ತ್ರ ಸ್ವಾಯತ್ತ ಹಡಗು ಮತ್ತು ಎಐ ತಂತ್ರಜ್ಞಾನವಿರುವ ಯುಎಸ್‌ವಿ ಪರಾಶರ್ (ಡೈವಿಂಗ್ ಕಾರ್ಯಾಚರಣೆಗಳು ಮತ್ತು ವಿಶೇಷ ದಾಳಿಗಳು ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಸೇರಿದಂತೆ ಪ್ರತಿಕೂಲ ಪ್ರದೇಶದೊಳಗೆ ವಿಶೇಷ ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ) ಸಿದ್ಧಪಡಿಸಲಾಗುತ್ತಿದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ: ಭಾರತ ವ್ಯಾಪ್ತಿ ಬರುವ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಪಶ್ಚಿಮ ಮತ್ತು ಪೂರ್ವ ಭಾಗಗಳಲ್ಲಿ ಪ್ರಮುಖ ಚೆಕ್​ ಪಾಯಿಂಟ್‌ಗಳಿವೆ. ಹಾರ್ಮುಜ್ ಜಲಸಂಧಿ, ಬಾಬ್ ಜಲಸಂಧಿ ಎಲ್ ಮಂಡಾಬ್, ಮಲಕ್ಕಾ ಜಲಸಂಧಿ, ಲೊಂಬೋಕ್ ಜಲಸಂಧಿ, ಸುಂದಾ ಜಲಸಂಧಿ ಮತ್ತು ಆಗ್ನೇಯ ಏಷ್ಯಾದ ಓಂಬೈ ಜಲಸಂಧಿಯು ಭಾರತದ ಮೊದಲ ಪ್ರಾಶಸ್ತ್ಯ ಕ್ಷೇತ್ರಗಳಾಗಿವೆ. ಮೆಡಿಟರೇನಿಯನ್ ಸಮುದ್ರ, ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್‌ನ ದೂರದ ಪ್ರದೇಶಗಳು ದ್ವಿತೀಯ ಪ್ರಾಶಸ್ತ್ಯದ ಪ್ರದೇಶಗಳಾಗಿವೆ.

ಭಾರತೀಯ ನೌಕಾಪಡೆಯು ಜಂಟಿ ನೌಕಾ ವ್ಯಾಯಾಮಗಳು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದಗಳು ಮತ್ತು ಬಹುಪಕ್ಷೀಯ ವೇದಿಕೆಗಳ ಮೂಲಕ ಮುಂದುವರಿಯುತ್ತಿದೆ. ತನ್ನ ಪಡೆಯನ್ನು ಸಾಮರ್ಥ್ಯವನ್ನು ಬಲಪಡಿಸಲು, ಭಾರತೀಯ ನೌಕಾಪಡೆಯು ಆಸ್ಟ್ರೇಲಿಯಾ, ಬಾಂಗ್ಲಾದೇಶ, ಚೀನಾ, ಫ್ರಾನ್ಸ್, ಗ್ರೀಸ್, ಇಂಡೋನೇಷ್ಯಾ, ಇರಾನ್, ಕುವೈತ್, ಕಝಾಕಿಸ್ತಾನ್, ಮಾಲ್ಡೀವ್ಸ್, ಮಂಗೋಲಿಯಾ, ಮ್ಯಾನ್ಮಾರ್, ಓಮನ್, ರಷ್ಯಾ, ಸೀಶೆಲ್ಸ್, ಥೈಲ್ಯಾಂಡ್, ಯುಕೆ, ಯುಎಸ್, ಯುಎಇ, ವಿಯೆಟ್ನಾಂ ಮತ್ತು ಶ್ರೀಲಂಕಾದೊಂದಿಗೆ ಜಂಟಿ ಸಮರಾಭ್ಯಾಸದ ಆವರ್ತನವನ್ನು ಸದ್ದಿಲ್ಲದೆ ಹೆಚ್ಚಿಸಿದೆ.

ದ್ವಿಪಕ್ಷೀಯ, ಬಹುಪಕ್ಷೀಯ ಒಪ್ಪಂದಗಳು: ಭಾರತವು ಹಲವಾರು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದಗಳನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಸಿಂಗಾಪುರ್, ಇಂಡೋನೇಷ್ಯಾ ಮತ್ತು ಓಮನ್‌ ಜೊತೆಗೆ ಕ್ರಮವಾಗಿ ಚಾಂಗಿ ಬೇಸ್, ಸಬಾಂಗ್ ಮತ್ತು ಡುಕ್ಮ್ ಬಂದರುಗಳಿಗೆ ಆಳವಾದ ರಕ್ಷಣಾ ಸಹಕಾರವನ್ನು ಮಾಡಿದೆ. ಕೋಕೋಸ್ ದ್ವೀಪಗಳು, ಅಸಂಪ್ಷನ್ ದ್ವೀಪಗಳು ಮತ್ತು ರಿಯೂನಿಯನ್ ಪ್ರಾಂತ್ಯಗಳಲ್ಲಿ ನೌಕಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಭಾರತವು ಆಸ್ಟ್ರೇಲಿಯಾ, ಸೆಚಿಲ್ಸ್ ಮತ್ತು ರಿಯೂನಿಯನ್ ದ್ವೀಪಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿತ್ತು.

ಭಾರತವು ಬಹುಪಕ್ಷೀಯ ವೇದಿಕೆಗಳ ಮೂಲಕ ಬಲವನ್ನು ವಿಸ್ತರಿಸುತ್ತಿದೆ. ಇದರಲ್ಲಿ ಚತುರ್ಭುಜ ಭದ್ರತಾ ಸಂವಾದ (QUAD), ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ (SAGAR) ಮತ್ತು ಹಿಂದೂ ಮಹಾಸಾಗರ ನೇವಲ್ ಸಿಂಪೋಸಿಯಂ ಸೇರಿದೆ. 2047 ರ ವೇಳೆಗೆ ಸ್ವಾವಲಂಬಿಯಾಗಲು, ಭಾರತೀಯ ನೌಕಾಪಡೆಯು ಭವಿಷ್ಯದ ಸಾಮರ್ಥ್ಯದ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ. ಸಾಗರ ಕ್ಷೇತ್ರದಲ್ಲಿ ಸಂಕೀರ್ಣ ಭದ್ರತಾ ಸವಾಲುಗಳನ್ನು ಜಯಿಸಲು ಯೋಜನೆಗಳನ್ನು ರೂಪಿಸಿದೆ.

ಲೇಖಕರು: ಡಾ.ರವೆಲ್ಲಾ ಭಾನು ಕೃಷ್ಣ ಕಿರಣ್

ಇದನ್ನೂ ಓದಿ: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚೀನಾ ಪ್ರಭಾವ; ಪ್ರವಾಸೋದ್ಯಮದಿಂದ ನೆರೆಯ ರಾಷ್ಟ್ರಕ್ಕೆ ಟಕ್ಕರ್​ ಕೊಡುತ್ತಾ ಭಾರತ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.